More

    ಜಿ20 ಶೃಂಗಸಭೆ ಮುಗಿದಿದೆ, ಪ್ರಧಾನಿ ಮೋದಿ ಆಡಳಿತದತ್ತ ಗಮನ ಹರಿಸಲಿ: ಮಲ್ಲಿಕಾರ್ಜುನ ಖರ್ಗೆ

    ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆದ ಜಿ-20 ಶೃಂಗಸಭೆ ಮುಗಿದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೇನಿದ್ದರೂ ದೇಶದ ಜ್ವಲಂತ ಸಮಸ್ಯೆಗಳತ್ತ ಗಮನಹರಿಸಬೇಕೆಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಅವರು ಪ್ರಧಾನಿ ಮೋದಿ ಸತ್ಯವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಜನತೆ ವಾಸ್ತವಾಂಶದ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಸ್ವತಃ ಪ್ರಧಾನಿಗಳೇ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

    ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶದ ಜನತೆ ಬಿಜೆಪಿ ಸರ್ಕಾರದ ನಿರ್ಗಮನಕ್ಕೆ ದಾರಿ ಮಾಡಿಕೊಡಲು ಸಿದ್ದರಾಗಿದ್ದಾರೆ. ಈಗ ಜಿ-20 ಸಭೆ ಮುಗಿದಿದ್ದು, ಪ್ರಧಾನಿ ಮೋದಿ ಅವರು ಹಣದುಬ್ಬರ, ಬೆಲೆ ಏರಿಕೆ, ಘರ್ಷಣೆ, ನೈಸರ್ಗಿಕ ವಿಕೋಪ ಸೇರಿದಂತೆ ದೇಶದಲ್ಲಿ ಜ್ವಲಂತ ಸಮಸ್ಯೆಗಳಿವೆ. ಇನ್ನು ಮುಂದೆ ಅದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಂದು ಚಾಟಿ ಬೀಸಿದ್ದಾರೆ.

    ಇದನ್ನೂ ಓದಿ: ಸಚಿವರ ಭರವಸೆ; ಖಾಸಗಿ ಸಾರಿಗೆ ಒಕ್ಕೂಟದ ಮುಷ್ಕರ ವಾಪಸ್​

    ಪ್ರಧಾನಿ ಮೋದಿ ಜನತೆಯಿಂದ ವಾಸ್ತವಾಂಶವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಆದರೆ, ಜನತೆ ಸತ್ಯ ದರ್ಶನಕ್ಕಾಗಿ ಕಾತುರದಿಂದ ಕಾಯುತ್ತಿದ್ದು, ಮೊದಲು ನೀವು ಆ ಕೆಲಸ ಮಾಡಬೇಕಿದೆ. ಬಿಜೆಪಿ ಆಡಳಿತದಲ್ಲಿ ದೇಶದ ಯುವಕರ ಭವಿಷ್ಯ ಮಂಕಾಗಿದ್ದು, ಇಂದು ನಿರುದೊಗ್ಯದ ಸಮಸ್ಯೆ ಶೇ.08ಕ್ಕೆ ಏರಿಕೆಯಾಗಿದ್ದು, ಒಂದು ಥಾಲಿಯ ಬೆಲೆ 24ರಷ್ಟು ಏರಿಕೆಯಾಗಿದೆ. ನಿಮ್ಮ ಆಡಳಿತದಲ್ಲಿ ಯುವಕರ ಭವಿಷ್ಯ ಮಂಕಾಗಿದೆ ಎಂದು ಕಿಡಿಕಾರಿದ್ದಾರೆ.

    ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರ ಮುಗಿಲುಮುಟ್ಟಿದ್ದು, ಸಿಎಜಿಯ ಹಲವು ವರದಿಗಳು ಇವರ ಕರಾಳ ಮುಖವನ್ನು ಬಯಲು ಮಾಡಿದೆ. ಜಲಜೀವನ್​ ಯೋಜನೆಯಡಿ ಜಮ್ಮು-ಕಾಶ್ಮೀರದಲ್ಲಿ 13 ಸಾವಿರ ಕೋಟಿ ರೂಪಾಯಿ ಅಕ್ರಮ ನಡೆದಿದ್ದು, ಇದನ್ನು ಬಯಲಿಗಳೆದ ದಲಿತ ಐಎಎಸ್​ ಅಧಿಕಾರಿಗೆ ಕಿರುಕುಳ ನೀಡಲಾಗುತ್ತಿದೆ.

    ಪ್ರಧಾನಿ ಮೋದಿಯ ಆತ್ಮೀಯ ಗೆಳೆಯನ ಲೂಟಿ ಕಥೆ ಈಗ ಮತ್ತೆ ಬೆಳಕಿಗೆ ಬಂದಿದೆ. 2019ರ ಲೋಕಸಭೆ ಚುನಾವಣೆ ವೇಳೆ ಆರ್​ಬಿಐನಿಂದ 3 ಲಕ್ಷ ಕೋಟಿ ರೂಪಾಯಿಯನ್ನು ಸರ್ಕಾರದ ಖಜಾನೆಗೆ ವರ್ಗಾಯಿಸಬೇಕೆಂದು ಒತ್ತಡ ಹೇರಲಾಗಿತ್ತು. ಈ ವಿಚಾರವನ್ನು ಸ್ವತಃ ಆರ್​ಬಿಐನ ಮಾಜಿ ಡೆಪ್ಯೂಟಿ ಗವರ್ನರ್​ ವಿರಲ್​ ಆಚಾರ್ಯ ಅವರೇ ಬಹಿರಂಗಪಡಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts