More

    ಎರಡು ಮೀನುಗಾಳಗಳ ರಣತಂತ್ರ; ಪ್ರೇಮಶೇಖರರ ಅಂಕಣ

    ಎರಡು ಮೀನುಗಾಳಗಳ ರಣತಂತ್ರ; ಪ್ರೇಮಶೇಖರರ ಅಂಕಣ

    ತಮ್ಮ ಭಾರತ ಸಾಮ್ರಾಜ್ಯವನ್ನು ಯುರೋಪಿಯನ್ ಶತ್ರುಗಳು ಮತ್ತು ಜಪಾನ್​ನಿಂದ ರಕ್ಷಿಸಲು ಬ್ರಿಟನ್ ಕೈಗೊಂಡಿದ್ದ ರಕ್ಷಣಾ ಉಪಾಯಗಳು ಸ್ವಾರಸ್ಯಕರವಾಗಿವೆ. ಪಶ್ಚಿಮದಿಂದ ಬರಬಹುದಾದ ಯಾವುದೇ ನೌಕಾಸೈನ್ಯವನ್ನು ಭಾರತದ ತೀರಕ್ಕೆ ಮೂರು ಸಾವಿರ ಕಿಲೋಮೀಟರ್ ದೂರದ ಏಡನ್ ಬಂದರಿನಲ್ಲೇ ತಡೆಯಲು ಮತ್ತು ಪೂರ್ವದಿಂದ ಬರಬಹುದಾದ ಶತ್ರುವನ್ನು ನಮ್ಮ ತೀರಕ್ಕೆ ಆರು ಸಾವಿರ ಕಿಲೋಮೀಟರ್ ದೂರದ ಸಿಂಗಾಪುರದಲ್ಲೇ ತಡೆಯಲು ಬ್ರಿಟನ್ ನೌಕಾಸೈನ್ಯಗಳನ್ನು ಸಜ್ಜುಗೊಳಿಸಿ ನಿಲ್ಲಿಸಿತ್ತು! ಉತ್ತರದ ಭೂಮಾರ್ಗದಿಂದ ಬರಬಹುದಾದ ರಷ್ಯನ್ ಸೇನೆ ಇರಾನ್ ಮತ್ತು ಅಫ್ಘಾನಿಸ್ತಾನದ ಗಡಿಗಳನ್ನು ದಾಟಿ ಇತ್ತ ಕಾಲಿಡದಂಥ ರಾಜತಾಂತ್ರಿಕ ಹಾಗೂ ಸೇನಾ ವ್ಯವಸ್ಥೆಗಳನ್ನೂ ಬ್ರಿಟನ್ ಮಾಡಿತ್ತು. ದೇಶ ಹೋಳಾಗಿ ಸ್ವಾತಂತ್ರ್ಯ ಬಂದು ಬ್ರಿಟಿಷರು ಇಲ್ಲಿಂದ ಹೊರನಡೆದ ಮೇಲೆ ಏಡನ್ ಮತ್ತು ಸಿಂಗಾಪುರಗಳಲ್ಲಿದ್ದ ಅವರ ಸೇನಾನೆಲೆಗಳ ಸೌಲಭ್ಯಗಳಿಂದ ನಾವು ವಂಚಿತರಾಗಬೇಕಾಯಿತು. ಜತೆಗೆ ನಮಗೆ ಸಿಕ್ಕಿದ ಬಲಹೀನ ರಾಜಕೀಯ ನಾಯಕತ್ವದಿಂದಾಗಿ ನಮ್ಮ ಹೊಸ ಗಡಿಗಳನ್ನೂ ರಕ್ಷಿಸಿಕೊಳ್ಳಲಾರದ ಸ್ಥಿತಿಗೆ ನಾವಿಳಿದೆವು. ಅತ್ತ ಕಾಶ್ಮೀರದ ಉತ್ತರ ಮತ್ತು ಪಶ್ಚಿಮ ಭಾಗಗಳನ್ನು ಪಾಕಿಸ್ತಾನ ಆಕ್ರಮಿಸಿಕೊಂಡರೆ ಇತ್ತ ಈಶಾನ್ಯ ಕಾಶ್ಮೀರದಲ್ಲಿ ನಮ್ಮನ್ನು ಹೊರಗಟ್ಟಿ ಚೀನೀಯರು ಬಂದು ಪಟ್ಟಾಗಿ ಕೂತರು. ‘ಇನ್ನು ಹದಿನೈದು ದಿನಗಳಲ್ಲಿ ನಾವು ದೆಹಲಿಯಲ್ಲಿರುತ್ತೇವೆ, ಕೆಂಪುಕೋಟೆಯ ಮೇಲೆ ಪಾಕಿಸ್ತಾನೀ ಧ್ವಜವನ್ನು ಹಾರಿಸುತ್ತೇವೆ’ ಎಂದು ಹೇಳುವ ಧಾರ್ಷ್ಟ್ಯವನ್ನು ಪಾಕ್ ಅಧ್ಯಕ್ಷ ಅಯೂಬ್ ಖಾನ್ 1965ರ ಯದ್ಧದ ಮುನ್ನಾದಿನ ತೋರಿದ್ದು ನಮ್ಮನ್ನೇ ನಾವು ಆಳಿಕೊಳ್ಳಲಾರಂಭಿಸಿ ಎರಡೇ ದಶಕಗಳು ಕಳೆಯುವುದರೊಳಗೆ ನಮ್ಮ ರಕ್ಷಣಾಸ್ಥಿತಿ ಅದೆಷ್ಟು ಹದಗೆಟ್ಟಿತ್ತು ಎನ್ನುವುದರ ದ್ಯೋತಕ.

    ಅದೇ ಸಮಯಕ್ಕೆ ಬ್ರಿಟಿಷ್ ಸಿಂಹವೂ ಮುದಿಯಾಗಿ ಅದು ಹಿಂದೂ ಮಹಾಸಾಗರ ವಲಯದಿಂದ ಹಂತಹಂತವಾಗಿ ಕಾಲ್ತೆಗೆಯಬೇಕಾದ ಸ್ಥಿತಿ ಒದಗಿತ್ತು ಮತ್ತು ಹೊಸ ಅವಕಾಶಗಳನ್ನು ಹುಡುಕುತ್ತಿದ್ದ ಯಾಂಕಿಗಳು ಇಲ್ಲಿ ಕಾಲೂರಿದರು, ಉತ್ತರ ಹಿಂದೂ ಮಹಾಸಾಗರದ ಸರಿಸುಮಾರು ನಟ್ಟನಡುವೆ ಇರುವ ಡಿಯೆಗೋ ಗಾರ್ಸಿಯಾ ದ್ವೀಪದಲ್ಲಿ ಅಮೆರಿಕದ ನೌಕಾ-ವಿಮಾನ ನೆಲೆ ನಿರ್ವಣವಾಯಿತು. ವಾಯವ್ಯದಲ್ಲಿ ಸ್ವಾತಂತ್ರ್ಯಗಳಿಸಿ ದಕ್ಷಿಣ ಯೆಮೆನ್ ಎಂಬ ಹೊಸ ಹೆಸರಿನಲ್ಲಿ ಅವತರಿಸಿದ್ದ ಏಡನ್ ಮೇಲೆ ಸೋವಿಯತ್ ಪ್ರಭಾವವಾಗಿ, ಯೆಮನೀ ನಿಯಂತ್ರಣದ ಸೊಕೊತ್ರಾ ದ್ವೀಪದಲ್ಲಿ ರಷ್ಯನ್ನರು ತಳವೂರಿದರು. ಮೂರು ದಶಕಗಳ ಹಿಂದೆ ಸೋವಿಯತ್ ಯೂನಿಯನ್ ಕುಸಿದು, ಶೀತಲಸಮರ ಅಂತ್ಯವಾದ ಮೇಲೆ ರಷ್ಯನ್ನರು ಸೋಕೊತ್ರಾದಿಂದ ಗಂಟುಮೂಟೆ ಕಟ್ಟಿ ಹೊರನಡೆದರು. ಇಲ್ಲಿ ತಮ್ಮ ಹಿತಾಸಕ್ತಿಗಳಿಗೆ ಇನ್ನು ಯಾವ ಅಪಾಯವೂ ಇಲ್ಲವೆಂದರಿತ ಅಮೆರಿಕನ್ನರ ಆಸಕ್ತಿ ಡಿಯೆಗೋ ಗಾರ್ಸಿಯಾ ಮೇಲೆ ಸಹಜವಾಗಿಯೇ ತಗ್ಗಿತು. ಇದು ದಾರಿ ಮಾಡಿಕೊಟ್ಟದ್ದು ತ್ವರಿತ ಆರ್ಥಿಕ ಪ್ರಗತಿಯೊಂದಿಗೆ ವಿಶ್ವನಾಯಕನ ಪಟ್ಟದ ಕನಸು ಕಾಣತೊಡಗಿದ ಚೀನಾದ ಚಟುವಟಿಕೆಗಳ ಆರಂಭಕ್ಕೆ. ಮೊದಲಿಗೆ ಪಾಕಿಸ್ತಾನದ ಮೂಲಕ ಅರಬ್ಬೀ ಸಮುದ್ರ ತಲುಪುವ ಯೋಜನೆ ಹಾಕಿಕೊಂಡ ಚೀನಾ ನಂತರ ದಕ್ಷಿಣದ ಶ್ರೀಲಂಕಾ, ಪೂರ್ವದ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್​ಗಳಲ್ಲೂ ನೆಲೆಯೂರುವ ಯೋಜನೆ ರೂಪಿಸಿತು. ಆದರೆ ಚೀನೀಯರ ಯೋಜನೆಗಳು ಭಾರತವನ್ನು ಸುತ್ತುವರಿಯುವ ಪ್ರಯತ್ನ, ಇದರಿಂದ ಮುಂದೆ ಈ ದೇಶಕ್ಕೆ ಅಪಾಯವೊದಗಲಿದೆ ಎನ್ನುವುದನ್ನು ಅರಿಯುವ ಬುದ್ಧಿವಂತಿಕೆ ಅಂದಿನ ನಮ್ಮ ಸರ್ಕಾರಗಳಿಗಿರಲಿಲ್ಲ. ಇದಾದದ್ದು ಹೇಗೆ?

    ಇದನ್ನೂ ಓದಿ: ಬೀದಿ ಬದಿ ಮರಕ್ಕೆ ಭಿತ್ತಿ ಪತ್ರ ಅಂಟಿಸುವವರೇ ಹುಷಾರ್​​! 6 ತಿಂಗಳು ಜೈಲುವಾಸ ಅನುಭವಿಸಬೇಕಾದೀತು ಎಚ್ಚರ

    ಇತರ ದೇಶಗಳ ಕಾರ್ಯಚಟುವಟಿಕೆಗಳ ಮೇಲೆ ನಿಗಾವಹಿಸಿ, ಮುಂದಿನ ದಿನಗಳಲ್ಲಿ ಅವು ನಮಗೆ ಅನುಕೂಲಕರವಾಗುತ್ತವೆಯೇ ಅಥವಾ ಕೇಡು ತರುತ್ತವೆಯೇ ಎಂದು ಲೆಕ್ಕಹಾಕಿ ಸರ್ಕಾರಕ್ಕೆ ವರದಿ ನೀಡಬೇಕಾದವರು ಆ ದೇಶಗಳಲ್ಲಿರುವ ನಮ್ಮ ರಾಜತಂತ್ರಜ್ಞರು. ಅವರನ್ನು ಅಲ್ಲಿಗೆಲ್ಲ ಕಳುಹಿಸಿ ವರ್ಷಂಪ್ರತಿ ಕೋಟ್ಯಂತರ ಡಾಲರ್​ಗಳ ವೆಚ್ಚದಲ್ಲಿ ಅಲ್ಲಿರಿಸಿರುವುದೇ ಆ ಕೆಲಸಕ್ಕಾಗಿ. ಮಧ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ ಅಭೂತಪೂರ್ವ ಘಟನಾವಳಿಗಳು ಜರುಗಿದಂಥ 1988-2008ರ ಅವಧಿಯಲ್ಲಿ ಅಲ್ಲಿನ ಮೂರು ಪ್ರಮುಖ ದೇಶಗಳಲ್ಲಿ ಕಾರ್ಯನಿರ್ವಹಿಸಿದ್ದ ಗಣ್ಯ ಭಾರತೀಯ ರಾಜತಂತ್ರಜ್ಞರೊಬ್ಬರೊಡನೆ ಹನ್ನೆರಡು ವರ್ಷಗಳ ಹಿಂದೆ ಸಮಾವೇಶವೊಂದರಲ್ಲಿ ನಾನು ಮುಖಾಮುಖಿಯಾದೆ. ಪಾಕ್ ನೆಲದ ಮೂಲಕ ಅರಬ್ಬೀ ಸಮುದ್ರ ತಲುಪಲು ಹೊರಟ ಚೀನೀಯರಿಗೆ ಅನುಕೂಲ ಮಾಡಿಕೊಡಲೆಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 11-15 ಸಾವಿರ ಚೀನೀ ಸೈನಿಕರು ರಹಸ್ಯವಾಗಿ ನೆಲೆಗೊಳ್ಳಲು ಪಾಕಿಸ್ತಾನ ಅವಕಾಶ ನೀಡಿದ್ದ ವಿಷಯ ಬಹಿರಂಗಗೊಂಡಿದ್ದ ದಿನಗಳವು. ಜತಗೆ, ಅಪ್ಘಾನಿಸ್ತಾನಕ್ಕೆ ಹೊಂದಿಕೊಂಡ ಸ್ವಾತ್ ಕಣಿವೆಯಲ್ಲಿ ಪಾಕಿಸ್ತಾನೀ ಸಂವಿಧಾನದ ಬದಲಾಗಿ ಇಸ್ಲಾಮಿಕ್ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸಲು ತಾಲಿಬಾನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಒತ್ತಡಕ್ಕೆ ಪಾಕ್ ಸರ್ಕಾರ ಸಿಲುಕಿದ್ದ ಸುದ್ದಿಯೂ ಬಿಸಿಬಿಸಿ ಚರ್ಚೆಗೆ ಅಂದು ಕಾರಣವಾಗಿತ್ತು. ಅಂಥ ಸನ್ನಿವೇಶದಲ್ಲಿ ಆ ರಾಜತಂತ್ರಜ್ಞರು ಹೇಳುತ್ತಿದ್ದರು- ‘ಸ್ವಾತ್ ಕಣಿವೆಯಲ್ಲಿ ತಾಲಿಬಾನಿಗಳ ಕೈ ಮೇಲಾದದ್ದಕ್ಕೆ ನಾವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಪಾಕಿಸ್ತಾನದ ಅಂತರಿಕ ಹಾಗೂ ವಿದೇಶ ನೀತಿಗಳ ಬಗ್ಗೆ ನಾವು ಅನಗತ್ಯವಾಗಿ ತಲೆಕೆಡಿಸಿಕೊಳ್ಳುತ್ತಿದ್ದೇವೆ. ಅದು ಚೀನಾದ ಜತೆ ಹೊಂದಿರುವ ಸಂಬಂಧಗಳನ್ನು ತಪು್ಪ ಎಂದು ನಾವು ಭಾವಿಸುವುದೇ ತಪು್ಪ. ಚೀನಾ ದೊಡ್ಡ ದೇಶ. ಹಾಗೇ ಅದರ ಹಿತಾಸಕ್ತಿಗಳೂ ದೊಡ್ಡವು. ಬಲೂಚಿಸ್ತಾನದ ಗ್ವಾದಾರ್​ನಲ್ಲಿ ನೌಕಾನೆಲೆ ನಿರ್ವಿುಸಿರುವ ಚೀನಾ ಅದರ ಮೂಲಕ ತೈಲಭರಿತ ಗಲ್ಪ್ ಪ್ರದೇಶದೊಡನೆ ಹತ್ತಿರದ ಸಂಪರ್ಕ ಸಾಧಿಸಲು ಬಯಸಿದರೆ ಅದನ್ನು ತಪ್ಪು ಎನ್ನಲಾಗದು…’

    “An ambassador is a honest man sent abroad to lie about his country” ಎಂದು ಬ್ರಿಟಿಷ್ ರಾಜತಂತ್ರಜ್ಞ ಹೆನ್ರಿ ವ್ಯಾಟನ್ ನಾಲ್ಕು ಶತಮಾನಗಳ ಹಿಂದೆಯೇ ಹೇಳಿದ್ದಾನೆ. ಅದು ನಿಜ ಎಂದು ನಾನೂ ನಂಬುತ್ತೇನೆ. ಆದರೆ ನಮ್ಮ ಈ ರಾಜತಂತ್ರಜ್ಞ ಮಹಾಶಯರು ವಿದೇಶಗಳ ಬಗ್ಗೆ ನಮ್ಮ ದೇಶದಲ್ಲೇ ಸುಳ್ಳು ಹೇಳುತ್ತಿದ್ದರು! ಅವರ ನಿಲುವುಗಳನ್ನು ಆ ಸಮಾವೇಶದಲ್ಲಿ ತಿರಸ್ಕರಿಸಿ ಮಾತಾಡಿದವರು ನಾನು ಮತ್ತು ಒಬ್ಬರು ಪಾಕಿಸ್ತಾನೀ ವಿದ್ವಾಂಸರು ಮಾತ್ರ. ನನ್ನನ್ನು ಅಂದೂ ಇಂದೂ ಕಾಡುತ್ತಿರುವ ಪ್ರಶ್ನೆ- ಶೀತಲಸಮರ ಅಂತ್ಯವಾಗತೊಡಗಿದಿಂದೀಚೆಗೆ ಪಾಕಿಸ್ತಾನ, ಅಫ್ಘಾನಿಸ್ತಾನಗಳಿಗೆ ಸಂಬಂಧಿಸಿದಂತೆ ಭಾರತ ಅನುಭವಿಸಿದ ಹಲವಾರು ರಾಜತಾಂತ್ರಿಕ ಸೋಲುಗಳಿಗೆ ಹಾಗೂ ನಮ್ಮ ವಿರುದ್ಧ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಚೀನಾಗೆ ನಮ್ಮ ಸರ್ಕಾರಗಳು ಮುಕ್ತ ಅವಕಾಶ ನೀಡಿದ್ದಕ್ಕೆ ಇಂತಹ ತಲೆಕೆಟ್ಟ, ಅವಾಸ್ತವಿಕ, ಆತ್ಮಹತ್ಯಾ ನಿಲುವುಗಳೇ ಕಾರಣವಿರಬಹುದೇ?

    ಇದನ್ನೂ ಓದಿ: ಇನ್ಶೂರೆನ್ಸ್ ಪಾಲಿಸಿ ಮಾಡಿಸೋ ಮುನ್ನ ಹುಷಾರು!; ದೊಡ್ಡ ಕಂಪನಿಗಳ ಹೆಸರಲ್ಲೇ ನಕಲಿ ಪಾಲಿಸಿ!

    ಮುಂದಿನ ದಿನಗಳಲ್ಲಿ ಅದೇ ಆದದ್ದು. ಭಾರತವನ್ನು ಸುತ್ತುವರಿಯುವ ಚೀನೀ ಪ್ರಯತ್ನ ಅವ್ಯಾಹತವಾಗಿ ಮುಂದುವರಿಯಿತು. ಅದಕ್ಕೆ ತುಸುವಾದರೂ ತಡೆಯೊಡ್ಡಲು ಪ್ರಯತ್ನಿಸಿದ್ದು ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರ. ಉತ್ತರದ ತಾಜಿಕಿಸ್ತಾನದ ಓಲ್ನಿಯಲ್ಲೊಂದು ಪುಟ್ಟ ವಿಮಾನನೆಲೆ, ದಕ್ಷಿಣದ ಮಾರಿಷಸ್​ನ ಆಗಲೀಗ ಮತ್ತು ಸೇಶಲ್ಸ್​ನ ಅಸಂಪ್ಷನ್ ದ್ವೀಪಗಳಲ್ಲಿ ನೌಕಾನೆಲೆಗಳನ್ನು ಸ್ಥಾಪಿಸಿ ಚೀನೀ ಸವಾಲಿಗೆ ಉತ್ತರ ನೀಡಲು ವಾಜಪೇಯಿ ಯೋಜನೆ ರೂಪಿಸಿದ್ದರು. ಆದರೆ ಅವರದನ್ನು ಕಾರ್ಯರೂಪಕ್ಕಿಳಿಸುವ ಮೊದಲೇ ಅಧಿಕಾರ ಕಳೆದುಕೊಂಡದ್ದರಿಂದಾಗಿ ಮತ್ತು ಮುಂದಿನ ಮನಮೋಹನ್ ಸಿಂಗ್​ರ ಯುಪಿಎ ಸರ್ಕಾರ ಅದನ್ನು ಸಂಪೂರ್ಣವಾಗಿ ಕಡೆಗಣಿಸಿದ ಪರಿಣಾಮವಾಗಿ ಆ ದಿಕ್ಕಿನಲ್ಲಿ ಏನೂ ನಡೆಯಲಿಲ್ಲ. ಚೀನಾ ನಿರಾಯಾಸವಾಗಿ ಪಾಕಿಸ್ತಾನದ ಗ್ವಾದಾರ್, ಶ್ರೀಲಂಕಾದ ಹಂಬನ್​ತೋಟ, ಬಾಂಗ್ಲಾದೇಶದ ಚಿತ್ತಗಾಂಗ್, ಮ್ಯಾನ್ಮಾರ್​ನ ಸಿಟ್ವೇಗಳಲ್ಲಿ ಸೇನಾ ನೆಲೆಗಳು ಹಾಗೂ ಸಾಮರಿಕ ಸವಲತ್ತುಗಳನ್ನು ಗಳಿಸಿಕೊಂಡು ಭಾರತವನ್ನು ಸುತ್ತುವರಿಯುವುದರಲ್ಲಿ ಯಶಸ್ವಿಯಾಯಿತು. ಅಮೆರಿಕನ್ ವಿಶ್ಲೇಷಕರು ಚೀನೀ ನೆಲೆಗಳನ್ನು ಒಂದಕ್ಕೊಂದು ಗೆರೆ ಎಳೆದು ಸಂರ್ಪಸಿ ‘ಮುತ್ತಿನ ಹಾರ’ ಎಂದು ಕರೆದರು. ಭಾರತೀಯ ವಿಶ್ಲೇಷಕರಿಗೂ ಅದೇ ಮಾದರಿಯಾಯಿತು. ಆದರೆ ಚೀನೀಯರೆಂದೂ ಅದನ್ನು ಮುತ್ತಿನ ಹಾರವೆಂದು ಕರೆಯಲೇ ಇಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಚೀನೀ ನೆಲೆಗಳು ಮುತ್ತುಗಳಲ್ಲ, ಪ್ರತಿಕೂಲ ಸನ್ನಿವೇಶದಲ್ಲಿ ನಮ್ಮನ್ನು ಕುಟುಕಬಲ್ಲ ಕುಟುಕುಕೊಂಡಿಗಳು ಅವು ಎಂದು ಪರಿಗಣಿಸಿ ನಾನು ಚೀನೀ ಸೇನಾನೆಲೆಗಳ ಸರಪಳಿಯನ್ನು ‘ಕುಟುಕುಕೊಂಡಿಗಳ ಹಾರ’ ಎಂದು ಕರೆದಿದ್ದೇನೆ.

    ಚೀನೀ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರಾತ್ಮಕ ಕ್ರಮಗಳನ್ನು ತೆಗೆದುಕೊಂಡದ್ದು ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ. ವಾಜಪೇಯಿ ಯೋಜನೆಗೆ ಮರುಜೀವ ನೀಡಿದ ಮೋದಿ ಆಗಲೀಗ ಮತ್ತು ಅಸಂಪ್ಷನ್ ದ್ವೀಪಗಳಲ್ಲಿ ನೌಕಾ-ವಿಮಾನ ನೆಲೆಗಳ ನಿರ್ವಣಕ್ಕೆ ಚಾಲನೆ ನೀಡಿದರು. ಅವರ ಮುಂದುವರಿದ ಪ್ರಯತ್ನಗಳ ಫಲವಾಗಿ ದಕ್ಷಿಣದ ಮೊಝಾಂಬಿಕ್, ಮಡಗಾಸ್ಕರ್ ಹಾಗೂ ಮಾಲ್ಡೀವ್ಸ್​ಗಳಲ್ಲಿ ಸರ್ವೇಕ್ಷಣಾ ಸವಲತ್ತುಗಳನ್ನೂ; ಶ್ರೀಲಂಕಾ, ಮ್ಯಾನ್ಮಾರ್​ಗಳಲ್ಲಿ ಚೀನೀ ನೆಲೆಗಳ ಸನಿಹದಲ್ಲೇ ಸೇನಾ ಸವಲತ್ತುಗಳನ್ನೂ ಭಾರತ ಗಳಿಸಿಕೊಳ್ಳುವಂತಾಯಿತು. ಪಶ್ಚಿಮದ ಕತಾರ್ ಮತ್ತು ಒಮಾನ್​ಗಳ ಜತೆ ಮನಮೋಹನ್ ಸಿಂಗ್ ಸರ್ಕಾರ ಮಾಡಿಕೊಂಡಿದ್ದ ರಕ್ಷಣಾ ಒಪ್ಪಂದಗಳನ್ನು ಮತ್ತಷ್ಟು ಪರಿಷ್ಕರಿಸಿ ಆ ದೇಶಗಳಲ್ಲಿ ಭಾರತಕ್ಕೆ ಸೇನಾ ಸವಲತ್ತುಗಳನ್ನು ಮೋದಿ ಗಳಿಸಿಕೊಟ್ಟರು. 2019 ಡಿಸೆಂಬರ್ ಪ್ರಕಾರ ಒಮಾನ್​ನ ದುಖ್ಮ್ ಈಗ ಭಾರತದ ಸೇನಾನೆಲೆಯಾಗುವ ಹಾದಿಯಲ್ಲಿದೆ. ಜತೆಗೆ ಪೂರ್ವದ ನಮ್ಮದೇ ನಿಕೋಬಾರ್ ದ್ವೀಪಗಳ ದಕ್ಷಿಣದಲ್ಲಿ ಮತ್ತು ಅದಕ್ಕೆ ನೂರೈವತ್ತು ಕಿಲೋಮೀಟರ್ ದೂರದಲ್ಲಿರುವ ಇಂಡೋನೇಷ್ಯಾದ ಸಬಾಂಗ್​ನಲ್ಲೂ, 2018 ಮೇ ಒಪ್ಪಂದದ ಪ್ರಕಾರ, ಭಾರತದ ನೌಕಾ-ವಿಮಾನನೆಲೆಗಳು ನಿರ್ವಣವಾಗುತ್ತಿವೆ. ಈ ಮೂಲಕ ಚೀನೀ ಕುಟುಕುಕೊಂಡಿಗಳನ್ನು ಕಟ್ಟಿಹಾಕುವ ‘ಹೂಮಾಲೆ’ ಎಂಬ ಭಾರತೀಯ ನೆಲೆಗಳ ಸರಪಳಿಯನ್ನು ಮೋದಿ ನಿರ್ವಿುಸಿದರು. ಪರಿಣಾಮವಾಗಿ, ಭಾರತದ ಮುಖ್ಯ ಭೂಭಾಗ ಮತ್ತು ಹೊರನಾಡುಗಳಲ್ಲಿರುವ ಭಾರತೀಯ ನೆಲೆಗಳ ನಡುವೆ ಚೀನೀ ಕುಟುಕುಕೊಂಡಿಗಳ ಹಾರ ಸಿಕ್ಕಿಕೊಂಡಂತಾಯಿತು!

    ಇತ್ತೀಚೆಗೆ ಕರೊನಾ ಸಂಕಷ್ಟದ ಸಮಯದಲ್ಲೂ ಚೀನಾ ಗಡಿತಂಟೆ ತೆಗೆದಿದ್ದರಿಂ ದಾಗಿ ಚೀನಾ ವಿರುದ್ಧ ಮೋದಿ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಚೀನಾ ಮತ್ತು ಆಸ್ಟ್ರೇಲಿಯಾಗಳ ನಡುವೆ ಸ್ಪೋಟಿಸಿದ ವೈಮನಸ್ಯವನ್ನು ಉಪಯೋಗಿಸಿಕೊಂಡ ಮೋದಿ ಪರಸ್ಪರ ಸೇನಾ ಸವಲತ್ತುಗಳ ಬಳಕೆಯ ಒಪ್ಪಂದ ವನ್ನು ಆಸ್ಟ್ರೇಲಿಯಾ ಜತೆ ಮಾಡಿಕೊಂಡಿದ್ದಾರೆ. ಪರಿಣಾಮವಾಗಿ ಇಂಡೋನೇಷ್ಯಾದ ದಕ್ಷಿಣದಲ್ಲಿರುವ, ಆಸ್ಟ್ರೇಲಿಯಾದ ಒಡೆತನದ ಕೋಕೋ ದ್ವೀಪಗಳಲ್ಲಿನ ಸೇನಾ ಸವಲತ್ತುಗಳನ್ನು ಅಗತ್ಯ ಬಂದಾಗ ಬಳಸಿಕೊಳ್ಳುವ ಸೌಲಭ್ಯವನ್ನು ಭಾರತಕ್ಕೆ ಒದಗಿಸಿಕೊಟ್ಟಿದ್ದಾರೆ. ಅಮೆರಿಕ ಜತೆಗೂ ಸೇನಾ ಸಹಕಾರದ ಒಪ್ಪಂದವಾಗಿದೆ.

    ಇದನ್ನೂ ಓದಿ: ಹುಟ್ಟುಹಬ್ಬಕ್ಕೆಂದು ದುಬೈನಿಂದ ಬಂದು ಪೊಲೀಸ್​ ಕೇಸ್​ನಲ್ಲಿ ಸಿಲುಕಿಕೊಂಡ ಸಲ್ಮಾನ್​ ಸಹೋದರರು!

    ಹೀಗೆ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಪೂರ್ವ-ಪಶ್ಚಿಮದ ಹೊರನಾಡುಗಳಲ್ಲಿ ಸ್ಥಾಪಿಸಿರುವ ಸೇನಾ ನೆಲೆಗಳು ಮತ್ತು ಪಡೆದುಕೊಂಡಿರುವ ಸೇನಾ ಸವಲತ್ತುಗಳನ್ನು ಒಟ್ಟುಗೂಡಿಸಿ ಗೆರೆಗಳನ್ನು ಎಳೆದರೆ ಅವು ಪರಸ್ಪರ ಮುಖ ಮಾಡಿದ ಎರಡು ಮೀನುಗಾಳಗಳ ಹಾಗೆ ಕಾಣುತ್ತವೆ! ಪಶ್ಚಿಮದ ಮೀನುಗಾಳ ಉತ್ತರದಲ್ಲಿ ಒಮಾನ್​ನಲ್ಲಿರುವ ದುಖ್ಮ್​ನಿಂದ ಆರಂಭವಾಗಿ ಸೇಶಲ್ಸ್​ನ ಅಸಂಪ್ಷನ್, ಉತ್ತರ ಮಡಗಾಸ್ಕರ್, ಮಾರಿಷಸ್​ನ ಆಗಲೀಗ ದ್ವೀಪಗಳ ಮೂಲಕ ಸಾಗಿ, ಪೂವೋತ್ತರಕ್ಕೆ ತಿರುಗಿ ಅಮೆರಿಕನ್ ನೆಲೆ ಡಿಯೆಗೋ ಗಾರ್ಸಿಯಾಗೆ ಮುಟ್ಟುತ್ತದೆ. ಪೂರ್ವದ ಮೀನುಗಾಳ ಅಂಡಮಾನ್-ನಿಕೋಬಾರ್ ದ್ವೀಪಗಳಿಂದ ಆರಂಭವಾಗಿ ಇಂಡೋನೇಷ್ಯಾದ ಸಬಾಂಗ್, ಆಸ್ಟ್ರೇಲಿಯಾದ ಕೋಕೋ ದ್ವೀಪಗಳ ಮೂಲಕ ಸಾಗಿ ಪಶ್ಚಿಮೋತ್ತರಕ್ಕೆ ಹೊರಳಿ ಅದೇ ಡಿಯೆಗೋ ಗಾರ್ಸಿಯಾ ಸೇರುತ್ತದೆ. ಚೀನಾ ಮೇಲೆ ಈ ಎರಡು ಮೀನುಗಾಳಗಳ ಪರಿಣಾಮವೇನು?

    ಯಾವುದೇ ಪ್ರತಿಕೂಲ ಸನ್ನಿವೇಶದಲ್ಲಿ ಮಲಕ್ಕಾ ಜಲಸಂಧಿಯ ಮೂಲಕ ಸಾಗಿಬರುವ ಚೀನೀ ಯುದ್ಧನೌಕೆಗಳು ನಿಕೋಬಾರ್ ಮತ್ತು ಸಬಾಂಗ್​ಗಳ ನಡುವೆ ಸಿಕ್ಕಿಹೋಗುತ್ತವೆ. ಅಲ್ಲಿಂದ ತಪ್ಪಿಸಿಕೊಂಡು ಬಂಗಾಳ ಕೊಲ್ಲಿ ಪ್ರವೇಶಿಸುವುದು ಅವುಗಳಿಗೆ ಸಾಧ್ಯವಾಗುವುದಿಲ್ಲ. ಜತೆಗೆ ಪಶ್ಚಿಮ ಏಷ್ಯಾದಿಂದ ಚೀನಾದತ್ತ ಚಲಿಸುವ ಪೆಟ್ರೋಲ್ ಮತ್ತು ನೈಸರ್ಗಿಕ ಅನಿಲ ತುಂಬಿದ ಜಹಜುಗಳನ್ನೂ ಮಲಕ್ಕಾ ಜಲಸಂಧಿ ತಲುಪದಂತೆ ಭಾರತ ತಡೆದುನಿಲ್ಲಿಸಬಲ್ಲುದು. ತನ್ನ ಅಗತ್ಯದ ಶೇಕಡ 80 ತೈಲವನ್ನು ಚೀನಾ ಆಮದು ಮಾಡಿಕೊಳ್ಳುವುದು ಮಲಕ್ಕಾ ಜಲಸಂಧಿಯ ಮೂಲಕ ಎಂಬ ವಾಸ್ತವದ ಹಿನ್ನೆಲೆಯಲ್ಲಿ ಭಾರತ ಒಡ್ಡುವ ತಡೆ ಆ ದೇಶದ ಯುದ್ಧಸಾಮರ್ಥ್ಯಕ್ಕೆ ಅದೆಂಥ ಹೊಡೆತ ನೀಡಬಲ್ಲುದೆಂದು ಕಲ್ಪಿಸಿಕೊಳ್ಳಿ!

    ಇನ್ನು ಪಶ್ಚಿಮದ ಮೀನುಗಾಳದತ್ತ ಹೊರಳೋಣ. ಕೆಂಪುಸಮುದ್ರದ ದಕ್ಷಿಣ ತುದಿಯ ಜಿಬೂತಿಯಲ್ಲಿ ನಿರ್ವಣವಾಗುತ್ತಿರುವ ಬೃಹತ್ ಚೀನೀ ನೆಲೆಯಿಂದ ಹೊರಡಬಹುದಾದ ಯಾವುದೇ ಯುದ್ಧನೌಕೆ ಅಥವಾ ಯುದ್ಧವಿಮಾನ ಭಾರತದ ಪಶ್ಚಿಮ ತೀರ ತಲುಪಲು ಈ ಮೀನುಗಾಳ ಬಿಡುವುದಿಲ್ಲ! ಹೀಗಾಗಿಯೇ ಮೋದಿ ಸರ್ಕಾರ ರೂಪಿಸಿ ಅನುಷ್ಠಾನಗೊಳಿಸಿರುವ ಈ ಯೋಜನೆಯನ್ನು ‘ಎರಡು ಮೀನುಗಾಳಗಳ ರಣತಂತ್ರ’ ಎಂದು ಬಣ್ಣಿಸಲಾಗುತ್ತಿದೆ. ಹಿಂದೆ ಬ್ರಿಟಿಷ್ ಆಡಳಿತಾವಧಿಯಲ್ಲಿ ಪೂರ್ವ-ಪಶ್ಚಿಮದಲ್ಲಿ ಭಾರತಕ್ಕಿದ್ದ ಸುರಕ್ಷಾಕವಚಗಳನ್ನು ಈ ಮೀನುಗಾಳಗಳು ಮತ್ತೆ ಒದಗಿಸಿವೆ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ತಪ್ಪೇ ಮಾಡದಿದ್ದರೂ ರತನ್​ ಟಾಟಾಗೆ ನೋಟಿಸ್​ ಕಳಿಸಿದ ಪೊಲೀಸರು; ಪ್ರಕರಣದ ಹಿಂದಿದ್ದಳು ಒಬ್ಬಳು ಮಹಿಳೆ!

    ಬೀದಿನಾಯಿ ಕಚ್ಚಿದ್ರೂ ಸುಮ್ನಿರ್ಬೇಕಂತೆ; ಇಲ್ಲಂದ್ರೆ ಮೇನಕಾ ಗಾಂಧಿ ಫೋನ್​ ಮಾಡಿ ಬೆದರಿಕೆ ಹಾಕ್ತಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts