More

    ಕಾಶ್ಮೀರ ವಿಚಾರದಲ್ಲಿ ಪಾಕ್​ಗೆ ಮುಖಭಂಗ

    ವಿಶ್ವಸಂಸ್ಥೆ: ಜಮ್ಮು- ಕಾಶ್ಮೀರ ವಿಷಯವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗವಾಗಿದೆ. ಪಾಕ್ ಪರ ವಕಾಲತ್ತು ವಹಿಸಿ ವಿಷಯ ಪ್ರಸ್ತಾವನೆ ಮಾಡಿದ ಚೀನಾಕ್ಕೂ ಮುಜುಗರ ಉಂಟಾಗಿದೆ. ಜಮ್ಮು- ಕಾಶ್ಮೀರದ ವಿಚಾರ ಚರ್ಚೆಗೆ ಇದು ಸೂಕ್ತ ವೇದಿಕೆಯಲ್ಲ ಎಂದು ಬುಧವಾರ ನಡೆದ ಸಭೆಯಲ್ಲಿ ಮಂಡಳಿಯ ಬಹುತೇಕ ಸದಸ್ಯ ರಾಷ್ಟ್ರಗಳು ಅಭಿಪ್ರಾಯಪಟ್ಟಿವೆ.

    ಭದ್ರತಾ ಮಂಡಳಿಯ ಗೋಪ್ಯ ಸಮಾಲೋಚನಾ ಸಭೆಯಲ್ಲಿ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಯುವ ಸಂದರ್ಭದಲ್ಲಿ ಚೀನಾ, ಜಮ್ಮು- ಕಾಶ್ಮೀರ ವಿಷಯವನ್ನು ಕೆದಕಿತು. ಈ ವಿಚಾರ ಸಂಪೂರ್ಣವಾಗಿ ಆಂತರಿಕ. ತಕರಾರು ಇದ್ದರೆ ದ್ವಿಪಕ್ಷೀಯವಾಗಿ ಬಗೆ ಹರಿಸಿಕೊಳ್ಳಬೇಕು ಎಂದು ಭದ್ರತಾ ಮಂಡಳಿಯ ಕಾಯಂ ರಾಷ್ಟ್ರಗಳಲ್ಲಿ ಒಂದಾದ ಫ್ರಾನ್ಸ್ ಹೇಳಿದೆ. ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ಪಾಕ್ ಪದೇ ಪದೆ ಕ್ಯಾತೆ ತೆಗೆಯುತ್ತಿದೆ. ವಿವಾದಾಸ್ಪದ ಪ್ರದೇಶದಲ್ಲಿ ಭಾರತ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದೆ. ಇದರಿಂದ ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಆದರೆ ಏನೂ ಆಗಿಲ್ಲವೆಂದು ಭಾರತ ನಾಟಕವಾಡುತ್ತಿದೆ ಎಂದು ಪಾಕಿಸ್ತಾನ ಜಾಗತಿಕ ವೇದಿಕೆಗಳಲ್ಲಿ ಹಲವು ಬಾರಿ ಆರೋಪ ಮಾಡಿದೆ. ಪಾಕ್ ಪರ ಚೀನಾ ವಿಶ್ವಸಂಸ್ಥೆಯ ಪ್ರಮುಖ ವೇದಿಕೆಗಳಲ್ಲಿ ಕಾಶ್ಮೀರ ವಿಚಾರವನ್ನು ಮೂರು ಸಾರಿ ಪ್ರಸ್ತಾಪಿಸಿದೆ. ಆದರೆ ಯಾವುದರಲ್ಲೂ ಪಾಕ್​ಗೆ ಬೆಂಬಲ ದೊರೆತಿಲ್ಲ.

    ಪಾಕ್ ಅದೇ ರಾಗ, ಅದೇ ಹಾಡು: ಭದ್ರತಾ ಮಂಡಳಿ ಸಭೆಯಲ್ಲಿ ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯ ವಿವಾದವನ್ನಾಗಿ ಗುರುತಿಸಲಾಗಿದೆ. ಈ ವಿವಾದ ಭದ್ರತಾ ಮಂಡಳಿ ನಿರ್ಣಯದಂತೆ ಇತ್ಯರ್ಥವಾಗಬೇಕು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ.

    ಭಾರತ ತೀಕ್ಷ್ಣ ಪ್ರತಿಕ್ರಿಯೆ

    ಉಗ್ರವಾದದಂತಹ ಮುಖ್ಯ ವಿಷಯವನ್ನು ಬಿಟ್ಟು ನೆಪಗಳನ್ನು ಹೇಳಿ ವಿಷಯಾಂತರ ಮಾಡುವ ಚಾಳಿಯನ್ನು ಪಾಕ್ ಇನ್ನೂ ಬಿಟ್ಟಿಲ್ಲ. ಇಂತಹ ಸುಳ್ಳಿನ ಪತಾಕೆ ಹಾರಿಸಿದವರಿಗೆ ವಿಶ್ವಸಂಸ್ಥೆಯ ನಮ್ಮ ಸ್ನೇಹಿತರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಭಾರತ ಹೇಳಿದೆ. ನೆರೆಯ ರಾಷ್ಟ್ರದ ಆಂತರಿಕ ವಿಷಯದಲ್ಲಿ ಮೂಗುತೂರಿಸುವುದನ್ನು ಬಿಟ್ಟು, ಉಗ್ರವಾದಿಗಳಿಗೆ ಆಶ್ರಯ ನೀಡುವುದನ್ನು ನಿಲ್ಲಿಸುವ ಮೂಲಕ ಭಾರತದ ಜತೆ ಸ್ನೇಹ ವೃದ್ಧಿಸಿಕೊಳ್ಳಲಿ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಸಲಹೆ ನೀಡಿದ್ದಾರೆ.

    ಪಾಕಿಸ್ತಾನ ಆರೋಪಗಳು ನಿರಾಧಾರವೆಂಬುದು ವಿಶ್ವಸಮುದಾಯಕ್ಕೂ ಮನವರಿಕೆಯಾಗಿದೆ. ಕಾಶ್ಮೀರ ವಿಚಾರದಲ್ಲಿ ಪಾಕ್ ಪದೇ ಪದೆ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ.

    | ರವೀಶ್ ಕುಮಾರ್ ವಿದೇಶಾಂಗ ಸಚಿವಾಲಯದ ವಕ್ತಾರ

    ಜಮ್ಮು- ಕಾಶ್ಮೀರದಲ್ಲಿನ ಸದ್ಯ ಪರಿಸ್ಥಿತಿ ಬಗ್ಗೆ ಗಮನ ಹರಿಸಬೇಕು ಎಂದು ಭದ್ರತಾ ಮಂಡಳಿಗೆ ಪಾಕಿಸ್ತಾನ ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ನಾವು ಗೋಪ್ಯ ಸಭೆಯಲ್ಲಿ ಜಮ್ಮು-ಕಾಶ್ಮೀರದ ವಿಚಾರವನ್ನು ಎತ್ತಿದೆವು.

    | ಜಾಂಗ್ ಜುನ್ ವಿಶ್ವಸಂಸ್ಥೆಯಲ್ಲಿ ಚೀನಾದ ರಾಯಭಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts