More

    ಎರಡು ಹಂತ ಹಲವು ಸೂತ್ರ: ವಾರದೊಳಗೆ ಕೋರ್ ಟೀಮ್ ಮಾತ್ರ ಸಂಪುಟ ಸೇರ್ಪಡೆ

    ಬೆಂಗಳೂರು: ಮಂತ್ರಿಸ್ಥಾನದ ಆಕಾಂಕ್ಷಿಗಳ ತವಕ, ತಳಮಳ, ಲಾಬಿ ತಂತ್ರಗಳ ನಡುವೆಯೇ ‘ಸಂಕಷ್ಟ ಪರಿಹಾರ’ ಸೂತ್ರ ರೂಪಿಸಿರುವ ಬಿಜೆಪಿ ವರಿಷ್ಠರು ಇದರ ಭಾಗವಾಗಿ ಎರಡು ಹಂತದಲ್ಲಿ ಸಚಿವ ಸಂಪುಟ ವಿಸ್ತರಿಸುವ ಚಿಂತನೆ ನಡೆಸಿದ್ದಾರೆ. ಕರೊನಾ 3ನೇ ಅಲೆ ಪ್ರವೇಶ ಸಾಧ್ಯತೆ, ಅತಿವೃಷ್ಟಿ ಹಾಗೂ ಪ್ರವಾಹಬಾಧಿತ ಪ್ರದೇಶದಲ್ಲಿ ಯುದ್ಧೋಪಾದಿ ಪರಿಹಾರ ಕಾರ್ಯ ನಿರ್ವಹಿಸುವ ತಂಡವನ್ನು ತುರ್ತಾಗಿ ಸಜ್ಜುಗೊಳಿಸಲು ದೆಹಲಿ ನಾಯಕರು ಉತ್ಸುಕರಾಗಿದ್ದಾರೆ.

    ಸಂಘ-ಪರಿವಾರ, ಪಕ್ಷದೊಳಗಿನ ತಾಕಲಾಟ ಬದಿಗಿಟ್ಟು, ಪ್ರಾಕೃತಿಕ, ಸಾಂಕ್ರಾಮಿಕ ಸಂಕಷ್ಟ ಬಗೆಹರಿಸಲು ಮೊದಲ ಆದ್ಯತೆ ನೀಡಿದ್ದು, ಎರಡು ಹಂತದ ವಿಸ್ತರಣೆಯ ಚಿಂತನೆಗೆ ಇದೇ ಕಾರಣ ಎಂದು ಮೂಲಗಳು ತಿಳಿಸಿವೆ. ವಿಳಂಬವಾದಷ್ಟೂ ನಾಯಕತ್ವ ಬದಲಾದ ಮೇಲೂ ಪರಿಸ್ಥಿತಿ ಬದಲಾಗಲಿಲ್ಲವೆಂಬ ತಪು್ಪ ಸಂದೇಶ ಹೋಗಲಿದೆ. ಹೀಗಾಗಿ ಏನಾದರೂ ಮಾಡಿ ಬೇಗ ಮಾಡಿ ಎಂಬ ಹಿರಿಯ ನಾಯಕರ ಸಲಹೆಯನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ.

    ಅಧಿವೇಶನದ ಬಳಿಕ 2ನೇ ಹಂತ?: ತುರ್ತು ಅಗತ್ಯ ಕೆಲಸಗಳು, ಚುರುಕಿನ ಆಡಳಿತಕ್ಕೆ 12-15 ಶಾಸಕರನ್ನು ಸಂಪುಟಕ್ಕೆ ಸೇರಿಸುವುದು, ಸಂಕಷ್ಟದ ಪರಿಸ್ಥಿತಿ ಪೂರ್ಣ ಹತೋಟಿ, ವಿಧಾನ ಮಂಡಲ ಅಧಿವೇಶನದ ಬಳಿಕ ಉಳಿದ ಸ್ಥಾನಗಳ ಭರ್ತಿ ಸಾಧ್ಯತೆಗಳಿವೆ. ಅಷ್ಟರಲ್ಲಿ ಬಸವರಾಜ ಬೊಮ್ಮಾಯಿ ‘ಪರೀಕ್ಷಾರ್ಥ ಅವಧಿ’ ಮುಗಿದು, ನಿರೀಕ್ಷೆಗೆ ತಕ್ಕಂತೆ ಅಧಿಕಾರ ಚಲಾಯಿಸುವುದು ನಿಚ್ಚಳವಾಗಲಿದೆ. ಅಲ್ಲದೆ, ಆಡಳಿತಕ್ಕೆ ತಮ್ಮದೇ ಆದ ಛಾಪು ಮೂಡಿಸುವ ವಿಶ್ವಾಸವೂ ಇಮ್ಮಡಿಸುತ್ತದೆ. ಬಿಎಸ್​ವೈ ನೆರಳು, ಜನತಾ ಪರಿವಾರ ನೆರಳಿನಿಂದಾಚೆ ಬಂದಿರುವುದು, ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿಗೆ ನೆರವಾಗಿರುವುದು ವೇದ್ಯವಾಗಲಿದೆ. ಅಲ್ಲದೆ ‘ಚುನಾವಣಾ ಸಂಪುಟ’ ಸಿದ್ಧಪಡಿಸುವುದಕ್ಕೂ ಕಾಲ ಪ್ರಶಸ್ತವಾಗಲಿದೆ ಎಂಬ ಲೆಕ್ಕಾಚಾರವಿದೆ. ದಿನೇ ದಿನೆ ಹೆಚ್ಚುತ್ತಿರುವ ಆಕಾಂಕ್ಷಿಗಳನ್ನು ಸಮಾಧಾನಪಡಿಸಲು ಇದರಿಂದ ನೆರವಾಗಲಿದೆ. ಇವು, ವರಿಷ್ಠರ ಯೋಚನೆಯೇ ಹೊರತು ನಿರ್ಧಾರಗಳಲ್ಲ. ಅಂತಿಮ ಹಂತದವರೆಗೆ ಗೌಪ್ಯತೆ, ಅಚ್ಚರಿಯ ನಡೆ ಇಡುವಲ್ಲಿ ಸಿದ್ಧಹಸ್ತರಾದ ಕಾರಣ ನಿಖರವಾಗಿ ಹೇಳಲಾಗದೆಂದು ಮೂಲಗಳು ಸ್ಪಷ್ಟಪಡಿಸಿವೆ.

    ಮಾತಿನ ಚಕಮಕಿ ವೈರಲ್: ನೂತನ ಸಿಎಂ ಬೊಮ್ಮಾಯಿ ಅವರ ಜತೆಗೆ ನಿಕಟತೆ, ಒಡನಾಟ ವಿಚಾರವಾಗಿ ಮಾಜಿ ಸಚಿವರಾದ ವಿ. ಸೋಮಣ್ಣ ಹಾಗೂ ಆರ್.ಅಶೋಕ್ ಮಧ್ಯೆ ನಡೆಯಿತೆನ್ನಲಾದ ಮಾತಿನ ಚಕಮಕಿ ರಾಜಕೀಯ ಅಂಗಳದಲ್ಲಿ ವೈರಲ್ ಆಗಿದೆ. ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಕೆಲವು ದಿನಗಳ ಹಿಂದೆ ಇವರಿಬ್ಬರು ಏಕವಚನದಲ್ಲಿ ಬೈಯ್ದಾಡಿಕೊಂಡಿದ್ದು, ಬಿಎಸ್​ವೈಗೆ ಹೇಳಿದಂತೆ ಬೊಮ್ಮಾಯಿಗೂ ಚಾಡಿ ಹೇಳಬೇಡವೆಂದು ಸೋಮಣ್ಣ ಹೇಳಿದ್ದೇ ವಾಕ್ಸಮರಕ್ಕೆ ಕಾರಣವಾಯಿತು ಎಂದು ತಿಳಿದಿದೆ.

    ನಾಲ್ಕು ಪಟ್ಟಿಗಳ ಸಮೀಕರಣ: ದೆಹಲಿ ನಾಯಕರು, ಸಂಘ-ಪರಿವಾರ, ಬೊಮ್ಮಾಯಿ ಹಾಗೂ ಯಡಿಯೂರಪ್ಪ ಲೆಕ್ಕವೆಂಬಂತೆ ಒಟ್ಟು ನಾಲ್ಕು ಪಟ್ಟಿಗಳನ್ನು ಸಮೀಕರಿಸಿ, ಯುವಸ್ಪರ್ಶ ನೀಡುವುದು ವರಿಷ್ಠರ ಮುಂದಿರುವ ಸವಾಲು. ರಾಷ್ಟ್ರ ರಾಜಕಾರಣ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೂಡಿರುವ ತಂತ್ರಗಾರಿಕೆಯ ಸಾಫಲ್ಯದ ದೃಷ್ಟಿಯಿಂದ ವಲಸಿಗರನ್ನು ಪೂರ್ತಿ ಕೈಬಿಡುವಂತಿಲ್ಲ. ಬಿಎಸ್​ವೈ ಸಂಪುಟದಲ್ಲಿದ್ದ ಎಲ್ಲರನ್ನು ಮುಂದುವರಿಸಿದರೆ ಪ್ರಾದೇಶಿಕ, ಜಿಲ್ಲೆ, ಜಾತಿ-ವರ್ಗಗಳ ಅಸಮತೋಲನ ನಿವಾರಣೆಯ ಉದ್ದೇಶ ಈಡೇರದು. ಪ್ರಭಾವಿಗಳ ಒತ್ತಡ, ಒತ್ತಾಸೆ, ಸಂಘದ ಒಲವು-ನಿಲುವು ಇತ್ಯಾದಿ ಪ್ರಸ್ತಾವನೆಗಳಿಗೆ ವರಿಷ್ಠರು ಪರಿಹಾರ ಕಂಡುಕೊಳ್ಳುವುದು ಬಾಕಿಯಿದೆ ಎಂದು ಮೂಲಗಳು ತಿಳಿಸಿವೆ.

    ಸಂಘ ನಿಷ್ಠ ಶಾಸಕರ ಭೇಟಿ ಕುತೂಹಲ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಶುಕ್ರವಾರ ರಾತ್ರಿ ಅವರ ನಿವಾಸದಲ್ಲೇ ಸಂಘ ನಿಷ್ಠ ಶಾಸಕರು ಭೇಟಿಯಾಗಿ ರ್ಚಚಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ನಾಯಕತ್ವ ಬದಲಾವಣೆ ಪ್ರಕ್ರಿಯೆ, ಬೊಮ್ಮಾಯಿ ಆಯ್ಕೆ, ಸಂಘ-ಪರಿವಾರದ ಸಲಹೆ ಬದಿಗಿಟ್ಟ ವರಿಷ್ಠರ ನಡೆ, ಸಂಭಾವ್ಯ ಸಂಪುಟ ವಿಸ್ತರಣೆಯಲ್ಲಿ ಸಿಗಬಹುದಾದ ಪ್ರಾಶಸ್ಱದ ಬಗ್ಗೆ ರ್ಚಚಿಸಿದರು ಎಂದು ಮೂಲಗಳು ತಿಳಿಸಿವೆ. ಶಾಸಕರು, ಗಣ್ಯರು, ಸಾರ್ವಜನಿಕರು ತಮ್ಮ ನಿವಾಸಕ್ಕೆ ಭೇಟಿ ನೀಡುವುದು ಹೊಸದೇನಲ್ಲ. ಕೆಲ ಶಾಸಕರು ಶುಕ್ರವಾರ ತಮ್ಮನ್ನು ಭೇಟಿಯಾಗಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಕಾಗೇರಿ ಪ್ರತಿಕ್ರಿಯಿಸಿದ್ದಾರೆ.

    ಸೋಮವಾರ ದೆಹಲಿಗೆ ಬುಲಾವ್?: ಸಂಪುಟ ವಿಸ್ತರಣೆ ಕುರಿತಂತೆ ರ್ಚಚಿಸಲು ಸೋಮವಾರ ದೆಹಲಿಗೆ ಬರುವಂತೆ ವರಿಷ್ಠರು ಸೂಚನೆ ನೀಡಬಹುದೆಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ‘ಸಂಪುಟ ವಿಸ್ತರಣೆಯಲ್ಲಿ ವಿಳಂಬವಾಗದು. ನಮ್ಮದು ರಾಷ್ಟ್ರೀಯ ಪಕ್ಷವಾದ್ದರಿಂದ ಸಲಹೆ-ಸೂಚನೆ ಪಡೆದು ಮುಂದುವರಿಯಬೇಕಾಗುತ್ತದೆ’ ಎಂದರು. ಸಚಿವ ಪದವಿಗಾಗಿ ಯಾರೂ ಲಾಬಿ ಮಾಡಿಲ್ಲ, ತಡೆಯಾಜ್ಞೆ ತಂದವರಿಗೆ ಮಂತ್ರಿ ಪದವಿಯಿಲ್ಲ, ಸಂಘ-ಪರಿವಾರ ಒತ್ತಡ ಹೇರಿದೆ ಎಂಬುದಾಗಿ ಮಾಧ್ಯಮಗಳಲ್ಲಿ ಬಂದಿರುವುದನ್ನು ಗಮನಿಸಿದ್ದೇನೆ ಅಷ್ಟೇ. ಮಾಜಿ ಸಚಿವರಾದ ವಿ.ಸೋಮಣ್ಣ ಮತ್ತು ಆರ್.ಅಶೋಕ್ ಕಿತ್ತಾಡಿಕೊಂಡಿದ್ದಾರೆ ಎನ್ನುವುದೆಲ್ಲ ಸುಳ್ಳು ಎಂದು ಸ್ಪಷ್ಟಪಡಿಸಿದರು.

    ಸಿಂಹಪಾಲಿಗೆ ಸಂಘದ ಪಟ್ಟು: ಜನತಾ ಪರಿವಾರ ಮೂಲದವರನ್ನು ಸಿಎಂ ಮಾಡಲಾಗಿದೆ ಎಂಬ ಅಸಮಾಧಾನ, ಅಪನಂಬಿಕೆ ಹೋಗಲಾಡಿಸುವುದಕ್ಕೆ ಸಿಂಹಪಾಲು ಸ್ಥಾನಗಳನ್ನು ಸಂಘ-ಪರಿವಾರದ ಶಾಸಕರಿಗೆ ಮೀಸಲಿಡಲು ‘ಸಂಘ’ ಬಿಗಿಪಟ್ಟು ಹಿಡಿದಿರುವುದಾಗಿ ಮೂಲಗಳು ಹೇಳಿವೆ. ಪದೇ ಪದೆ ಅಧಿಕಾರ ಅನುಭವಿಸಿದವರು, ಹಿರಿಯರನ್ನು ಕೈಬಿಟ್ಟು ಅವಕಾಶ ವಂಚಿತರಿಗೆ ಮಣೆ ಹಾಕಿದರೆ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚುತ್ತದೆ. ಸ್ವಚ್ಛ, ದಕ್ಷ, ಹೊಸತನವನ್ನು ನಿರೀಕ್ಷಿಸುತ್ತಿರುವ ಜನರಿಗೂ ಪಕ್ಷದ ನಿಲುವು ಸ್ಪಷ್ಟಪಡಿಸಿದಂತಾಗುತ್ತದೆ. ಸಂಘ-ಪರಿವಾರದಿಂದ ಹಿಡಿದು ಪಕ್ಷದ ಸಂಘಟನೆಗೆ ದುಡಿದವರಿಗೆ ಪ್ರಾಶಸ್ಱ ನೀಡಬೇಕು. ಇದು, ಆಡಳಿತದ ಮೇಲೆ ಹಿಡಿತ ಸಾಧಿಸಲು, ಪಕ್ಷದ ತತ್ವ-ಸಿದ್ಧಾಂತ ಪ್ರಣೀತ ನೀತಿ-ಕಾರ್ಯಕ್ರಮಗಳ ಜಾರಿಗೆ ನೆರವಾಗುತ್ತದೆ ಎಂದು ‘ಸಂಘ’ ಸಮಜಾಯಿಷಿ ನೀಡುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಯಡಿಯೂರಪ್ಪ ನಿಲುವು ಸ್ಪಷ್ಟ: ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ‘ತ್ಯಾಗಿ’ಗಳನ್ನು ಯಥಾರೀತಿ ಮುಂದುವರಿಸಿ, ಹೊಸದಾಗಿ ಮುನಿರತ್ನ ಅವರನ್ನು ಸೇರಿಸಿಕೊಳ್ಳಬೇಕು ಎಂಬ ತಮ್ಮ ನಿಲುವನ್ನು ಬಿಎಸ್​ವೈ ಸ್ಪಷ್ಟಪಡಿಸಿದ್ದಾರೆ. ಪಕ್ಷದ ಮೇಲಿನ ವಿಶ್ವಾಸ ಉಳಿಸಿಕೊಂಡು, ಅಡ್ಡ ಪರಿಣಾಮ ಉಂಟಾಗುವುದನ್ನು ತಪ್ಪಿಸಲು ವಲಸಿಗರಿಗೆ ಮಣೆ ಹಾಕುವುದು ಅನಿವಾರ್ಯ ಎಂಬ ಸಂದೇಶವನ್ನು ವರಿಷ್ಠರಿಗೆ ತಲುಪಿಸಿದ್ದಾರೆಂದು ಮೂಲಗಳು ತಿಳಿಸಿವೆ.

    ರಾಜ್ಯದಲ್ಲಿ ಇನ್ನೂ ಎರಡು ವಾರ ನೈಟ್​ ಕರ್ಫ್ಯೂ; ಕರೊನಾ ಆತಂಕ ಹೆಚ್ಚಳ, ಮತ್ತಷ್ಟು ಕಟ್ಟುನಿಟ್ಟು…

    ‘ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ..’: ಮೋಹನಕುಮಾರಿ ಇನ್ನಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts