More

  ಪ್ರೀತಿ ಮರೆತ ಪ್ರೆಸೆಂಟ್ ಪ್ರಪಂಚ: ವಿಜಯವಾಣಿ ಸಿನಿಮಾ ವಿಮರ್ಶೆ

  ಚಿತ್ರ: ಪ್ರೆಸೆಂಟ್ ಪ್ರಪಂಚ 0% ಲವ್ 
  ನಿರ್ದೇಶನ: ಅಭಿರಾಮ್
  ನಿರ್ಮಾಣ: ಕೃಷ್ಣಮೂರ್ತಿ ಮತ್ತು ರವಿಕುಮಾರ್
  ತಾರಾಗಣ: ಮಂಜುನಾಥ್ ಅರ್ಜುನ್, ಸಂಭ್ರಮಶ್ರೀ, ಯಶಸ್ ಅಭಿ, ಅಕ್ಷತಾ ಕುಕ್ಕಿ, ಓಂಪ್ರಕಾಶ್ ರಾವ್, ತಬಲಾ ನಾಣಿ, ಸಂಜನಾ ಮುಂತಾದವರು.

  ‘ಮದುವೆಗೆ ಮುಂಚೆ ತಾಳ್ಮೆ, ಪ್ರೀತಿ ಇರುತ್ತವೆ. ಆದರೆ, ಮದುವೆ ಆದಮೇಲೆ ಮೊದಲು ತಾಳ್ಮೆ ಹೋಗುತ್ತೆ. ಆಮೇಲೆ ಪ್ರೀತಿಯೂ ತಾನಾಗೇ ಹೋಗುತ್ತೆ…’ – ಹೀಗೆ ಬಾರ್​ನಲ್ಲಿ ಸಿಕ್ಕ ಹೊಸ ಗೆಳೆಯರ ಮುಂದೆ ತನ್ನ ನೋವಿನ ಲವ್​ಸ್ಟೋರಿ ಬಿಚ್ಚಿಡುತ್ತಾನೆ ನಾಯಕ ಅಖಿಲ್ (ಮಂಜುನಾಥ್ ಅರ್ಜುನ್).

  ಗಂಡ – ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ, ಪ್ರೀತಿಸಿ ಮದುವೆಯಾಗುವ ಸಾಫ್ಟ್​ವೇರ್ ಉದ್ಯೋಗಿ ಅಖಿಲ್ (ಅರ್ಜುನ್), ಅಮೃತಾ (ಸಂಭ್ರಮಶ್ರೀ) ಜಗಳ ಉಂಡು ಮಲಗುವಷ್ಟರಲ್ಲಿ ಬಗೆಹರಿಯದೇ ವಿಚ್ಛೇದನದವರೆಗೂ ಹೋಗುತ್ತದೆ. ಹೆಂಡತಿಗೆ ಡೇ ಶಿಫ್ಟ್, ಗಂಡನಿಗೆ ನೈಟ್ ಶಿಫ್ಟ್. ಹೀಗಾಗಿ ಇಬ್ಬರದೂ ವೀಕೆಂಡ್ ಸಂಸಾರ. ಅಮೃತಾ ಕಚೇರಿಯಲ್ಲಿ ಕೆಲಸ ಮಾಡುವ ಅಭಿ (ಯಶಸ್) ಆಕೆಯ ಹಿಂದೆ ಬೀಳುತ್ತಾನೆ. ಹೀಗಾಗಿ ಅಖಿಲ್​ಗೆ ಅಮೃತಾ ಮೇಲೆ ಅನುಮಾನ. ಹಾಗೆಯೇ ಅಖಿಲ್ ಕಚೇರಿಯಲ್ಲಿ ಕೆಲಸ ಮಾಡುವ ಅಕ್ಷತಾ (ಅಕ್ಷತಾ ಕುಕ್ಕಿ), ಆತನ ಹಿಂದೆ ಬೀಳುತ್ತಾಳೆ. ಹೀಗಾಗಿ ಅಮೃತಾಗೆ ಅಖಿಲ್ ಮೇಲೆ ಅನುಮಾನ.

  ದಾಂಪತ್ಯದಲ್ಲಿ ಒಮ್ಮೆ ನಂಬಿಕೆ ಹೋಗಿ, ಅನುಮಾನ ಎಂಟ್ರಿ ಕೊಟ್ಟರೆ ಅಲ್ಲಿಗೆ ಸಮಸ್ಯೆ ಶುರು. ಪ್ರೀತಿಸಿ ಮದುವೆಯಾದ ಎರಡು ವರ್ಷಗಳಲ್ಲೇ ಇಬ್ಬರ ನಡುವೆ ಬಿರುಕು ಮೂಡುತ್ತದೆ. ಹಾಗಾದರೆ ಇಬ್ಬರೂ ದೂರವಾಗುತ್ತಾರಾ? ಅಥವಾ ತಪ್ಪಿನ ಅರಿವಾಗಿ ಮತ್ತೆ ಒಂದಾಗುತ್ತಾರಾ? ಈ 0% ಪ್ರೀತಿ, 100% ಹೇಗಾಗುತ್ತದೆ? ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಹೆಚ್ಚಾಗಲು ಕಾರಣವೇನು? ಕೆಲವು ವರ್ಷಗಳಿಂದೀಚೆಗೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದೇಕೆ? ಅನಾಥಾಶ್ರಮಗಳು, ವೃದ್ಧಾಶ್ರಗಳ ಸಂಖ್ಯೆ ಜಾಸ್ತಿಯಾಗಲು ಕಾರಣವೇನು? ಇಂತಹ ಹಲವು ಸಮಸ್ಯೆಗಳಿಗೆ ಪರಿಹಾರವನ್ನೂ ಚಿತ್ರದಲ್ಲಿ ಹೇಳಿದ್ದಾರೆ.

  ನಿರ್ದೇಶಕ ಅಭಿರಾಮ್ ಮತ್ತು ನಾಯಕ ಮಂಜುನಾಥ್ ಅರ್ಜುನ್ ಕೊನೆಯ ಚಿತ್ರವಿದು. ರಿಲೀಸ್​ಗೆ ಸಿದ್ಧತೆ ಮಾಡಿಕೊಳ್ಳುವಾಗಲೇ 2021ರಲ್ಲಿ ಇಬ್ಬರೂ ವಿಧಿವಶರಾದರು. ತಡವಾದರೂ ಚಿತ್ರದ ಕಥೆ ಈಗಲೂ ಪ್ರಸ್ತುತ. ಕೆಲವೆಡೆ ನಿಧಾನ ಎನಿಸಿದರೂ, ಕ್ಲೈಮ್ಯಾಕ್ಸ್ ಹಲವರ ಕಣ್ತೆರೆಸುತ್ತದೆ. ಸರಸ-ವಿರಸಗಳ ನಡುವೆ ಸಂಬಂಧ ಗಟ್ಟಿಯಾಗಿ ನಿಲ್ಲಬೇಕೇ ವಿನಃ, ಸಮಸ್ಯೆಗಳು ನಿಲ್ಲಬಾರದು ಎಂಬುದನ್ನು ಸರಳವಾಗಿ ಹೇಳಿದ್ದಾರೆ. ಮಂಜುನಾಥ್ ಅರ್ಜುನ್, ಸಂಭ್ರಮಶ್ರೀ ತಮ್ಮ ಪಾತ್ರಗಳಿಗೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. ಯಶಸ್ ಅಭಿ ಗಮನ ಸೆಳೆಯುತ್ತಾರೆ. ಓಂಪ್ರಕಾಶ್ ರಾವ್, ತಬಲಾ ನಾಣಿ, ಸಂಜನಾ ಆನಂದ್ ತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ. ಈ ಸಿನಿಮಾ ನೋಡಿದರೆ ಒಂದಷ್ಟು ಸಂಸಾರಗಳು ಸರಿ ಹೋಗಬಹುದು.

  ಹನ್ನೊಂದರ ಈ ಹುಡುಗಿ ಐನ್​ಸ್ಟೀನ್​-ಸ್ಟೀಫನ್ ಹಾಕಿಂಗ್​ಗಿಂತಲೂ ಬುದ್ಧಿವಂತೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts