More

    ಉದ್ಯಮದಲ್ಲಿ ಯಶ ಕಂಡ ಪುಷ್ಪಾವತಿ

    ಮುಂಡಗೋಡ: ಸರ್ಕಾರಿ ನೌಕರಿ ಮಾಡಬೇಕೆಂಬ ಆಸೆ ಕೈಗೂಡದಿದ್ದಾಗ ನಿರಾಶರಾಗದೆ ಸ್ವಂತ ಉದ್ದಿಮೆ ಆರಂಭಿಸಿ, ಕೆಲ ಮಹಿಳೆಯರಿಗೂ ಉದ್ಯೋಗದಾತೆಯಾಗಿ ಯಶಸ್ಸು ಕಂಡಿದ್ದಾರೆ ತಾಲೂಕಿನ ಸಾಲಗಾಂವ ಗ್ರಾಮದ ಪುಷ್ಪಾವತಿ ಮೋಹನ ಗುಲ್ಯಾನವರ. ಪುಷ್ಪಾವತಿ ಅವರು ಪಿಯುಸಿವರೆಗೆ ವಿದ್ಯಾಭ್ಯಾಸ ಮುಗಿಸಿದ್ದಾರೆ. ಪತಿ ಮೋಹನ ಗುಲ್ಯಾನವರ ಅವರು ಚಿಗಳ್ಳಿ ಸಹಕಾರಿ ಸಂಘದಲ್ಲಿ ಲೆಕ್ಕಿಗನಾಗಿ ಕೆಲಸ ಮಾಡುತ್ತಿದ್ದಾರೆ. ಪುಷ್ಪಾವತಿಗೆ ಸರ್ಕಾರಿ ಉದ್ಯೋಗ ಮಾಡುವ ಆಸೆ ಇದ್ದರೂ ಅದು ಕೈಗೂಡಲಿಲ್ಲ.

    ಸೌರಶಕ್ತಿ ಬಳಕೆಯ ಬಗ್ಗೆ ಅಲ್ಪಸ್ವಲ್ಪ ಕೇಳಿದ್ದರು. ಸೆಲ್ಕೋ ಸೋಲಾರ್ ಕಂಪನಿಯವರು ಸಾಲಗಾಂವನಲ್ಲಿ ಬೇರೆಯವರ ಮನೆಗೆ ಸೌರಶಕ್ತಿಯ ಪ್ಯಾಕೇಜ್ ಘಟಕ ಅಳವಡಿಸಲು ಬಂದಾಗ ಅದನ್ನು ನೋಡಿ ಇವರಿಗೂ ಆಸಕ್ತಿ ಬಂತು. 2018ರಲ್ಲಿ ಇವರು ಮೊದಲು ತಮ್ಮ ಮನೆಗೆ ಸೆಲ್ಕೋ ಸೋಲಾರ್ ಕಂಪನಿಯ ಧನ ಸಹಾಯದಿಂದ ಸೌರಶಕ್ತಿ ಘಟಕ ಅಳವಡಿಸಿಕೊಂಡರು. ಈ ಸೌರಶಕ್ತಿ ಬಳಸಿಕೊಂಡು ರೊಟ್ಟಿ ತಯಾರಿಸುವ ಸಣ್ಣ ಯಂತ್ರ ಅಳವಡಿಸಿದರು. ಶ್ರೀಸಾಯಿ ಜೋಳದ ರೊಟ್ಟಿ ತಯಾರಿಕೆ ಘಟಕ ಆರಂಭಿಸಿದರು. ದಿನಕ್ಕೆ 200 ರಿಂದ 300 ರೊಟ್ಟಿಗಳನ್ನು ತಯಾರಿಸಿ ಮಾರಾಟ ಮಾಡಿದರು. ನಂತರ ಹಿಟ್ಟಿನ ಗಿರಣಿ ಆರಂಭಿಸಿದರು. ರೊಟ್ಟಿಯ ಜತೆಗೆ ಶಾವಿಗೆಗೂ ಬೇಡಿಕೆ ಇದ್ದ ಕಾರಣ ಶಾವಿಗೆ ಯಂತ್ರವನ್ನೂ ಅಳವಡಿಸಿದರು.

    ನಿತ್ಯ 1000 ರೊಟ್ಟಿ ತಯಾರಿಸುವ ಯಂತ್ರ: ದಿನದಿಂದ ದಿನಕ್ಕೆ ರೊಟ್ಟಿಗಳ ಬೇಡಿಕೆ ಹೆಚ್ಚಾದಂತೆ ರೊಟ್ಟಿ ತಯಾರಿಸುವ ದೊಡ್ಡ ಯಂತ್ರ ಖರೀದಿಸಿದರು. ಈ ಯಂತ್ರದಲ್ಲಿ ನಿತ್ಯ 800 ರಿಂದ 1000 ರೊಟ್ಟಿ ತಯಾರಿಸಲಾಗುತ್ತಿದೆ. ಗ್ರಾಹಕರಿಂದ ಬೇಡಿಕೆ ಬಂದರೆ 3,000 ರೊಟ್ಟಿಗಳನ್ನು ತಯಾರು ಮಾಡುತ್ತಾರೆ. ಒಂದು ರೊಟ್ಟಿಯ ಬೆಲೆ 5 ರೂ. ಇದ್ದು, ಇಬ್ಬರು ಕೆಲಸಗಾರರಿದ್ದಾರೆ. ಮದುವೆ, ಜಾತ್ರೆ ಹಾಗೂ ಇತರ ಸಮಾರಂಭಗಳಿಗೆ ರೊಟ್ಟಿಗಳ ಆರ್ಡರ್ ಹೆಚ್ಚಿಗೆ ಬಂದಾಗ 7-8 ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ. ಅವರಿಗೆ ದಿನಕ್ಕೆ 250 ರೂ. ವೇತನ ನೀಡುತ್ತಾರೆ.

    ತಾಲೂಕು ಹಾಗೂ ಸುತ್ತಲಿನ ಹಾನಗಲ್ಲ, ಶಿಗ್ಗಾಂವಿ, ಹುಬ್ಬಳ್ಳಿ, ಶಿರಸಿ, ಸಿದ್ದಾಪುರ ತಾಲೂಕಿನವರು ರೊಟ್ಟಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಅಲ್ಲದೆ, ಬೆಂಗಳೂರಿಗೆ ಬಸ್ ಮೂಲಕ ರೊಟ್ಟಿಗಳನ್ನು ಕಳುಹಿಸಿ ಕೊಡುತ್ತಾರೆ. ‘ಸ್ಥಳೀಯ ಕೋ- ಆಪ್ ಬ್ಯಾಂಕ್ ಮತ್ತು ಸಂಘ- ಸಂಸ್ಥೆಗಳಲ್ಲಿ ಸಾಲ ಸೌಲಭ್ಯ ಪಡೆದು ಉದ್ಯಮಕ್ಕೆ ಅಂದಾಜು 4 ಲಕ್ಷ ರೂ. ಬಂಡವಾಳ ಹೂಡಿದ್ದೇನೆ. ನನಗೆ ನನ್ನ ಪತಿ ತುಂಬಾ ಸಹಕಾರ ನೀಡುತ್ತಿದ್ದಾರೆ. ಈ ಕೆಲಸ ತುಂಬಾ ಖುಷಿ ತಂದಿದೆ’ ಎನ್ನುತ್ತಾರೆ ಪುಷ್ಪಾವತಿ.

    ಸೌರಶಕ್ತಿಯಿಂದ ಬಡತನ ನಿವಾರಣೆ ಸಾಧ್ಯ. ವಲಸೆಯನ್ನು ತಪ್ಪಿಸಲು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದ್ದೇವೆ. ಮುಂಡಗೋಡ ಪಟ್ಟಣದಲ್ಲಿ ತುಂಬಾ ಜನರು ಸೌರಶಕ್ತಿಯಿಂದ ಕಮ್ಮಾರಿಕೆ ಮಾಡುತ್ತಿದ್ದಾರೆ. ಹೊಲಿಗೆ ಯಂತ್ರ, ಗುಡಿ ಕೈಗಾರಿಕೆ, ವಿಶೇಷವಾಗಿ ರೊಟ್ಟಿ ಉದ್ಯಮ ಕೂಡ ಕೈಗೊಂಡಿದ್ದಾರೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸಾಲ ಸೌಲಭ್ಯದ ಮೂಲಕ ಯೋಜನೆ ಕಲ್ಪಿಸಿ ಕೊಡಲಾಗುವುದು.

    | ಭಾರತಿ ಹೆಗಡೆ,

    ಸೆಲ್ಕೋ ಫೌಂಡೇಷನ್ ಕಾರ್ಯಕ್ರಮ ವ್ಯವಸ್ಥಾಪಕಿ

    ಪುಷ್ಪಾವತಿ ಗುಲ್ಯಾನವರ ಅವರ ಮನೆಗೆ 800 ವ್ಯಾಟ್ ಸೋಲಾರ್ ಪ್ಯಾನೆಲ್ 2, 600 ಎಎಚ್ ಬ್ಯಾಟರಿ 1, 2 ಕೆವಿ ಇರ್ನÌರ್ ಇರುವ ಸೋಲಾರ್ ಪ್ಯಾಕೇಜ್ ಅಳವಡಿಸಿ 5 ವರ್ಷಗಳ ವಾರಂಟಿ ನೀಡಲಾಗಿದೆ.

    | ಪ್ರಜ್ವಲ್ ಗೌಡರ

    ಸೆಲ್ಕೋ ಸೋಲಾರ್ ಶಾಖೆ ವ್ಯವಸ್ಥಾಪಕ, ಶಿರಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts