More

    ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

    ಮದ್ದೂರು: ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಬಂಧನ ಮಾಡಿರುವುದನ್ನು ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಶನಿವಾರ ಪಟ್ಟಣದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ರೈತ ಸಂಘದ ಹಿರಿಯ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿದ್ದ ಚಳವಳಿಯನ್ನು ಕೇಂದ್ರ ಸರ್ಕಾರ ಹತ್ತಿಕ್ಕುತ್ತಿರುವುದು ಖಂಡನೇ. ಅರೆ ಸೇನಾ ಪಡೆ ಬಲದಿಂದ ರೈತರನ್ನು ತಡೆದು ಅವರನ್ನು ಬಂಧಿಸಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಆದ್ದರಿಂದ, ಕೇಂದ್ರ ಸರ್ಕಾರ ರೈತರ ಕ್ಷಮೆ ಕೇಳಬೇಕು. ಬಂಧಿಸಿರುವ ರೈತರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

    ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಮುಖಂಡ ಅಣ್ಣೂರು ಮಹೇಂದ್ರ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಗ್ಗ ಜಗ್ಗಾಟದಿಂದ ರಾಜ್ಯದ ರೈತರು ಪರಿತಪಿಸುವಂತಾಗಿದೆ. ತಕ್ಷಣವೇ ಬರ ಪರಿಹಾರ ಬಿಡುಗಡೆ ಮಾಡಬೇಕು. ರೈತರು ಮಾಡಿರುವ ಎಲ್ಲ ಕೃಷಿ ಸಾಲ, ಬ್ಯಾಂಕ್, ಸಹಕಾರ ಸಂಘ ಸಾಲಗಳನ್ನು ಮನ್ನಾ ಮಾಡಬೇಕು. ಬರಗಾಲದಿಂದ ಉಂಟಾಗಿರುವ ನಿರುದ್ಯೋಗ ಸಮಸ್ಯೆ ಬಗೆಹರಿಸಬೇಕು. ರೈತರಿಗೆ ನರೇಗಾ ಅಡಿಯಲ್ಲಿ ವಿವಿಧ ಕೆಲಸಗಳನ್ನು ನೀಡುವ ಮೂಲಕ ಆರ್ಥಿಕ ಹೊರೆಯನ್ನು ತಗ್ಗಿಸಬೇಕು ಎಂದು ಒತ್ತಾಯಿಸಿದರು.

    ರೈತರ ಪಂಪ್ ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಅನ್ನು 10 ಗಂಟೆ ಪೂರೈಸಬೇಕು. ಕೆರೆಕಟ್ಟೆಗಳ ಹೂಳು ತೆಗೆಸಬೇಕು. ಗ್ರಾಮೀಣ ಭಾಗಕ್ಕೆ ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಮೇವು ಬ್ಯಾಂಕ್ ಸ್ಥಾಪಿಸಬೇಕು. ಬರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

    ಪ್ರತಿಭಟನೆ ಸ್ಥಳಕ್ಕೆ ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ಅವರು ಆಗಮಿಸಿ ರೈತರಿಂದ ಮನವಿ ಸ್ವೀಕರಿಸಿ, ತಮ್ಮ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಪತ್ರ ವ್ಯವಹಾರ ಮಾಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

    ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಸೊ.ಸಿ.ಪ್ರಕಾಶ, ಪಣ್ಣೆದೊಡ್ಡಿ ವೆಂಕಟೇಶ, ಕೆ.ಜಿ.ಉಮೇಶ್, ರಮೇಶ, ಕೆ.ಎಸ್. ಪುಟ್ಟಸ್ವಾಮಿ, ಬಿ.ಎಂ. ದೇವರಾಜು, ಕೆ.ಬಿ. ರಾಜು,ಚನ್ನಪ್ಪ, ಕೃಷ್ಣ, ಹನುಮಂತಯ್ಯ, ಲಿಂಗರಾಜು, ಎಂ.ಸಿ. ರಾಜೇಶ, ಲಿಂಗೇಗೌಡ, ಕೆ.ಎಸ್. ರಾಮಲಿಂಗೇಗೌಡ, ಕೆ.ಟಿ. ಚಂದ್ರಶೇಖರ್, ಮಹದೇವಸ್ವಾಮಿ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts