ಸಿನಿಮಾ

ಪಡುಮಲೆ ಪ್ರವಾಸೋದ್ಯಮ ‘ಗ್ರಹಣ’

ಶಶಿ ಕುತ್ಯಾಳ

ತುಳುನಾಡಿನ ಅವಳಿ ಕಾರಣಿಕ ಪರುಷರಾದ ಕೋಟಿ-ಚೆನ್ನಯರ ಜನ್ಮಸ್ಥಳ ಪಡುಮಲೆಯನ್ನು ಪ್ರವಾಸೋದ್ಯಮ ತಾಣವಾಗಿಸುವ ಐದು ಕೋಟಿ ರೂ.ನ ಯೋಜನೆ ಒಂಬತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಮೊದಲ ಹಂತದ ಅಭಿವೃದ್ಧಿ ಯೋಜನೆಗಳಿಗಾಗಿ ಬಿಡುಗಡೆಗೊಂಡಿದ್ದ ಅನುದಾನ ಬ್ಯಾಂಕ್‌ನಲ್ಲಿ ಠೇವಣಿಯಾಗಿ ಉಳಿದುಕೊಂಡು ಬಡ್ಡಿಗಷ್ಟೇ ಸೀಮಿತವಾಗಿದೆ.

ಕಳೆದ ಎರಡು ಅವಧಿಗಳಲ್ಲಿ ಶಾಸಕರಾಗಿದ್ದ ಕಾಂಗ್ರೆಸ್ ಮತ್ತು ಬಿಜೆಪಿಯ ಶಾಸಕರು ಪಡುಮಲೆ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಆಸಕ್ತಿ ತೋರಿಲ್ಲ. ಬಿಡುಗಡೆಯಾದ ಅನುದಾನವನ್ನೂ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗೆ ಬಳಕೆ ಮಾಡುವ ಕೆಲಸವನ್ನೂ ಮಾಡಿಲ್ಲ. ಪ್ರಸ್ತುತ ವಿಧಾನಸಭಾ ಚುನಾಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಆರಿಸಿ ಬರುವ ಶಾಸಕರು ಪಡುಮಲೆ ಪ್ರವಾಸೋದ್ಯಮ ಯೋಜನೆಯ ವಿಚಾರದಲ್ಲಿ ಆಸಕ್ತಿ ವಹಿಸಬೇಕು ಎಂಬುದು ಜನರ ಆಗ್ರಹ.

ಪಡುಮಲೆ ಅಭಿವೃದ್ಧಿಗಾಗಿ ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾಗ 25 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದರು. ಬಳಿಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ವಿನಯಕುಮಾರ್ ಸೊರಕೆ ಅವರ ಪ್ರಯತ್ನದಿಂದ ಮೊದಲ ಬಜೆಟ್‌ನಲ್ಲೇ ಪಡುಮಲೆ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಈ ಪೈಕಿ ಮೊದಲ ಹಂತದ ಕಾಮಗಾರಿಗಳಿಗೆ ಒಂದು ಕೋಟಿ ರೂ. ಅನುದಾನ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಅನುದಾನ ಬಿಡುಗಡೆಯಾಗಿ ಎಂಟು ವರ್ಷಗಳು ಕಳೆದರೂ ಅಭಿವೃದ್ಧಿ ಕೆಲಸ ಮಾತ್ರ ಮರೀಚಿಕೆಯಾಗುಳಿದಿದೆ.

ಶಂಖಪಾಲ ಬೆಟ್ಟದಲ್ಲಿ ಮೊದಲ ಹಂತದ ಕೆಲಸ

ಪಡುಮಲೆಯ ಐತಿಹಾಸಿಕ ಕುರುಹುಗಳಿರುವ ಸ್ಥಳಗಳ ಪೈಕಿ 2.75 ಎಕರೆಯಷ್ಟಿರುವ ಸರ್ಕಾರಿ ಸ್ಥಳವಾದ ಶಂಖಪಾಲ ಬೆಟ್ಟದಲ್ಲಿ ಮೊದಲ ಹಂತದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗಿತ್ತು. ಶಂಖಪಾಲ ಬೆಟ್ಟದ ತುದಿಯಲ್ಲಿ 90 ಲಕ್ಷ ರೂ. ನಲ್ಲಿ ಸುಸಜ್ಜಿತ ಸಭಾಭವನ ನಿರ್ಮಾಣ, 40 ಲಕ್ಷ ರೂ. ವೆಚ್ಚದಲ್ಲಿ ಪ್ರಾಚ್ಯ ವಸ್ತುಸಂಗ್ರಹಾಲಯ-ಗ್ರಂಥಾಲಯ ನಿರ್ಮಾಣ, ಎಂಟು ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ನಿರ್ಮಾಣ, 40 ಲಕ್ಷ ರೂ. ವೆಚ್ಚದಲ್ಲಿ ಬೆಟ್ಟಕ್ಕೆ ಏರಲು ಎರಡು ಬದಿಗಳಿಂದ ನಡೆದಾಡುವ ಮೆಟ್ಟಿಲು ಹಾಗೂ ಹಸಿರು ಪಾರ್ಕ್ ವ್ಯವಸ್ಥೆ, 30 ಲಕ್ಷ ರೂ. ವೆಚ್ಚದಲ್ಲಿ ನೆಲ ಸಮತಟ್ಟು ಹಾಗೂ ನೀರಿನ ವ್ಯವಸ್ಥೆ, 10 ಲಕ್ಷ ರೂ. ವೆಚ್ಚದಲ್ಲಿ ಮಾಹಿತಿ ಫಲಕಗಳ ಅಳವಡಿಕೆ ಮೊದಲಾದ ವ್ಯವಸ್ಥೆಗಳನ್ನು ನಡೆಸಲು ಅಂದಾಜು 2.75 ಕೋಟಿ ರೂ. ಯೋಜನೆ ರೂಪಿಸಲಾಗಿತ್ತು. ಎರಡನೇ ಹಂತದಲ್ಲಿ ಕೋಟಿ-ಚೆನ್ನಯ ಹಾಗೂ ದೇಯಿ ಬೈದೆತಿಯ ಬೃಹತ್ ಪ್ರತಿಮೆ ಸ್ಥಾಪನೆ ಮಾಡುವ ಯೋಜನೆ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ರಮಾನಾಥ ರೈ, ಪುತ್ತೂರು ಕ್ಷೇತ್ರದ ಆಗಿನ ಶಾಸಕಿ ಶಕುಂತಳಾ ಶೆಟ್ಟಿ, ಬಳಿಕ ಶಾಸಕರಾದ ಸಂಜೀವ ಮಠಂದೂರು ಪಡುಮಲೆ ಪ್ರವಾಸೋದ್ಯಮ ಅಭಿವೃದ್ಧಿಯ ವಿಚಾರದಲ್ಲಿ ಹೆಚ್ಚಿನ ಕಾಳಜಿ ತೋರದ ಕಾರಣ ಪಡುಮಲೆ ಪ್ರವಾಸೋದ್ಯಮ ಯೋಜನೆಗೆ ಗ್ರಹಣ ಹಿಡಿಯುವಂತಾಯಿತು.

ಗೆಜ್ಜೆಗಿರಿ, ನಾಗಬೆಮ್ಮೆರೆ ಕ್ಷೇತ್ರ ಪ್ರಗತಿ

ಪಡುಮಲೆ ವ್ಯಾಪ್ತಿಯಲ್ಲಿ ಗೆಜ್ಜೆಗಿರಿ ಕ್ಷೇತ್ರ ಅತ್ಯದ್ಭುತ ರೀತಿಯಲ್ಲಿ ನಿರ್ಮಾಣಗೊಂಡು ಗಮನ ಸೆಳೆದಿದೆ. ಕೋಟಿ-ಚೆನ್ನಯರ ಜನ್ಮಸ್ಥಳವಾದ ಪಡುಮಲೆ ಅರಮನೆಯ ಸಮೀಪ ನಾಗಬೆಮ್ಮೆರೆ ಕ್ಷೇತ್ರ ನಿರ್ಮಾಣವಾಗಿದೆ. ಖಾಸಗಿಯಾಗಿ ಅಭಿವೃದ್ಧಿಗೊಂಡ ಈ ಎರಡೂ ಕ್ಷೇತ್ರಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ಸಂಜೀವ ಮಠಂದೂರು ರಸ್ತೆ ಸಂಪರ್ಕ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದರು. ಈ ಕ್ಷೇತ್ರಗಳ ಅಭಿವೃದ್ಧಿ ವಿಚಾರದಲ್ಲಿ ಮುತುವರ್ಜಿ ವಹಿಸಿದವರು ಸರ್ಕಾರಿ ವ್ಯವಸ್ಥೆಯ ಪ್ರವಾಸೋದ್ಯಮ ಯೋಜನೆಯ ವಿಚಾರದಲ್ಲಿ ಮಾತ್ರ ಆಸಕ್ತಿ ತೋರಿಲ್ಲ. ಯೋಜನೆಯ ಜವಾಬ್ದಾರಿ ಹೊತ್ತ ಅಧಿಕಾರಿಗಳು ಈ ವಿಚಾರವನ್ನೇ ಮರೆತು ಬಿಟ್ಟಿರುವುದು ಪಡುಮಲೆ ಪ್ರವಾಸೋದ್ಯಮ ಯೋಜನೆ ನನೆಗುದಿಗೆ ಬೀಳಲು ಕಾರಣ ಎಂಬುವುದು ಜನರ ಆರೋಪ.

ಅಧಿಕಾರಿಗಳ ಮೌನ, ಜನರ ಆಗ್ರಹ

ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ರಮಾನಾಥ ರೈ ನೇತೃತ್ವದಲ್ಲಿ ಶಂಖಪಾಲ ಬೆಟ್ಟದಲ್ಲಿ 2015ರ ಜನವರಿ 27ರಂದು ಪ್ರಥಮ ಹಂತದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ ಶಂಖಪಾಲ ಬೆಟ್ಟಕ್ಕೇರಲು ತಾತ್ಕಾಲಿಕ ದಾರಿ ರಚನೆ, ಕೊಳವೆಬಾವಿ ನಿರ್ಮಾಣ, ನೀರಿನ ಟ್ಯಾಂಕೊಂದರ ರಚನೆ ಬಿಟ್ಟರೆ ಬೇರಾವುದೇ ಅಭಿವೃದ್ಧಿ ಕೆಲಸಗಳು ಅಲ್ಲಿ ಈ ತನಕ ನಡೆದಿಲ್ಲ. ಪಡುಮಲೆ ಪ್ರವಾಸೋದ್ಯಮ ಯೋಜನೆಯನ್ನು ಎಲ್ಲ ಪಕ್ಷದವರೂ ಮರೆತುಬಿಟ್ಟಂತಿದೆ. ಪಡುಮಲೆ ಪ್ರವಾಸೋದ್ಯಮ ಯೋಜನೆಗಾಗಿ ಮಂಜೂರಾದ ಅನುದಾನ ಎಲ್ಲೆಲ್ಲಿಗೋ ಹೋಗಿ, ಯೋಜನೆಯೇ ಕಣ್ಮರೆಯಾಗುವ ಸಾಧ್ಯತೆ ಅಧಿಕವಾಗುತ್ತಿದೆ. ಆದ್ದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಈ ವಿಷಯದಲ್ಲಿ ಗಮನ ಹರಿಸಬೇಕು ಎಂಬುದು ಜನರ ಅಭಿಪ್ರಾಯ.

Latest Posts

ಲೈಫ್‌ಸ್ಟೈಲ್