ರಾಜ್ಯಾದ್ಯಂತ ‘ಗಂಧದಗುಡಿ’ ಅದ್ಧೂರಿ ಬಿಡುಗಡೆ: ಬೆಳ್ಳಿಪರದೆಯಲ್ಲಿ ಅಪ್ಪು ನೋಡಿ ಭಾವುಕರಾದ ಅಭಿಮಾನಿಗಳು

2 Min Read
ರಾಜ್ಯಾದ್ಯಂತ 'ಗಂಧದಗುಡಿ' ಅದ್ಧೂರಿ ಬಿಡುಗಡೆ: ಬೆಳ್ಳಿಪರದೆಯಲ್ಲಿ ಅಪ್ಪು ನೋಡಿ ಭಾವುಕರಾದ ಅಭಿಮಾನಿಗಳು

ಬೆಂಗಳೂರು: ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಅವರು ಕೊನೆಯದಾಗಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಗಂಧದಗುಡಿ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಅಕಾಲಿಕವಾಗಿ ಅಗಲಿದ ನೆಚ್ಚಿನ ನಟನನ್ನು ಹೊಸ ಚಿತ್ರದ ಮೂಲಕ ಬೆಳ್ಳಿ ಪರದೆಯ ಮೇಲೆ ಕೊನೆಯದಾಗಿ ಕಣ್ತುಂಬಿಕೊಳ್ಳುತ್ತಿರುವ ಕ್ಷಣ ಅಭಿಮಾನಿಗಳ ಭಾವುಕತೆಗೆ ಸಾಕ್ಷಿಯಾಗಿದೆ.

ಬೀದರ್​ನಿಂದ ಹಿಡಿದು ಚಾಮರಾಜನಗರದವರೆಗೂ ಅಪ್ಪು ಅಭಿಮಾನಿಗಳು ಗಂಧದಗುಡಿಯನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಚಿತ್ರಮಂದಿಗಳನ್ನು ಸಿಂಗರಿಸಿದ್ದು, ಅಪ್ಪು ಕಟೌಟ್​ಗಳಿಗೆ ಪೂಜೆ-ಪುನಸ್ಕಾರಗಳನ್ನು ಮಾಡುತ್ತಿದ್ದಾರೆ. ಪುನೀತ್​ಗೆ ಜೈಕಾರ ಕೂಗುತ್ತಾ ಎಲ್ಲರೂ ಗಂಧದಗುಡಿ ಸಿನಿಮಾವನ್ನು ತಪ್ಪದೇ ವೀಕ್ಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ವಿಜಯನಗರದ ಹೊಸಪೇಟೆಯ ಮಿರಾಲಂ ಟಾಕೀಸ್​ನಲ್ಲಿ ಬೆಳಗ್ಗೆ 3.30 ಕ್ಕೆ ಮೊದಲ ಶೋ ಪ್ರಾರಂಭವಾಗಿದೆ. ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಮೊದಲ ಶೋ ಆರಂಭಿಸಲಾಯಿತು. ನಿನ್ನೆ ರಾತ್ರಿಯೇ ಎಲ್ಲ ಟಿಕೆಟ್ ಮಾರಟವಾಗಿತ್ತು. ಇಂದು ಬೆಳಗ್ಗೆ 7 ಗಂಟೆಗೆ ಮೊದಲ ಶೋ ಪ್ರದರ್ಶನ ಮಾಡಲು ಚಿತ್ರಮಂದಿರದವರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಅಭಿಮಾನಿಗಳ ಒತ್ತಾಯಕ್ಕೆ ಬೆಳಗ್ಗೆ 3.30ಕ್ಕೆ ಮೊದಲ ಶೋ ಪ್ರದರ್ಶಿಸಿದ್ದಾರೆ.

ಗಂಧದ ಗುಡಿ ಸಾಕ್ಷ್ಯಚಿತ್ರಕ್ಕೆ ಫ್ಯಾನ್ಸ್ ಫಿದಾ!
ಚಿತ್ರ ನೋಡಿ ಬಂದ ಹೊಸಪೇಟೆಯ ಅಪ್ಪು ಅಭಿಮಾನಿ ಕಿಚಡಿ ವಿಶ್ವ ಮಾತನಾಡಿದ್ದು, ಅಪ್ಪು ಅವರ ಕೊನೆಯ ಸಾಕ್ಷ್ಯಚಿತ್ರ ನಮಗೆ ಬಹಳ ಇಷ್ಟವಾಗಿದೆ. ಹೊಸಪೇಟೆಯ ಬಗ್ಗೆ ಅಪ್ಪು ಅವರು ಅಪಾರ ಅಭಿಮಾನ ಹೊಂದಿದ್ದರು. ಇಂದು ಅವರ ಕೊನೆಯ ಚಿತ್ರ ಗಂಧದಗುಡಿ ಮೊದಲ ಪ್ರದರ್ಶನಗೊಂಡಿದೆ. ಕಾಡು, ನಾಡಿನ ಬಗ್ಗೆ ಅಗಾಧ ಮಾಹಿತಿ ನೀಡಿದ್ದಾರೆ. ಮಗುವಿನಿಂದ ಹಿಡಿದು ಎಲ್ಲರೂ ನೋಡಲೇಬೇಕಾದ ಚಿತ್ರವಿದು. ಅಭಿಮಾನಿಗಳು ಎಲ್ಲರೂ ನೋಡಲೇಬೇಕು. ಅಪ್ಪು ಜತೆ ನಮಗೆ ಉತ್ತಮ ಬಾಂಧವ್ಯವಿತ್ತು. ಕೊನೆಯ ಚಿತ್ರವಿದು, ಅಪ್ಪು ಅವರ ಉತ್ತರ ಕರ್ನಾಟಕ ಪ್ರೇಮ ಮೆಚ್ಚಲೇಬೇಕು ಎಂದಿದ್ದಾರೆ.

See also  ಕೆವಿಎನ್ ಪ್ರೊಡಕ್ಷನ್ ನಡಿ ಬರ್ತಿದೆ ನಿಖಿಲ್ ಹೊಸ ಸಿನಿಮಾ! ಶೂಟಿಂಗ್ ಶುರು...

ಚಿತ್ರದುರ್ಗ, ತುಮಕೂರು, ಸೇರಿದಂತೆ ಹಲವೆಡೆ ಗಂಧದಗುಡಿ ಹೌಸ್​ಫುಲ್​ ಆಗಿದೆ. ಕೊರೆಯುವ ಚಳಿಯನ್ನು ಲೆಕ್ಕಿಸದೇ ಮಹಿಳೆಯರು, ಮಕ್ಕಳು ಹಾಗೂ ವಯಸ್ಸಾದವರು ಕೂಡ ಬೆಳ್ಳಂಬೆಳಗ್ಗೆಯೇ ಗಂಧದಗುಡಿ ಕಣ್ತುಂಬಿಕೊಳ್ಳಲು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದಾರೆ.

ಅಂದಹಾಗೆ ಗಂಧದ ಗುಡಿ ಒಂದು ಸಾಕ್ಷ್ಯಾಚಿತ್ರವಾಗಿದ್ದು, ಪುನೀತ್ ಅವರ ಒಂದು ಅದ್ಭುತ ಕನಸಾಗಿದೆ. ಈ ಸಾಕ್ಷ್ಯಾಚಿತ್ರದಲ್ಲಿ ಕರ್ನಾಟಕದ ಅರಣ್ಯಗಳು ಹಾಗೂ ವನ್ಯಜೀವಿ ಪ್ರಪಂಚದ ಅದ್ಭುತ ದೃಶ್ಯವೈಭವವಿದೆ. ಇದಕ್ಕಾಗಿ ಪುನೀತ್​ ಇಡೀ ಕರುನಾಡನ್ನು ಸುತ್ತಿದ್ದರು. ಅಪ್ಪು ಅಕಾಲಿಕ ಮರಣ ಹಿನ್ನೆಲೆಯಲ್ಲಿ ಗಂಧದ ಗುಡಿ ಸಾಕ್ಷ್ಯಾ ಚಿತ್ರಕ್ಕೆ ಸಿನಿಮಾ ರೂಪ ಕೊಟ್ಟು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಇಂದು (ಅ.28) ಬಿಡುಗಡೆ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್​)

ಗಂಧದ ಗುಡಿ ನನ್ನ ಹೆಮ್ಮೆ; ಅಪ್ಪು ಜತೆಗಿನ ಟ್ರೆಕಿಂಗ್ ನೆನಪಿಸಿಕೊಂಡ ಅಶ್ವಿನಿ

ರಾಜ್ಯದಲ್ಲೂ ವಂದೇಭಾರತ್; ನ.11ರಂದು ಮೋದಿ ಅವರಿಂದ ಚಾಲನೆ

ಕೇದಾರನಾಥನ ಗರ್ಭಗುಡಿಗೆ ಚಿನ್ನದ ಗೋಡೆ

Share This Article