More

    ವಿಶ್ವಕಪ್​ ಗೆದ್ದ ಕ್ಯಾಪ್ಟನ್​ ಕಮ್ಮಿನ್ಸ್​ಗೆ ಸಿಕ್ಕ ಸ್ವಾಗತ ನೋಡಿ ತಲೆ ಕೆರೆದುಕೊಂಡು ನೆಟ್ಟಿಗರು! ಹಿಗ್ಗಾಮುಗ್ಗಾ ಟ್ರೋಲ್​

    ಸಿಡ್ನಿ: ಯಾವುದೇ ಮಹತ್ವದ ಟೂರ್ನಿಗಳಲ್ಲಿ ಗೆಲುವು ಸಾಧಿಸಿದ ತಂಡಕ್ಕೆ ತವರು ನೆಲದಲ್ಲಿ ಭರ್ಜರಿ ಸ್ವಾಗತ ದೊರಕುವುದು ತುಂಬಾ ಸಾಮಾನ್ಯ. ಅದರಲ್ಲೂ ವಿಶ್ವಕಪ್​ ಗೆದ್ದ ತಂಡವೆಂದರೆ, ತವರಿನ ಅಭಿಮಾನಿಗಳು ಕಿಕ್ಕಿರಿದು ತುಂಬಿಕೊಂಡು ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳಲು ನಾಮುಂದು ತಾಮುಂದು ಎನ್ನುವಂತೆ ತಳ್ಳಾಟವನ್ನೇ ಸೃಷ್ಟಿಸಿ ಬಿಡುತ್ತಾರೆ ಮತ್ತು ಜೈಕಾರದ ಝೇಂಜಾರಗಳು ಸುತ್ತಲೂ ಮೊಳಗುತ್ತಿರುತ್ತವೆ. ಆದರೆ, ಆಸ್ಟ್ರೇಲಿಯಾ ಪಾಳಯದಲ್ಲಿ ಇದ್ಯಾವುದು ನಡೆಯದಿರುವುದು ಕ್ರೀಡಾಭಿಮಾನಿಗಳನ್ನು ಅಚ್ಚರಿಗೆ ದೂಡಿದೆ.

    ನ.19ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ಸೋಲುಣಿಸಿದ ಆಸ್ಟ್ರೇಲಿಯಾ 6ನೇ ಬಾರಿ ವಿಶ್ವಕಪ್​ ಟ್ರೋಫಿಯನ್ನು ಎತ್ತಿಹಿಡಿಯಿತು. ಇದೀಗ ಟ್ರೋಫಿಯೊಂದಿಗೆ ತವರಿಗೆ ಮರಳಿದ ಆಸಿಸ್​ ಪಡೆಯನ್ನು ಸ್ವಾಗತಿಸಲು ಯಾರೊಬ್ಬರು ವಿಮಾನ ನಿಲ್ದಾಣದ ಬಳಿ ಯಾರೂ ಸುಳಿಯದಿರುವುದು ಕ್ರೀಡಾಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ನೋಡಿ ತಲೆ ಕೆರೆದುಕೊಳ್ಳುತ್ತಿದ್ದಾರೆ.

    ವೈರಲ್​ ಆಗಿರುವ ವಿಡಿಯೋದಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ನಾಯಕ ಪ್ಯಾಟ್​ ಕಮ್ಮಿನ್ಸ್​ ತಮ್ಮ ಲಗೇಜ್​ಗಳನ್ನು ತೆಗೆದುಕೊಂಡು ಹೊರಗಡೆ ಹೋಗುತ್ತಾರೆ. ಈ ವೇಳೆ ಸುತ್ತಮುತ್ತ ಒಂದೆರೆಡು ಮಂದಿಯನ್ನು ಬಿಟ್ಟರೆ ಬೇರೆ ಯಾರೂ ಇರುವುದಿಲ್ಲ. ವಿಡಿಯೋ ನೋಡಿದ ನೆಟ್ಟಿಗರು ವಿಶ್ವಕಪ್ ಎಂಬ ಮಹಾ ಟ್ರೋಫಿಯನ್ನು ಜಯಿಸಿ ಬಂದ ತಂಡಕ್ಕೆ ಇಂದೆಥಾ ಸ್ವಾಗತ ಎಂದು ಕಾಮೆಂಟ್​ ಬಾಕ್ಸ್​ನಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲದೆ, ಪ್ಯಾಟ್​ ಕಮ್ಮಿನ್ಸ್​ ಅವರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗುತ್ತಿದೆ. ಒಂದು ವೇಳೆ ಭಾರತವೇನಾದರೂ ಟ್ರೋಫಿಯನ್ನು ಜಯಿಸಿದ್ದರೆ ಅದರ ಕತೆಯೇ ಬೇರೆ ಇರುತ್ತಿತ್ತು ಎಂದು ನೆಟ್ಟಿಗರು ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ.

    ಕಮ್ಮಿನ್ಸ್ ಅವರು ತಮ್ಮ ತವರಿಗೆ ಆಗಮಿಸಿದ ಬಳಿಕ ವಿಶ್ವಕಪ್​ ಗೆಲುವಿನ ಬಗ್ಗೆ ಮಾತನಾಡಿ, ಏಕದಿನ ವಿಶ್ವ ಚಾಂಪಿಯನ್ ಆದ ಉತ್ಸಾಹ ಇನ್ನೂ ಸಂಪೂರ್ಣವಾಗಿ ಮರೆಯಾಗಿಲ್ಲ. ಈಗಲೂ ಅದೇ ಗುಂಗಿನಲ್ಲಿದ್ದೇವೆ. ಪ್ರತಿ ಅರ್ಧಗಂಟೆಗೆ ಒಮ್ಮೆ ನಾವು ವಿಶ್ವಕಪ್​ ಗೆದ್ದಿದ್ದೇವೆ ಎಂಬುದು ನೆನಪಾಗಿ ನಮ್ಮ ಉತ್ಸಾಹ ಮತ್ತೆ ಏರುತ್ತದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಮಾತ್ರ ಇಂಥದ್ದೊಂದು ಅವಕಾಶವನ್ನು ಪಡೆಯುತ್ತೀರಿ ಮತ್ತು ವಿಶೇಷವಾಗಿ ಭಾರತದಂತಹ ಯಾವುದೋ ಪ್ರದೇಶದಲ್ಲಿ ಆಡುವುದೆಂದರೆ ತುಂಬಾ ಕಷ್ಟ. ಅದರಲ್ಲೂ ಕಪ್​ ಗೆಲ್ಲುವುದು ಅಂದರೆ, ಅದಕ್ಕಿಂತ ಮತ್ತೊಂದು ಸಂತೋಷ ಏನಿಲ್ಲ ಎಂದು ಕಮ್ಮಿನ್ಸ್​ ಹೇಳಿದರು.

    ಆಸ್ಟ್ರೇಲಿಯಾ ತಂಡದ ಕೆಲವು ಸದಸ್ಯರು ಸ್ವದೇಶಕ್ಕೆ ಮರಳಿದ್ದರೆ, ಕೆಲವರು ನವೆಂಬರ್ 23ರಿಂದ ಪ್ರಾರಂಭವಾಗುವ 5 ಪಂದ್ಯಗಳ ಟಿ20 ಸರಣಿಗಾಗಿ ಭಾರತದಲ್ಲಿ ಉಳಿದುಕೊಂಡಿದ್ದಾರೆ.

    ಪಂದ್ಯದ ಫಲಿತಾಂಶ
    ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ಅಹಮಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಟೂರ್ನಿಯ ಮಹತ್ವದ ಫೈನಲ್​ ಪಂದ್ಯದಲ್ಲಿ ಭಾರತ ನೀಡಿದ 241 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಆಸಿಸ್ ಕೇವಲ​ 43 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 241 ರನ್​ ಗಳಿಸುವ ಮೂಲಕ ಸುಲಭವಾಗಿ ಗುರಿ ಮುಟ್ಟಿತು. ಕೇವಲ 47 ರನ್​ಗಳಿಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ಆಸಿಸ್​​ಗೆ ಟ್ರಾವಿಸ್​ ಹೆಡ್ ಆಪತ್ಭಾಂದವರಾದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಹೆಡ್ ( 137 ರನ್​ 120 ಎಸೆತ 15 ಬೌಂಡರಿ, 4ಸಿಕ್ಸರ್​) ​, ಆಸಿಸ್​ಗೆ ಸುಲಭ ಗೆಲುವು ತಂದುಕೊಟ್ಟರು. ಹೆಡ್​ ಜತೆಗೆ ಮಾರ್ನಸ್​ ಲಬುಶೇನ್​ ಉತ್ತಮ ಸಾಥ್​ ನೀಡಿದರು. ಈ ಜೋಡಿ ನಿರ್ಣಾಯಕ ಪಂದ್ಯದಲ್ಲಿ 192 ರನ್​ಗಳ ಅಮೋಘ ಜತೆಯಾಟವಾಡಿದರು. ತಾಳ್ಮೆಯ ಆಟವಾಡಿದ ಲಬುಶೇನ್ 110​ ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 58 ರನ್​ಗಳ ಅರ್ಧಶತಕ ಸಿಡಿಸಿ ಮಿಂಚಿದರು. (ಏಜೆನ್ಸೀಸ್​)

    ನೆತ್ತಿಗೇರಿದ ಗೆಲುವಿನ ಅಹಂ: ಆಸೀಸ್​ ನಾಯಕನೇ ಹೀಗಿರುವಾಗ ಸಹ ಆಟಗಾರರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts