More

    ಪ್ರಕೃತಿಗೆ ಏಟು ಕೊಟ್ಟವರಿಗಿಲ್ಲ ವೋಟು: ಪರಿಸರ ಹೋರಾಟಗಾರರಿಂದ ನೋಟಾ ಅಭಿಯಾನ

    ಪರಿಸರ ಹೋರಾಟಗಾರರು ನೋಟಾ ಅಭಿಯಾನ ಆರಂಭಿಸಿದ್ದು, ಪಶ್ಚಿಮ ಘಟ್ಟ ಕಬಳಿಸುವವರಿಗೆ ಮತ ನೀಡದಂತೆ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಕುರಿತು ಬೆಳಕು ಚೆಲ್ಲುವ ವಿಶೇಷ ವರದಿ ಇಲ್ಲಿದೆ. -ಹರೀಶ್ ಮೊಟುಕಾನ, ಮಂಗಳೂರು

    ಮತ ಕೇಳುವುದು ನಿಮ್ಮ ಹಕ್ಕಾದರೆ, ಅದನ್ನು ತಿರಸ್ಕರಿಸುವುದು ನಮ್ಮ ಹಕ್ಕು. ಪ್ರಕೃತಿಗೆ ಏಟು ನೀಡಿದವರಿಗೆ ವೋಟು ಇಲ್ಲ.

    ಇದು ಪರಿಸರ ಹೋರಾಟಗಾರರ ನೋಟಾ ಅಭಿಯಾನದ ಸಾರಾಂಶ. ಪಶ್ಚಿಮ ಘಟ್ಟ ಕಬಳಿಸುವ ನಿಮಗೆ ಚುನಾವಣಾ ಸಮಯದಲ್ಲಿ ಮೋಸ ಮಾಡುವುದು ಪ್ರತಿಯೊಬ್ಬ ಮತದಾರನ ಹಕ್ಕು. ಇದು ಪರಿಸರ ಹೋರಾಟಗಾರರ ನಿಲುವು. ಸಾಮಾಜಿಕ ಜಾಲತಾಣಗಳ ಮೂಲಕ ನೋಟಾ ಅಭಿಯಾನ ಆರಂಭಿಸಿ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಪರಿಸರದ ಮೇಲೆ ದಬ್ಬಾಳಿಕೆ ನಡೆಸಿ, ಲೂಟಿ ಮಾಡುವುದನ್ನು ಪ್ರಶ್ನಿಸಲು ಇದು ಸರಿಯಾದ ಸಮಯ. ಪ್ರತಿಯೊಬ್ಬ ಮತದಾರನೂ ಮತ ಕೇಳಿಕೊಂಡು ಬರುವ ರಾಜಕೀಯದವರ ಜತೆ ಪರಿಸರ ಪರ ಪ್ರಶ್ನೆ ಮಾಡಬೇಕು ಎಂದು ಪರಿಸರ ಹೋರಾಟಗಾರರು ಮನವಿ ಮಾಡುತ್ತಿದ್ದಾರೆ.

    ನೋಟಾ ಅಭಿಯಾನ

    ದಿನದಿಂದ ದಿನಕ್ಕೆ ಬತ್ತಿ ಹೋಗುತ್ತಿರುವ ನದಿ ಮೂಲಗಳು, ಜಲಚರಗಳ ಮಾರಣಹೋಮ, 40 ಡಿಗ್ರಿ ಸೆಲ್ಸಿಯಸ್ ದಾಟಿದ ಉಷ್ಣಾಂಶದ ವಾತಾವರಣದಲ್ಲ ಕುಡಿಯಲು ನೀರಿಲ್ಲದೆ ಎಲ್ಲೆಡೆ ಹಾಹಾಕಾರ ಕೇಳಿಬರುತ್ತಿರುವ ಸಂದರ್ಭ ಚುನಾವಣೆ ಎದುರಾಗಿರುವುದು ಮತದಾರರಿಗೆ ಪ್ರಶ್ನಿಸಲು ಇರುವ ಸದವಕಾಶ. ಪ್ರಕೃತಿಗೆ ಏಟು ನೀಡಿದವರಿಗೆ ವೋಟು ಇಲ್ಲ ಎನ್ನುವ ಘೋಷಣೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

    ಪಶ್ಚಿಮ ಘಟ್ಟದ ಮೇಲೆ ಗದಾ ಪ್ರಹಾರ

    ಪರಿಸರ ವಿರೋಧಿ ಯೋಜನೆಗಳ ಮೂಲಕ ಪಶ್ಚಿಮ ಘಟ್ಟದ ಮೇಲೆ ಗದಾ ಪ್ರಹಾರ ಮಾಡಿದ ಪರಿಣಾಮವೇ ಈ ಸಮಸ್ಯೆಗಳಿಗೆ ಕಾರಣ. ರಾಜಕಾರಣಿಗಳು ಸರ್ಕಾರದ ಖಜಾನೆಯಲ್ಲಿರುವ ಜನರ ಹಣವನ್ನು ಲೂಟಿ ಮಾಡಲು ಎತ್ತಿನಹೊಳೆಯಂತಹ ಪರಿಸರ ವಿರೋಧಿ ಯೋಜನೆಗಳನ್ನು ಜಾರಿಗೆ ತಂದಿರುವ ಪರಿಣಾಮ ಪ್ರಸ್ತುತ ಪರಿಸ್ಥಿತಿಯನ್ನು ಅನುಭವಿಸುವಂತಾಗಿದೆ ಎಂದು ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಆರೋಪಿಸಿದರು.

    ಎತ್ತಿನಹೊಳೆ ಯೋಜನೆ ವಿರುದ್ಧ ಹೋರಾಟ

    2017ರಲ್ಲಿ ಎತ್ತಿನಹೊಳೆ ಯೋಜನೆ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆದಾಗ ಯೋಜನೆಯನ್ನು ಯಾವ ಪಕ್ಷವೂ ತಡೆಯಲಿಲ್ಲ. ನೇತ್ರಾವತಿ ರಕ್ಷಣೆಗೆ ಯಾವ ಪಕ್ಷಗಳು ಬದ್ಧವಾಗಲಿಲ್ಲ ಎಂಬುದಕ್ಕೆ ಚುನಾವಣೆ ಸಂದರ್ಭ ನೋಟಾ ಅಭಿಯಾನ ಮಾಡಲಾಗಿತ್ತು. ಜನರಿಂದ ಉತ್ತಮ ಸ್ಪಂದನೆ ಲಭಿಸಿತ್ತು. ನೋಟಾಕ್ಕೆ 27,687 ಮತ ದೊರೆತದ್ದು ದೇಶದಲ್ಲೇ ದಾಖಲೆ ನಿರ್ಮಾಣ ಮಾಡಿತ್ತು. ಕರಾವಳಿಯ ಸುಶಿಕ್ಷಿತ ಜನತೆ ಮತದಾನ ವೇಳೆ ಸೂಕ್ತ ನಿರ್ಧಾರ ಮಾಡುವ ಪ್ರಬುದ್ಧತೆ ಹೊಂದಿದ್ದಾರೆ ಎಂದರು.

    ಪಶ್ಚಿಮ ಘಟ್ಟದ ಮೇಲೆ ಮಾಡಿದ ಘಾಸಿಯಿಂದಾಗಿ ಸಾಕಷ್ಟು ಪರಿಣಾಮಗಳನ್ನು ಅನುಭವಿಸಿದ್ದೇವೆ. ಆದರೂ ಜನ ಎಚ್ಚೆತ್ತುಕೊಂಡಿಲ್ಲ. ರಾಜಕಾರಣಿಗಳನ್ನು ಪ್ರಶ್ನಿಸಲು ಇದು ಸಕಾಲ. ಸಾಮಾಜಿಕ ಜಾಲತಾಣಗಳ ಮೂಲಕ ನೋಟಾ ಅಭಿಯಾನ ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಬೀದಿ ನಾಟಕಗಳ ಮೂಲಕ ಜನರಿಗೆ ನೋಟಾ ಜಾಗೃತಿ ಮೂಡಿಸುವ ಯೋಜನೆ ಇದೆ.
    -ದಿನೇಶ್ ಹೊಳ್ಳ
    ಪರಿಸರ ಹೋರಾಟಗಾರ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts