More

    ಭಾರತೀಯ ಸಂಸ್ಕೃತಿಯಲ್ಲಿ ಗಿಡ, ಮರಗಳ ಬಗ್ಗೆ ಗೌರವ

    ದಾವಣಗೆರೆ : ಭಾರತೀಯ ಸಂಸ್ಕೃತಿಯಲ್ಲಿ ಗಿಡ, ಮರಗಳನ್ನು ಗೌರವಿಸಲಾಗುತ್ತದೆ. ಔಷಧೀಯ ಸಸ್ಯಗಳನ್ನು ಮನೆ ಮದ್ದಾಗಿ ಬಳಸುವುದು ಸಮಾಜದಲ್ಲಿ ಹಿಂದಿನಿಂದಲೂ ರೂಢಿಯಲ್ಲಿದೆ ಎಂದು ಜಾನಪದ ತಜ್ಞ ಡಾ.ಎಂ.ಜಿ ಈಶ್ವರಪ್ಪ ಹೇಳಿದರು.
     ನಗರದ ಡಿ.ಆರ್.ಎಂ. ವಿಜ್ಞಾನ ಕಾಲೇಜಿನಲ್ಲಿ ಗುರುವಾರ, ಸಸ್ಯಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ‘ಔಷಧೀಯ ಸಸ್ಯಗಳ ಸಂರಕ್ಷಣೆ’ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
     ಆಲ, ಅರಳಿ ಮುಂತಾದ ಮರಗಳನ್ನು ಗೌರವಿಸುವ, ಪೂಜಿಸುವ ಪದ್ಧತಿ ನಮ್ಮಲ್ಲಿದೆ. ಆದರೆ ಅವುಗಳಿಗೆ ನೀರು ಹಾಕಿ ಪೋಷಿಸುವ ಗೋಜಿಗೆ ಅವರು ಹೋಗುವುದಿಲ್ಲ ಎಂದರು. ಹಲವು ವರ್ಷಗಳ ಹಿಂದೆ ನಗರದ ಬಿಡಿಟಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿದ್ದ ಆಲ ಮತ್ತು ಅರಳಿ ಮರಗಳಿಗೆ ಕೆಲವರು ಮದುವೆ ಮಾಡಿಸಿದ್ದರು ಎಂದು ನೆನಪಿಸಿದರು.
     ಕೆಲವು ಸಸ್ಯಗಳಲ್ಲಿ ಔಷಧೀಯ ಗುಣವಿದ್ದು ಅವುಗಳನ್ನು ಚಿಕಿತ್ಸೆಗೆ ಬಳಸಲಾಗುತ್ತದೆ. ಹಿಂದಿನ ಕಾಲದಲ್ಲಿ ಹೆಚ್ಚು ಆಸ್ಪತ್ರೆಗಳು ಇರಲಿಲ್ಲ. ಆಗ ಔಷಧೀಯ ಸಸ್ಯಗಳನ್ನೆ ವೈದ್ಯಕೀಯ ಉದ್ದೇಶಕ್ಕೆ ಬಳಸಲಾಗುತ್ತಿತ್ತು. ಬೆಟ್ಟ, ಗುಡ್ಡಗಳಲ್ಲಿ ಹುಡುಕಿ ತರುತ್ತಿದ್ದರು. ಅವರಿಗೆ ಅದರ ಮಹತ್ವ ತಿಳಿದಿತ್ತು. ಜತೆಗೆ ಜೀರಿಗೆ, ಸಾಸಿವೆ, ಮೆಂತ್ಯ ಮುಂತಾದ ಪದಾರ್ಥಗಳನ್ನು ಮನೆಮದ್ದಾಗಿ ಉಪಯೋಗಿಸಲಾಗುತ್ತಿತ್ತು ಎಂದು ಮಾಹಿತಿ ನೀಡಿದರು.
     ಔಷಧೀಯ ಸಸ್ಯಗಳ ಬಗ್ಗೆ ವೈಜ್ಞಾನಿಕ ಅಧ್ಯಯನ, ಸಂಶೋಧನೆ ಇನ್ನಷ್ಟು ನಡೆಯಲಿ. ಅವುಗಳ ಪ್ರಯೋಜನ ಸಮಾಜಕ್ಕೆ ಸಿಗುವಂತಾಗಲಿ. ಇಂಥ ಕಾರ್ಯಕ್ರಮಗಳು ಹೊಸ ವಿಚಾರ, ಜ್ಞಾನವನ್ನು ಹಂಚಿಕೊಳ್ಳಲು ವೇದಿಕೆ ಒದಗಿಸುತ್ತವೆ. ವಿದ್ಯಾರ್ಥಿಗಳು, ಶಿಕ್ಷಕರು ಇದರ ಪ್ರಯೋಜನ ಪಡೆಯಬೇಕು. ಇಲ್ಲಿ ಚರ್ಚೆಯಾಗುವ ವಿಷಯಗಳಿಂದ ವಿದ್ಯಾರ್ಥಿಗಳು ಪ್ರೇರಣೆ ಪಡೆಯಬೇಕು ಎಂದು ತಿಳಿಸಿದರು.
     ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಜೀವವಿಜ್ಞಾನಗಳ ಶಾಲೆಯ ಪ್ರಾಧ್ಯಾಪಕ ಡಾ. ಅರುಣ್ ಎಸ್. ಖಾರಟ್ ಮಾತನಾಡಿ, ಜೀವ ವೈವಿಧ್ಯ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.
     ಡಿ.ಆರ್.ಎಂ. ಕಾಲೇಜಿನ ಪ್ರಾಚಾರ್ಯೆ ಡಾ.ಆರ್. ವನಜಾ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧೆಯಿದೆ. ವಿದ್ಯಾರ್ಥಿಗಳು ಇಂಥ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
     ತುಮಕೂರು ವಿಶ್ವವಿದ್ಯಾಲಯದ ಮೈಕ್ರೋಬಯಾಲಜಿ ಮತ್ತು ಬಯೊಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕ ಡಾ.ಶರತ್‌ಚಂದ್ರ, ಡಾ.ಬಿ.ಸಿ. ನಾಗರಾಜ್ ಇದ್ದರು. ಸಹಾಯಕ ಪ್ರಾಧ್ಯಾಪಕ ಡಾ.ಟಿ. ವಸಂತ ನಾಯ್ಕ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts