More

    ರೈತರ ಬರ ಪರಿಹಾರಕ್ಕೆ ಈಗ ಡಬಲ್ ಟ್ರಬಲ್

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ 

    ಕೇಂದ್ರ ಸರ್ಕಾರ ಕೊಟ್ಟ ಬರ ಪರಿಹಾರ ಹಣ ಬ್ಯಾಂಕ್ ಸಾಲಕ್ಕೆ ಕಡಿತವಾಯ್ತಲ್ಲ ಎಂದು ಕಣ್ಣೀರಿಟ್ಟಿದ್ದ ರಾಜ್ಯದ ರೈತರಿಗೀಗ ಮತ್ತೆರಡು ಬರೆ ಬಿದ್ದಿದೆ. ಬರ ಸಮೀಕ್ಷೆ ನಡೆಸಿದ್ದ ಪಿಆರ್ ಸಿಬ್ಬಂದಿ ಫಲವತ್ತಾದ ಭೂಮಿಯನ್ನು ಪಾಳು ಭೂಮಿ ಎಂದು ತಪು್ಪ ವರದಿ ನೀಡಿರುವ ಪರಿಣಾಮ ಪರಿಹಾರ ಸಿಗದೆ 2 ಲಕ್ಷಕ್ಕೂ ಅಧಿಕ ರೈತರು ದಾಖಲೆ ತಿದ್ದುಪಡಿಗಾಗಿ ತಹಸೀಲ್ದಾರ್ ಹಾಗೂ ಕೃಷಿ ಕಚೇರಿಗೆ ಅಲೆದಾಡುವಂತಾಗಿದೆ. ಮತ್ತೊಂದೆಡೆ ಕಾಲುವೆ ಹಾದು ಹೋಗಿರುವ ಜಮೀನಿನ ಮಾಲೀಕರಿಗೆ ಬರ ಪರಿಹಾರ ನೀಡಲ್ಲ ಎಂದು ಅಧಿಕಾರಿಗಳು ತಗಾದೆ ತೆಗೆದಿರುವುದು ಮುಂಗಾರು ಬಿತ್ತನೆಗೆ ಅಣಿಯಾಗುತ್ತಿದ್ದ ಅನ್ನದಾತರನ್ನು ಸಂಕಷ್ಟಕ್ಕೆ ದೂಡಿದೆ.

    ಕಳೆದ ವರ್ಷ ಮಳೆ ಇಲ್ಲದೆ ಬೆಳೆ ಹಾಳಾದ ರೈತರಿಗೆ ಸರ್ಕಾರ ಬರ ಪರಿಹಾರ ನೀಡುತ್ತಿದೆ. ಆದರೆ, ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಸಮೀಕ್ಷೆಗಾಗಿ ನೇಮಕಗೊಂಡ ಪ್ರೖೆವೇಟ್ ರೆಸಿಡೆಂಟ್(ಪಿಆರ್) ಸಿಬ್ಬಂದಿ ತಪ್ಪಿನಿಂದಾಗಿ ಫಲವತ್ತಾದ ಕೃಷಿ ಭೂಮಿ ಪಾಳು ಭೂಮಿ, ಎನ್​ಎ ಭೂಮಿ ಎಂದು ಸಮೀಕ್ಷೆ ಆಪ್​ನಲ್ಲಿ ದಾಖಲಿಸಲಾಗಿದೆ. ಇದರಿಂದಾಗಿ ಸಾಕಷ್ಟು ರೈತರು ಬೆಳೆ ಪರಿಹಾರ ಸಿಗದೆ ಕೃಷಿ ಮತ್ತು ತಹಸೀಲ್ದಾರ್ ಕಚೇರಿಗಳಿಗೆ ನಿತ್ಯ ಅಲೆದಾಡುತ್ತಿದ್ದಾರೆ. ಬೆಳಗಾವಿ, ಬಾಗಲಕೋಟೆ, ಧಾರವಾಡ, ಚಿತ್ರದುರ್ಗ, ಕೊಪ್ಪಳ, ಮೈಸೂರು, ಮಂಡ್ಯ, ಬಳ್ಳಾರಿ, ಕಲಬುರಗಿ, ವಿಜಯಪುರ ಸೇರಿ ವಿವಿಧ ಜಿಲ್ಲೆಗಳು ಹೆಚ್ಚು ಬರ ಅನುಭವಿಸಿವೆ. ಇಲ್ಲಿನ ರೈತರು ಪರ್ಯಾಯ ಉದ್ಯೋಗಕ್ಕಾಗಿ ಕೋಳಿ ಫಾಮ್ರ್, ಹಂದಿ ಸಾಕಣೆ ಉದ್ದೇಶಕ್ಕಾಗಿ 10 ರಿಂದ 12 ಗುಂಟೆ ಕೃಷಿ ಭೂಮಿ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡಿಕೊಂಡಿದ್ದಾರೆ.

    ಕೆಲವೆಡೆ ನೀರಾವರಿ ಕಾಲುವೆಗಳಿಗೆ 2 ರಿಂದ 3 ಗುಂಟೆ ಸ್ವಾಧೀನಪಡಿಸಿಕೊಂಡಿದ್ದಾರೆ. ಆದರೆ, ಆಸ್ತಿ ದಾಖಲೆಗಳಲ್ಲಿ ಕೃಷಿ ಭೂಮಿಯನ್ನೇ ಎನ್​ಎ ಎಂದು ಉಲ್ಲೇಖಿಸಿ ಎಲ್ಲ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಲಾಗಿದೆ. ಭೂಮಿ ಆಪ್​ನಲ್ಲಿ ಕೃಷಿ ಜಮೀನು ಪಾಳು ಇಲ್ಲವೆ ಎನ್​ಎ ಎಂದು ತೋರಿಸುತ್ತಿದೆ ಎಂದು ರೈತರು ದೂರಿದ್ದಾರೆ.

    ಏನಿದು ಸಮೀಕ್ಷೆ ಎಡವಟ್ಟು?

    1. ಕೆಲ ರೈತರು ಭೂಮಿಯಲ್ಲಿ ಬಿತ್ತನೆ ಮಾಡಿಲ್ಲ

    2. ಹಲವೆಡೆ ಒಣಗಿದ ಕಾರಣಕ್ಕೆ ಬೆಳೆ ತೆಗೆದಿದ್ದರು

    3. ಬರಪೀಡಿತ ತಾಲೂಕು ಘೋಷಣೆ ಬಳಿಕ ಸಮೀಕ್ಷೆ

    4. ಬೆಳೆ ಒಣಗಿದ, ತೆಗೆದು ಹಾಕಿದ ಭೂಮಿ ಸರ್ವೆ

    5. ಬಿತ್ತನೆ ಮಾಡಿದ ಕುರುಹು ಇಲ್ಲ ಎಂದು ವರದಿ

    6. ಬಿತ್ತನೆ ಆಗದ ಭೂಮಿಗೆ ಪಾಳು ಭೂಮಿಯ ಪಟ್ಟ

    7. ಇದರಿಂದಾಗಿ ಅರ್ಹ ರೈತರಿಗೆ ತಪ್ಪಿದ ಪರಿಹಾರ

     

    ಡಿಜಿಟಲ್ ಸಮೀಕ್ಷೆ ವರದಿ

    1. 46.11 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ಹಾನಿ

    2. 2.06 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟ

    3. 18,177 ಕೋಟಿ ರೂ.2023ರ ಒಟ್ಟು ಬರಗಾಲದ ನಷ್ಟ

     

    ಪರಿಹಾರ ಸಿಗದವರು

    1. ತಾಂತ್ರಿಕ ಸಮಸ್ಯೆ ಕಾರಣ-1,45,350

    2. ಆಧಾರ್,ಫ್ರೂಟ್ ಐಡಿ ಹೆಸರು ವ್ಯತ್ಯಾಸ- 65,678

    3. ಇತರ ಕಾರಣಗಳಿಂದಾಗಿ -78,321

     

    ಸಮೀಕ್ಷೆ ಆಪ್​ನಲ್ಲಿ ತಪ್ಪು ಉಲ್ಲೇಖ, ದಾಖಲೆಗಳ ಹೊಂದಾಣಿಕೆ ಸಮಸ್ಯೆ ಸೇರಿ ಇತರ ಕಾರಣಗಳಿಂದಾಗಿ ಲಕ್ಷಕ್ಕೂ ಅಧಿಕ ರೈತರಿಗೆ ಬರ ಪರಿಹಾರ ಸಿಕ್ಕಿಲ್ಲ. ಲೋಪದೋಷ ಉಂಟಾಗಿರುವುದು ನಿಜ. ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

    | ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ

     

    ಕೃಷಿ ಇಲಾಖೆ ನೇಮಕ ಮಾಡಿರುವ ಪಿಆರ್ ಸಿಬ್ಬಂದಿ ಸಮೀಕ್ಷೆ ಆಪ್​ನಲ್ಲಿ ಉಲ್ಲೇಖಿಸಿರುವ ಆಧಾರದ ಮೇಲೆ ಪರಿಹಾರ ನೀಡಲಾಗುತ್ತಿದೆ. ಬೆಳೆಗಳು ಇಲ್ಲದಿರುವ ಕಾರಣ ಪಾಳು ಭೂಮಿ ಎಂದು ಉಲ್ಲೇಖಿಸಿದ್ದಾರೆ. ಅದಕ್ಕೆ ಪರಿಹಾರ ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಶೀಘ್ರವೇ 11ನೇ ಕಂತಿನಲ್ಲಿ ಬೆಳೆಹಾನಿ ಪರಿಹಾರ ವಿತರಣೆ ಆಗಲಿದೆ. ರೈತರು ಅತಂಕಪಡುವ ಅವಶ್ಯಕತೆ ಇಲ್ಲ.

    | ನಿತೇಶ ಪಾಟೀಲ, ಜಿಲ್ಲಾಧಿಕಾರಿ

     

    ಪರಿಹಾರ ನಕಾರಕ್ಕೆ ಕಾಲುವೆ ನೆಪ!

    | ರಮೇಶ ಮೇಳಕುಂದಾ ಕಲಬುರಗಿ

    ಕೃಷಿ ಭೂಮಿಯಲ್ಲಿ ಕೆನಾಲ್ (ಕಾಲುವೆ) ಹಾದು ಹೋದ ಕೃಷಿಕರಿಗೆ ಬರ ಪರಿಹಾರ ನೀಡಲ್ಲ ಎಂದು ಅಧಿಕಾರಿಗಳು ಹೊಸ ತಂಟೆ ತೆಗೆದಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ‘ನಮ್ಮ 8.5 ಎಕರೆ ಜಮೀನಿನಲ್ಲಿ ಅರ್ಧ ಎಕರೆ ಕೆನಾಲ್ ಹೋಗಿದೆ. ಬರ ಪರಿಹಾರ ಬಂದಿಲ್ಲ ಎಂದು ಅಧಿಕಾರಿಗಳ ಬಳಿ ಹೋದರೆ ಕಾಲುವೆಯ ನೆಪ ಮುಂದಿಟ್ಟು ಬರ ಪರಿಹಾರ ಬರಲ್ಲ ಎಂದುಹೇಳುತ್ತಿದ್ದಾರೆ ಎಂದು ಅಫಜಲಪುರದ ರೈತ ಮಳೇಂದ್ರ ಡಾಂಘ ಗೋಳು ತೋಡಿಕೊಂಡಿದ್ದಾರೆ.

    ಡಿಸಿ ಆಫೀಸ್​ಗೆ ಕೇಳಬೇಕಂತೆ: ಬರ ಪರಿಹಾರ ಏಕೆ ಬಂದಿಲ್ಲ ಎಂದು ಕೇಳಲು ತಾಲೂಕು ತಹಸೀಲ್ದಾರ್ ಕಚೇರಿಗೆ ಹೋದರೆ ಅಧಿಕಾರಿಗಳು ಕೆನಾಲ್ ಕಾರಣ ನೀಡುತ್ತಾರೆ. ಆದೇಶ ಪ್ರತಿ ತೋರಿಸಿ ಎಂದರೆ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ವಿಚಾರಿಸಿ ಎಂದು ಉಡಾಫೆ ಉತ್ತರ ನೀಡಿದ್ದಾರೆ ಎಂದು ಅಫಜಲಪುರ ರೈತ ಬಸವರಾಜ ಮ್ಯಾಳೇಸಿ ದೂರಿದ್ದಾರೆ. ಇದು ಇವರಿಬ್ಬರ ಸಮಸ್ಯೆ ಮಾತ್ರವಲ್ಲ, ರಾಜ್ಯಾದ್ಯಂತ ಜಮೀನಿನಲ್ಲ ಕಾಲುವೆ ಹಾದುಹೋಗಿರುವ ರೈತರಿಗೆ ಇದೇ ಸಮಸ್ಯೆ ಆಗಿದೆ.

     

    ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರುವ ವಿಷಯದಲ್ಲಿ ಸರ್ಕಾರ ನಿರಂತರ ಮೋಸ ಮಾಡುತ್ತಿದೆ. ಕೆನಾಲ್ ಇಡೀ ಹೊಲದಲ್ಲಿ ಇರುವುದಿಲ್ಲ. ಮತ್ತೊಂದೆಡೆ ಬರದಿಂದಾಗಿ ಸಮರ್ಪಕ ನೀರೇ ಬಂದಿಲ್ಲ. ಇಂತಹ ಸ್ಥಿತಿಯಲ್ಲಿ ಯಾವುದೇ ಅಧಿಕೃತ ಆದೇಶವಿಲ್ಲದೆ ಕಾಲುವೆ ಇದ್ದವರಿಗೆ ಬರ ಪರಿಹಾರವಿಲ್ಲ ಎಂದರೆ ಹೇಗೆ? ತಕ್ಷಣ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆಗೆ ಸ್ಪಂದಿಸಬೇಕು.

    | ರಮೇಶ ಹೂಗಾರ, ಜಿಲ್ಲಾಧ್ಯಕ್ಷ, ಕಲಬುರಗಿ ಕಬ್ಬು ಬೆಳೆಗಾರರ ಸಂಘ

     

    ನಟ ಶಾರುಖ್ ಖಾನ್ ಆಸ್ಪತ್ರೆಗೆ ದಾಖಲು: ಅಹಮದಾಬಾದ್​ನಲ್ಲಿ ಚಿಕಿತ್ಸೆ! ಏನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts