More

    ಸಾರ್ವಜನಿಕ ಗ್ರಂಥಾಲಯಕ್ಕೆ ಪಿಇಬಿ ಕಟ್ಟಡ ಭಾಗ್ಯ

    ಕಂಪ್ಲಿ: ಇಲ್ಲಿನ ಸಾರ್ವಜನಿಕ ಗ್ರಂಥಾಲಯಕ್ಕೆ ಐದೂವರೆ ದಶಕಗಳ ನಂತರ ಸ್ವಂತ ಕಟ್ಟಡ ಭಾಗ್ಯ ಲಭಿಸಿದೆ. 26ವರ್ಷಗಳ ಕಾಲ ಬಾಡಿಗೆ ಕಟ್ಟಡಗಳಲ್ಲಿ ಅಲೆದಾಡಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ, ಇದೀಗ ಪಟ್ಟಣದ ಸೋಮಪ್ಪ ಕೆರೆಯ ಆವರಣದಲ್ಲಿ ಪಿಇಬಿ ಮಾದರಿಯ ಕಟ್ಟಡ ನಿರ್ಮಾಣಗೊಳ್ಳುತ್ತಿದೆ.

    ಇದನ್ನೂ ಓದಿ: ಗ್ರಾಪಂ ಗ್ರಂಥಾಲಯಗಳಲ್ಲಿ ‘ಓದುವ ಬೆಳಕು’ ಅಭಿಯಾನ

    1967ರಲ್ಲಿ ಪಟ್ಟಣ ಪಂಚಾಯ್ತಿ ಕೋಣೆಯೊಂದರಲ್ಲಿ 172ಪುಸ್ತಕಗಳೊಂದಿಗೆ ಸಾರ್ವಜನಿಕ ಗ್ರಂಥಾಲಯವು ಆರಂಭಗೊಂಡಿತ್ತು. 1997ರಲ್ಲಿ ಪುರಸಭಾಡಳಿತ ಗ್ರಂಥಾಲಯವನ್ನು ಅಲ್ಲಿಂದ ತೆರೆವುಗೊಳಿಸಿದಾಗ ಬಾಡಿಗೆ ಕಟ್ಟಡದಲ್ಲಿ ಪಯಣ ಆರಂಭಿಸಿತು.

    ಪುರಸಭೆ ಅಧ್ಯಕ್ಷ, ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜಿನ ಸಿಡಿಸಿ ಅಧ್ಯಕ್ಷ ಅಯ್ಯೋದಿ ವೆಂಕಟೇಶ್ 1997ರ ಮಾ.29ರಂದು 60*80ಅಡಿಗಳ ಉದ್ದಗಲದ ನಿವೇಶನವನ್ನು ದಾನ ನೀಡಿ ಸಾರ್ವಜನಿಕ ಗ್ರಂಥಾಲಯಕ್ಕಾಗಿ ನೋಂದಣಿ ಮಾಡಿಸಿದರು.

    ಕಾಲೇಜಿನ ಪ್ರಾಚಾರ್ಯರು ಎನ್‌ಒಸಿ ಕೊಡದಿದ್ದರಿಂದ ಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಾಣಗೊಳ್ಳಲಿಲ್ಲ. ಸದ್ಯ ಟಿಎಪಿಸಿಎಂ ಸೊಸೈಟಿಯ ಬಾಡಿಗೆ ಕಟ್ಟಡದಲ್ಲಿ ಗ್ರಂಥಾಲಯ ನೆಲೆ ಕಂಡಿದೆ.

    ಗ್ರಂಥಾಲಯಕ್ಕಾಗಿ, ಹಿಂದಿನ ಡಿಸಿ ಪವನ್‌ಕುಮಾರ್ ಮಾಲಪಾಟಿ ಅವರ ಹಿತಾಸಕ್ತಿಯಿಂದಾಗಿ ಸೋಮಪ್ಪ ಕೆರೆಯ ಪರಿಸರದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣಗೊಳ್ಳುತ್ತಿದೆ.

    ಪಿಇಬಿ ಮಾದರಿ ಕಟ್ಟಡ: ಪ್ರೀ ಇಂಜನಿಯರ್ಡ್‌ ಬಿಲ್ಡಿಂಗ್ ಮಾದರಿಯಲ್ಲಿ 10.14 * 19.19ಮೀಟರ್‌ಗಳ ವಿಸ್ತೀರ್ಣದಲ್ಲಿ ನೆಲ ಮತ್ತು ಮೊದಲನೇ ಮಹಡಿಯಲ್ಲಿ ಗ್ರಂಥಾಲಯ ಕಟ್ಟಡ ಬಳ್ಳಾರಿಯ ನಿರ್ಮಿತಿ ಕೇಂದ್ರದಿಂದ ನಿರ್ಮಾಣಗೊಳ್ಳುತ್ತಿದೆ. ಸಿಎಸ್‌ಆರ್ ಮತ್ತು ಕೆ.ಕೆ.ಆರ್.ಡಿ.ಬಿ. ಯೋಜನೆಯ ತಲಾ 50ಲಕ್ಷ ರೂ. ಒಟ್ಟು 1ಕೋಟಿ ರೂ. ಅಂದಾಜು ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣಗೊಳ್ಳುತ್ತಿದೆ.

    ಕೆರೆ ಪರಿಸರ ಹಸಿರುವಲಯಕ್ಕೆ ಸೇರಿದ್ದರಿಂದ ಶಾಶ್ವತ ಕಟ್ಟಡ ನಿರ್ಮಾಣ ನಿಬರ್ಂಧ ಕಾರಣಕ್ಕಾಗಿ ಪ್ರಿ-ಇಂಜನಿಯರ್ಡ್‌ ಬಿಲ್ಡಿಂಗ್ ಮಾದರಿಯಲ್ಲಿ ಕಟ್ಟಡ ನಿರ್ಮಾಣಗೊಳ್ಳುತ್ತಿದೆ.

    ಈಗಾಗಲೇ ಪಿಇಬಿ ಮಾದರಿಯ ಕಟ್ಟಡ ನಿರ್ಮಾಣ ಕಾರ್ಯಪ್ರಗತಿಯಲ್ಲಿದ್ದು ಕಾಲಂ ಮತ್ತು ಎರೆಕ್ಷನ್ ಕೆಲಸ ಮುಗಿದಿದೆ. ಮೇಲ್ಚಾವಣಿ, ರೂಮ್‌ಗಳಿಗೆ ಗೋಡೆಗಾಗಿ ಶೀಟ್‌ಗಳನ್ನು ಅಳವಡಿಸುವ, ಸಿವಿಲ್ ವರ್ಕ್ ಉಳಿದಿದ್ದು, ಶೀಘ್ರ ಪೂರ್ಣಗೊಳಿಸಲಾಗುವುದು.
    ಜೆ.ಇ.ಮೋಹನ್‌ಕೃಷ್ಣ, ಯೋಜನಾ ನಿರ್ದೇಶಕ, ನಿರ್ಮಿತಿ ಕೇಂದ್ರ, ಬಳ್ಳಾರಿ.

    ಸಾರ್ವಜನಿಕ ಗ್ರಂಥಾಲಯಕ್ಕೆ 1574ಸದಸ್ಯರಿದ್ದು, 30,732ಪುಸ್ತಕಗಳಿವೆ. ಬಾಡಿಗೆ ಕಟ್ಟಡವಾಗಿದ್ದರಿಂದ ಪುಸ್ತಕಗಳನ್ನು ಇಡಲು ಸ್ಥಳಾವಕಾಶದ ಕೊರತೆಯಿದೆ. ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕಿ ಲಕ್ಷ್ಮೀ ಕಿರಣ್ ಸತತ ಪ್ರಯತ್ನದಿಂದಾಗಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ.
    ಜಗದೇವಪ್ಪ ದಬರಬಾದ್, ಪ್ರಭಾರ ಗ್ರಂಥಾಲಯ ಸಹಾಯಕ, ಕಂಪ್ಲಿ.

    ಸಾರ್ವಜನಿಕ ಗ್ರಂಥಾಲಯಕ್ಕೆ ಪಟ್ಟಣದ ಹೃದಯಭಾಗದಲ್ಲಿ ನಿವೇಶನ ನೀಡುವಂತೆ ಡಿಸಿಯವರನ್ನು ಒತ್ತಾಯಿಸಿದ್ದೆವು.
    ಓದುಗರಿಗೆ ಅನುಕೂಲವಾಗುವ ಸ್ಥಳದಲ್ಲಿ ಗ್ರಂಥಾಲಯ ನಿರ್ಮಿಸಬೇಕಿತ್ತು. ಆದರೂ ಓದುಗರ ಬಹುವರ್ಷಗಳ ಹೋರಾಟಕ್ಕೆ ಸಿಕ್ಕ ಫಲವಾಗಿದೆ.
    ಎಲಿಗಾರ ಕನಕಾಚಲ, ಓದುಗ, ಸಾರ್ವಜನಿಕ ಗ್ರಂಥಾಲಯ, ಕಂಪ್ಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts