More

    ಒಂದು ಕೋಟಿ ರೂ. ವೆಚ್ಚದಲ್ಲಿ 6 ಸ್ಮಾರ್ಟ್ ಕ್ಲಾಸ್ ನಿರ್ಮಾಣ

    ಹುಣಸೂರು : ಒಸಾಟ್ ಸಂಸ್ಥೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ನಗರದ 150 ವರ್ಷಗಳ ಇತಿಹಾಸ ಹೊಂದಿರುವ ನಗರದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಗೆ 1 ಕೋಟಿ ರೂ. ವೆಚ್ಚದಡಿ 6 ಕೊಠಡಿ ನಿರ್ಮಾಣದ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಲಾಯಿತು.

    ಶಾಲೆಯಲ್ಲಿ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಯಿತು. ಈ ವೇಳೆ ಮಾತನಾಡಿದ ಒಸಾಟ್ ಸಂಸ್ಥೆಯ ಸ್ವಯಂಸೇವಕ ಸುಬ್ರಮಣ್ಯ, 2005ರಲ್ಲಿ ಆರಂಭಗೊಂಡ ಒಸಾಟ್ ಸಂಸ್ಥೆ ದೇಶಾದ್ಯಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ. ಈವರೆಗೆ 102 ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು 92 ಯೋಜನೆ ಪೂರ್ಣಗೊಂಡಿವೆ. ಹುಣಸೂರು ತಾಲೂಕಿನಲ್ಲಿ ಈವರೆಗೆ 9 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮವಹಿಸಿದೆ. ಈ ಶೈಕ್ಷಣಿಕ ಸಾಲಿನಲ್ಲಿ ಮೊದಲ ಯೋಜನೆಯಾಗಿ ಶತಕಗಳ ಇತಿಹಾಸ ಹೊಂದಿರುವ ಈ ಶಾಲೆಗೆ ಅವಶ್ಯವಿರುವ 6 ಕೊಠಡಿಗಳ ನಿರ್ಮಾಣ ಮತ್ತು ತರಗತಿಗಳಲ್ಲಿ ಅವಶ್ಯವಿರುವ ಡೆಸ್ಕ್, ಬೋರ್ಡ್, ಕಲಿಕಾ ಸಾಮಗ್ರಿಗಳು, ಚಿತ್ರಬರಹಗಳು, ವಿದ್ಯುತ್ ಸಂಪರ್ಕ, ಸ್ಮಾರ್ಟ್ ಕ್ಲಾಸ್ ಸೇರಿದಂತೆ ಆಯಾ ತರಗತಿಗೆ ಅವಶ್ಯವಿರುವ ಸಲಕರಣೆಗಳನ್ನು ಒದಗಿಸಲಾಗುವುದು. 1 ಕೋಟಿ ರೂ.ಗಳ ವೆಚ್ಚದಡಿ ಯೋಜನೆ ಸಿದ್ಧಪಡಿಸಿದ್ದು, ಅಮೆರಿಕ ಮತ್ತು ಸಿಂಗಾಪುರ ದೇಶದಲ್ಲಿರುವ ಇಬ್ಬರು ಭಾರತೀಯರು ತಲಾ 50 ಲಕ್ಷ ರೂ.ಗಳ ದೇಣಿಗೆ ನೀಡುವ ಮೂಲಕ ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ.

    ಸುಸಜ್ಜಿತ ಮತ್ತು ಗುಣಮಟ್ಟದ ಕೊಠಡಿ ನಿರ್ಮಾಣ ಮಾಡಲಾಗುತ್ತದೆ. ಅದರ ನಿರ್ವಹಣೆಯನ್ನು ಎಸ್‌ಡಿಎಂಸಿ, ಇನ್ನಿತರ ಸಂಘ, ಸಂಸ್ಥೆಗಳು ಅಗತ್ಯವಾಗಿ ಮಾಡಬೇಕಾಗುತ್ತದೆ. ಕೊಠಡಿಗಳನ್ನು ತರಗತಿ ನಡೆಸಲು ಮಾತ್ರ ಬಳಸಬೇಕು. ಕೊಠಡಿಗಳ ನಿರ್ವಹಣೆಗಾಗಿ ಸ್ಥಳೀಯ ದಾನಿಗಳಿಂದ ದೇಣಿಗೆ ಪಡೆದು ನಿಶ್ಚಿತ ಠೇವಣಿಯಿಟ್ಟು ಅದರಿಂದ ಬರುವ ಬಡ್ಡಿಯ ಮೂಲಕ ನಿರ್ವಹಿಸಬೇಕು. ಶಾಲಾ ಅಭಿವೃದ್ಧಿ ಸಮಿತಿ ಮತ್ತು ಸ್ಥಳೀಯ ಮುಖಂಡರ ನೆರವಿನಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲವಾಗಿಸೋಣ ಎಂದರು.

    ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಮಾತನಾಡಿ, ಒಸಾಟ್ ಸಂಸ್ಥೆಯ ಕಾಳಜಿಯಿಂದಾಗಿ ಮೂರ‌್ನಾಲ್ಕು ವರ್ಷಗಳಲ್ಲಿ ತಾಲೂಕಿನ ವಿವಿಧ ಗ್ರಾಮೀಣ ಸರ್ಕಾರ ಶಾಲೆಗಳಿಗೆ ಸುಮಾರು 3.5 ಕೋಟಿ ರೂ. ಗಳ ಮೊತ್ತದ ಶಾಲಾ ಕೊಠಡಿಗಳು, ಗ್ರಂಥಾಲಯ, ದಾಸೋಹ ಕೊಠಡಿ, ಸ್ಮಾರ್ಟ್ ಕ್ಲಾಸ್, ವಿದ್ಯಾರ್ಥಿಗಳಿಗೆ ಕಲಿಕಾ ಟ್ಯಾಬ್‌ಗಳು ಮುಂತಾದ ಸೌಲಭ್ಯ ದೊರಕಿದೆ. ಅಂತಿಮವಾಗಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರಕಬೇಕೆನ್ನುವುದೇ ಸಂಸ್ಥೆಯ ಧ್ಯೇಯೋದ್ದೇಶವಾಗಿದ್ದು, ಇಲಾಖೆ ಅವರ ಉದ್ದೇಶವನ್ನು ಸಾಕಾರಗೊಳಿಸುವಲ್ಲಿ ಅವಿರತ ಶ್ರಮಿಸಲಿದೆ ಎಂದರು.

    ಶಾಲೆಯನ್ನು ದತ್ತು ಪಡೆದಿರುವ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ನೂತನ ಕೊಠಡಿಗಳ ನಿರ್ವಹಣೆಗಾಗಿ ದಾನಿಗಳ ಮೂಲಕ ದೇಣಿಗೆ ಸಂಗ್ರಹಿಸಿ ಉತ್ತಮ ನಿರ್ವಹಣೆ ಮಾಡಲಿದ್ದೇವೆ. ಒಸಾಟ್ ನೀಡಿದ ಕೊಡುಗೆಯನ್ನು ಸಂಪೂರ್ಣ ಸದ್ಬಳಕೆ ಮಾಡಿಕೊಳ್ಳುತೇವೆ ಎಂದರು.

    ಬಿಳಿಕೆರೆ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಪದ್ಮಾವತಿ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಶೋಕ್, ಮುಖ್ಯಶಿಕ್ಷಕ ಡಾ.ಮಾದುಪ್ರಸಾದ್, ಪಾಲಕರ ಸಮಿತಿ ಅಧ್ಯಕ್ಷ ಮಹಮದ್ ರಫೀಕ್, ಎಸ್‌ಡಿಎಂಸಿ ಉಪಾಧ್ಯಕ್ಷೆ ನಂದಿನಿ, ಸದಸ್ಯರಾದ ಸುಮಾ, ಪುಷ್ಪಾಂಜಲಿ, ಪೂರ್ಣಿಮಾ, ಶಿವರಾಮು, ಹರೀಶ್, ಉಮಾಶಂಕರ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts