More

    ಕೆಲಸಕ್ಕೆ ಬಾಯ್, ಬೇಸಾಯಕ್ಕೆ ಜೈ…

    ಸುಂಟಿಕೊಪ್ಪ: ಪ್ರಸ್ತುತ ದಿನಮಾನದಲ್ಲಿ ಕೃಷಿಯೆಂದರೆ ಮೂಗು ಮುರಿಯುವವರೇ ಹೆಚ್ಚಿರುವಾಗ ವಿದೇಶದಲ್ಲಿ ಉನ್ನತ ಶಿಕ್ಷಣ ಕಲಿತು, ಒದಗಿಬಂದ ವೃತ್ತಿಗೂ ವಿದಾಯ ಹೇಳುವ ಮೂಲಕ ಕೃಷಿಯನ್ನೇ ಜೀವಾಳವಾಗಿಸಿಕೊಂಡಿರುವ ಹೊರೂರು ಗ್ರಾಮದ ಕೋರವಂಡರ ಸಂತೋಷ್ ಪೂವಯ್ಯ ವಿಶೇಷವಾಗಿದ್ದಾರೆ.

    ಪೂರ್ವಿಕರಿಂದ ಬಳುವಳಿಯಾಗಿ ಬಂದ ಜಮೀನಿನಲ್ಲಿ ಕೃಷಿ ಮುಂದುವರೆಸಿಕೊಂಡು ಬರುವುದರ ಜತೆಗೆ ತಾವು ಬೆಳೆದ ಬೆಳೆಗೆ ನೇರವಾಗಿ ಮಾರುಕಟ್ಟೆ ಕಂಡುಕೊಂಡಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

    ಸ್ವಿಡ್ಜರ್‌ಲೆಂಡ್‌ನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಸ್ನಾತಕೋತ್ತರ ಪದವಿ ಪಡೆದು ಭಾರತಕ್ಕೆ ಆಗಮಿಸಿ ಟಾಟಾ ಸಂಸ್ಥೆಯಲ್ಲಿ ವರ್ಕ್‌ಫ್ರಮ್ ಹೋಮ್ ಕೆಲಸವನ್ನು ನಿರ್ವಹಿಸುವ ಅವಕಾಶ ಸಿಕ್ಕರೂ ವೃತ್ತಿಗೆ ವಿದಾಯ ಹೇಳಿ ಸಂಪೂರ್ಣ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಕುಟುಂಬದ ಹಿರಿಯರಿಂದ ಬಳುವಳಿಯಾಗಿ ಬಂದ 45 ಎಕರೆ ಜಮೀನಿನಲ್ಲಿ ಕಾಫಿ, ಕಾಳುಮೆಣಸು, ಏಲಕ್ಕಿ, ಬಟರ್‌ಫ್ರೂಟ್ ಬೆಳೆದು ವಾರ್ಷಿಕ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ. ವಾಣಿಜ್ಯ ಬೆಳೆಯ ಜತೆಗೆ ಜೇನುತುಪ್ಪ ಶೇಖರಣೆ, ಮೀನು, ಹಸು ಸಾಕಣೆಯಲ್ಲೂ ತೊಡಗಿಸಿಕೊಂಡಿರುವುದು ವಿಶೇಷ.
    ತಾವು ಉತ್ಪಾದಿಸಿದ ಬೆಳೆಗಳನ್ನು ಮಾರುಕಟ್ಟೆಯಲ್ಲಿ ಅಥವಾ ದಲ್ಲಾಳಿಗಳ ಮೂಲಕ ಮಾರಾಟ ಮಾಡದೆ ನೇರವಾಗಿ ಗ್ರಾಹಕರಿಗೆ ನೀಡುವ ಮಾರ್ಗ ಕಂಡುಕೊಂಡಿದ್ದಾರೆ. ಜಿಲ್ಲೆ ಸೇರಿದಂತೆ, ಬೆಂಗಳೂರು ಮಹಾನಗರಗಳಲ್ಲಿ ಗ್ರಾಹಕರನ್ನು ಹೊಂದಿದ್ದು, ತಾವು ಉತ್ಪಾದಿಸಿದ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವ ಮೂಲಕ ಹೆಚ್ಚಿನ ಆದಾಯ ಕಂಡುಕೊಂಡಿದ್ದಾರೆ.

    ಕೊಟ್ಟಿಗೆ ಗೊಬ್ಬರ ಬಳಕೆ: ಸಂತೋಷ್ ಪೂವಯ್ಯ ಅವರು, ಮೂರು ಹಸುಗಳನ್ನು ಸಾಕಿದ್ದು, ಜಮೀನಿಗೆ ಇವುಗಳಿಂದ ಉತ್ಪತ್ತಿಯಾಗುವ ಸಗಣಿ ಗೊಬ್ಬರವನ್ನು ಬಳಕೆ ಮಾಡುತ್ತಾರೆ. ರಾಸಾಯನಿಕ ಗೊಬ್ಬರ ಮಾತ್ರದಿಂದ ಉತ್ತಮ ಫಸಲು ನಿರೀಕ್ಷಿಸಲು ಸಾಧ್ಯವಿಲ್ಲ. ಸಾವಯವ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆಯ ಜತೆಗೆ ಉತ್ತಮ ಫಸಲನ್ನು ನಿರೀಕ್ಷಿಸಬಹುದು ಎನ್ನುತ್ತಾರೆ ಸಂತೋಷ್.

    ಕೃಷಿ ಇಲಾಖೆಯ ಮಾರ್ಗದರ್ಶನ ಹಾಗೂ ಸವಲತ್ತುಗಳನ್ನು ಬಳಕೆ ಮಾಡಿಕೊಂಡು, ಹಿರಿಯ ಕೃಷಿಕರ ಮಾರ್ಗದರ್ಶನದಿಂದ ಉತ್ತಮ ಆದಾಯ ಗಳಿಸಲಾಗುತ್ತಿದೆ ಎನ್ನುತ್ತಾರೆ. ಮುಂದಿನ ದಿನಗಳಲ್ಲಿ ಭತ್ತ ಬೆಳೆಯುವ ಅಭಿಲಾಷೆ ಹೊಂದಿದ್ದು, ಪಾಳು ಬಿದ್ದಿರುವ ಹತ್ತು ಎಕರೆ ಗದ್ದೆಯನ್ನು ಉಳುಮೆ ಮಾಡುವ ಚಿಂತನೆಯಲ್ಲಿದ್ದಾರೆ.

    ಬಟರ್ ಫ್ರೂಟ್‌ನಿಂದ ಲಾಭ: ತೋಟದ ರಸ್ತೆಗಳ ಸುತ್ತಲು ಬಟರ್‌ಫ್ರೂಟ್ ಬೆಳೆಯಲಾಗಿದ್ದು, ಇದರಿಂದಲೇ ವಾರ್ಷಿಕ ಮೂರರಿಂದ ನಾಲ್ಕು ಲಕ್ಷ ರೂ. ಆದಾಯಬರುತ್ತಿದೆ. ಕೇವಲ ಕಾಫಿ ಒಂದನ್ನೇ ನಂಬಿದರೆ ಹೆಚ್ಚಿನ ಆದಾಯಗಳಿಸಲು ಸಾಧ್ಯವಿಲ್ಲ. ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡರೆ ಮಾತ್ರ ಹೆಚ್ಚಿನ ಆದಾಯಗಳಿಸಲು ಸಾಧ್ಯ ಎಂಬ ಅಭಿಪ್ರಾಯ ಸಂತೋಷ್ ಅವರದ್ದಾಗಿದೆ. ಬಟರ್ ಫ್ರೂಟ್‌ನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದಲ್ಲದೆ. ಬೀಜ ಸಂರಕ್ಷಣೆಗೋಷ್ಕರ ಒಂದು ಜೀಜಕ್ಕೆ 2-3 ರೂ.ಕೊಟ್ಟು ಬೀಜವನ್ನು ಇವರೇ ಪುನಾ ಖರೀದಿಸಿ ಗಿಡಗಳನ್ನು ಬೆಳೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts