More

    ರಸ್ತೆಗೆ ‘ಪದ್ಮಶ್ರೀ ಹಾಜಬ್ಬ’ ಹೆಸರು, ಮಹಾನಗರ ಪಾಲಿಕೆ ಸಭೆಯಲ್ಲಿ ಕಾರ್ಯಸೂಚಿ ಮಂಡನೆ

    ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ಟೇಟ್‌ಬ್ಯಾಂಕ್ ಎದುರಿನ ವೃತ್ತದಿಂದ ರಾವ್ ಆ್ಯಂಡ್ ರಾವ್ ವೃತ್ತವರೆಗಿನ ರಸ್ತೆಗೆ ‘ಪದ್ಮಶ್ರೀ ಹರೇಕಳ ಹಾಜಬ್ಬ ರಸ್ತೆ’ ಎಂದು ನಾಮಕರಣ ಮಾಡುವ ಬಗ್ಗೆ ಗುರುವಾರ ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ಕಾರ್ಯಸೂಚಿ ಮಂಡಿಸಲಾಗಿದೆ. ಇದರ ಜತೆಗೆ ಬೋಳಾರ್ ವಾರ್ಡ್‌ನ ಮಾರ್ಗನ್‌ಗೇಟ್ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ 66ನ್ನು ಸಂಪರ್ಕಿಸುವ ರಸ್ತೆಗೆ ‘ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ರಸ್ತೆ’ ಎಂದು ನಾಮಕರಣ ಮಾಡಲೂ ಕಾರ್ಯಸೂಚಿ ಮಂಡಿಸಲಾಯಿತು. ಪ್ರಸ್ತಾವನೆಯನ್ನು ನಿಯಮ ಪ್ರಕಾರ ನಗರ ಯೋಜನೆ ಸ್ಥಾಯಿ ಸಮಿತಿ ನಿರ್ಣಯಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ.

    ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಂಪ್‌ವೆಲ್-ಪಡೀಲ್ ರಸ್ತೆ ಅಭಿವೃದ್ಧಿ ಕಾಮಗಾರಿ ಶೀಘ್ರ ಪ್ರಾರಂಭಿಸಲಾಗುವುದು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದರು. ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆದ್ದಾರಿಗಳನ್ನು ಸಂಪರ್ಕಿಸುವ 2.50 ಕಿ.ಮೀ. ದೂರದ ಪಂಪ್‌ವೆಲ್-ಪಡೀಲ್ ರಸ್ತೆಯನ್ನು 18 ಮೀ. ಅಗಲಗೊಳಿಸಲಾಗುವುದು ಎಂದರು. ಈ ರಸ್ತೆ ಬಗ್ಗೆ ಆಡಳಿತ ಪಕ್ಷದ ರೂಪಶ್ರೀ ಪೂಜಾರಿ, ಶೋಭಾ ಪೂಜಾರಿ, ಪ್ರತಿಪಕ್ಷದ ಪ್ರವೀಣ್‌ಚಂದ್ರ ಆಳ್ವ ಗಮನ ಸೆಳೆದರು. ಪಾಲಿಕೆಯ ಎಲ್ಲ 60 ವಾರ್ಡ್‌ಗಳ ಅಭಿವೃದ್ಧಿಗೆ ಹೆಚ್ಚುವರಿ 25 ಲಕ್ಷ ರೂ. ನೀಡಲು ನಿರ್ಧರಿಸಲಾಗಿದೆ. ಜನವರಿ ಅಂತ್ಯದೊಳಗೆ ಕ್ರಿಯಾಯೋಜನೆ ಸಲ್ಲಿಸದಿದ್ದರೆ ಅನುದಾನ ಬಿಡುಗಡೆ ಸಾಧ್ಯವಾಗುವುದಿಲ್ಲ ಎಂದು ಮೇಯರ್ ಸಭೆಗೆ ತಿಳಿಸಿದರು.

    ವಾರ್ಡ್ ಸಮಿತಿ ಕಾರ್ಯಾಗಾರ: ಮನಪಾ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ವಾರ್ಡ್ ಸಮಿತಿ ರಚನೆಗೆ ಮುಂದಾಗಿದೆ. ಸಮಿತಿ ಕಾರ್ಯಗತಗೊಳಿಸುವ ಮುನ್ನ ಕಾರ್ಯಾಗಾರ ನಡೆಸಲಾಗುವುದು. ಕಾರ್ಯಾಗಾರದಲ್ಲಿ ಕಾರ್ಪೊರೇಟರ್‌ಗಳು ಮತ್ತು ವಾರ್ಡ್ ಸದಸ್ಯರು ಭಾಗವಹಿಸಬೇಕು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದರು.

    ತೆರವು ಕಾರ್ಯಾಚರಣೆ ಮುಂದುವರಿಕೆ: ಅಕ್ರಮ ಗೂಡಂಗಡಿ ಹಾಗೂ ಫುಟ್‌ಪಾತ್ ವ್ಯಾಪಾರ ತೆರವುಗೊಳಿಸುವ ಕಾರ್ಯಾಚರಣೆಯನ್ನು ಪಾಲಿಕೆಯ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರು ಸ್ವಾಗತಿಸಿದರು. ಫುಟ್‌ಪಾತ್ ಒತ್ತುವರಿಯಿಂದ ಪಾದಚಾರಿಗಳ ಓಡಾಟಕ್ಕ್ಕೆ ಅಡ್ಡಿಯಾಗುತ್ತಿದೆ. ಕೆಲವು ಕಡೆ ಅಂಗಡಿಗಳ ಮಾಲೀಕರೇ ಎದುರಿನ ಫುಟ್‌ಪಾತ್‌ನಲ್ಲಿ ವ್ಯಾಪಾರಕ್ಕೆ ಅವಕಾಶ ನೀಡುತ್ತಿದ್ದಾರೆ. ಅಂಥವರ ವ್ಯಾಪಾರ ಪರವಾನಗಿ ಅಮಾನತುಗೊಳಿಸುವ ಕಠಿಣ ನಿರ್ಧಾರ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು. ಕಾರ್ಯಾಚರಣೆಗೆ ವಿರೋಧವಿಲ್ಲ. ಆದರೆ ತಳ್ಳುಗಾಡಿಯನ್ನೇ ತುಂಡು ಮಾಡುವುದು ಸರಿಯಲ್ಲ ಎಂದು ಪ್ರತಿಪಕ್ಷದ ಅಬ್ದುಲ್ ರವೂಫ್ ಮನವಿ ಮಾಡಿದರು. ಉಪಮೇಯರ್ ಸುಮಂಗಳಾ ರಾವ್, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಲೋಕೇಶ್ ಬೊಳ್ಳಾಜೆ, ಸಂದೀಪ್, ಶೋಭಾ ರಾಜೇಶ್, ಲೀಲಾವತಿ , ಆಯುಕ್ತ ಅಕ್ಷಿ ಶ್ರೀಧರ್ ಉಪಸ್ಥಿತರಿದ್ದರು.

    ಲೇಡೀಸ್ ಕ್ಲಬ್‌ಗೆ ಅವಮಾನ: ಚರ್ಚೆ ಸಂದರ್ಭ ಪ್ರತಿಪಕ್ಷದ ಎ.ಸಿ. ವಿನಯರಾಜ್ ಆಡಿದ ಕೆಲವು ಮಾತುಗಳಿಂದ ಆಡಳಿತ ಪಕ್ಷದ ಸದಸ್ಯರು ಕೆರಳಿದರು. ಆರೋಪ, ಪ್ರತ್ಯಾರೋಪ, ಮಾತಿನ ಜಟಾಪಟಿಗೆ ಕಲಾಪ ಸಾಕ್ಷಿಯಾಯಿತು. ಲೇಡೀಸ್ ಕ್ಲಬ್ ಆವರಣದ ಅಭಿವೃದ್ಧಿ ಕಾಮಗಾರಿ ಬಗ್ಗೆ ಪ್ರಸ್ತಾಪಿಸಿದ ಸಂದರ್ಭ ವಿನಯರಾಜ್, ಮಹಿಳೆಯರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದಾರೆ. ಅವರ ಮಾತು ಹಿಂಪಡೆಯಬೇಕು ಎಂದು ಆಡಳಿತ ಪಕ್ಷದ ಪೂರ್ಣಿಮಾ ಹಾಗೂ ಇತರ ಸದಸ್ಯರು ಆಗ್ರಹಿಸಿದರು. ಮೇಯರ್ ಮಧ್ಯಪ್ರವೇಶಿಸಿ, ನೇರವಾಗಿ ವಿಷಯ ಪ್ರಸ್ತಾಪಿಸುವಂತೆ ವಿನಯರಾಜ್‌ಗೆ ಸೂಚಿಸಿದರು. ಪಾಲಿಕೆಯಲ್ಲಿ ಇ-ಆಡಳಿತ ವ್ಯವಸ್ಥೆ ಸರಿಯಾಗಿ ಜಾರಿಯಾಗಿಲ್ಲ, ಇದರಿಂದ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ವಿನಯರಾಜ್ ಆರೋಪಿಸಿದಾಗ ದಾಖಲೆ ಸಹಿತ ಮಾತನಾಡಿ, ರಾಜಕೀಯ ಉದ್ದೇಶಕ್ಕೆ ಮಾತಾಡಬೇಡಿ ಎಂದು ಮುಖ್ಯ ಸಚೇತಕ ಸುಧೀರ್ ಶೆಟ್ಟಿ ತರಾಟೆಗೆ ತೆಗೆದುಕೊಂಡರು.

    ಜ.3ರಿಂದ ಕುಡಿಯುವ ನೀರು ವ್ಯತ್ಯಯ: ಕೆಲವು ದಿನಗಳಿಂದ ಕುಡಿಯುವ ನೀರು ಸರಬರಾಜು ವ್ಯತ್ಯಯವಾಗುತ್ತಿರುವ ಬಗ್ಗೆ ಸದಸ್ಯರು ಗಮನ ಸೆಳೆದರು. ಪ್ರತಿಕ್ರಿಯಿಸಿದ ಆಯುಕ್ತ ಅಕ್ಷಿ ಶ್ರೀಧರ್, ತುಂಬೆಯಲ್ಲಿ ಜಾಕ್‌ವೆಲ್ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಎರಡು ಹಂತದ ಕಾಮಗಾರಿ ಪೂರ್ಣವಾಗಿದ್ದು, ಸದ್ಯ ಕೆಲಸ ನಿಲ್ಲಿಸಲಾಗಿದೆ. ಜ.3ರಿಂದ ಜ.10ರವರೆಗೆ ಮತ್ತೆ ಕಾಮಗಾರಿ ನಡೆಯಲಿದೆ. ಆಗ ನೀರು ಸರಬರಾಜು ಕೊಂಚ ವ್ಯತ್ಯಯವಾಗಲಿದೆ. ಬಳಿಕ 5 ದಿನ ಭಾಗಶಃ ಶಟ್‌ಡೌನ್ ಮಾಡಬೇಕಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts