More

    ಕಗ್ಗತ್ತಲೆಯಲ್ಲಿ ಖಾನಾಪುರದ 50ಕ್ಕೂ ಅಧಿಕ ಗ್ರಾಮಗಳು

    ಖಾನಾಪುರ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಮಳೆ ಬಹುತೇಕ ಶಾಂತಗೊಂಡಿದೆ. ಆದರೂ ಮಲಪ್ರಭಾ, ಮಹದಾಯಿ ಮತ್ತು ಪಾಂಡರಿ ನದಿಗಳಲ್ಲಿ ನೀರಿನ ಒಳ ಹರಿವು ಎಂದಿನಂತೆ ಮುಂದುವರಿದಿದೆ. ವಿದ್ಯುತ್ ಕಂಬಗಳಿಗೆ ಹಾನಿಯುಂಟಾದ ಕಾರಣ ತಾಲೂಕಿನ 50ಕ್ಕೂ ಅಧಿಕ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದು, ಗ್ರಾಮಗಳು ಕಗ್ಗತ್ತಲಲ್ಲಿ ಮುಳುಗಿವೆ. ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಲಭ್ಯವಾದ ಮಾಹಿತಿ ಪ್ರಕಾರ ತಾಲೂಕಿನ ಗರ್ಲಗುಂಜಿ, ಹಲಕರ್ಣಿ ಮತ್ತು ಮುಡೇವಾಡಿ ಗ್ರಾಮಗಳಲ್ಲಿ ತಲಾ ಒಂದೊಂದು ಮನೆಗಳ ಗೋಡೆಗಳು ಧರೆಗುರುಳಿವೆ. ಜಲಾವೃತಗೊಂಡಿದ್ದ ಬಹುತೇಕ ಸೇತುವೆಗಳು ಶುಕ್ರವಾರ ಬೆಳಗ್ಗೆಯಿಂದ ವಾಹನ ಹಾಗೂ ಜನ ಸಂಚಾರಕ್ಕೆ ಮುಕ್ತವಾಗಿವೆ.

    ಅಬ್ಬರ ನಿಲ್ಲಿಸಿದ ವರುಣ: ತಾಲೂಕಿನ ಅಸೋಗಾ, ಶಿರೋಲಿ, ಕಣಕುಂಬಿ, ಜಾಂಬೋಟಿ, ನಾಗರಗಾಳಿ, ಹೆಮ್ಮಡಗಾ ಮತ್ತು ಲೋಂಡಾ ಭಾಗದಲ್ಲಿ ಶುಕ್ರವಾರ ಬೆಳಗ್ಗೆ ಮತ್ತು ಮಧ್ಯಾಹ್ನ ಕೆಲಕಾಲ ತುಂತುರು ಮಳೆ ಸುರಿದಿದೆ. ಉಳಿದಂತೆ ದಿನವಿಡೀ ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣವಿತ್ತು.

    ಸೇತುವೆಗಳಿಗೆ ಹಾನಿ: ಮಳೆಯಿಂದಾಗಿ ತಾಲೂಕಿನ ಮೂರು ಸೇತುವೆಗಳು ಜಖಂಗೊಂಡಿವೆ. ತಾಲೂಕಿನ ತಿವೋಲಿ ಗ್ರಾಮದ ಬಳಿಯ ಸೇತುವೆ ಸತತವಾಗಿ ನಾಲ್ಕನೇ ವರ್ಷವೂ ಅಲಾತ್ರಿ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಪ್ರತಿವರ್ಷ ನೀರಾವರಿ ಇಲಾಖೆ ಸೇತುವೆ ದುರಸ್ತಿ ಮಾಡುತ್ತಿದ್ದು, ಕಳಪೆ ಕಾಮಗಾರಿಯಿಂದಾಗಿ ಸೇತುವೆ ಮತ್ತೆ ಮಳೆಗಾಲದಲ್ಲಿ ಕೊಚ್ಚಿಕೊಂಡು ಹೋಗುತ್ತಿದೆ. ಇದರಿಂದಾಗಿ ತಿವೋಲಿ ಗ್ರಾಮ ಮುಖ್ಯ ವಾಹಿನಿಯಿಂದ ಸಂಪರ್ಕ ಕಳೆದುಕೊಂಡಿದ್ದು, ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಮಲಪ್ರಭಾ ನದಿಯ ಚಾಪಗಾಂವ-ಯಡೋಗಾ ಮಾರ್ಗ ಮಧ್ಯದ ಮತ್ತು ಪಾರಿಶ್ವಾಡ-ಇಟಗಿ ಮಾರ್ಗ ಮಧ್ಯದ ಸೇತುವೆಗಳಿಗೂ ಮಳೆಯಿಂದಾಗಿ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts