More

    ಭಾವನೆಗಳಿಗೆ ಕಮರ್ಷಿಯಲ್ ಚೌಕಟ್ಟು; ಪೊಗರು ಸಿನಿಮಾ ವಿಮರ್ಶೆ

    | ಚೇತನ್ ನಾಡಿಗೇರ್ ಬೆಂಗಳೂರು

    • ಚಿತ್ರ: ಪೊಗರು
    • ನಿರ್ದೇಶನ: ನಂದಕಿಶೋರ್
    • ನಿರ್ಮಾಣ: ಗಂಗಾಧರ್
    • ತಾರಾಗಣ: ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ, ರವಿಶಂಕರ್, ಪವಿತ್ರಾ ಲೋಕೇಶ್, ರಾಘವೇಂದ್ರ ರಾಜಕುಮಾರ್ ಮುಂತಾದವರು

    ದುಡ್ಡು ಎಂದರೆ ಅವನು ಏನು ಬೇಕಾದರೂ ಮಾಡುತ್ತಾನೆ. ದುಡ್ಡಿಗಾಗಿ ಯಾರನ್ನು ಬೇಕಾದರೂ ಉಲ್ಟಾ ನೇತುಹಾಕುತ್ತಾನೆ, ಹೆಣವನ್ನು ಮಧ್ಯರಸ್ತೆಯಲ್ಲಿಟ್ಟುಕೊಂಡು ದುಡ್ಡು ಕೊಡುವವರೆಗೂ ಆಟ ಆಡಿಸುತ್ತಾನೆ, ತಂಗಿಯನ್ನೇ ಕಿಡ್ನಾಪ್ ಮಾಡುತ್ತಾನೆ … ಇಷ್ಟಕ್ಕೂ ಅವನಿಗೆ ದುಡ್ಡು ಯಾತಕ್ಕೆ ಬೇಕು? ಇದೇ ವಿಷಯದ ಸುತ್ತ ‘ಪೊಗರು’ ಸುತ್ತುತ್ತದೆ.

    ‘ಪೊಗರು’ ಚಿತ್ರದ ಹಾಡು ಮತ್ತು ಡೈಲಾಗ್ ಟ್ರೇಲರ್ ನೋಡಿದವರು, ಇದೊಂದು ಪಕ್ಕಾ ಆಕ್ಷನ್, ಮಾಸ್ ಚಿತ್ರ ಎಂಬ ತೀರ್ವನಕ್ಕೆ ಬಂದಿರಬಹುದು. ಚಿತ್ರ ಹಾಗಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಚಿತ್ರದಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ಹೊಡೆದಾಟವಿದೆ. ಅದರ ಜತೆಗೆ ಇಲ್ಲಿ ತಾಯಿ-ಮಗನ ಸೆಂಟಿಮೆಂಟ್ ಇದೆ. ತಾಯಿ-ಮಗ ಎನ್ನುವುದಕ್ಕಿಂತ ಇದೊಂದು ಫ್ಯಾಮಿಲಿ ಸೆಂಟಿಮೆಂಟ್ ಕಥೆ ಎನ್ನಬಹುದು. ಏಕೆಂದರೆ, ಇಲ್ಲಿ ಮಗನ ಪ್ರೀತಿಗಾಗಿ ಹಪಹಪಿಸುವ ಅಪ್ಪ, ಅಣ್ಣನಿಗಾಗಿ ಕಾಯುವ ತಂಗಿಯ ಕಥೆಯೂ ಇದೆ. ಚಿತ್ರದ ಕಥೆಯನ್ನು ಬಹಳ ಸುಲಭವಾಗಿ ಹೇಳಿಬಿಡಬಹುದು. ಆದರೆ, ಇದು ಕೇಳುವ ಚಿತ್ರವಲ್ಲ, ನೋಡುವ ಚಿತ್ರ. ಹಾಗಾಗಿ ‘ಪೊಗರು’ ಚಿತ್ರದಲ್ಲಿ ಏನಿದೆ ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕು. ಮೊದಲಿಗೆ ಇದೊಂದು ಎಮೋಷನಲ್ ಚಿತ್ರ, ಆ ನಂತರ ಇಲ್ಲಿ ಪ್ರೀತಿ, ಕಾಮಿಡಿ, ಆಕ್ಷನ್ ಎಲ್ಲವೂ ಬರುತ್ತದೆ ಎಂದು ಧ್ರುವ ಮೊದಲೇ ಹೇಳಿದ್ದರು. ಚಿತ್ರದಲ್ಲಿ ಎಲ್ಲವೂ ಇದೆ. ಒಂದು ಪಕ್ಕಾ ಕಮರ್ಷಿಯಲ್ ಚಿತ್ರಕ್ಕೆ ಏನು ಬೇಕು ಎಂಬುದು ನಿರ್ದೇಶಕ ನಂದಕಿಶೋರ್​ಗೆ ಚೆನ್ನಾಗಿ ಗೊತ್ತಿದೆ. ಈ ಚಿತ್ರದಲ್ಲೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಎಲ್ಲಾ ಸರಕುಗಳನ್ನು ಮಿಶ್ರಣ ಮಾಡಿ ಚಿತ್ರಕಥೆ ಮಾಡಿಕೊಂಡಿದ್ದಾರೆ ಮತ್ತು ಕಮರ್ಷಿಯಲ್ ಚಿತ್ರ ನಿರ್ದೇಶಿಸುವಲ್ಲಿ ಎತ್ತಿದ ಕೈ ಎಂದು ಮತ್ತೊಮ್ಮೆ ನಿರೂಪಿಸಿದ್ದಾರೆ. ಅವರ ನಿರ್ದೇಶನದಲ್ಲಿ ದ್ವಿತೀಯಾರ್ಧದ ಆರಂಭದಲ್ಲಿ ಕಾಮಿಡಿ ದೃಶ್ಯಗಳಿಂದ ಚಿತ್ರ ಸ್ವಲ್ಪ ನಿಧಾನವಾಗುತ್ತದೆ. ಆದರೆ, ಕೊನೆಯ ಅರ್ಧ ಗಂಟೆ ಇದೆಯಲ್ಲ, ಅದು ರಾಕೆಟ್ ಸ್ಪೀಡ್​ನಲ್ಲಿ ಮುಗಿಯುತ್ತದೆ. ಅದರಲ್ಲೂ ಕ್ಲೈಮ್ಯಾಕ್ಸ್ ಫೈಟ್ ಚಿತ್ರದ ಹೈಲೈಟ್. ನಾಲ್ವರು ದಾಂಡಿಗರೊಂದಿಗೆ ಧ್ರುವ ಹೊಡೆದಾಡುವುದನ್ನು ನೋಡುವ ಮಜವೇ ಬೇರೆ.

    ಧ್ರುವ ಅವರ ಹಿಂದಿನ ಚಿತ್ರಗಳಂತೆ ಇಲ್ಲೂ ಸಾಕಷ್ಟು ಮಾತಿದೆ. ಆದರೆ, ಮಾತಿನಿಂದಲೇ ಮಂಟಪ ಕಟ್ಟುತ್ತಾರೆ ಎಂಬ ಆರೋಪವನ್ನು ಧ್ರುವ ಇಲ್ಲಿ ಸುಳ್ಳು ಮಾಡಿದ್ದಾರೆ. ಅಭಿನಯದಿಂದ ಇನ್ನಷ್ಟು ಹತ್ತಿರವಾಗುತ್ತಾರೆ. ಅದರಲ್ಲೂ 10 ನಿಮಿಷಕ್ಕೂ ಹೆಚ್ಚು ಉದ್ದದ ಒಂದು ದೃಶ್ಯದಲ್ಲಿ ಧ್ರುವ, ತಾನೇನು ಎಂದು ತೋರಿಸುತ್ತಾರೆ. ಇನ್ನು, ಚಿತ್ರ ಏಕೆ ತಡವಾಯಿತು ಮತ್ತು ಚಿತ್ರಕ್ಕಾಗಿ ಅವರೆಷ್ಟು ಕಷ್ಟಪಟ್ಟಿದ್ದಾರೆ ಎಂಬುದಕ್ಕೆ ಚಿತ್ರದಲ್ಲಿನ ಅವರ ರೂಪಾಂತರವೇ ಉತ್ತರ ನೀಡುತ್ತದೆ. ಎರಡು ಶೇಡ್​ಗಳಲ್ಲಿ ಕಾಣಿಸಿಕೊಳ್ಳುವ ಧ್ರುವ ಎರಡರಲ್ಲೂ ಗೆಲ್ಲುತ್ತಾರೆ. ಧ್ರುವ ಒಬ್ಬರೇ ಅಲ್ಲ, ರವಿಶಂಕರ್, ಪವಿತ್ರಾ ಲೋಕೇಶ್ ಸಹ ತಮ್ಮ ಅಭಿನಯದಿಂದ ನಿಮ್ಮನ್ನು ಭಾವುಕರನ್ನಾಗಿ ಮಾಡುತ್ತಾರೆ. ರಶ್ಮಿಕಾ, ಧನಂಜಯ್ಗೆ ಹೆಚ್ಚು ಕೆಲಸವಿಲ್ಲ. ರಾಘವೇಂದ್ರ ರಾಜಕುಮಾರ್ ಪುಟ್ಟ ಪಾತ್ರದಲ್ಲಿ ಚಿತ್ರದ ತೂಕ ಹೆಚ್ಚಿಸುತ್ತಾರೆ. ಚಂದನ್ ಶೆಟ್ಟಿ ಹಾಡುಗಳು, ವಿಜಯ್ ಮಿಲ್ಟನ್ ಛಾಯಾಗ್ರಹಣ ಇವೆಲ್ಲ ಚಿತ್ರದ ಬೋನಸ್.

    ಮಾರ್ಚ್ 24ರಿಂದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

    ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts