More

    ಮರು ಎಣಿಕೆಯ ಕದನ ಕುತೂಹಲ

    ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ 1991ರ ಚುನಾವಣೆಯ ಫಲಿತಾಂಶ ರಾಜ್ಯದ ಗಮನ ಸೆಳೆದಿತ್ತು. ಕೇವಲ 16 ಮತಗಳ ಅಂತರ ಕಂಡುಬಂದಿದ್ದರಿಂದ ಮರು ಎಣಿಕೆ ಮಾಡಲಾಯಿತು.
     ಆಗ ಕಾಂಗ್ರೆಸ್‌ನಿಂದ ಚನ್ನಯ್ಯ ಒಡೆಯರ್, ಬಿಜೆಪಿಯಿಂದ ಎಸ್.ಎ. ರವೀಂದ್ರನಾಥ್ ಸ್ಪರ್ಧಿಸಿದ್ದರು. ನಗರದ ಬಿಡಿಟಿ ಇಂಜಿನಿಯರಿಂಗ್ ಕಾಲೇಜು ಮತ್ತು ಪಕ್ಕದ ಡಿಆರ್‌ಆರ್ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಮತಗಳ ಎಣಿಕೆ ನಡೆದಿತ್ತು.
     ಚನ್ನಯ್ಯ ಒಡೆಯರ್ ಕೇವಲ 16 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು! ಅಂತರ ಬಹಳ ಕಡಿಮೆ ಇದ್ದುದರಿಂದ ಮರು ಎಣಿಕೆ ಮಾಡಬೇಕು ಎಂದು ಬಿಜೆಪಿಯವರು ಒತ್ತಾಯಿಸಿದರು. ಚುನಾವಣಾ ಆಯೋಗವೂ ಅದಕ್ಕೆ ಒಪ್ಪಿಗೆ ಸೂಚಿಸಿ ಆದೇಶ ಹೊರಡಿಸಿತು.
     ಆಗ ಮರು ಎಣಿಕೆ ಎಲ್ಲಿ ನಡೆಸಬೇಕು ಎಂಬ ಪ್ರಶ್ನೆ ಎದುರಾಯಿತು. ಆ ಚುನಾವಣೆ ನಡೆದ ಹಿಂದಿನ ವರ್ಷದಲ್ಲಿ ದಾವಣಗೆರೆಯಲ್ಲಿ ಗಲಭೆಗಳು ನಡೆದು ಸಾವು, ನೋವು ಸಂಭವಿಸಿದ್ದವು. ಮರು ಎಣಿಕೆಯನ್ನು ಇಲ್ಲೇ ನಡೆಸಿದರೆ ಕಾನೂನು, ಸುವ್ಯವಸ್ಥೆಗೆ ತೊಂದರೆ ಆಗಬಹುದು ಎನ್ನುವ ಕಾರಣಕ್ಕೆ ಪಕ್ಕದ ಚಿತ್ರದುರ್ಗದಲ್ಲಿ ಮರು ಎಣಿಕೆ ಮಾಡಲು ತೀರ್ಮಾನಿಸಲಾಯಿತು.
     ಎಂಟೂ ವಿಧಾನಸಭಾ ಕ್ಷೇತ್ರಗಳ ಮತ ಪೆಟ್ಟಿಗೆಗಳನ್ನು ಪೊಲೀಸರ ಬಿಗಿ ಭದ್ರತೆಯಲ್ಲಿ ಚಿತ್ರದುರ್ಗದ ವಿಜ್ಞಾನ ಕಾಲೇಜಿಗೆ ಸ್ಥಳಾಂತರ ಮಾಡಲಾಯಿತು. ಹೆಜ್ಜೆ ಹೆಜ್ಜೆಗೂ ಪೊಲೀಸರೇ ಕಾಣುತ್ತಿದ್ದರು. ಚುನಾವಣಾ ಆಯೋಗವೂ ವಿಶೇಷ ಗಮನ ಹರಿಸಿ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿತ್ತು.
     ಮರು ಎಣಿಕೆ ಏನಾಗಬಹುದು ಎಂದು ತೀವ್ರ ಕುತೂಹಲ ಕೆರಳಿಸಿತ್ತು. ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಧನಂಜಯ ಕುಮಾರ್ ಇನ್ನಿತರ ಬಿಜೆಪಿ ನಾಯಕರು ಚಿತ್ರದುರ್ಗದ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದರು. ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳನ್ನು ಮತ್ತೊಮ್ಮೆ ಎಣಿಕೆ ಮಾಡಬೇಕಾಯಿತು, ಒಂದೊಂದು ಮತವನ್ನೂ ವಿಶೇಷ ಗಮನ ಕೊಟ್ಟು ಎಣಿಕೆ ಮಾಡಲಾಯಿತು.
     ಅಂತಿಮವಾಗಿ ಚನ್ನಯ್ಯ ಒಡೆಯರ್ 2,37,542 ಮತಗಳನ್ನು ಪಡೆದರೆ, ಎಸ್.ಎ. ರವೀಂದ್ರನಾಥ್‌ಗೆ 2,37,087 ಮತಗಳು ಬಂದವು. ಈ ಬಾರಿ ಮತಗಳ ಅಂತರ 455ಕ್ಕೆ ಏರಿಕೆಯಾಗಿತ್ತು. ಅಂತಿಮವಾಗಿ ಚನ್ನಯ್ಯ ಒಡೆಯರ್ ಅವರನ್ನು ವಿಜಯಿ ಎಂದು ಘೋಷಿಸಲಾಯಿತು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts