More

    ರಸ್ತೆ ಮಧ್ಯೆ ಹರಿಯುವ ಡ್ರೈನೇಜ್ ನೀರು! ತಲೆ ಕೆಡಿಸಿಕೊಳ್ಳದ ಬಿಬಿಎಂಪಿ

    ಪ್ರಶಾಂತ್ ರಿಪ್ಪನ್‌ಪೇಟೆ ಬೆಂಗಳೂರು
    ರಾಜಧಾನಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ವಸತಿ ಪ್ರದೇಶಗಳಲ್ಲಿ ಒಂದಾದ ವಿದ್ಯಾರಣ್ಯಪುರ, ತಿಂಡ್ಲು ಭಾಗದ ಜನರು ರಸ್ತೆಗುಂಡಿ ಮತ್ತು ಡ್ರೈನೇಜ್ ನೀರು ನಿರ್ವಹಣೆಯಲ್ಲಿನ ಲೋಪದಿಂದ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

    ವಿದ್ಯಾರಣ್ಯಪುರದಿಂದ ಬಳ್ಳಾರಿ ರಸ್ತೆಗೆ ಸಂಪರ್ಕ ಸಾಧಿಸುವ ತಿಂಡ್ಲು ಮುಖ್ಯರಸ್ತೆಯಲ್ಲಿ ಕಳೆದ ಹಲವು ತಿಂಗಳಿಂದ ಗುಂಡಿ ಬಿದ್ದಿದ್ದು, ಬಿಬಿಎಂಪಿ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ರಸ್ತೆಗುಂಡಿ ಜೊತೆಗೆ ರಸ್ತೆ ಮಧ್ಯದಲ್ಲಿ ಬಾಯ್ತೆರೆದುಕೊಂಡಿರುವ ಮ್ಯಾನ್‌ಹೋಲ್‌ಗಳು ಮೃತ್ಯುವಿಗೆ ಆಹ್ವಾನ ನೀಡುತ್ತಿವೆ. ತಿಂಗಳುಗಟ್ಟಲೆ ಡ್ರೈನೇಜ್ ವಾಟರ್ ರಸ್ತೆಯಲ್ಲಿ ಹರಿಯುತ್ತಿದ್ದರೂ ಬಿಡಬ್ಲ್ಯೂಎಸ್‌ಎಸ್‌ಬಿ ಇತ್ತ ತಿರುಗಿ ನೋಡುತ್ತಿಲ್ಲ.

    ಮಳೆ ಬಂದಾಗ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ. ಮ್ಯಾನ್‌ಹೋಲ್‌ನಿಂದ ಉಕ್ಕುವ ನೀರು ಚರಂಡಿ ನೀರಿನೊಂದಿಗೆ ಸೇರಿ ರಸ್ತೆ ಕೆರೆಯಂತಾಗುತ್ತದೆ. ವಾಹನಸವಾರರಿಗೆ ನೀರಿನ ನಡುವೆ ಇರುವ ಗುಂಡಿಗಳು ಅರಿವಿಗೆ ಬಾರದೆ ರಸ್ತೆಯಲ್ಲಿ ಬೀಳುವ ಪರಿಸ್ಥಿತಿ ಉಂಟಾಗಿದೆ. ತಿಂಡ್ಲು- ವಿದ್ಯಾರಣ್ಯಪುರ ಮುಖ್ಯರಸ್ತೆಯ ಪಕ್ಕದಲ್ಲಿ ರಾಜಕಾಲುವೆ ಹರಿದುಹೋಗುವುದರಿಂದ ವರ್ಷಪೂರ್ತಿ ಸಮಸ್ಯೆ ಎದುರಿಸುವಂತಾಗಿದೆ ಎಂಬುದು ನಾಗರಿಕರ ಅಳಲು. ಚುನಾವಣೆ ಸಂದರ್ಭದಲ್ಲಿ ಮಾತ್ರ ಇತ್ತ ಬರುವ ಜನಪ್ರತಿನಿಧಿಗಳು ಸಮಸ್ಯೆಗೆ ಪರಿಹಾರ ನೀಡುವಲ್ಲಿ ವಿಲರಾಗಿದ್ದಾರೆ ಎಂಬುದು ಜನರ ಆರೋಪ.

    ಯಲಹಂಕಂಕ್ಕೆ ಸಂಪರ್ಕ ಕಲ್ಪಿಸುವ ವಿದ್ಯಾರಣ್ಯಪುರದ ಮುಖ್ಯರಸ್ತೆ ಅತಿಹೆಚ್ಚು ವಾಹನದಟ್ಟಣೆ ಇರುವ ಮಾರ್ಗ. ಕಳೆದ ಚುನಾವಣೆ ಸಂದರ್ಭದಲ್ಲಿ ಅವಸರವಾಗಿ ರಸ್ತೆಯ ಒಂದು ಭಾಗಕ್ಕೆ ಮಾತ್ರ ಟಾರ್ ಹಾಕಿದ್ದು, ಚುನಾವಣೆ ನೀತಿಸಂಹಿತೆ ಕಾರಣಕ್ಕೆ ಸ್ಥಗಿತಗೊಂಡ ಕಾಮಗಾರಿ ನೂತನ ಸರ್ಕಾರ ಬಂದು ಆರು ತಿಂಗಳಾದರೂ ಪೂರ್ಣಗೊಂಡಿಲ್ಲ. ರಸ್ತೆಯ ಒಂದು ಭಾಗಕ್ಕೂ, ಇನ್ನೊಂದು ಭಾಗಕ್ಕೂ ನಾಲ್ಕೈದು ಇಂಚು ವ್ಯತ್ಯಯವಿದ್ದು, ಇದರಿಂದ ಓವರ್‌ಟೇಕ್ ಮಾಡುವ ವಾಹನಸವಾರರು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬೀಳುವ ಸ್ಥಿತಿ ಉಂಟಾಗಿದೆ.

    ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪ್ರಮುಖ ಕಾರಣ- ಗುಂಡಿಬಿದ್ದಿರುವ ರಸ್ತೆಗಳು. ಇದೇ ಕಾರಣದಿಂದ ತಿಂಡ್ಲು, ವಿದ್ಯಾರಣ್ಯಪುರ, ನಂಜಪ್ಪ ಸರ್ಕಲ್ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಉಲ್ಬಣಿಸುತ್ತಿದೆ. ಪ್ರತಿದಿನ ಈ ರಸ್ತೆಯಲ್ಲಿ ಆಂಬುಲೆನ್ಸ್‌ಗಳು ಸಿಲುಕಿ ರೋಗಿಗಳು ಪರದಾಡುತ್ತಿದ್ದಾರೆ. ಆದಷ್ಟು ಬೇಗ ರಸ್ತೆ ದುರಸ್ತಿ ಮಾಡಬೇಕು.
    -ಅಭಿ, ಆರ್‌ಟಿಐ ಕಾರ್ಯಕರ್ತ

    ಅಧಿಕಾರಿಗಳ ನಿರ್ಲಕ್ಷ್ಯದಿಂದ ತಿಂಡ್ಲು ಸಪ್ತಗಿರಿ ಲೇಔಟ್, ಶ್ರೀನಿಧಿ ಲೇಔಟ್‌ಗಳಲ್ಲಿ ರಸ್ತೆಗಳ ಸ್ಥಿತಿ ಹದಗೆಟ್ಟಿವೆ. ಎರಡು ದಿನಕ್ಕೆ ಒಂದರಂತೆ ಅಪಘಾತಗಳು ಸಂಭವಿಸುತ್ತಿವೆ. ಬಿಬಿಎಂಪಿ ಇಂಜಿನಿಯರ್‌ಗೆ ದೂರು ನೀಡಿದರೂ ಉಪಯೋಗವಾಗುತ್ತಿಲ್ಲ. ಬಿಡಬ್ಲುೃಎಸ್‌ಎಸ್‌ಬಿ ಪೈಪ್ ಅಳವಡಿಕೆಗಾಗಿ ಅಗೆದ ರಸ್ತೆಗಳನ್ನು ದುರಸ್ತಿ ಮಾಡದೆ ಇರುವುದರಿಂದ ಚೆನ್ನಾಗಿರುವ ರಸ್ತೆಗಳು ಹಾಳಾಗುತ್ತಿವೆ.
    -ಡಾ.ಜಗದೀಶ್, ಕರವೇ ಉಪಾಧ್ಯಕ್ಷ

    ಚುನಾವಣೆ ಸಂದರ್ಭದಲ್ಲಿ ಜನರ ಕಣ್ಣೊರೆಸುವುದಕ್ಕಾಗಿ ವಿದ್ಯಾರಣ್ಯಪುರ ಮುಖ್ಯರಸ್ತೆಯ ಅರ್ಧ ಭಾಗ ಮಾತ್ರ ಟಾರ್ ಹಾಕಿದ್ದಾರೆ. ಚುನಾವಣೆ ಕಳೆದು ಹೊಸ ಸರ್ಕಾರ ಬಂದು ಆರು ತಿಂಗಳು ಕಳೆದರೂ ಇನ್ನರ್ಧ ರಸ್ತೆ ಹಾಗೆಯೇ ಇದೆ. ಇದರಿಂದ ದ್ವಿಚಕ್ರವಾಹನ ಸವಾರರು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬೀಳುವ ಪರಿಸ್ಥಿತಿ ಉಂಟಾಗಿದೆ.
    -ಮಹೇಶ ಕುಮಾರ್, ಸ್ಥಳೀಯ ನಿವಾಸಿ

    ಬ್ಯಾಟರಾಯನಪುರ ಕ್ಷೇತ್ರಕ್ಕೆ ಸೇರುವ ತಿಂಡ್ಲು ಮುಖ್ಯರಸ್ತೆ ಹಾಳಾಗಿ ತಿಂಗಳುಗಳೇ ಕಳೆದಿವೆ. ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಹಣ ಇಲ್ಲ ಎಂದು ಹೇಳುತ್ತಿದೆ. ಅಂದರೆ ೫ ವರ್ಷ ಇದೇ ಪರಿಸ್ಥಿತಿಯಲ್ಲಿ ಬದುಕಬೇಕಾ ಎಂಬ ಪ್ರಶ್ನೆಗೆ ಈ ಕ್ಷೇತ್ರದಿಂದ ಆಯ್ಕೆಯಾಗಿ ಸಚಿವರಾಗಿರುವ ಕೃಷ್ಣ ಬೈರೇಗೌಡ ಉತ್ತರ ನೀಡಬೇಕು.
    -ಶಶಾಂಕ್, ಸಾಮಾಜಿಕ ಕಾರ್ಯಕರ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts