More

    ಪೊಲೀಸರ ಸೇವೆ ಶ್ಲಾಘನೀಯ: ಜಿಲ್ಲಾಧಿಕಾರಿ ಎಸ್.ಅಶ್ವಥಿ ಪ್ರಶಂಸೆ

    ಮಂಡ್ಯ: ರಾಷ್ಟ್ರದ ಆಂತರಿಕ ಭದ್ರತಾ ವ್ಯವಸ್ಥೆಗಾಗಿ ಹಗಲಿರುಳು, ಹಬ್ಬ-ಹರಿದಿನಗಳಂದು ಕಾರ್ಯನಿರ್ವಹಿಸುವ ಪೊಲೀಸ್ ಇಲಾಖೆಯ ಸೇವೆ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಎಸ್.ಅಶ್ವಥಿ ಪ್ರಶಂಸಿಸಿದರು.
    ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದರು. ದೇಶಕ್ಕಾಗಿ ತಮ್ಮ ಜೀವವನ್ನು ಅರ್ಪಿಸಿದ ಪ್ರತಿ ಸೈನಿಕರು ಹಾಗೂ ಪೊಲೀಸರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಪೊಲೀಸರ ಸೇವೆಯಿಂದ ನಾವೆಲ್ಲರೂ ಶಾಂತಿ ಬದುಕು ನಡೆಸುತ್ತಿದ್ದೇವೆ. ಹಬ್ಬ, ಹರಿದಿನ ಹಾಗೂ ರಜಾ ದಿನಗಳಂದು ಕಾರ್ಯನಿರ್ವಹಿಸುವ ಪೊಲೀಸ್ ಇಲಾಖೆಯ ಸೇವೆ ಅಡುಗೆಗೆ ಬಳಸುವ ಉಪ್ಪಿನಂತಹ ಮಹತ್ವವುಳ್ಳದ್ದು ಎಂದು ಬಣ್ಣಿಸಿದರು.
    ಸಮಾಜದ ನೆಮ್ಮದಿಗಾಗಿ ಶ್ರಮಿಸುವ ಪೊಲೀಸ್ ಇಲಾಖೆಯ ಸೇವೆಯನ್ನು ನಮ್ಮ ನಾಗರಿಕ ಸಮಾಜ ಸ್ಮರಿಸುವುದಿಲ್ಲ. ಆದರೆ, ಕಾನೂನು ಸುವ್ಯವಸ್ಥೆಯಲ್ಲಿ ಲೋಪ ಉಂಟಾದಾಗ ಇಲಾಖೆಯ ನೆನಪು ನಮ್ಮೆಲ್ಲರನ್ನು ಕಾಡುತ್ತದೆ. ನಾವೆಲ್ಲರೂ ಶಾಂತಿ ನೆಮ್ಮದಿಯ ಸಮಾಜ ನಿರ್ಮಾಣ ಮಾಡುವ ಮೂಲಕ ಪೊಲೀಸ್ ಇಲಾಖೆಗೆ ಧನ್ಯವಾದ ಅರ್ಪಿಸಬೇಕೆಂದು ಕರೆ ನೀಡಿದರು.
    ಎಸ್ಪಿ ಎನ್.ಯತೀಶ್ ಮಾತನಾಡಿ, ಲಡಾಕ್ ಗಡಿಯಲ್ಲಿ ಪಹರೆಯಲ್ಲಿದ್ದ ಪೊಲೀಸ್ ಪಹರೆಗೆ ಅಧಿಕ ಸಂಖ್ಯೆಯಲ್ಲಿದ್ದ ಚೀನಿ ಸೈನಿಕರು ಅಪಾರ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ನಡೆಸಿದಾಗ ಎದೆಗುಂದದೆ ಪ್ರತಿರೋಧ ತೋರಿ ಹುತಾತ್ಮರಾದವರ ಸ್ಮರಣೆಗಾಗಿ 1960 ರಿಂದ ಪೊಲೀಸ್ ಹುತಾತ್ಮ ದಿನವನ್ನು ದೇಶದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಕಳೆದೊಂದು ವರ್ಷದಲ್ಲಿ ದೇಶದಲ್ಲಿ 264 ಹಾಗೂ ರಾಜ್ಯದಲ್ಲಿ 11 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರತರಾಗಿದ್ದಾಗ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
    ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ್ ಉಪಸ್ಥಿತರಿದ್ದರು. ಇದೇ ವೇಳೆ ಹಲವು ಸಂಘ ಸಂಸ್ಥೆಗಳ ಮುಖಂಡರು ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಹೂ ಗುಚ್ಛ ಅರ್ಪಿಸಿದರು. ಅಂತೆಯೇ ಪಥಸಂಚಲನ ಹಾಗೂ ಹುಸಿಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts