More

    ಪಾಲಿಕೆಗೆ ಸರ್ಕಾರದ ಚಾಟಿ ; ಮೇಯರ್, ಆಯುಕ್ತರಿಗೆ ಸಂಕಟ ; ಇಂದಿರಾ ಕ್ಯಾಂಟೀನ್ ವಿರುದ್ಧ ಠರಾವು ರದ್ಧತಿಗೆ ನೋಟಿಸ್

    ತುಮಕೂರು : ಇಂದಿರಾ ಕ್ಯಾಂಟೀನ್ ವಿರುದ್ಧ ಸಾಮಾನ್ಯ ಸಭೆಯಲ್ಲಿ ಕಾನೂನು ಉಲ್ಲಂಘಿಸಿ ನಿಯಮಬಾಹಿರ ನಿರ್ಣಯ ಕೈಗೊಂಡಿದ್ದ ಮಹಾನಗರ ಪಾಲಿಕೆಗೆ ಪೌರಾಡಳಿತ ನಿರ್ದೇಶನಾಲಯವು ನೋಟಿಸ್ ಜಾರಿ ಮಾಡಿದೆ. ಈ ಸಂಬಂಧ ಮೇಯರ್, ಆಯುಕ್ತರಿಗೆ ನೋಟಿಸ್ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ಕಳೆದ ಆಗಸ್ಟ್‌ನಲ್ಲಿ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ಬಿಲ್ ಪಾವತಿಸಬಾರದೆಂದು ಹಾಗೂ ಇಂದಿರಾ ಕ್ಯಾಂಟೀನ್ ಅವ್ಯವಹಾರವನ್ನು ಲೋಕಾಯುಕ್ತಕ್ಕೆ ವಹಿಸುವಂತೆ ಸಾಮಾನ್ಯ ಸಭೆ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ಬಗ್ಗೆ ಸರ್ಕಾರದ ನಿರ್ದೇಶನ ಕೋರಿ ಪತ್ರ ಬರೆದಿದ್ದು ಆಯುಕ್ತರೀಗ ಮುಜಗರ ಅನುಭವಿಸುವಂತಾಗಿದೆ.

    ಸರ್ಕಾರದ ಕಾರ್ಯಕ್ರಮದಲ್ಲಿ ಹಸ್ತಕ್ಷೇಪ ಮಾಡಿದ್ದ ಚುನಾಯಿತ ಮಂಡಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮೇಯರ್ ಹಾಗೂ ಆಯುಕ್ತರಿಗೆ ನೋಟಿಸ್ ನೀಡಿದ್ದು 15 ದಿನಗಳೊಳಗೆ ನಿರ್ದೇಶನಾಲಯಕ್ಕೆ ಸಮಜಾಯಿಷಿ ನೀಡಬೇಕು. ಇಲ್ಲವಾದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪೌರಾಡಾಳಿತ ನಿರ್ದೇಶನಾಲಯದ ನಿರ್ದೇಶಕಿ ಬಿ.ಬಿ.ಕಾವೇರಿ ಅವರು ಮೇನಲ್ಲಿ ನೋಟಿಸ್ ನೀಡಿದ್ದಾರೆ. ಆದರೆ, ಈ ನೊಟೀಸ್ ಯಾರ ಕಣ್ಣಿಗೂ ಬೀಳದಂತೆ ಮುಚ್ಚಿಡಲಾಗಿದ್ದು ಇದೀಗ ಬಹಿರಂಗಗೊಂಡಿದೆ.
    ಕಳೆದ ಅವಧಿಯಲ್ಲಿನ ಲೋಪಕ್ಕೆ ಈಗಿನ ಮೇಯರ್ ಉತ್ತರ ಕೊಡಬೇಕಾಗಿರುವುದು ಸಾಕಷ್ಟು ಇರಿಸುಮುರಿಸು ತಂದಿದೆ. ಪಾಲಿಕೆ ಪಡಸಾಲೆಯಲ್ಲಿ ನೋಟಿಸ್ ವಿಚಾರದ್ದೇ ಈಗ ಎಲ್ಲೆಡೆ ಗುಸುಗುಸು ಚರ್ಚೆ ನಡೆಯುತ್ತಿದೆ.

    ಇಂದಿರಾ ಕ್ಯಾಂಟೀನ್ ವಿರುದ್ಧ ಠರಾವು : ಕಾಂಗ್ರೆಸ್-ಜೆಡಿಎಸ್ ಆಡಳಿತಾವಧಿಯ ಸಾಮಾನ್ಯ ಸಭೆಯಲ್ಲಿ ಇಂದಿರಾ ಕ್ಯಾಂಟೀನ್ ವಿರುದ್ಧ ಲೋಕಾಯುಕ್ತ ತನಿಖೆಗೆ ಒಪ್ಪಿಸುವ ವಿವಾದಿತ ತೀರ್ಮಾನ ಕೈಗೊಳ್ಳಲಾಗಿತ್ತು. ಇಂದಿರಾ ಕ್ಯಾಂಟೀನ್‌ನಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿದ್ದು, ಇದರ ತನಿಖಾ ವರದಿಯನ್ನು ಲೋಕಾಯುಕ್ತಕ್ಕೆ ನೀಡಲು ಪಾಲಿಕೆ ಸದಸ್ಯರು ಮೇಯರ್ ಫರಿದಾಬೇಗಂ ಅಧ್ಯಕ್ಷತೆಯಲ್ಲಿ 2020ರ ಆಗಸ್ಟ್ 25ರಂದು ನಡೆದ ಸಾಮಾನ್ಯಸಭೆಯಲ್ಲಿ ಒಕ್ಕೊರಲ ತೀರ್ಮಾನ ಕೈಗೊಂಡಿದ್ದರು. ಇದಲ್ಲದೆ 2020ರ ಡಿ.30ರ ಲೆಕ್ಕಪತ್ರ ಸ್ಥಾಯಿಸಮಿತಿ ಸಭೆಯಲ್ಲೂ ಇಂದಿರಾ ಕ್ಯಾಂಟೀನ್ ತನಿಖಾ ವರದಿ ಬಹಿರಂಗವಾಗುವವರೆಗೆ ಗುತ್ತಿಗೆದಾರರಿಗೆ ಬಿಲ್ ಪಾವತಿಸದಂತೆ ಠರಾವು ಮಾಡಲಾಗಿತ್ತು.

    ನಿಯಮಬಾಹಿರ ನಿರ್ಣಯ: ಇಂದಿರಾ ಕ್ಯಾಂಟೀನ್ ವಿರುದ್ಧ ಕೌನ್ಸಿಲ್ ಸಭೆ ಹಾಗೂ ಸ್ಥಾಯಿಸಮಿತಿ ಸಭೆ ನಿರ್ಣಯ ಕುರಿತು ಸರ್ಕಾರ ನಿರ್ದೇಶನ ಕೋರಿ 2021ರ ಫೆ.9ರಂದು ಆಯುಕ್ತೆ ರೇಣುಕಾ ಪತ್ರ ಬರೆದಿದ್ದರು. ಈ ಪತ್ರ ಪರಿಶೀಲಿಸಿದ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಪಾಲಿಕೆ ವಿರುದ್ಧವೇ ಗರಂ ಆಗಿದ್ದಾರೆ. ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಯೋಜನೆ ಅನುಷ್ಠಾನದಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ವರದಿ ಮಾಡಬಹುದು. ಅದನ್ನು ಬಿಟ್ಟು ಕೌನ್ಸಿಲ್ ಸಭೆ, ಸ್ಥಾಯಿ ಸಮಿತಿ ಸಭೆಯಲ್ಲಿ ಸ್ವಯಂ ನಿರ್ಣಯ ತೆಗೆದುಕೊಳ್ಳಲು ಅವಕಾಶ ಇರುವುದಿಲ್ಲ. ಹಾಗಾಗಿ, ಈ ನಿರ್ಣಯವು ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾಗಿದ್ದು ನಿಯಮಬಾಹಿರವಾಗಿದೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts