ಕ್ಷಮೆಯಾಚಿಸಿದ ಬಳಿಕ ಮಾನನಷ್ಟ ಮೊಕದ್ದಮೆ ಹೂಡಲಿದ್ದಾರಂತೆ ನಟ ಮನ್ಸೂರ್​ ಅಲಿ ಖಾನ್!

Mansoor Ali Khan
Published on

ಚೆನ್ನೈ: ಕಳೆದ ಕೆಲ ದಿನಗಳ ಹಿಂದೆ ನಟಿ ತ್ರಿಶಾ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಕ್ಷಮೆಯಾಚಿಸಿದ್ದ ನಟ ಮನ್ಸೂರ್​ ಅಲಿ ಖಾನ್​ ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದು, ಈ ಬಾರಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳುವ ಮೂಲಕ ಸುದ್ದಿಯಲ್ಲಿದ್ದಾರೆ.

ತ್ರಿಶಾ ಬಗ್ಗೆ ಅಶ್ಲೀಲವಾಗಿ ಕಮೆಂಟ್ ಮಾಡಿದ್ದ ಮನ್ಸೂರ್ ಅಲಿ ಖಾನ್ ಹೇಳಿಕೆಯನ್ನು ನಟ ಚಿರಂಜೀವಿ, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಖುಷ್ಬೂ ಸುಂದರ್​ ಖಂಡಿಸಿದ್ದರು ಮತ್ತು ನಟಿ ತ್ರಿಶಾಗೆ ತಮ್ಮ ಬೆಂಬಲವನ್ನು ಸೂಚಿಸಿದ್ದರು.

ತನ್ನ ವಿರುದ್ಧ ಹೇಳಿಕೆ ನೀಡಿದ ಚಿರಂಜೀವಿ ಹಾಗೂ ನಟಿ ಖುಷ್ಬೂ ವಿರುದ್ಧ ನಟ ಮನ್ಸೂರ್ ಅಲಿ ಖಾನ್ ಅವರು ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ. ತ್ರಿಶಾ, ಚಿರಂಜೀವಿ, ಖುಷ್ಬೂ ಈ ಮೂವರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದಿದ್ದಾರೆ.

 ರೇಪ್​ ಕುರಿತು ನಾನು ಹೇಳಿದ್ದೇನೆ ಎಂದು ವೈರಲ್​ ಆಗ್ತಿರೋ ವಿಡಿಯೋ  ಕಪೋಲಕಲ್ಪಿತವಾಗಿದೆ.  ಪ್ರಕರಣ ದಾಖಲಿಸುವಾಗ ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಮೂಲ ವಿಡಿಯೋ ಮತ್ತು ಇತರ ಸಾಕ್ಷ್ಯಗಳನ್ನು ನೀಡುತ್ತೇನೆ. 10 ದಿನಗಳ ಕಾಲ ಸಾರ್ವಜನಿಕ ಶಾಂತಿ ಕದಡುವ ಆರೋಪ ಸೇರಿದಂತೆ  ಪೂರ್ವ ಯೋಜಿತ ಗಲಭೆ ಆರೋಪದ ಮೇಲೆ ಪ್ರಕರಣಗಳನ್ನು ದಾಖಲಿಸುತ್ತೇನೆ ಎಂದು ಹೇಳಿದ್ದಾರೆ.

ಮಹಿಳೆಯರ ಪಾತ್ರ ಸಮಾಜದಲ್ಲಿ ಪ್ರಮುಖವಾಗಿದ್ದು, ಇದು ಶ್ಳಾಘನೀಯ ವಿಚಾರವಾಗಿದೆ. ನಾನು ತ್ರಿಶಾ ಅವರ ಮದುವೆಯಲ್ಲಿ ಮುಂದೆ ನಿಂತು ಆರ್ಶೀವದಿಸುವ ಅವಕಾಶ ಕೊಡುವಂತೆ ಆ ದೇವರಲ್ಲಿ ಕೇಳಿಕೊಂಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಹೇಳಿದ್ದರು. ಆದರೆ, ಕ್ಷಮೆಯಾಚಿಸಿದ ಕೆಲ ದಿನಗಳ ಬಳಿಕ ನಟ ಮನ್ಸೂರ್​ ಅಲಿ ಖಾನ್​ ಉಲ್ಟಾ ಹೊಡೆದಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ವ್ಯಾಫಕ ಖಂಡನೆಗೆ ಗುರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net