More

    ಮೂರನೇ ದಿನಕ್ಕೆ ಕಾಲಿಟ್ಟ ಎಂ.ಜಿ.ಮಾರುಕಟ್ಟೆ ವ್ಯಾಪಾರಸ್ಥರ ಪ್ರತಿಭಟನೆ

    ಕೆಜಿಎಫ್: ನಗರದ ಎಂ.ಜಿ.ಮಾರುಕಟ್ಟೆಯಲ್ಲಿನ ಮಳಿಗೆಗಳನ್ನು ಹಾಲಿ ಬಾಡಿಗೆದಾರರಿಗೇ ನೀಡುವಂತೆ ಎಂ.ಜಿ.ಮಾರುಕಟ್ಟೆ ವ್ಯಾಪಾರಸ್ಥರು ಕೈಗೊಂಡಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.

    ಪ್ರತಿಭಟನೆ ಸ್ಥಳಕ್ಕೆ ಮಾಜಿ ಶಾಸಕ ವೈ.ಸಂಪಂಗಿ, ನಗರಸಭೆ ಮಾಜಿ ಅಧ್ಯಕ್ಷ ದಾಸಚಿನ್ನಸವರಿ, ನಗರಸಭೆ ಸದಸ್ಯ ಜಯಪಾಲ್ ಭೇಟಿ ನೀಡಿ ಮಳಿಗೆ ಬಾಡಿಗೆದಾರರ ಬೆಂಬಲಕ್ಕೆ ನಿಂತರಲ್ಲದೆ ಹೋರಾಟ ಮುಂದುವರಿಸಿ, ನಿಮ್ಮ ಜತೆ ನಾವು ನಿಲ್ಲುತ್ತೇವೆಂದು ಧೈರ್ಯ ತುಂಬಿದರು.

    ಸೋಮವಾರ ಸಂಜೆ ಕೆ.ರಾಜೇಂದ್ರನ್ ನೇತೃತ್ವದಲ್ಲಿ ಎಂ.ಜಿ.ಮಾರುಕಟ್ಟೆ ವ್ಯಾಪಾರಸ್ಥರು ನಗರಸಭೆ ಅಧ್ಯಕ್ಷ ವಳ್ಳಲ್‌ಮುನಿಸ್ವಾಮಿ ಹಾಗೂ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ರಾಣಿಬೆನ್ನೂರು ನಗರಸಭೆಯಲ್ಲಿ ಕೈಗೊಂಡಿರುವ ತೀರ್ಮಾನದಂತೆ ತಾವು ಸಹ ಸದಸ್ಯರ ಸಭೆ ಕರೆದು ವ್ಯಾಪಾರಸ್ಥರ ಪರವಾದ ತೀರ್ಮಾನ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರಲ್ಲದೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಡಿಸಿ, ಸರ್ಕಾರದ ನಿಯಮಗಳ ಅನುಸಾರವಾಗಿ ಇ ಪ್ರಕ್ಯೂರ್ ಮೂಲಕವೇ ಕ್ರಮ ವಹಿಸಬೇಕೆಂದು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗಿದೆ.

    ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಕೆ.ರಾಜೇಂದ್ರನ್, ನಗರಸಭೆಗೆ ಹಿಂದೆ ಆಡಳಿತಾಧಿಕಾರಿಗಳಾಗಿದ್ದ ಜಿಲ್ಲಾಧಿಕಾರಿಗಳು ಇ ಹರಾಜು ಪ್ರಕ್ರಿಯೆ ಪ್ರಾರಂಭಿಸಿದ್ದರು. ನೂತನ ಕೌನ್ಸಿಲ್ ಜ.2ರಂದು ನಡೆಸಿದ ಸಭೆಯಲ್ಲಿ 3 ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಉಳಿದ 30 ಸದಸ್ಯರು ಡಿಸಿ ವಿವೇಚನೆಗೆ ನೀಡಲು ಸಹಮತ ವ್ಯಕ್ತಪಡಿಸಿ ಅಂಗಡಿ ಮಳಿಗೆಗಳಿಗೆ ಮುಂಗಡ ಹಣ ನಿಗದಿಪಡಿಸಿ ಇ ಹರಾಜು ಹಾಕುವ ಬಗ್ಗೆ ತೀರ್ಮಾನ ಮಾಡಲು ಜಿಲ್ಲಾಧಿಕಾರಿಗಳ ಮುಂದಿನ ಕ್ರಮಕ್ಕೆ ಸಲ್ಲಿಸಲು ಸಲ್ಲಿಸಲು ಪೌರಾಯುಕ್ತರಿಗೆ ಸೂಚಿಸಿರುವ ಬಗ್ಗೆ ನಡಾವಳಿಯಲ್ಲಿ ದಾಖಲಾಗಿದೆ. ಇದು ನಗರಸಭೆ ಚುನಾಯಿತ ಆಡಳಿತ ಮಂಡಳಿ ಇ ಪ್ರಕ್ಯೂರಮೆಂಟ್‌ಗೆ ಸಹಮತವಿದೆ ಎಂದು ಒಪ್ಪಿಗೆ ಸೂಚಿಸಿದಂತಾಗಿದೆ.

    ಇದೀಗ ನಗರಸಭೆ ಕೌನ್ಸಿಲ್ ವ್ಯಾಪಾರಸ್ಥರ ಮನವಿ ಮೇರೆಗೆ ಸದಸ್ಯರ ವಿಶೇಷ ಸಭೆ ಕರೆದು ಹಿಂದಿನ ನಡಾವಳಿಯನ್ನು ರದ್ದುಪಡಿಸಿ ಎಂ.ಜಿ.ಮಾರುಕಟ್ಟೆ ಪರವಾದ ತೀರ್ಮಾನ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಬೇಕು ಎಂದು ಹೇಳಿದರು.

    ಸದಸ್ಯರಿಗೆ ಸೂರಪ್‌ಸೀಡ್ ಭೀತಿ: ಎಂ.ಜಿ.ಮಾರುಕಟ್ಟೆ ವಿಚಾರವಾಗಿ ನಗರಸಭೆ ಸೂಪರ್‌ಸೀಡ್ ಆಗಲಿದೆ ಎಂಬ ಭಯವನ್ನು ಸದಸ್ಯರಲ್ಲಿ ಮೂಡಿಸಿರುವುದರಿಂದ ಸದಸ್ಯರು ಮುಂದೆ ಬರುವುದಕ್ಕೆ ಹೆದರುವ ಪರಿಸ್ಥಿತಿ ತಲೆದೋರಿದೆ. ಎಂ.ಜಿ.ಮಾರುಕಟ್ಟೆ ವ್ಯಾಪಾರಸ್ಥರು ವಿಶೇಷ ಸಭೆ ಕರೆಯುವಂತೆ ನಗರಸಭೆ ಮೇಲೆ ಒತ್ತಡ ಹೇರಬೇಕು ಎಂದು ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts