More

    ಖಾಕಿ ಕಣ್ಗಾವಲಲ್ಲಿ ರೈಲು ಹತ್ತುವ ಅವಕಾಶ; ಕೆಎಸ್​ಆರ್​, ಎಸ್​ಎಂವಿಟಿ ನಿಲ್ದಾಣದಲ್ಲಿ ಕ್ರಮ

    ಬೆಂಗಳೂರು: ಪ್ರಯಾಣಿಕರು ರೈಲುಗಳಿಗೆ ಹತ್ತುವ ಸಂದರ್ಭದಲ್ಲಿ ಉಂಟಾಗುವ ಗೊಂದಲ ಹಾಗೂ ರೈಲಿನಿಂದ ಇಳಿಯುವ ಪ್ರಯಾಣಿಕರಿಗೆ ಸುಗಮ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ವಿಶೇಷ ಕ್ರಮವೊಂದನ್ನು ಕೆಲ ಸಮಯದಿಂದ ಅನುಸರಿಸುತ್ತಿದೆ.

    ಇದರ ಭಾಗವಾಗಿ ರೈಲ್ವೆ ಪೊಲೀಸರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಸರ್​ ಎಂ. ವಿಶ್ವೇಶ್ವರಯ್ಯ ಟರ್ಮಿನಲ್​​ಗಳಲ್ಲಿ ಜನರಲ್​ ಬೋಗಿ ಪ್ರಯಾಣಿಕರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ, ಒಬ್ಬೊಬ್ಬರಾಗಿ ರೈಲಿಗೆ ಹತ್ತಲು ಅನುವು ಮಾಡಿಕೊಡುತ್ತಿದ್ದಾರೆ.

    ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿ ಪ್ರಯಾಣಿಕರನ್ನು ಪ್ಲಾಟ್​ಫಾರಂನಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಂತೆ ಸೂಚಿಸುವ ಮಾದರಿಯನ್ನು ಕೆಎಸ್​ಆರ್​ ಹಾಗೂ ಎಸ್​ಎಂವಿಟಿ ನಿಲ್ದಾಣಗಳಲ್ಲಿ ಅನುಸರಿಸಲಾಗುತ್ತಿದೆ. ಎಸಿ ಹಾಗೂ ಇತರೆ ಬೋಗಿಗಳಲ್ಲಿ ಪ್ರಯಾಣಿಸುವ ಜನರು ಮೊದಲೇ ತಮ್ಮ ಆಸನ ಕಾಯ್ದಿರಿಸಿಕೊಂಡಿರುವುದರಿಂದ, ಈ ಬೋಗಿಗಳಿಗೆ ಹತ್ತಲು ಒತ್ತಡ ಉಂಟಾಗುವುದಿಲ್ಲ.

    ಹಿರಿಯರಿಗೆ, ಮಹಿಳೆಯರಿಗೆ ಸಹಕಾರಿ

    ಪ್ರಯಾಣಿಕರ ದಟ್ಟಣೆ ಉಂಟಾಗುತ್ತಿರುವ ರೈಲು ಪ್ಲಾಟ್​ಫಾರಂಗೆ ರೈಲ್ವೆ ಪೊಲೀಸರು ಜನರನ್ನು ಸರತಿ ಸಾಲಿನಲ್ಲಿ ನಿಲ್ಲುವಂತೆ ಸೂಚಿಸುತ್ತಾರೆ. ರೈಲಿನಲ್ಲಿರುವ ಪ್ರಯಾಣಿಕರು ಇಳಿದ ನಂತರವಷ್ಟೇ, ಹತ್ತಲು ತಿಳಿಸಲಾಗುತ್ತಿದೆ. ಈ ಕ್ರಮದಿಂದ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ರೈಲಿನಿಂದ ಇಳಿಯಲು ಹೆಚ್ಚಿನ ಸಹಾಯವಾಗುತ್ತಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts