More

    ಪುರುಷರ ಕಿರಿಕಿರಿ ಕರೆಗಳಿಗೆ ಹಾಕಿ ಫುಲ್​ಸ್ಟಾಪ್

    ಹಲವು ಮಹಿಳೆಯರು ಈಗ ಆನ್​ಲೈನ್ ವೇದಿಕೆಯ ಮೂಲಕ ಸ್ವಂತ ಉದ್ಯಮ ಆರಂಭಿಸಿದ್ದಾರೆ. ಹಾಗೂ ಹೀಗೂ ಒಂದು ಹಂತಕ್ಕೆ ಗಳಿಕೆ ಆರಂಭವಾದ ಬೆನ್ನಲ್ಲೇ ಶುರುವಾಗಿದೆ ವಿಕೃತರ ಕಾಟ. ಜಾಲತಾಣದಲ್ಲಿ ಸುಲಭದಲ್ಲಿ ಸಿಗುವ ಇವರ ಮೊಬೈಲ್ ಸಂಖ್ಯೆಗೆ ಕಿರಿಕಿರಿ ಎನ್ನಿಸುವಷ್ಟು ಅಸಭ್ಯ ಕರೆಗಳು, ಸಂದೇಶಗಳು ಬರಲು ಶುರುವಾಗಿದ್ದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಏಕೆ ಹೀಗೆ? ಇದರಿಂದ ಪಾರಾಗುವುದು ಹೇಗೆ?

    | ಡಾ.ರೂಪಾ ರಾವ್ ಮನೋತಜ್ಞೆ

    ಇತ್ತೀಚಿನ ದಿನಗಳಲ್ಲಿ ಉದ್ಯಮಕ್ಕೆ ಆನ್​ಲೈನ್ ಅನ್ನು ವೇದಿಕೆ ಮಾಡಿಕೊಳ್ಳುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿವೆ. ದುರ್ಬಲವಾದ ಆರ್ಥಿಕ ಪರಿಸ್ಥಿತಿಯಲ್ಲಿ ಕುಟುಂಬಕ್ಕೆ ಹೆಗಲು ಕೊಡಲೋ, ಅನಿರೀಕ್ಷಿತ ಸನ್ನಿವೇಶಗಳಿಂದ ತಾನೇ ಕುಟುಂಬದ ಆಧಾರ ಸ್ತಂಭವಾಗಲೋ ಇಲ್ಲವೇ ಸ್ವಂತ ಕಾಲ ಮೇಲೆ ನಿಲ್ಲುವ ಸಲುವಾಗಿ ಈ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿದ್ದಾರೆ. ಆಹಾರ ಪದಾರ್ಥ, ಗೃಹಾಲಂಕಾರ, ವಿವಿಧ ಡಿಸೈನ್​ಗಳ ಕಸೂತಿ… ಹೀಗೆ ಮನೆಯಲ್ಲಿಯೇ ಕುಳಿತು ಚಿಕ್ಕಪುಟ್ಟ ಉದ್ಯಮ ಶುರು ಮಾಡಿದ್ದಾರೆ .

    ತಮ್ಮ ಉದ್ಯಮವನ್ನು ವಿಸ್ತಾರ ಮಾಡಲು, ಹೆಚ್ಚು ಹೆಚ್ಚು ಗ್ರಾಹಕರನ್ನು ಆಕರ್ಷಿಸಲು ಮೊಬೈಲ್ ಫೋನ್ ಸಂಖ್ಯೆ ನೀಡುವುದು ಅನಿವಾರ್ಯವೇ. ಆದರೆ ಇದೀಗ ಇದೇ ಮಹಿಳೆಯರಿಗೆ ತಲೆನೋವು ತಂದಿದೆ. ಫೇಸ್​ಬುಕ್​ನಲ್ಲಿ ಮಹಿಳಾ ಉದ್ಯಮಿಗಳು ಹಾಕುತ್ತಿರುವ ಪೋಸ್ಟ್ ಗಳನ್ನು ನೋಡಿದರೆ ಅವರು ಯಾವ ಪರಿಯಲ್ಲಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ ಎಂದು ತಿಳಿಯುತ್ತದೆ. ಇನ್ನು ರಾತ್ರಿಯೆಲ್ಲಾ ಕರೆಗಳು ಬಂದಾಗ ಗಂಡನ, ಅತ್ತೆ- ಮಾವಂದಿರು ನೋಡುವ ಪರಿಯಂತೂ ಕೆಲವರಿಗೆ ನುಂಗಲಾರದ ತುತ್ತಾಗಿದೆ.

    ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ ಮೊಬೈಲ್ ಫೋನ್ ಹೊಂದಿದ ಪ್ರತಿ ಮೂರು ಮಹಿಳೆಯರಲ್ಲಿ ಒಬ್ಬರು, ಅಪರಿಚಿತ ಗಂಡಸರ ಕರೆಗಳ ತೊಂದರೆ ಅನುಭವಿಸುತ್ತಾರೆ. ಇದರರ್ಥ ಶೇ. 9ರಷ್ಟು ಮಹಿಳೆಯರಿಗೆ ಪ್ರತಿನಿತ್ಯ ಇಂತಹ ಕರೆಗಳು ಬರುತ್ತಿವೆ. ಆದರೆ ಇದಕ್ಕೆ ಜಗ್ಗದೇ, ಬಗ್ಗದೇ ಮುನ್ನುಗ್ಗುವ ಛಾತಿ ಹೆಣ್ಣಲ್ಲಿ ಬರಬೇಕಿದೆ. ಬದುಕಿನ ಪ್ರಮಾಣದಲ್ಲಿ ಸಂಸಾರವನ್ನು ನೊಗ ಹೊತ್ತು ನಡೆಯುವಾಗ, ಒಂದಿಷ್ಟು ಸಲಹೆ, ಸೂಚನೆ, ಉಪಾಯಗಳನ್ನು ಮಾಡಿ ಬೀದಿಯಲ್ಲಿ ಬೊಗಳುವ ನಾಯಿಗಳಿಗೆ ತಕ್ಕ ಶಾಸ್ತಿ ಮಾಡಿ ಮುಂದೆ ಸಾಗಬೇಕೇ ಹೊರತು, ಹೆದರಿ ಪಯಣ ನಿಲ್ಲಿಸಬೇಕಿಲ್ಲ.

    ಹೆಂಗಸರ ಮೇಲೆ ಪರಿಣಾಮಗಳೇನು?

    • ಕೋಪ, ಏನೂ ಮಾಡಲಾಗದ ಅಸಹಾಯಕತೆ
    • ಏನು ಮಾಡಲು ಹೋಗಿ ಇನ್ನೇನೋ ಮಾಡಿದೆ ಎಂಬ ಅಪರಾಧಿ ಪ್ರಜ್ಞೆ.
    • ಕುಟುಂಬದ ಜನರೆದುರು ತಲೆ ತಗ್ಗಿಸಬೇಕಾಗುಬಹುದೆಂಬ ಹತಾಶೆ.
    • ರಾತ್ರಿಗಳಲ್ಲೂ ತೊಂದರೆ ಕೊಡುವ ಕರೆಗಳ ಭಯದಲ್ಲಿ ನಿದ್ರಾಹೀನತೆ.
    • ಮಾನಸಿಕ ಒತ್ತಡ , ಆತಂಕ, ಖಿನ್ನತೆ

    ಪುರುಷರಿಗೇಕೆ ವಿಕೃತ ರೋಗ?

    • ಕಂಡಕಂಡ ಹೆಂಗಸರಿಗೆ ಕರೆ ಮಾಡುವುದು ಮಾನಸಿಕ ರೋಗ. ಇದಕ್ಕೆ ಪ್ಯಾರಾಫೀಲಿಯಾ (ಅಸ್ವಾಭಾವಿಕ ಲೈಂಗಿಕ ಆಸಕ್ತಿ) ಎನ್ನಲಾಗುತ್ತದೆ.
    • ಬೆಳೆದ ಪರಿಸರ, ಬೆಳೆಸಿಕೊಂಡ ಭ್ರಮೆ, ಸಿನಿಮಾಗಳ ಪ್ರಭಾವ
    • ಹೆಣ್ಣು ಫೇಸ್​ಬುಕ್​ನಂಥ ಜಾಲತಾಣದಲ್ಲಿ ಕಾಣಿಸಿಕೊಂಡರೆ ಅವಳು ’I am available’ ಅನ್ನುತ್ತಿದ್ದಾಳೆ ಎನ್ನುವ ಕಲ್ಪನೆ.
    • ತಂತ್ರಜ್ಞಾನ ಕೈಗೆ ಸಿಕ್ಕ ತಕ್ಷಣ ಮಂಗನ ಕೈಗೆ ಮಾಣಿಕ್ಯ ಸಿಕ್ಕಂತಾಗಿ ಚಪಲ ತೀರಿಸಿಕೊಳ್ಳುವುದು.
    • ಸ್ಯಾಡಿಸ್ಟ್ ಮನೋಭಾವ . ಇನ್ನೊಬ್ಬರಿಗೆ ನೋವು, ಆತಂಕ , ಭಯ ತರಿಸಿದ ಸಂತೃಪ್ತಿ.
    • ಯಾವುದೋ ಕೊರತೆ , ಕೀಳರಿಮೆಯನ್ನು (ವಿದ್ಯೆ, ದೈಹಿಕ,ಮಾನಸಿಕ ಭಾವ ) ತುಂಬಿಕೊಳ್ಳಲು ಕರೆ ಮಾಡಿ ಪುರುಷತ್ವ ಸಾಧಿಸಿದೆ ಎನ್ನುವ ಭ್ರಮೆ.

    ಮಹಿಳೆಯರಿಗೇನು ಪರಿಹಾರ?

    • ವೈಯಕ್ತಿಕ ಮತ್ತು ವ್ಯವಹಾರಕ್ಕೆ ಬೇರೆ ಬೇರೆ ಸಂಖ್ಯೆ ಉಪಯೋಗಿಸಿ.
    • ಭಯಾತಂಕಗಳು ನಮ್ಮ ಅರಿವನ್ನು ಮುಚ್ಚಿಬಿಡುವುದ ರಿಂದ ಅದರಿಂದ ಹೊರಬರಲು ಕರೆಗಳು ಬಂದಾಗ ಮೊದಲು ದೀರ್ಘವಾಗಿ ಉಸಿರನ್ನೆಳೆದುಕೊಳ್ಳಿ. ಕರೆ ಮಾಡುವವ ಒಬ್ಬ ಮಾನಸಿಕ ರೋಗಿ, ಫೋನಿನ ಹಿಂದೆ ಅಡಗಿಕೊಂಡಿರುವ ಹೇಡಿ ಪ್ರಾಣಿಯಾಗಿ ಕಲ್ಪಿಸಿಕೊಳ್ಳಿ.
    • ತೊಂದರೆ ಕೊಡಲೆಂದೇ ಕರೆ ಮಾಡಿದ್ದಾನೆ ಎಂಬುದನ್ನು ಆತನ ಧ್ವನಿಯ ಮೂಲಕವೇ ತಿಳಿಯಬಹುದು. ಹೆಂಗಸರನ್ನು ಗುರಿಯಾಗಿರಿಸಿ ಕಾಲ್ ಮಾಡಿದ್ದರೆ ಫೋನ್ ರಿಸೀವ್ ಮಾಡಿದ ಕೂಡಲೇ ಅದು ಹೆಂಗಸೇ ಎಂದು ಖಚಿತ ಪಡಿಸಿಕೊಳ್ಳಲು ನಿಮ್ಮ ‘ಹಲೋ’ಗಾಗಿ ಕಾಯುತ್ತಾನೆ. ಅತ್ತ ಕಡೆ ಆ ಹೇಡಿ ಪ್ರಾಣಿ ಪಂಜರದಲ್ಲಿ ಬಂಧಿಯಾಗಿ ನಿಮ್ಮತ್ತ ಹೆದರಿಸಲು ಬರುತ್ತಿದೆ ಎಂದುಕೊಂಡು ಅಧಿಕಾರಯುತ ಧ್ವನಿಯಲ್ಲಿ ಹಲೋ ಎನ್ನಿ. ನಿಜವಾದ ಗ್ರಾಹಕರಾದರೆ ತಾವು ಕರೆಮಾಡಿರುವ ವಿಷಯವನ್ನು ಹೇಳುತ್ತಾರೆ. ವಿಕೃತನಾಗಿದ್ದರೆ ಕೊಂಚ ಉಡುಗಿದ ದನಿಯಲ್ಲಿ ಹಲೋ ಹಲೋ ಎನ್ನುತ್ತಾನೆ. ಆಗ ಈ ಸಂಖ್ಯೆಯನ್ನು ಸೈಬರ್ ಕ್ರೖೆಮಿಗೆ ದೂರು ಕೊಡುತ್ತಿದ್ದೇನೆ ಎಂದು ಬೈದು ಇಲ್ಲವೇ ಸುಮ್ಮನೇ ಸಂಖ್ಯೆಯನ್ನು ಬ್ಲಾಕ್ ಮಾಡಿ. ಏನೂ ಹೇಳದೇ ಬ್ಲಾಕ್ ಮಾಡಿದರೆ ಆತ ವಾಟ್ಸ್​ಆಪ್/ ಮೆಸೇಜ್ ಆಪ್​ಗಳಿಗೆ ನುಗ್ಗಬಹುದು. ಈಗ ಪ್ರತೀ ಮೊಬೈಲಿನಲ್ಲಿಯೂ ಕಾಲ್ ಬ್ಲಾಕ್ ಆಪ್ಷನ್ ಇರುವುದರಿಂದ ಕಾಲ್​ಬ್ಲಾಕ್ ಮಾಡಬಹುದು.
    • ಮೊಬೈಲಿನಲ್ಲಿ ಟ್ರೂಕಾಲರ್ ಆಪ್ ಇನ್​ಸ್ಟಾಲ್ ಮಾಡಿಕೊಂಡರೆ ಕಾಲ್ ಮಾಡುವವರ ಹೆಸರು ತಿಳಿಯುತ್ತದೆ. ಇಂಥ ವಿಕೃತಿಗಳು ಹಲವು ಮಹಿಳೆಯರಿಗೆ ಕರೆ ಮಾಡುತ್ತಿರುತ್ತಾರೆ. ಅವರೆಲ್ಲಾ ಇವರ ಸಂಖ್ಯೆಯನ್ನು ರಿಪೋರ್ಟ್ ಮಾಡಿದ್ದರೆ ಅದು ಸ್ಪ್ಯಾಮ್ ಎಂದು ತೋರಿಸುತ್ತದೆ. ಸ್ಪ್ಯಾಮ್​ ಎಂದು ಬಂದರೆ ಅದನ್ನು ರಿಸೀವ್ ಮಾಡಬೇಡಿ.
    • ವಾಟ್ಸ್​ಆಪ್​ನಲ್ಲಿ ವಿಡಿಯೋ ಕಾಲ್, ವಾಯ್ಸ್ ಕಾಲ್ ಅಥವಾ ಚಾಟ್​ಗಳ ತೊಂದರೆ ಬಂದರೆ ಸೀದಾ ಬ್ಲಾಕ್ ಮಾಡುವ ಬದಲು ರಿಪೋರ್ಟ್ ಮಾಡಿದರೆ, ವಾಟ್ಸ್​ಆಪ್ ಸಂಸ್ಥೆ ಆ ಸಂಖ್ಯೆಯ ಮೇಲೆ ಕ್ರಮ ತೆಗೆದುಕೊಳ್ಳುತ್ತದೆ.
    • ಬಹುತೇಕ ವ್ಯವಹಾರಿಕ ಮಾತುಕತೆ ಈಗ ವಾಟ್ಸ್ ಆಪ್​ನಲ್ಲಿಯೇ ಮಾಡುವುದರಿಂದ ಬಿಸಿನೆಸ್ ವಾಟ್ಸ್ ಆಪ್ ಡೌನ್​ಲೋಡ್ ಮಾಡಿಕೊಂಡು ಕೇವಲ ವ್ಯಾಪಾರ ವ್ಯವಹಾರಕ್ಕಾಗಿ ಮಾತ್ರ ಅದನ್ನು ಉಪಯೋಗಿಸಿ.
    • ಕೆಲವರು ತಮ್ಮ ಮನೆಯ ಗಂಡಸರಿಗೆ ಮೊದಲು ಫೋನ್ ಅಟೆಂಡ್ ಮಾಡಲು ಹೇಳಿ ನಿಜವಾದ ಗ್ರಾಹಕ ಎಂದು ಖಚಿತವಾದ ಮೇಲೆ ಫೋನ್ ತಾವು ಅಟೆಂಡ್ ಮಾಡುತ್ತಾರೆ. ಇದು ಒಳ್ಳೆಯ ಕ್ರಮ.
    • ಮೊಬೈಲಿಗೆ ವಾಯ್ಸ್ ಚೇಂಜರ್ ಸಾಫ್ಟ್​ವೇರ್ ಹಾಕಿಕೊಂಡು ಗಂಡಸರ ಧ್ವನಿಯಲ್ಲಿ ಮಾತಾಡಬಹುದು.
    • ಪದೇ ಪದೇ ಒಂದೇ ಸಂಖ್ಯೆಯಿಂದ ಕರೆ ಬರುತ್ತಿದ್ದರೆ ಕರ್ನಾಟಕ ಮಹಿಳಾ ಸಹಾಯವಾಣಿ ಅಥವಾ ವನಿತಾ ಸಹಾಯವಾಣಿ ಸಂರ್ಪಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts