More

    ಪತ್ನಿ ಕೊಲೆ ಆರೋಪದಡಿ ಬಂಧನ; ಪಿಎಸ್‌ಐಗೆ ಜಾಮೀನು ನಿರಾಕರಣೆ

    ಬೆಂಗಳೂರು : ಬೆಂಗಳೂರು: ಜಾಮೀನು ನೀಡಿದರೆ ಸಾಕ್ಷ್ಯ ತಿರುಚುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪತ್ನಿ ಕೊಲೆ ಆರೋಪದಡಿ ಬಂಧಿತನಾಗಿರುವ ಪಿಎಸ್‌ಐಗೆ ಜಾಮೀನು ನೀಡಲು ನಿರಾಕರಿಸಿದೆ. ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಪೀಠ ಈ ಆದೇಶ ಮಾಡಿದೆ.

    ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಸಾವು ಸಂಭವಿಸಿದ್ದು, ಚಾರ್ಜ್‌ಶೀಟ್ ಪ್ರಕಾರ ಆರೋಪಿಯು ಮೃತರನ್ನು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಒಳಪಡಿಸಿರುವ ಅಂಶ ಕಂಡುಬರುತ್ತದೆ. ದೂರು ಪರಿಶೀಲಿಸಿದಾಗ ಮೃತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಆರೋಪಿಗಳು ದೂರುದಾರರಿಗೆ ಮಾಹಿತಿ ನೀಡಿಲ್ಲ. ಮರಣೋತ್ತರ ವರದಿಯ ಪ್ರಕಾರ, ಮೃತದೇಹದ ಮೇಲೆ ಬಾಹ್ಯ ಗಾಯಗಳು ಮತ್ತು ಆಂತರಿಕ ರಕ್ತಸ್ರಾವ ಕಂಡುಬಂದಿದೆ. ಸ್ಥಳದಲ್ಲಿ ದೊರೆತ ಡೆತ್ ನೋಟ್‌ನ ನಿಖರತೆಯನ್ನು ಈ ಹಂತದಲ್ಲಿ ಪರಿಶೀಲಿಸಲು ಸಾಧ್ಯವಿಲ್ಲ. ಪರಿಸ್ಥಿತಿ ಹೀಗಿರುವಾಗ ಆರೋಪಿಗೆ ಜಾಮೀನು ನೀಡಿದಲ್ಲಿ ಸಾಕ್ಷ್ಯವನ್ನು ತಿರುಚುವ ಎಲ್ಲಾ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ಜಾಮೀನು ಮನವಿಯನ್ನು ವಜಾಗೊಳಿಸಿದೆ.

    ಪ್ರಕರಣದ ಹಿನ್ನೆಲೆ: ಚಿಕ್ಕಬಳ್ಳಾಪುರ ತಾಲೂಕಿನ ರಮೇಶ್, ಕುಟುಂಬಸ್ಥರ ವಿರೋಧದ ನಡುವೆ ಮೃತ ವಿ.ಶಿಲ್ಪಾ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ವಿವಾಹದ ಬಳಿಕ ಪುತ್ರಿ ಶಿಲ್ಪಾಗೆ ಪತಿ ಮತ್ತವರ ಕುಟುಂಬಸ್ಥರು ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ, ಜಾತಿ ನಿಂದನೆ ಮಾಡಿ ಕೊಂದಿದ್ದಾರೆಂದು ಆರೋಪಿಸಿರುವ ಪೋಷಕರು ದೂರು ಸಲ್ಲಿಸಿದ್ದರು.

    ದೂರಿನ ಮೇರೆಗೆ ಬೇಗೂರು ಠಾಣೆ ಪೊಲೀಸರು ಆರೋಪಿ ಪಿಎಸ್‌ಐ ರಮೇಶ್ ವಿರುದ್ಧ ಐಪಿಸಿ ಸೆಕ್ಷನ್ ೪೯೮ಎ, ೫೦೪, ೫೦೬, ೩೦೨, ೩೦೪ಬಿ, ೨೦೧ ಹಾಗೂ ಎಸ್ಸಿ-ಎಸ್ಟಿ ಕಾಯ್ದೆಯ ಸೆಕ್ಷನ್ ೩ (೧) (ಆರ್), ೩(೨) (ವಿ) ಅಡಿ ಎಫ್‌ಐಆರ್ ದಾಖಲಿಸಿದ್ದರು.

    ತನಿಖೆ ಬಳಿಕ ಐಪಿಸಿ ೪೯೮ಅ, ೩೦೪ಆ, ವರದಕ್ಷಿಣೆ ತಡೆ ಕಾಯ್ದೆಯ ಸೆಕ್ಷನ್ ೩, ೪ ಹಾಗೂ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ೩ (೨)(ವಿ)ಆರೋಪಟ್ಟಿ ಸಲ್ಲಿಸಿದ್ದರು. ಆ ಬಳಿಕ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ರಮೇಶ್ ಜಾಮೀನು ಕೋರಿ ಸೆಷನ್ಸ್ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಮೇಲ್ಮನವಿ ಸಲ್ಲಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts