ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ನಟ ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಅಮಲಾ ಪೌಲ್ ಪರಿಚಯ ಇದ್ದೇ ಇರುತ್ತದೆ. ಕೇರಳ ಮೂಲದ ಅಮಲಾ, ನೀಲತಾಮರನ್ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್ನ “ಮೈನಾ” ಚಿತ್ರದ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್, ವಿಕ್ರಮ್, ಸೂರ್ಯ, ಆರ್ಯ, ಜಯಂ ರವಿ, ಧನುಷ್ ಸೇರಿದಂತೆ ಕಾಲಿವುಡ್ ಸೂಪರ್ಸ್ಟಾರ್ಗಳ ಜೊತೆ ನಟಿಸಿದ್ದಾರೆ.
ಅಮಲಾ ಅವರು ಇದೀಗ ಮದುವೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅಮಲಾ ಈಗಾಗಲೇ ಮದುವೆ ಆಗಿ ಡಿವೋರ್ಸ್ ಆಗಿದ್ದಾರೆ. ಆದರೆ, ಅವರ ಎರಡನೇ ವಿವಾಹ ಕುರಿತು ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಕೆಲ ದಿನಗಳ ಹಿಂದೆ ಮಾಜಿ ಪ್ರಿಯಕರ ಭವನಿಂದರ್ ಸಿಂಗ್ ವಿರುದ್ಧ ವಿಲ್ಲುಪುರಂ ಜಿಲ್ಲೆಯ ಅಪರಾಧ ವಿಭಾಗದಲ್ಲಿ ದೂರು ನೀಡಿದ್ದ ಅಮಲಾ, ತನಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು. ದೂರಿನ ಬೆನ್ನಲ್ಲೇ ಭವನಿಂದರ್ ಸಿಂಗ್ನನ್ನು ಬಂಧಿಸಲಾಗಿತ್ತು.
ಇದಾದ ಬಳಿಕ ಭವನೀಂದರ್ ಸಿಂಗ್ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ವಿಚಾರಣೆಯ ಸಮಯದಲ್ಲಿ, ಅವರ ಪರ ವಕೀಲರು 2017 ರಲ್ಲಿ ಪಂಜಾಬಿ ಪದ್ಧತಿಯ ಪ್ರಕಾರ ಭವನೀಂದರ್ ಸಿಂಗ್ ಮತ್ತು ಅಮಲಾ ಪೌಲ್ ಪರಸ್ಪರ ಮದುವೆ ಹಾಕಿದ್ದಾರೆ ಎಂದು ಸಾಬೀತುಪಡಿಸಲು ಕೆಲವು ಪುರಾವೆಗಳನ್ನು ಪ್ರಸ್ತುತಪಡಿಸಿದರು. ಹೊಸ ಸಾಕ್ಷ್ಯಾಧಾರಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ನ್ಯಾಯಾಲಯ ಬೇಷರತ್ ಜಾಮೀನು ನೀಡಿದೆ. ಆದರೆ, ಇದುವರೆಗೂ ಬೂದಿ ಮುಚ್ಚಿ ಕೆಂಡದಂತಿದ್ದ ಎರಡನೇ ಮದುವೆ ರಹಸ್ಯ ಇದೀಗ ಬಯಲಾಗಿದ್ದು, ಕಾಲಿವುಡ್ನಲ್ಲೀಗ ಇದೇ ಚರ್ಚೆಯಾಗಿದೆ.
ಇದಕ್ಕೂ ಮುನ್ನ ಅಮಲಾ ಅವರು 2014ರಲ್ಲಿ ನಿರ್ದೇಶಕ ಎ.ಎಲ್. ವಿಜಯ್ ಅವರನ್ನು ವಿವಾಹವಾದರು. ಆದರೆ, ಈ ಜೋಡಿ ಕೇವಲ 3 ವರ್ಷ ಮಾತ್ರ ದಾಂಪತ್ಯ ಜೀವನ ನಡೆಸಿತು. ಕೊನೆಗೆ 2017ರಲ್ಲಿ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡರು. 2019ರಲ್ಲಿ ಅವರ “ಆದೈ” ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಬೇರೊಬ್ಬರ ಜೊತೆ ಸಂಬಂಧದಲ್ಲಿದ್ದಾರೆ ಎಂಬ ಸುದ್ದಿ ಹರಿದಾಡ ತೊಡಗಿತು. ಬಳಿಕ ಅಮಲಾ ಅವರು ಆತನ ಹೆಸರನ್ನು ಬಹಿರಂಗಪಡಿಸಿದರು.
2020ರ ಮಾರ್ಚ್ ತಿಂಗಳಲ್ಲಿ ಮುಂಬೈ ಮೂಲದ ಗಾಯಕ ಭವನಿಂದರ್ ಸಿಂಗ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಭವನಿಂದರ್ ಮತ್ತು ಅಮಲಾ ಪಂಜಾಬಿ ಶೈಲಿಯ ಮದುವೆ ಉಡುಪು ಧರಿಸಿದ್ದರು. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿ, ನಾನಾ ಚರ್ಚೆಗೆ ಕಾರಣವಾಗಿತ್ತು. ಈ ಫೋಟೋಗಳನ್ನು ಶೇರ್ ಮಾಡಿ ಕೆಲವೇ ಕ್ಷಣಗಳಲ್ಲಿ ಭವಿಂದರ್ ತನ್ನ ಇನ್ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಮಾಡಿದ್ದ. ಇದು ಕೂಡ ಅನುಮಾನಕ್ಕೆ ದಾರಿ ಮಾಡಿಕೊಟ್ಟಿತ್ತು.
ಫೋಟೋಗಳು ವೈರಲ್ ಆದ ಬೆನ್ನಲ್ಲೇ ಅಮಲಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ನನ್ನ ಗಮನಕ್ಕೆ ತರದೇ ಮತ್ತು ಒಪ್ಪಿಗೆ ಪಡೆಯದೇ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಹಾಗೂ ನನಗೆ ಬೆದರಿಕೆ ಹಾಕುತ್ತಿದ್ದಾರೆ. ನಾವು ಇಬ್ಬರು ಒಟ್ಟಿಗೆ ಇರುವಾಗ ಮದುವೆ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿದ್ದೆವು ಎಂದು ಅಮಲಾ ಸ್ಪಷ್ಟನೆಯನ್ನು ನೀಡಿದರು.
ವಿಝುಪ್ರುಮ್ ಬಳಿಯ ಆರೋವಿಲ್ಲೆಯಲ್ಲಿ ವಾಸಿಸುತ್ತಿರುವ ಭವನೀಂದರ್ ಸಿಂಗ್ ಮತ್ತು ಅವರ ಕುಟುಂಬವು ಒಟ್ಟಿಗೆ ಚಲನಚಿತ್ರ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದೆ. ಆದರೆ, ಅವರು ನನ್ನ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅಮಲಾ ಪೌಲ್ ಆರೋಪಿಸಿದ್ದರು. 30 ವರ್ಷದ ನಟಿ ತನ್ನ ಪೊಲೀಸ್ ದೂರಿನಲ್ಲಿ ಆ ವ್ಯಕ್ತಿ ತನಗೆ ಮಾನಸಿಕ ಮತ್ತು ಆರ್ಥಿಕ ಸಂಕಷ್ಟ ತಂದಿದ್ದಾನೆ ಎಂದು ದೂರಿದ್ದರು.
ಅಮಲಾ ಪೌಲ್ ನೀಡಿರುವ ದೂರಿನ ಆಧಾರದ ಮೇಲೆ ಅವರ ಮಾಜಿ ಪ್ರಿಯಕರ ಭವನಿಂದರ್ ಸಿಂಗ್ನನ್ನು ಆಗಸ್ಟ್ 30ರ ಬೆಳಗ್ಗೆ ಪೊಲೀಸರು ಬಂಧಿಸಿದ್ದರು. ಇದೀಗ ಎರಡನೇ ಮದುವೆ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಿದ ಹಿನ್ನೆಲೆಯಲ್ಲಿ ಭವನಿಂದರ್ಗೆ ಬೇಷರತ್ ಜಾಮೀನು ನೀಡಿದೆ. (ಏಜೆನ್ಸೀಸ್)
ಶಕ್ತಿಧಾಮಕ್ಕೆ ನಟ ವಿಶಾಲ್ ಭೇಟಿ: ಪ್ರತಿ ಮಕ್ಕಳಲ್ಲೂ ಒಂದೊಂದು ದೇವರನ್ನ ನೋಡಿದೆ…
ಬೆಂಗ್ಳೂರಲ್ಲಿ 14 ವರ್ಷದ ಬಾಲಕಿಯನ್ನ ಮದ್ವೆಯಾದ 45 ವರ್ಷದ ಅಂಕಲ್! ಮದ್ವೆಯಾದ 3 ದಿನದಲ್ಲೇ ಆಯ್ತು ತಕ್ಕಶಾಸ್ತಿ
ದಸರಾ ಜಂಬೂಸವಾರಿ ಆನೆಗಳ ತೂಕ ಪರೀಕ್ಷೆ: ತೂಕದಲ್ಲಿ ಅರ್ಜುನನೇ ಮೊದಲಿಗ, ಭಾರ ಹೆಚ್ಚಿಸಿಕೊಂಡ ಭೀಮ