More

    ಫಲಾನುಭವಿಗಳಿಗಿಲ್ಲ ಪಶುಭಾಗ್ಯ

    ಶ್ರವಣ್‌ಕುಮಾರ್ ನಾಳ ಪುತ್ತೂರು
    ರಾಜ್ಯ ಸರ್ಕಾರ ಘೋಷಿಸಿದ್ದ ಪಶುಭಾಗ್ಯ ಯೋಜನೆಯಡಿ ಪುತ್ತೂರು ತಾಲೂಕಿನ ಫಲಾನುಭವಿಗಳಿಗೆ ಸಹಾಯಧನ ನೀಡುವಲ್ಲಿ ವಿಳಂಬವಾಗಿದ್ದರಿಂದ ಬಹುತೇಕ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗಿದ್ದಾರೆ.
    ಈ ಯೋಜನೆಯಡಿ ರೈತರಿಗೆ ಕುರಿ, ಆಡು, ಹಂದಿ, ಕೋಳಿ ಸಾಕಣೆ, ಘಟಕ ನಿರ್ಮಾಣಕ್ಕೆ ಬ್ಯಾಂಕ್‌ಗಳಿಂದ ಸಬ್ಸಿಡಿ ಸಹಿತ ಸಾಲ ನೀಡಲಾಗುತ್ತದೆ. ಆದರೆ ಈ ಯೋಜನೆಗೆ ಫಲಾನುಭವಿ ರೈತರು ಅರ್ಹತೆ ಹೊಂದಿದ್ದರೂ, ಪಶು ವೈದ್ಯಕೀಯ ಸೇವೆ ಇಲಾಖೆಯ ಅಧಿಕಾರಿಗಳ ವಿಳಂಬ ಧೋರಣೆಯಿಂದ ಸಹಾಯಧನ ಆರ್‌ಬಿಐಗೆ ವಾಪಸಾಗಿದೆ.

    ಏನಿದು ಯೋಜನೆ?: ಸಣ್ಣ ಹಾಗೂ ಅತಿ ಸಣ್ಣ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದು, ಕುರಿ, ಆಡು, ಹಂದಿ, ಕೋಳಿ ಸಾಕಣೆಗೆ ಸರ್ಕಾರದಿಂದ ವಿಶೇಷ ಸಹಾಯಧನ, ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ಸಿಗಲಿದೆ. ವಾಣಿಜ್ಯ ಬ್ಯಾಂಕ್‌ಗಳಿಂದ 1.2 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಲಭಿಸಲಿದ್ದು, ಪರಿಶಿಷ್ಟ ಜಾತಿ, ಪಂಗಡಗಳಿಗೆ ಶೇ.33 ಹಾಗೂ ಇತರರಿಗೆ ಶೇ.25 ಸಹಾಯಧನ ಸರ್ಕಾರ ನೇರವಾಗಿ ಒದಗಿಸುತ್ತದೆ. ಜತೆಗೆ ಸಹಕಾರಿ ಬ್ಯಾಂಕ್‌ಗಳಿಂದ ಶೂನ್ಯ ಬಡ್ಡಿ ದರದಲ್ಲಿ 60 ಸಾವಿರ ರೂ.ವರೆಗೆ ನಿರ್ವಹಣೆಗಾಗಿ ಸಾಲ ಒದಗಿಸಲಿದೆ. ಕುರಿ, ಆಡು ಕೊಟ್ಟಿಗೆ ನಿರ್ಮಾಣ, ಹಂದಿ ಘಟಕಕ್ಕಾಗಿ ಶೂನ್ಯ ಬಡ್ಡಿ ದರದಲ್ಲಿ 1 ಲಕ್ಷ ರೂ.ವರೆಗೆ ಅಲ್ಪಾವಧಿ ಸಾಲ ಸೌಲಭ್ಯ ನರೇಗಾ ಯೋಜನೆಯಡಿ ಒದಗಿಸಲಾಗುತ್ತದೆ.

    ವಾಪಸಾದ ಮಾಹಿತಿ ಇಲ್ಲ: ಪಶುಭಾಗ್ಯ ಯೋಜನೆಯಡಿ ಖಜಾನೆ- 2ರ ಮುಖಾಂತರ ಜಮೆಯಾದ ಪಶುಭಾಗ್ಯ ಸಹಾಯಧನ ಆರ್‌ಬಿಐಗೆ ವಾಪಸಾಗಿದೆ. ಈ ಬಗ್ಗೆ ಪುತ್ತೂರು ತಾಪಂ ಅಧ್ಯಕ್ಷ ಕೆ.ರಾಧಾಕೃಷ್ಣ ಬೋರ್ಕರ್ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಯಲ್ಲಿ ಮಾಹಿತಿ ಕೇಳಿದ್ದು, ತಾಲೂಕು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಸಹಾಯಧನ ಆರ್‌ಬಿಐಗೆ ವಾಪಸಾಗಿರುವ ಮಾಹಿತಿ ಬಹಿರಂಗಪಡಿಸಿದ್ದು, ಪಶು ಭಾಗ್ಯ ಯೋಜನೆಯಡಿ ತಾಲೂಕಿಗೆ ಬಂದ ಅನುದಾನ, ಫಲಾನುಭವಿಗಳ ಸಂಖ್ಯೆ, ಆರ್‌ಬಿಐಗೆ ವಾಪಸಾದ ಮೊತ್ತದ ಬಗ್ಗೆ ಕಿಂಚಿತ್ತೂ ಮಾಹಿತಿ ನೀಡಿಲ್ಲ.

    ಸಾಲ ಪಡೆಯಲು ಭಯ: ರೈತರು ಪಶುಭಾಗ್ಯ ಯೋಜನೆಯಡಿ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಹಿಂಜರಿಯುತ್ತಿದ್ದಾರೆ. ಉಪಕಸುಬಿಗೆ ಸರಿಯಾದ ಭದ್ರತೆ ಒದಗಿಸಲು ರೈತರಿಗೆ ಸಾಧ್ಯವಾಗದ ಕಾರಣ ಕೆಲವೊಂದು ಬ್ಯಾಂಕ್‌ಗಳೂ ಸಾಲ ನೀಡಲು ಹಿಂದೇಟು ಹಾಕುತ್ತಿದೆ. ಕುರಿ, ಆಡು, ಹಂದಿ, ಕೋಳಿಗಳು ಸಾವನ್ನಪ್ಪಿದರೆ ಸಾಲ ಮರು ಪಾವತಿ ರೈತರಿಗೆ ಸಾಧ್ಯವಾಗುತ್ತಿಲ್ಲ. ರೈತರಿಗಾಗಿ ವಿಮಾ ಯೋಜನೆಗಳಿದ್ದರೂ ವಿಮೆ ಹಣ ಪಡೆಯಲು ಪರದಾಡಬೇಕಾಗುತ್ತದೆ. ಕಳ್ಳರ ಭಯ, ಬೀದಿನಾಯಿ ಸಮಸ್ಯೆ, ಸಾಕುಪ್ರಾಣಿ- ಗೋ ಕಳ್ಳತನ ಜಾಲ ಹೆಚ್ಚಾಗಿರುವುದರಿಂದ ರೈತರಿಗೆ ಇದು ತಲೆನೋವಾಗಿದೆ. ಈ ಮಧ್ಯೆ ಅಧಿಕಾರಿಗಳ ವಿಳಂಬ ಧೋರಣೆಯಿಂದ ಪಶುಭಾಗ್ಯ ಸಹಾಯಧನ ಆರ್‌ಬಿಐಗೆ ವಾಪಸಾಗಿದೆ.

    ಪಶುಭಾಗ್ಯ ಯೋಜನೆಯಡಿ ಖಜಾನೆ- 2ರ ಮುಖಾಂತರ ಜಮೆಯಾದ ಪಶುಭಾಗ್ಯ ಸಹಾಯಧನ ಆರ್‌ಬಿಐಗೆ ವಾಪಸಾಗಿರುವುದರಿಂದ ಜಿಲ್ಲಾ ಖಾಜಾನೆ ಅಧಿಕಾರಿಗಳ ಮುಖಾಂತರ ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದ್ದು, ಸಹಾಯಧನ ಜಮೆಯಾದ ಕೂಡಲೇ ಫಲಾನುಭವಿಗಳಿಗೆ ಅನುದಾನ ನೀಡಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
    ಡಾ. ಧರ್ಮಪಾಲ ಸಹಾಯಕ ನಿರ್ದೇಶಕರು, ಪುತ್ತೂರು ಪಶು ಆಸ್ಪತ್ರೆ

    ಪಶುಭಾಗ್ಯ ಯೋಜನೆಯಡಿ ಪುತ್ತೂರು ತಾಲೂಕಿನ ಕೆಲವು ಫಲಾನುಭವಿಗಳಿಗೆ ಸಹಾಯಧನ ಲಭಿಸಿಲ್ಲ. ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ ಎಂದು ಪಶು ವೈದ್ಯಕೀಯ ಸೇವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಈ ಬಗ್ಗೆ ಪರೀಶೀಲಿಸಿ ಮತ್ತೆ ಫಲಾನುಭವಿಗಳಿಗೆ ಸಹಾಯಧನ ಲಭಿಸುವಂತೆ ಮಾಡುವ ಭರವಸೆ ಪಶು ವೈದ್ಯಕೀಯ ಸೇವೆ ಇಲಾಖೆ ಅಧಿಕಾರಿಗಳು ನೀಡಿದ್ದಾರೆ.
    ರಾಧಾಕೃಷ್ಣ ಬೋರ್ಕರ್ ಪುತ್ತೂರು ತಾಪಂ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts