More

    ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಮುಂದಾದ ವಿಪಕ್ಷಗಳ ಇಂಡಿಯಾ ಒಕ್ಕೂಟ

    ನವದೆಹಲಿ: ಮಣಿಪುರ ಹಿಂಸಾಚಾರ ಮೇಲಿನ ಚರ್ಚೆಯಿಂದ ಸಂಸತ್ತಿನ ಎರಡೂ ಸದನಗಳಲ್ಲೂ ಕೋಲಾಹಲ ಎದ್ದಿದೆ. ಮಣಿಪುರ ವಿಚಾರವಾಗಿ ಸದನದಲ್ಲಿ ಮಾತನಾಡುವಂತೆ ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿ ವಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿವೆ. ಆದರೆ, ಸದನದಲ್ಲಿ ಬೇರೆ ವಿಚಾರಗಳು ಚರ್ಚೆಯಾಗದೇ ಇರುವುದರಿಂದ ಚರ್ಚೆಗೆ ಬೂಸ್ಟ್​ ನೀಡಲು ಸರ್ಕಾರ ಪ್ಲ್ಯಾನ್​ ಮಾಡುತ್ತಿರುವ ಸಂದರ್ಭದಲ್ಲೇ ಲೋಕಸಭೆಯಲ್ಲಿ ಮಣಿಪುರದ ವಿಚಾರವಾಗಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ವಿಪಕ್ಷಗಳ ಇಂಡಿಯಾ ಒಕ್ಕೂಟ ಇಂದು ನಿರ್ಧಾರ ಮಾಡಿದೆ.

    ಎರಡೂ ಸದನದಲ್ಲೂ ಗದ್ದಲ ಏರ್ಪಟ್ಟಿದ್ದರಿಂದ 12 ಗಂಟೆಯವರೆಗೆ ರಾಜ್ಯಸಭೆಯನ್ನು ಮತ್ತು ಮಧ್ಯಾಹ್ನ 2 ಗಂಟೆಯವರೆಗೆ ಲೋಕಸಭೆಯ ಕಲಾಪವನ್ನು ಮುಂದೂಡಲಾಗಿದೆ. ಸದನದಲ್ಲಿ ಪ್ರಧಾನಿ ಮೋದಿ ಮಣಿಪುರ ಘಟನೆಯ ಬಗ್ಗೆ ಮಾತನಾಡಬೇಕು ಎಂಬ ಒತ್ತಾಯದಿಂದ ವಿಪಕ್ಷಗಳು ಹಿಂದೆ ಸರಿದಿದ್ದಲ್ಲಿ, ರಾಜ್ಯಸಭೆಯಲ್ಲಿ ಇಂದು ರೂಲ್​ ನಂಬರ್​ 267ರ ಅಡಿಯಲ್ಲಿ ಮಣಿಪುರ ವಿಚಾರ ಚರ್ಚೆಯಾಗಲಿದೆ. ಪ್ರಧಾನಿ ಮೋದಿ ಮಾತನಾಡದಿದ್ದಲ್ಲಿ ಮತ್ತೆ ಸದನದಲ್ಲಿ ಗದ್ದಲ ಉಂಟಾಗುವ ಸಾಧ್ಯತೆ ಇದೆ.

    ಇನ್ನು ಮಣಿಪುರ ವಿಷಯದ ಬಗ್ಗೆ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕು ಎಂಬ ತನ್ನ ಬೇಡಿಕೆಯಿಂದ ವಿಪಕ್ಷಗಳು ಹಿಂದೆ ಸರಿಯುವುದನ್ನು ಸರ್ಕಾರ ನಿರೀಕ್ಷೆ ಮಾಡುತ್ತಿಲ್ಲ. ಬದಲಾಗಿ ಸರ್ಕಾರ ತನ್ನ ಶಾಸಕಾಂಗ ಕಾರ್ಯವನ್ನು ಇತ್ಯರ್ಥಗೊಳಿಸಲು ವಿಪಕ್ಷಗಳನ್ನು ಒತ್ತಾಯಿಸುತ್ತಿದೆ. ಗದ್ದಲದ ನಡುವೆಯೂ ಬಿಲ್​ ಪಾಸ್​ ಮಾಡಬೇಕಾದ ಅನಿವಾರ್ಯತೆ ಎದುರಾದರೆ ಅದನ್ನು ಮಾಡುತ್ತೇವೆ ಎಂದು ಸರ್ಕಾರ ಹೇಳಿದೆ ಎಂದು ಮೂಲಗಳು ತಿಳಿಸಿವೆ

    ಇಂದು ಬೆಳಗ್ಗೆ ವಿಪಕ್ಷ ನಾಯಕರು ರಾಜ್ಯಸಭಾ ಚೇಂಬರ್​ನಲ್ಲಿ ಸಭೆ ನಡೆಸಿದ್ದು, ಎರಡೂ ಸದನಗಳಲ್ಲೂ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಒತ್ತಾಯಿಸಿ ತಮ್ಮ ಬೇಡಿಕೆಯನ್ನು ಮುಂದುವರಿಸುವುದಾಗಿ ನಿರ್ಧಾರ ಮಾಡಿವೆ. ಅಲ್ಲದೆ, ಮಣಿಪುರ ವಿಚಾರದಲ್ಲಿ ಚರ್ಚೆ ಮಾಡದೇ ಸುಮ್ಮನಿರುವ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ವಿಪಕ್ಷಗಳ ಇಂಡಿಯಾ ಒಕ್ಕೂಟ ನಿರ್ಧಾರ ಮಾಡಿವೆ.

    ಮುಂಗಾರು ಅಧಿವೇಶನಕ್ಕೆ ಮೂರನೇ ದಿನವೂ ಅಡ್ಡಿಪಡಿಸಿರುವುದನ್ನು ವಿರೋಧಿಸಿ ವಿಪಕ್ಷಗಳ ಸಂಸದರ ಗುಂಪು ನಿನ್ನೆ ರಾತ್ರಿಯಿಂದ ಸಂಸತ್ ಭವನದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಸರ್ಕಾರದ ವಿರುದ್ಧ ಧರಣಿ ಕುಳಿತಿದ್ದಾರೆ. ಮಣಿಪುರ ಬಿಕ್ಕಟ್ಟಿನ ಕುರಿತು ಉಭಯ ಸದನಗಳಲ್ಲಿ ಪ್ರಧಾನಿ ಮೋದಿಯವರು “ಸಮಗ್ರ ಹೇಳಿಕೆ” ನೀಡಬೇಕೆಂದು ವಿಪಕ್ಷಗಳು ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಮೂರನೇ ದಿನವೂ ಸಂಸತ್ತಿನ ಕಲಾಪಕ್ಕೆ ಅಡ್ಡಿಯಾಗಿದೆ.

    ಏನಿದು ಮಣಿಪುರ ಘಟನೆ?

    ಜು.19ರ ರಾತ್ರಿಯಿಂದ ಟ್ವಿಟರ್​ನಲ್ಲಿ ವಿಡಿಯೋವೊಂದು ವೈರಲ್​ ಆಯಿತು. ಅದರಲ್ಲಿ ಮಹಿಳೆಯರಿಬ್ಬರನ್ನು ಪುರುಷರ ಗುಂಪೊಂದು ಬೆತ್ತಲೆಯಾಗಿ ಮೆರವಣಿಗೆ ಮಾಡಿರುವ ದಶ್ರವಿತ್ತು. ಅಲ್ಲದೆ, ಮಹಿಳೆಯರ ಮೇಲೆ ಗ್ಯಾಂಗ್​ರೇಪ್​ ಸಹ ನಡೆದಿದೆ ಎನ್ನಲಾಗಿದೆ. ಈ ಘಟನೆ ಮೇ 4ರಂದು ಮಣಿಪುರ ರಾಜಧಾನಿ ಇಂಫಾಲ್​ನಿಂದ 35 ಕಿ.ಮೀ. ದೂರದಲ್ಲಿರುವ ಕೊಂಗ್​ಪೊಕ್ಪಿ ಜಿಲ್ಲೆಯಲ್ಲಿ ನಡೆದಿದ್ದು, ಜುಲೈ 20ರಂದು ಬೆಳಕಿಗೆ ಬಂದಿದೆ.

    ಪರಿಶಿಷ್ಟ ಪಂಗಡಗಳ (ST) ಸ್ಥಾನಮಾನಕ್ಕಾಗಿ ಮೈತೀಸ್​ ಸಮುದಾಯ ಇಟ್ಟಿರುವ ಬೇಡಿಕೆಯ ಕುರಿತು ಮಣಿಪುರದ ಮೈತೀಸ್​ ಮತ್ತು ಕುಕಿ ಬುಡಕಟ್ಟುಗಳ ನಡುವೆ ಘರ್ಷಣೆಗಳು ಉಂಟಾಗಿದೆ. ಕಳೆದೆರೆಡು ತಿಂಗಳಿಂದಲೂ ಈ ಘರ್ಷಣೆ ಮುಂದುವರಿದೇ ಇದೆ. ಇದರ ನಡುವೆ ಈ ಭಯಾನಕ ಕೃತ್ಯ ನಡೆದಿದೆ. ಮಣಿಪುರದ ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡದಂತೆ ಇದೆ. ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿರುವುದನ್ನು ಪ್ರಧಾನಿ ಮೋದಿ ಸಹ ಖಂಡಿಸಿದ್ದಾರೆ. ಮುಂಗಾರು ಅಧಿವೇಶನದಲ್ಲೂ ಈ ಘಟನೆ ಭಾರೀ ಕೋಲಾಹಲವನ್ನೇ ಎಬ್ಬಿಸಿದೆ. ಸುಪ್ರೀಂಕೋರ್ಟ್​ ಸಹ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

    ಇನ್ನು ಮಣಿಪುರದ ಹಿಂಸಾಚಾರದಲ್ಲಿ ಈವರೆಗೂ 150 ಮಂದಿ ಅಸುನೀಗಿದ್ದು, ಸಾವಿರಾರು ಮಂದಿಯನ್ನು ಸ್ಥಳಾಂತರ ಮಾಡಿದ್ದು, ಪರಿಹಾರ ಶಿಬಿರಗಳಲ್ಲಿ ಆಶ್ರಯವನ್ನು ಪಡೆದಿದ್ದಾರೆ. (ಏಜೆನ್ಸೀಸ್​)

    ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ: ದೇಶವೇ ತಲೆತಗ್ಗಿಸುವಂತಹ ಘಟನೆ ಎಂದ ಪ್ರಧಾನಿ ಮೋದಿ

    ಮಣಿಪುರದಲ್ಲಿ ಬೆತ್ತಲೆ ಮೆರವಣಿಗೆ ಪ್ರಕರಣ: ಪ್ರಮುಖ ಆರೋಪಿಯ ಮನೆಗೆ ಬೆಂಕಿಯಿಟ್ಟ ಮಹಿಳೆಯರು

    ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ: ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts