More

    ಅಕಾಡೆಮಿ ನೇಮಕದಲ್ಲಿ ಜಿಲ್ಲೆಗೆ ಅನ್ಯಾಯ: ದಕ್ಷಿಣ ಕನ್ನಡಕ್ಕೆ 45, ಉತ್ತರ ಕನ್ನಡಕ್ಕೆ ಸಿಕ್ಕಿದ್ದು ಕೇವಲ 6

    ಕಾರವಾರ/ಯಲ್ಲಾಪುರ: ನೆರೆಯ ದಕ್ಷಿಣ ಕನ್ನಡ ಜಿಲ್ಲೆ ಉತ್ತರ ಕನ್ನಡಕ್ಕಿಂತ 10 ವರ್ಷ ಮುಂದಿದೆ ಎಂಬ ಮಾತಿದೆ. ರೈಲು ಸೇವೆ, ಮೀನುಗಾರಿಕೆ ಸೌಲಭ್ಯ ಸೇರಿ ವಿವಿಧ ಸರ್ಕಾರಿ ಸೌಲಭ್ಯದಲ್ಲಿ ಉತ್ತರ ಕನ್ನಡಕ್ಕೆ ಅನ್ಯಾಯವಾಗುತ್ತಿದೆ ಎಂಬ ಕೂಗು ಸಾಮಾನ್ಯ. ಆದರೆ, ಈಗ ಕಲೆ, ಸಂಸ್ಕೃತಿಯ ಕ್ಷೇತ್ರದಲ್ಲೂ ದಕ್ಷಿಣ ಕನ್ನಡದ ಪಾರಮ್ಯ ಹೆಚ್ಚಿದ್ದು, ಉತ್ತರ ಕನ್ನಡಕ್ಕೆ ಅನ್ಯಾಯವಾಗುತ್ತಿರುವ ಕೂಗು ವ್ಯಾಪಕವಾಗಿ ಕೇಳಿ ಬಂದಿದೆ.

    ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಒಳಪಡುವ ವಿವಿಧ ಅಕಾಡೆಮಿ, ಪ್ರಾಽಕಾರಿಗಳಿಗೆ ಅಧ್ಯಕ್ಷ, ಸದಸ್ಯರನ್ನು ಸರ್ಕಾರವು ಅಽಕಾರಕ್ಕೆ ಬಂದು 9 ತಿಂಗಳ ಬಳಿಕ ಶನಿವಾರ ನೇಮಿಸಿದೆ. ಬೆನ್ನಲ್ಲೇ ಅಸಮಾಧಾನವೂ ಶುರುವಾಗಿದೆ. ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಆಕ್ಷೇಪಗಳು ಕೇಳಿ ಬಂದಿವೆ. ಪ್ರಮುಖವಾಗಿ ಯಕ್ಷಗಾನ ಅಕಾಡೆಮಿಯ ಸದಸ್ಯರ ನೇಮಕದಲ್ಲಿ ದಕ್ಷಿಣ ಕನ್ನಡದವರನ್ನು ಮಾತ್ರ ಪರಿಗಣಿಸಿರುವುದಕ್ಕೆ ಖಂಡನೆ ವ್ಯಕ್ತವಾಗಿದೆ.

    ಹರಿಪ್ರಕಾಶ ಕೋಣೆಮನೆ ಆಕ್ಷೇಪ

    ರಾಜ್ಯ ಸರ್ಕಾರ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ನೂತನ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದ್ದು ಇದರಲ್ಲಿ ಉತ್ತರಕನ್ನಡ ಜಿಲ್ಲೆಯನ್ನು ಕಡೆಗಣಿಸಿರುವುದನ್ನು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

    ಭಾನುವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಯಕ್ಷಗಾನ ಕಲೆಯು ಬಡಗು ತಿಟ್ಟು, ಘಟ್ಟದ ಕೋರೆ ,ಮೂಡಲಪಾಯ ಹೀಗೆ ಅನೇಕ ಪ್ರಕಾರಗಳನ್ನು ಹೊಂದಿದ್ದು, ಅನೇಕ ಜಿಲ್ಲೆಗಳಲ್ಲಿ ಹರಡಿಕೊಂಡಿದೆ. ಅದರಲ್ಲಿ ಉತ್ತರಕನ್ನಡ ಜಿಲ್ಲೆಯ ಯಕ್ಷಗಾನ ಪರಂಪರೆಯು ತುಂಬಾ ವಿಶೇಷವಾಗಿದ್ದು, ಇಡಿಯ ಯಕ್ಷಗಾನ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ ಪ್ರಮುಖ ಜಿಲ್ಲೆ ನಮ್ಮದು. ಯಕ್ಷಗಾನ ಕಲೆಗೆ ಪದ್ಮಶ್ರೀ ಪ್ರಶಸ್ತಿ ತಂದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರೂ ಸೇರಿದಂತೆ ಜಿಲ್ಲೆಯ ಅನೇಕ ಖ್ಯಾತನಾಮ ಕಲಾವಿದರು ಈ ಕಲೆಯನ್ನು ಶ್ರೀಮಂತಗೊಳಿಸಿದ್ದಾರೆ. ಇಷ್ಟೆಲ್ಲ ಇದ್ದೂ ಸರ್ಕಾರ ರಚಿಸಿದ ಅಕಾಡೆಮಿಯಲ್ಲಿ ಉತ್ತರಕನ್ನಡ ಭಾಗದ ಕಲಾವಿದರು, ಕಲಾ ಪೋಷಕರಿಗೂ ಯಾವುದೇ ಸ್ಥಾನಮಾನ ನೀಡದಿರುವುದು ಆಕ್ಷೇಪಾರ್ಹ ಸಂಗತಿ ಎಂದರು.

    ಸರ್ಕಾರವನ್ನು ಬಲವಾಗಿ ಆಗ್ರಹಿಸುವುದೇನೆಂದರೆ ಈ ನೇಮಕಾತಿಯನ್ನು ತಡೆಹಿಡಿಯಬೇಕು. ಉತ್ತರಕನ್ನಡ ಜಿಲ್ಲೆಯಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕ ಹಿರಿಯ ಕಲಾವಿದರುಗಳಿದ್ದು ಅವರಿಗೂ ಪ್ರಮುಖ ಸ್ಥಾನ ಒದಗಿಸಬೇಕು. ಯಕ್ಷಗಾನದ ಬೇರೆ ಬೇರೆ ಪ್ರಕಾರಗಳ  ಬೇರೆ ಜಿಲ್ಲೆಗಳ ಕಲಾವಿದರಿಗೂ ಅವಕಾಶ ನೀಡಬೇಕು. ಜೊತೆಗೆ ಯಕ್ಷಗಾನ ಕಲೆಯಲ್ಲಿ ಮಹಿಳೆಯರೂ ಸಾಕಷ್ಟು ಕೊಡುಗೆ ನೀಡಿದ್ದು, ಅಕಾಡೆಮಿಯಲ್ಲಿ ಮಹಿಳೆಯರಿಗೂ ಅವಕಾಶ ನೀಡಬೇಕು’ ಎಂದು ಕೋಣೆಮನೆ ಅವರು ಆಗ್ರಹಿಸಿದ್ದಾರೆ.

    ಜಿಲ್ಲಾವಾರು ಪ್ರಾತಿನಿಧ್ಯದಲ್ಲಿ ಕೊರತೆ

    ಅರ್ಹತೆ ಇದ್ದ ಅನೇಕರು ಉತ್ತರಕನ್ನಡ ಜಿಲ್ಲೆಯಲ್ಲಿ ಇದ್ದರೂ ಕನ್ನಡ ಮತ್ತು ಸಂಸ್ಕೃತಿಗೆ ಸಂಬAಧಪಟ್ಟು ಸರ್ಕಾರ ಪ್ರಾಽಕಾರ ಹಾಗೂ ಅಕಾಡೆಮಿಗಳ ನೇಮಕದಲ್ಲಿ ಪ್ರಾತಿನಿಧ್ಯ ನೀಡುವಲ್ಲಿ ಸರ್ಕಾರ ಕೊರತೆ ಮಾಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ಎನ್.ವಾಸರೆ ಆಕ್ಷೇಪಿಸಿದ್ದಾರೆ.
    ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಕಟಗೊಂಡ 18 ಅಕಾಡೆಮಿ, ಪ್ರಾಽಕಾರಗಳಲ್ಲಿ ಐದು ಅಧ್ಯಕ್ಷ ಸ್ಥಾನ ದಕ್ಷಿಣ ಕನ್ನಡದ ಪಾಲಾಗಿದೆ. ಆದರೆ, ಉತ್ತರಕನ್ನಡಕ್ಕೆ ಒಂದೇ ಒಂದು ಅಧ್ಯಕ್ಷತೆ ಇಲ್ಲ. ಸುಮಾರು 200 ಸದಸ್ಯರಲ್ಲಿ 45 ರಷ್ಟು ಸದಸ್ಯರು ದಕ್ಷಿಣಕನ್ನಡದವರಾಗಿದ್ದಾರೆ. ಉತ್ತರ ಕನ್ನಡದ 6 ಜನರಿಗೆ ಮಾತ್ರ ಅವಕಾಶ ಸಿಕ್ಕಿದೆ. ಡಾ.ಝಮಿರುಲ್ಲಾ ಷರೀಫ್ ಅವರಿಗೆ ಜಾನಪದ ಅಕಾಡೆಮಿಯ ಅಧ್ಯಕ್ಷರಾಗುವ ಅರ್ಹತೆ ಇದೆ. ಆದರೆ, ಅವರನ್ನು ಸದಸ್ಯರನ್ನಾಗಿ ಸೀಮಿತಗೊಳಿಸಲಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
    ಯಕ್ಷಗಾನಕ್ಕೆ ಪದ್ಮಶ್ರೀ ತಂದುಕೊಟ್ಟ ಮೊದಲ ಜಿಲ್ಲೆ ಉತ್ತರ ಕನ್ನಡ. ಆದರೆ, ಉತ್ತರ ಕನ್ನಡಕ್ಕೆ ಸಂಪೂರ್ಣ ಅನ್ಯಾಯವಾಗಿದೆ. ಇದು ಖಂಡನೀಯ. ಅಕಾಡೆಮಿಯ ಸದಸ್ಯರ ನೇಮಕವನ್ನು ಸರ್ಕಾರ ಪುನಃ ಪರಿಶೀಲಿಸಿ ಅರ್ಧದಷ್ಟು ಸ್ಥಾನವನ್ನು ಉತ್ತರ ಕನ್ನಡ ಜಿಲ್ಲೆಗೆ ನೀಡಬೇಕು ಎಂದಿದ್ದಾರೆ.

    ಅಕಾಡೆಮಿಗಳಲ್ಲಿ ಸ್ಥಾನ ಪಡೆದ ಜಿಲ್ಲೆಯವರು

    ಕನ್ನಡ, ಸಂಸ್ಕೃತಿ, ಕಲೆಗೆ ಸಂಬಂಧಪಟ್ಟ 18 ಅಕಾಡೆಮಿಗಳಿಗೆ ಅಧ್ಯಕ್ಷ ಸದಸ್ಯರ ನೇಮಕ ನಡೆದಿದೆ. ಅದರಲ್ಲಿ ವಿವಿಧ ಅಕಾಡೆಮಿಗಳಲ್ಲಿ ಜಿಲ್ಲೆಯವರು ಸದಸ್ಯ ಸ್ಥಾನ ಪಡೆದಿದ್ದಾರೆ. ಯಾವುದೇ ಅಧ್ಯಕ್ಷರಿಲ್ಲ. ನಾಟಕ ಅಕಾಡೆಮಿಯಲ್ಲಿ ಯಲ್ಲಾಪುರದ ಗೀತಾ ಸಿದ್ದಿ, ಶಿಲ್ಪಕಲಾ ಅಕಾಡೆಮಿಯಲ್ಲಿ ರಾಮಮೂರ್ತಿ, ಲಲಿತಕಲಾ ಅಕಾಡೆಮಿಯಲ್ಲಿ ಜೊಯಿಡಾದ ಶಾಂತಾ ಕೊಳ್ಳಿ, ಜಾನಪದ ಅಕಾಡೆಮಿಯಲ್ಲಿ ಭಟ್ಕಳದ ಡಾ.ಝಮಿರುಲ್ಲಾ ಷರೀಫ್, ಕೊಂಕಣಿ ಸಾಹಿತ್ಯ ಅಕಾಡೆಮಿಯಲ್ಲಿ ಯಲ್ಲಾಪುರದ ಸುನೀಲ್ ಸಿದ್ದಿ, ಹೊನ್ನಾವರದ ಜೇಮ್ಸ್ ಲೋಪೀಸ್ ಅವರನ್ನು ನೇಮಿಸಲಾಗಿದೆ.

    ಇದನ್ನೂ ಓದಿ: ಯಕ್ಷಗಾನ ಅಕಾಡೆಮಿಯಲ್ಲಿ ದಕ್ಷಿಣ ಕನ್ನಡಕ್ಕೆ ಪ್ರಾಧಾನ್ಯತೆ ಉಳಿದ ಜಿಲ್ಲೆಯವರಿಗಿಲ್ಲ ಆದ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts