More

    ನ್ಯಾಮತಿ, ಹೊನ್ನಾಳಿ ತಾಲೂಕಿನಲ್ಲಿ ಚೀತಾತಂಕ

    ಷಣ್ಮುಖ ಬಿ.ಈ. ನ್ಯಾಮತಿ: ನರಭಕ್ಷಕ ಚಿರತೆ ನ್ಯಾಮತಿ, ಹೊನ್ನಾಳಿ ತಾಲೂಕಿನ ಅರಣ್ಯದಂಚಿನ ಗ್ರಾಮಸ್ಥರನ್ನು ಕಳೆದೊಂದು ವಾರದಿಂದ ಸದಾ ಭಯದಲ್ಲೇ ಇರಿಸಿದೆ. ಬೋನಿಗೆ ಬೀಳದೆ ಅರಣ್ಯ ಕಾರ್ಯಪಡೆಯ ನಿದ್ದೆಗೆಡಿಸಿದೆ.

    ಫಲವನಹಳ್ಳಿ, ಜಿನಹಳ್ಳಿ, ಗಡೆಕಟ್ಟೆ, ಮದೇನಹಳ್ಳಿ ಸೇರಿ ಎರಡು ತಾಲೂಕುಗಳ ಹತ್ತಾರು ಹಳ್ಳಿಗಳಲ್ಲಿ ಗಣೇಶ ಹಬ್ಬದ ಸಂಭ್ರಮ ಮರೆಯಾಗಿದೆ. ಫಲವನಹಳ್ಳಿ ಗ್ರಾಮದಲ್ಲಿ ರೈತ ಮಹಿಳೆ ಚಿರತೆಗೆ ಬಲಿಯಾಗಿದ್ದರಿಂದ ಕುಟುಂಬದಲ್ಲಿ ಮಾತ್ರವಲ್ಲ, ಗ್ರಾಮದಲ್ಲೇ ಮೌನ ಆವರಿಸಿದೆ. ಭಾನುವಾರ ರಾತ್ರಿ ಜೀನಹಳ್ಳಿಯಲ್ಲಿ ಆಡುಗಳನ್ನು ಹೊತ್ತೊಯ್ದಿದ್ದರಿಂದ ಇಲ್ಲೂ ಭಯದ ವಾತಾವರಣ ಸೃಷ್ಟಿಯಾಗಿದೆ.

    ಯಾವ ಹೊತ್ತಲ್ಲಿ ಏನಾಗುತ್ತದೋ..? ಎಂಬ ಆತಂಕ ಮೂಡಿದ್ದು, ಗಣೇಶ ಹಬ್ಬದ ಸಂಭ್ರಮವೇ ಇಲ್ಲದಂತಾಗಿದೆ. ಚಿರತೆ ಸೆರೆಗೆ ರಾತ್ರಿ, ಹಗಲು ಕಾಯುತ್ತಿರುವ ಅರಣ್ಯ ಪಡೆ ಸಿಬ್ಬಂದಿಗೂ ಹಬ್ಬದ ಸಡಗರ ಇಲ್ಲವಾಗಿದೆ.

    ಆ ಗ್ರಾಮದಲ್ಲಿ ಚಿರತೆ ಕಾಣಿಸಿತು. ಇಲ್ಲಿ ಕಾಣಿಸಿತು ಎಂಬ ವದಂತಿ ಹರಡಿದಂತೆಲ್ಲ ಬೋನು, ಕಾರ್ಯಾಚರಣೆ ಶಿಫ್ಟ್ ಮಾಡಿ ಅರಣ್ಯ ಪಡೆ ಸಿಬ್ಬಂದಿ ಬೇಸತ್ತಿದ್ದಾರೆ. ಜತೆಗೆ ಅರಣ್ಯದಂಚಿನ ಗ್ರಾಮಗಳಲ್ಲಿ ಗ್ರಾಮಸ್ಥರನ್ನು ಎಚ್ಚರಿಸಲು ಟಾಂ ಟಾಂ ಹೊಡೆಸಲಾಗುತ್ತಿದೆ.

    ಸಾಮಾಜಿಕ ಜಾಲತಾಣದ ವೀಡಿಯೋ ಸುಳ್ಳು: ಜೀನಹಳ್ಳಿ ಕುರಿಗಾಹಿ ಮಾಹಿತಿ ಆಧರಿಸಿ ಶೋಧದಲ್ಲಿ ತೊಡಗಿದ ಸಿಬ್ಬಂದಿಗೆ ಒಂದು ಮೇಕೆಯ ದೇಹ ಸಿಕ್ಕಿದೆ. ಶೇ. 90 ರಷ್ಟು ಭಾಗವನ್ನು ಚಿರತೆ ತಿಂದು ಹಾಕಿದೆ. ಚಿರತೆ ಸೆರೆ ಹಿಡಿದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿದಾಡುತ್ತಿದೆ. ಚಿರತೆ ಸೆರೆ ಸಿಕ್ಕಿರುವುದಿಲ್ಲ. ಮೇಕೆಯ ಮಾಲೀಕರಿಗೆ ಇಲಾಖೆ ನಿಯಮದಂತೆ ಪರಿಹಾರ ನೀಡಲಾಗುವುದು. ಫಲವನಹಳ್ಳಿಯಲ್ಲಿ 3 ಟ್ರ್ಯಾಪಿಂಗ್ ಕ್ಯಾಮರಾ ಅಳವಡಿಸಿದ್ದು, ಗಡೇಕಟ್ಟೆ, ಮಾದೇನಹಳ್ಳಿ, ಜೀನಹಳ್ಳಿಯಲ್ಲಿ ತಲಾ ಒಂದು ಬೋನು ಇರಿಸಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ಕೆ.ಆರ್. ಚೇತನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts