More

    ಭತ್ತ ಬೆಳೆಗಾರರಿಗೆ ಸಿಕ್ಕಿಲ್ಲ ಕರಾವಳಿ ಪ್ಯಾಕೇಜ್

    ಸಂದೀಪ್ ಸಾಲ್ಯಾನ್ ಬಂಟ್ವಾಳ
    ಕರಾವಳಿ ಜಿಲ್ಲೆಗಳಲ್ಲಿ ಭತ್ತದ ಬೆಳೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಘೋಷಿಸಿದ್ದ ಕರಾವಳಿ ಪ್ಯಾಕೇಜ್ ಈ ವರ್ಷ ರೈತರ ಕೈ ಸೇರಿಲ್ಲ. ಕರೊನಾ ಲಾಕ್‌ಡೌನ್‌ನಿಂದ ಸರ್ಕಾರದ ಬೊಕ್ಕಸ ಭಾಗಶಃ ಖಾಲಿಯಾಗಿರುವ ಕಾರಣ ಈ ಬಾರಿ ಹಣ ರೈತರ ಖಾತೆಗೆ ಜಮಾ ಆಗುವುದು ಸಂಶಯ.

    ಕಾರ್ಮಿಕರ ಸಮಸ್ಯೆ, ಅತಿವೃಷ್ಟಿ ಹಾಗೂ ಅನಾವೃಷ್ಟಿ, ರೋಗಬಾಧೆ ಮೊದಲಾದ ಕಾರಣಗಳಿಂದ ಕರಾವಳಿ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಭತ್ತ ಬೆಳೆಗಾರರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಭತ್ತ ಬೆಳೆಗಾರರನ್ನು ಪ್ರೋತ್ಸಾಹಿಸಲು ಸರ್ಕಾರ ಕರಾವಳಿ ಪ್ಯಾಕೇಜ್ ಘೋಷಣೆ ಮಾಡಿತ್ತು. ಯಂತ್ರ ಹಾಗೂ ಕಾರ್ಮಿಕರನ್ನು ಬಳಸಿ ಭತ್ತ ಬೆಳೆಯುವ ರೈತರ ಖಾತೆಗೆ ಪ್ರತಿ ಹೆಕ್ಟೇರ್‌ಗೆ 7,500 ರೂ. ನೇರ ಜಮಾ ಮಾಡಲು ತೀರ್ಮಾನಿಸಲಾಗಿತ್ತು.
    ಕಳೆದ ವರ್ಷ ಅವಳಿ ಜಿಲ್ಲೆಯ ಬಹುತೇಕ ಭತ್ತ ಬೆಳೆಗಾರರು ಕರಾವಳಿ ಪ್ಯಾಕೇಜ್‌ನಿಂದ ಪ್ರಯೋಜನ ಪಡೆದುಕೊಂಡಿದ್ದರು. ಆರ್ಥಿಕ ಸಂಕಷ್ಟದ ಈ ಕಾಲದಲ್ಲಿ ಸರ್ಕಾರದ ಪ್ರೋತ್ಸಾಹ ಸಕಾಲದಲ್ಲಿ ಸಿಕ್ಕಿದ್ದರೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ಭತ್ತ ಬೆಳೆಯುವ ರೈತರು.

    ಯುವ ಕೃಷಿಕರಿಗೆ ಸಿಗಲಿ ಪ್ರೋತ್ಸಾಹ
    ಭತ್ತ ಬೆಳೆಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ನೀಡುವ ಪ್ರೋತ್ಸಾಹ ಧನವನ್ನು ಈ ಬಾರಿಯೂ ನೀಡಿ ರೈತರ ಹಿತ ಕಾಯಬೇಕು ಎಂದು ರೈತ ಸಂಘ ಹಸಿರು ಸೇನೆ ಆಗ್ರಹಿಸಿದೆ. ಕರೊನಾದಿಂದ ಹೊರರಾಜ್ಯ, ಹೊರದೇಶಗಳಲ್ಲ್ಲಿದ್ದ ಅನೇಕ ಯುವಕರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಈ ಪೈಕಿ ಹೆಚ್ಚಿನ ನಿರುದ್ಯೋಗಿ ಯುವಕರು ಬ್ಯಾಂಕ್ ಸಾಲ ಮಾಡಿ ಹಡಿಲು ಬಿದ್ದ ಗದ್ದೆಗಳಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಇಂಥ ಯುವ ಕೃಷಿಕರಿಗೆ ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕು ಎಂದು ರೈತಸಂಘ ಹೇಳಿದೆ.

    ಯುವ ಕೃಷಿಕರನ್ನು ಪ್ರೊತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಈ ಹಿಂದೆ ಘೋಷಿಸಿದ ಕರಾವಳಿ ಪ್ಯಾಕೇಜ್ ಅನ್ನು ಕೂಡಲೇ ಬಿಡುಗಡೆ ಮಾಡಬೇಕು. ಇದರಿಂದ ಭತ್ತದ ಬೆಳೆ ಉಳಿಯಲಿದೆ. ಬೆಳೆಗಾರರಿಗೂ ಉತ್ತೇಜನ ಸಿಗಲಿದೆ. ಕರಾವಳಿ ಪ್ಯಾಕೇಜ್ ಜತೆ ಒಂದು ಕ್ವಿಂಟಾಲ್‌ಗೆ 2500 ರೂಪಾಯಿ ಬೆಂಬಲ ಬೆಲೆ ಸಿಗಬೇಕು.
    ಮನೋಹರ ಶೆಟ್ಟಿ ನಡಿಕಂಬಳಗುತ್ತು, ರಾಜ್ಯ ಕಾರ್ಯದರ್ಶಿ ರೈತಸಂಘ ಹಸಿರು ಸೇನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts