More

    ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ, ಸಚಿವ ಸಿ.ಟಿ.ರವಿ ಇಂಗಿತ, ಬನ್ನೇರುಘಟ್ಟದಲ್ಲಿ ಕಾರ್ಯಾಗಾರ

    ಆನೇಕಲ್: ಹೊರ ರಾಜ್ಯ ಹಾಗೂ ವಿದೇಶಗಳಿಗಿಂತ ಕರ್ನಾಟಕ ಪ್ರವಾಸೋದ್ಯಮ ಹೆಚ್ಚು ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ಚಿಂತನೆ ನಡೆದಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

    ಬನ್ನೇರುಘಟ್ಟದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರವಾಸೋದ್ಯಮ ನೂತನ ಯೋಜನೆ ಜಾರಿ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
    ನೆರೆ ರಾಜ್ಯ ಹಾಗೂ ವಿದೇಶಗಳಲ್ಲಿ ಪ್ರವಾಸೋದ್ಯಮ ಹೇಗಿದೆ, ಅಲ್ಲಿ ಅಭಿವೃದ್ಧಿ ಕೈಕೊಂಡಿರುವ ಕ್ರಮಗಳೇನು ಎಂಬುದರ ಬಗ್ಗೆ ಚರ್ಚಿಸುವುದೂ ಸೇರಿ ಅವುಗಳಿಗಿಂತ ರಾಜ್ಯದ ಪ್ರವಾಸೋದ್ಯಮವನ್ನು ಹೇಗೆ ವಿಸ್ತರಿಸಬೇಕು ಎಂಬ ನಿಟ್ಟಿನಲ್ಲಿ ಕಾರ್ಯಾಗಾರ ನಡೆಸಲಾಗಿದೆ ಎಂದರು.

    ಸುಮಾರು 5 ಲಕ್ಷ ವಿದೇಶಿಗರು ಪ್ರತಿ ವರ್ಷ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳೇನು ಎಂಬ ಬಗ್ಗೆ ಚಿಂತಿಸಬೇಕಾಗಿದೆ ಎಂದರು.

    ಮುಂದಿನ ಐದು ವರ್ಷಕ್ಕೆ ಪ್ರವಾಸೋದ್ಯಮ ಪೈಲಟ್ ಪ್ಲಾನ್ ಆಗಲಿದ್ದು, ಯಾವುದಕ್ಕೆ ಸಬ್ಸಿಡಿ ನೀಡಬೇಕು. ಸಬ್ಸಿಡಿ ಹೇಗೆ ನೀಡಬೇಕು ಎಂಬುದರ ಚಿಂತನೆ ಮಾಡಲಾಗಿದೆ. ಮೈಸೂರು, ಬೆಂಗಳೂರು, ಕೊಡಗು ಈಗಾಗಲೇ ಅಭಿವೃದ್ಧಿ ಹೊಂದಿವೆ. ಗೋವಾ ನಾಲ್ಕೈದು ದಶಕಗಳಿಂದ ಪ್ರವಾಸಿ ಕೇಂದ್ರವಾಗಿ ಬದಲಾಗಿದೆ, ಕೇರಳವೂ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ನಡುವೆ ಇರುವ ಕರ್ನಾಟಕ ಆ ಮಟ್ಟದ ಆಕರ್ಷಣೆ ಪಡೆಯಲು ಏಕೆ ಸಾಧ್ಯವಾಗಿಲ್ಲ ಎಂಬುದರ ಬಗ್ಗೆ ಚಿಂತನೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಬೇಕಾಗಿದೆ ಎಂದರು.

    ರಾಜ್ಯ ಪ್ರವಾಸೋದ್ಯಮ ಇಲಾಖೆ ಅಧ್ಯಕ್ಷೆ ನಟಿ ಶ್ರುತಿ ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ರಾಜ್ಯದ ಹಲವು ವಿಭಾಗಗಳಿಂದ ಅನುಭವಿಗಳನ್ನು ಕಾರ್ಯಾಗಾರಕ್ಕೆ ಆಹ್ವಾನಿಸಲಾಗಿದ್ದು, ಅವರ ಸಲಹೆ ಸೂಚನೆಗಳನ್ನು ಪಡೆಯಲಾಗಿದೆ ಎಂದರು. ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಇದಕ್ಕೆ ವಿಶೇಷ ಅನುದಾನ ಮೀಸಲಿಡುವ ಭರವಸೆ ಇದೆ. ಈ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

    ಪ್ರವಾಸೋದ್ಯಮ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಜಂಗಲ್ ಲಾಡ್ಜ್ ವ್ಯವಸ್ಥಾಪಕ ನಿರ್ದೇಶಕ ಶರ್ಮ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್, ನಿರ್ದೇಶಕ ರಮೇಶ್, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ ಸಿಂಗ್ ಇದ್ದರು.

    ಸೋತವರಿಗೆ ಮತ್ರಿಗಿರಿ ಕೊಟ್ಟರೂ ಬೇಜಾರಿಲ್ಲ: ಉಪ ಚುನಾವಣೆಯಲ್ಲಿ ಸೋತವರಿಗೆ ಮಂತ್ರಿಗಿರಿ ಕೊಡುವುದಾದರೆ ಯಾರಿಗೆ ಮಂತ್ರಿ ಸ್ಥಾನ ಕೊಟ್ಟರೂ ನಮಗೆ ಬೇಜಾರಿಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದರು.

    ಮಂತ್ರಿಸ್ಥಾನ ನೀಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ನಾವು ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಸೋತವರನ್ನು ಕೆಲಸಕ್ಕೆ ಬಾರದವರು ಎನ್ನಲು ಆಗುವುದಿಲ್ಲ. ಸೋಲು-ಗೆಲುವಿಗೆ ಹಲವು ಕಾರಣವಿರುತ್ತದೆ. ಹೀಗಾಗಿ ಎಲ್ಲರನ್ನೂ ಪಕ್ಷ ಹಾಗೂ ಸಮಾಜದ ಉಪಯೋಗಕ್ಕಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.

     

    ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ರೇಣುಕಾಚಾರ್ಯ ಭೇಟಿ ಬಗ್ಗೆ ಮಾತನಾಡಿದ ಸಚಿವ, ಡಿ.ಕೆ.ಶಿವಕುಮಾರ್ ಬಿಜೆಪಿಗೆ ಬರಬಹುದು. ಇದಕ್ಕಾಗಿ ಭೇಟಿ ಆಗಿರಬೇಕು ಎಂದರು.

    ಪ್ರತಿಭಟನೆಯಿಂದ ಬದಲಾವಣೆ ಅಸಾಧ್ಯ: ನಾವು ಕೂಡ ಕನ್ನಡಿಗರೇ ಆಗಿದ್ದು, ಎಲ್ಲ ಸಂಘಟನೆಗಳು ಸೇರಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಪ್ರತಿಭಟನೆ ನಡೆಸುವುದರಿಂದ ಎಲ್ಲವೂ ಬದಲಾಗಲು ಸಾಧ್ಯವಿಲ್ಲ. ನಾನು ಮಾತನಾಡಿದರೆ ಅದನ್ನು ತಪ್ಪು ಎಂಬಂತೆ ಬಿಂಬಿಸಲಾಗುತ್ತದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.

    ಕನ್ನಡದ ಬಗ್ಗೆ ಮಾತನಾಡುವ ರಾಜಕಾರಣಿಗಳಾಗಲಿ, ಸಾಹಿತಿಗಳಾಗಲಿ ಅಥವಾ ಕನ್ನಡಪರ ಹೋರಾಟಗಾರರೇ ಆಗಲಿ ಎಷ್ಟು ಜನ ಅವರ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸುತ್ತಿದ್ದಾರೆ ಎನ್ನುವುದು ಕೂಡ ಪ್ರಶ್ನೆಯಾಗುತ್ತದೆ. ಎಲ್ಲ ಭಾಗದಲ್ಲೂ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಇದಕ್ಕೆ ಕಾರಣ ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗುತ್ತಿರುವುದು ಎಂದರು.
    ಸರೋಜಿನಿ ಮಹಿಷಿ ವರದಿ ಜಾರಿಗೆ ನಾವು ಕೂಡ ಬದ್ಧರಾಗಿದ್ದೇವೆ. ಕೆಲವೊಂದು ತರ್ಕ ಇರುವುದರಿಂದ ಎಲ್ಲವನ್ನೂ ಕುಳಿತು ಬಗೆಹರಿಸಿಕೊಳ್ಳಬೇಕು. ಸಾಧ್ಯವಾಗುವುದನ್ನು ಬಗೆಹರಿಸಲು ನಾವು ಕೂಡ ಸಿದ್ಧ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts