More

  ಪ್ರಸನ್ನ ವಚನಂ ಧ್ಯಾಯೇತ್- ಕೃತಿ ಲೋಕಾರ್ಪಣೆ

  ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯ

  • ಬೆಂಗಳೂರು: ಗೋವುಗಳ ಸಂರಕ್ಷಣೆ ಮಾಡಿದರೆ ನಾಡಿನ ಸಮಸ್ತ ಸಂಪತ್ತು ವೃದ್ಧಿಸುತ್ತದೆ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.‘ಕಲಿಯುಗದ ಕಾಮಧೇನು-ಕಲ್ಪವೃಕ್ಷ’ ಎಂದೇ ಜಗನ್ಮಾನ್ಯರಾದ ಶ್ರೀ ರಾಘವೇಂದ್ರ ಸ್ವಾಮಿಗಳ 428ನೇ ವರ್ಧಂತಿ ಪ್ರಯುಕ್ತ ರಾಜಧಾನಿ ಜಯನಗರದ 5ನೇ ಬಡಾವಣೆಯ ರಾಯರ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶೇಷ ಸಮಾರಂಭದಲ್ಲಿ ಅವರು ವೃಂದಾವನಕ್ಕೆ ಲಕ್ಷ ಪುಷ್ಪಾರ್ಚನೆಯನ್ನು ಮಾಡಿದ ಸಂದರ್ಭ ‘ಪ್ರಸನ್ನ ವಚನಂ ಧ್ಯಾಯೇತ್’ ಕೃತಿ ಲೋಕಾರ್ಪಣೆಗೊಳಿಸಿ ಅನುಗ್ರಹ ಸಂದೇಶ ನೀಡಿದರು.
  • ಗುರು ರಾಯರಿಗೆ ಹಾಲಿನ ಅಭಿಷೇಕ ಸಮರ್ಪಣೆ ಮಾಡಿದರೆ ಅವರು ನಮಗೆ ಪಂಚಾಮೃತ ನೀಡುತ್ತಾರೆ.ಅದರ ನೂರು ಪಟ್ಟು ಅನುಗ್ರಹವನ್ನೂ ಮಾಡುತ್ತಾರೆ. ಆ ಕಾರಣಕ್ಕಾದರೂ ನಾವು ಶುದ್ಧ ಭಾರತೀಯ ತಳಿಯ ಗೋ ಸಂಪತ್ತನ್ನು ( ಕಾಮಧೇನುಗಳನ್ನು) ಪಾಲನೆ ಮಾಡಬೇಕು ಎಂದು ಹೇಳಿದರು.ಪ್ರಸನ್ನ ವಚನಂ ಧ್ಯಾಯೇತ್- ಕೃತಿ ಬಗ್ಗೆ ಮಾತನಾಡಿದ ಅವರು, ಗೋಸಂರಕ್ಷಣೆ, ಗೋವಿನ ಮಹತ್ವವನ್ನು ಸಾರುವ ಅನೇಕ ಲೇಖನಗಳನ್ನು ನಾವು ಬರೆದಿದ್ದೆವು. ಅವುಗಳನ್ನು ಸಮಗ್ರವಾಗಿ ಸಂಗ್ರಹ ಮಾಡಿ, ಸಂಪಾದಿಸಿ ಕೃತಿ ರೂಪದಲ್ಲಿ ಹೊರತಂದಿರುವ ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾಂಸ ಶ್ಯಾಮಾಚಾರ್ಯ ಬಂಡಿ ಅವರ ಶ್ರಮ ಮಾನ್ಯವಾದದ್ದು ಎಂದರು. ಪುಸ್ತಕ ಮಾರಾಟದಿಂದ ಬಂದ ಹಣವನ್ನು ಗೋ ಸೇವೆಗಾಗಿಯೇ ಮೀಸಲಿರಿಸಿರುವುದು ಅವರ ಗುರುಭಕ್ತಿಯ ಪ್ರತೀಕವಾಗಿದೆ ಎಂದು ಶ್ರೀಗಳು ಶ್ಲಾಘಿಸಿದರು.
  • ಮಹಾಭಾಗ್ಯ ದೊರಕಿದೆ: ಕೃತಿ ಸಂಪಾದಕ ಮತ್ತು ಅರಣ್ಯಕ ಪ್ರಕಾಶನದ ಮುಖ್ಯಸ್ಥ ಶ್ಯಾಮಾಚಾರ್ಯ ಬಂಡಿ ಮಾತನಾಡಿ, ಪೇಜಾವರ ಶ್ರೀಗಳು ಕೇವಲ ಪೀಠಾಧಿಪತಿಯಲ್ಲ, ಸಾಮಾನ್ಯ ಸಂತರಲ್ಲ. ಅವರಲ್ಲಿ ಒಬ್ಬ ಅನನ್ಯ ಸಾಧಕರಿದ್ದಾರೆ. ಉತ್ತಮ ಸಾಹಿತಿಯೂ ಇದ್ದಾರೆ. ಗೋ ಸೇವೆ ಮತ್ತು ಗೋಪಾಲ ಕೃಷ್ಣನ ಸೇವೆಯೇ ಅವರ ಪರಮೋದ್ದೇಶ. ಆ ಮೂಲಕ ಅವರು ವಿಶ್ವವೇ ಮೆಚ್ಚುವ ಮರ್ಯಾದಾ ಪುರುಷೋತ್ತಮ ಶ್ರೀರಾಮನನ್ನು ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಿದ್ದಾರೆ. ಗುರುಗಳ ಲೇಖನಗಳನ್ನು ಸಂಗ್ರಹಿಸಿ, ಸಂಪಾದಿಸಿ, ಹೊರತರುವ ಭಾಗ್ಯ ನನಗೆ ದೊರಕಿರುವುದು ಮಹಾಪುಣ್ಯ ಎಂದರು.ಶ್ರೀ ವಿಶ್ವಪ್ರಸನ್ನ ತೀರ್ಥರು ಗುರುರಾಜರ ಭವ್ಯ ವೃಂದಾವನಕ್ಕೆ ಲಕ್ಷ ಪುಷ್ಪಾರ್ಚನೆ ಮಾಡುವ ಮೂಲಕ ನೆರೆದ ಭಕ್ತ ಜನತೆಗೆ ಧನ್ಯತೆಯ ಭಾವವನ್ನು ಉಂಟು ಮಾಡಿದರು. ಸಂಸ್ಥಾನ ಪೂಜೆ, ಪ್ರಸಾದ ವಿತರಣೆ ಮೂಲಕ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವ ಸಂಪನ್ನಗೊಂಡಿತು. ಪಂಡಿತ ಅಗ್ನಿಹೋತ್ರಿ ವೇಣುಗೋಪಾಲಾಚಾರ್ಯ, ಮಠದ ವ್ಯವಸ್ಥಾಪಕ ಆರ್. ವಾದೀಂದ್ರಾಚಾರ್ಯ, ನಂದಕಿಶೋರ ಆಚಾರ್ಯ, ಚಿತ್ರನಟಿ ಪ್ರೇಮಾ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts