More

    ಕರೊನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ರೆಡಿ; ಐಸಿಯು, ಬೆಡ್​ಗಳು ಸಿದ್ಧ

    ಬೆಂಗಳೂರು: ಕರೊನಾ ಚಿಕಿತ್ಸಾ ದರ ಕುರಿತು ಕೆಲ ಅಸಮಾಧಾನಗಳ ನಡುವೆಯೂ ಸರ್ಕಾರದ ಸೂಚನೆ ಮೇರೆಗೆ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಸಜ್ಜಾಗುತ್ತಿವೆ. ಈಗಾಗಲೇ ಶೇ. 25 ಆಸ್ಪತ್ರೆಗಳಲ್ಲಿ ಸೌಲಭ್ಯ ಕಲ್ಪಿಸಲಾಗಿದ್ದು, ಶೇ.75 ಸಿದ್ಧತೆ ಕೈಗೊಂಡಿವೆ.

    ನಾರಾಯಣ ಹೆಲ್ತ್ ಸಿಟಿ, ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜು, ಸುಗುಣ ಸೇರಿ ಬಹುತೇಕ ಆಸ್ಪತ್ರೆಗಳು ಈಗಾಗಲೇ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಮಣಿಪಾಲ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಹಿತ ನೂರು ಹಾಸಿಗಳನ್ನು ಕಾಯ್ದಿರಿಸಲು ಸಿದ್ದತೆ ನಡೆಯುತ್ತಿದೆ. 4-5 ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳು ಅಗತ್ಯ ಸೌಲಭ್ಯಗಳನ್ನು ಮಾಡಿಕೊಳ್ಳಲಿವೆ ಎಂದು ಖಾಸಗಿ ಆಸ್ಪತ್ರೆಗಳ ಸಂಘಟನೆ ಮುಖ್ಯಸ್ಥರು ತಿಳಿಸಿದ್ದಾರೆ.

    ನಾರಾಯಣ ಹೆಲ್ತ್ ಸಿಟಿಯಲ್ಲಿ ಕರೊನಾ ಚಿಕಿತ್ಸೆಗಾಗಿಯೇ 100 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಹೆಚ್ಚುವರಿಯಾಗಿ ಹೋಟೆಲ್​ನಲ್ಲಿ 50 ಹಾಸಿಗೆಗಳ ವ್ಯವಸ್ಥೆ ಮಾಡಿದೆ. ಆಸ್ಪತ್ರೆ ಸಿಬ್ಬಂದಿಗೆ ಅಗತ್ಯವಾದಷ್ಟು ಪಿಪಿಇ ಕಿಟ್ ಸೇರಿ ಅಗತ್ಯ ಸೌಲಭ್ಯಗಳನ್ನು ಮಾಡಿಕೊಂಡಿದೆ. ಸಿಬ್ಬಂದಿಗೆ ತರಬೇತಿ ಸಹ ನೀಡಲಾಗಿದೆ. 2 ಐಸೋಲೇಷನ್ ವಾರ್ಡ್, 10 ಐಸಿಯು ಹಾಗೂ 25 ವೆಂಟಿಲೇಟರ್ ಮೀಸಲಿಡಲಾಗಿದ್ದು, ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆ ಸಿಒಒ ಜೋಸೆಫ್ ಪಸಂಘಾ ತಿಳಿಸಿದ್ದಾರೆ.

    ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಹತ್ತು ಹಾಸಿಗಳ ವ್ಯವಸ್ಥೆ ಮಾಡಲಾಗಿದೆ. ಸದ್ಯ, ಐಸಿಯು ಮತ್ತು ವೆಂಟಿಲೇಟರ್ ವ್ಯವಸ್ಥೆ ಇಲ್ಲ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ರವೀಂದ್ರ ಹೇಳಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲೂ ಆಕ್ಸಿಜನ್ ಸೌಲಭ್ಯವುಳ್ಳ ನೂರು ಹಾಸಿಗೆಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದ್ದು, 3-4 ದಿನಗಳಲ್ಲಿ ಸೇವೆಗೆ ಲಭ್ಯ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ತಿಳಿಸಿದ್ದಾರೆ.

    ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ 518 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದ್ದು, ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯ ರೋಗಿಗಳಿಗೆ ರಿಯಾಯಿತಿ ದರದ ಚಿಕಿತ್ಸೆ ಲಭ್ಯವಿದೆ. ಈ ಯೋಜನೆಯಡಿ ಬರುವ ಎಲ್ಲ ಆಸ್ಪತ್ರೆಗಳಲ್ಲಿ ಕರೊನಾ ಚಿಕಿತ್ಸೆ ಕೂಡ ಲಭ್ಯವಿದೆ ಎಂದು ಸರ್ಕಾರ ತಿಳಿಸಿದೆ. ಆದರೆ ಅತ್ಯಾಧುನಿಕ ಸೌಲಭ್ಯದೊಂದಿಗೆ ಹಲವು ಶಾಖೆಗಳನ್ನು ಹೊಂದಿರುವ ಕೆಲ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಈಗಾಗಲೇ ಹಾಸಿಗೆಗಳನ್ನು ಕಾಯ್ದಿರಿಸಲಾಗಿದ್ದು, ಕೆಲವೆಡೆ ರೋಗಿಗಳಿಗೆ ಚಿಕಿತ್ಸೆ ಸಹ ನೀಡಲಾಗುತ್ತಿದೆ. ಇನ್ನೂ ಬಹಳಷ್ಟು ಆಸ್ಪತ್ರೆಗಳು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಲ್ಲಿ ನಿರತವಾಗಿವೆ. ಸರ್ಕಾರ ಪ್ರಕಟಿಸಿರುವ ಪಟ್ಟಿಯಲ್ಲಿ ಹೃದಯ, ನೇತ್ರ, ಮಕ್ಕಳ ಆಸ್ಪತ್ರೆ, ಹೆರಿಗೆ ಆಸ್ಪತ್ರೆ, ಮೂತ್ರಪಿಂಡ, ಮೂಳೆ ಚಿಕಿತ್ಸೆ ಸೇರಿ ಕೋವಿಡ್ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಆದಕಾರಣ ಈ ಆಸ್ಪತ್ರೆಗಳ ತಜ್ಞರು ಹಾಗೂ ಸಿಬ್ಬಂದಿಗೆ ಇದಕ್ಕಾಗಿಯೇ ಪ್ರತ್ಯೇಕ ತರಬೇತಿ ಸಹ ನೀಡಬೇಕಾಗುತ್ತದೆ. ಹೀಗಾಗಿ ಇಂತಹ ಆಸ್ಪತ್ರೆಗಳನ್ನು ಪಟ್ಟಿಯಿಂದ ತೆಗೆಯುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿಯೂ ಖಾಸಗಿ ಆಸ್ಪತ್ರೆಗಳ ಮತ್ತು ನರ್ಸಿಂಗ್ ಹೋಂಗಳ ಒಕ್ಕೂಟ (ಫಾನಾ) ತಿಳಿಸಿದೆ.

    ಚಿಕಿತ್ಸೆಗೆ ಪರಿಷ್ಕೃತ ಮಾರ್ಗಸೂಚಿ:  ರೋಗ ಲಕ್ಷಣ ರಹಿತ ಕರೊನಾ ಸೋಂಕಿತರು, ಲಕ್ಷಣ ಇರುವವರು ಹಾಗೂ ಹೈ-ರಿಸ್ಕ್ ಸೋಂಕಿತರನ್ನು ಯಾವ ಯಾವ ಕೇಂದ್ರಗಳಲ್ಲಿ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಬೇಕು ಎಂಬ ಬಗ್ಗೆ ಆರೋಗ್ಯ ಇಲಾಖೆ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ. ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆಗಳ ಆಯುಕ್ತರು, ಜಿಪಂ ಸಿಇಒಗಳು ಸೇರಿ ಸಂಬಂಧಿಸಿದ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸೋಂಕು ಪ್ರಕರಣ ಕಂಡು ಬಂದ ಕೂಡಲೇ ಆಯಾ ಜಿಲ್ಲಾ ಸೇರ್ವಕ್ಷಣಾ ಅಧಿಕಾರಿಗೆ (ಸಿಎಸ್​ಒ) ಮಾಹಿತಿ ನೀಡಬೇಕು ಅಥವಾ ಸಿಎಸ್​ಒ ಐಸಿಎಂಆರ್ ವೆಬ್​ಪೋರ್ಟಲ್ ಮೂಲಕ ತಾನೇ ಮಾಹಿತಿ ಡೌನ್​ನೋಡ್ ಮಾಡಿಕೊಳ್ಳಬೇಕು. ನಂತರ ಸೋಂಕಿತನ ಮನೆ ಅಥವಾ ಅವನಿರುವ ಸ್ಥಳಕ್ಕೆ ಸಿಎಸ್​ಒ ತಮ್ಮ ತಂಡವನ್ನು ಕಳುಹಿಸಿ ಸೋಂಕಿತರ ಸಂಪೂರ್ಣ ಆರೋಗ್ಯ ಮಾಹಿತಿ ದಾಖಲಿಸಿಕೊಳ್ಳಬೇಕು. ರೋಗಿಯನ್ನು ಸರ್ಕಾರಿ ಕೋವಿಡ್ ನಿಗಾ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಿಸಬೇಕು. ರೋಗಿ ಬಯಸಿದಲ್ಲಿ ಖಾಸಗಿ ಸಂಸ್ಥೆಗೆ ದಾಖಲಿಸಲು ಅವಕಾಶವಿದೆ. ಅದಕ್ಕೂ ಮುನ್ನ ಅವರ ಸಂಬಂಧಿಕರಿಂದ ನಿಗದಿತ ಅರ್ಜಿ ಮೇಲೆ ಕಡ್ಡಾಯವಾಗಿ ಸಹಿ ಪಡೆದುಕೊಳ್ಳಬೇಕೆಂದು ಸೂಚಿಸಲಾಗಿದೆ.

    ಯಾವ ಲಕ್ಷಣಕ್ಕೆ, ಎಲ್ಲಿ ದಾಖಲು?: ರೋಗ ಲಕ್ಷಣ ರಹಿತ ಸೋಂಕಿತರನ್ನು ಕೋವಿಡ್ ನಿಗಾ ಕೇಂದ್ರಗಳಿಗೆ (ಸಿಸಿಸಿ), ಲಕ್ಷಣಗಳಿರುವ ರೋಗಿಗಳನ್ನು ನಿಗದಿತ ಕೋವಿಡ್ ಆರೋಗ್ಯ ಕೇಂದ್ರಗಳಿಗೆ (ಡಿಸಿಎಚ್​ಸಿ) ಮತ್ತು ಹೈ-ರಿಸ್ಕ್ ಸೋಂಕಿತರನ್ನು ನಿಗದಿತ ಕೋವಿಡ್ ಆಸ್ಪತ್ರೆಗೆ (ಡಿಸಿಎಚ್) ದಾಖಲಿಸಬೇಕು.

    ಗರ್ಭಿಣಿ, ಮಕ್ಕಳು ಪ್ರತ್ಯೇಕ: ದೇಹದ ಉಷ್ಣಾಂಶ 37.5ಡಿಗ್ರಿ ಸೆ.ಗಿಂತ ಕಡಿಮೆ ಇರುವ ಮತ್ತು ರಕ್ತದಲ್ಲಿನ ಆಮ್ಲಜನಕ ಶುದ್ಧತ್ವ ಮಟ್ಟ (ಎಸ್​ಒಪಿ2) ಶೇ.95ಕ್ಕಿಂತ ಹೆಚ್ಚಿರುವವರನ್ನು ಅಂದರೆ ಕೋವಿಡ್ ಕೇರ್ ಸೆಂಟರ್​ನಲ್ಲಿ 50 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷಕ್ಕಿಂತ ಚಿಕ್ಕವರು, ಗರ್ಭಿಣಿಯರನ್ನು ಹಾಗೂ ಗಂಭೀರ ಆರೋಗ್ಯ ಸಮಸ್ಯೆ ಇರುವವರನ್ನು ದಾಖಲಿಸುವಂತಿಲ್ಲ. ಬದಲಿಗೆ ಇಂತಹವರಲ್ಲಿ ಸೋಂಕು ಕಂಡು ಬಂದರೆ ಡಿಸಿಎಚ್​ಸಿಗಳಿಗೆ ದಾಖಲಿಸಿ ಚಿಕಿತ್ಸೆ ನೀಡಬೇಕು.

    ಪ್ರತಿ ಸಿಬ್ಬಂದಿ ನನ್ನ ಕುಟುಂಬದ ಸದಸ್ಯರು: ರಾಜ್ಯದ ಪ್ರತಿ ಕಾನ್​ಸ್ಟೇಬಲ್ ನನ್ನ ಕುಟುಂಬ ಸದಸ್ಯರಿದ್ದಂತೆ. ಯಾರನ್ನೇ ಕಳೆದುಕೊಂಡರೂ ಮನಸ್ಸಿಗೆ ವೇದನೆ ಆಗುತ್ತದೆ. ಕರೊನಾ ಸೋಂಕಿಗೆ ಧೃತಿಗೆಡದೆ ಧೈರ್ಯವಾಗಿ ಎದುರಿಸೋಣ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭಾವುಕರಾಗಿ ನುಡಿದರು. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗುರುವಾರ ನಡೆದ ಮೃತ ಪೊಲೀಸರ ಕುಟುಂಬಕ್ಕೆ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಸೋಂಕಿಗೆ ಮೂವರು ಪೊಲೀಸರು ಅಸುನೀಗಿದ್ದಾರೆ. ಮನಸ್ಸಿಗೆ ನೋವು ತಂದಿದೆ ಎಂದು ಕಂಬನಿ ಮಿಡಿದರು. ಯಾವುದೇ ಸಂದರ್ಭದಲ್ಲೂ ನಿಮ್ಮ (ಪೊಲೀಸರ) ಬೆಂಬಲಕ್ಕೆ ಸರ್ಕಾರವಿದೆ. ಕೋವಿಡ್ ನಂತರ ಪೊಲೀಸರ ಕಾರ್ಯವೈಖರಿ ಬದಲಾಗಿದೆ. ಆದರೆ ಕಾರ್ಯಕ್ಷಮತೆ ಬದಲಾಗಿಲ್ಲ ಎಂದು ಪ್ರಶಂಸಿಸಿದರು. ಇದೇ ವೇಳೆ ಕರೊನಾ ಸೋಂಕಿನಿಂದ ಮೃತರಾದ ಕುಟುಂಬದವರಿಗೆ 30 ಲಕ್ಷ ರೂ. ಪರಿಹಾರ ಚೆಕ್ ಅನ್ನು ಸಚಿವರು ಹಸ್ತಾಂತರಿಸಿದರು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮತ್ತು ಆಯುಕ್ತ ಎಸ್.ಭಾಸ್ಕರ್ ರಾವ್, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

    ಲಸಿಕೆ ಇಲ್ಲದೆಯೂ ಕೊನೆಗಾಣಲಿದೆ ಕರೊನಾ ಸಂಕಷ್ಟ; ಇಟಲಿ ವೈದ್ಯರಿಂದ ಅಧ್ಯಯನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts