More

    ಅಂಗವೈಕಲ್ಯ ಮೆಟ್ಟಿ ನಿಂತ ನೂರ್​ಜಲೀಲಾ

    ಸೋಮಾರಿಗಳಿಗೆ ಕೆಲಸ ಮಾಡದಿರಲು ಕಾರಣಗಳು ನೂರಾರು. ಆದರೆ ಛಲಗಾರರಿಗೆ ನೂರೊಂದು ನೋವುಗಳೂ ಲೆಕ್ಕಕ್ಕೆ ಬರುವುಲ್ಲ. ಇಂಥ ಛಲಗಾರರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ ನೂರ್ ಜಲೀಲಾ. ವೈಕಲ್ಯಗಳನ್ನೇ ಸಾಧನೆಗೆ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಸಾಧನೆಯ ಉತ್ತುಂಗಕ್ಕೇರುತ್ತಿರುವ ಇವರ ಯಶೋಗಾಥೆ ಇಲ್ಲಿದೆ.

    ನಮ್ಮ ಸಮಾಜದಲ್ಲಿ ನೂರಾರು ಅಂಗವಿಕಲ ವ್ಯಕ್ತಿಗಳನ್ನು ಕಾಣುತ್ತಿರುತ್ತೇವೆ. ಯಾವುದೋ ಒಂದು ರೀತಿಯಲ್ಲಿ ಅಂಗವೈಕಲ್ಯವನ್ನು ಹೊಂದಿರುವ ಇವರಿಗೆ ಜನ್ಮ ಜಾತವಾಗಿ ಕೆಲವು ಪ್ರತಿಭೆಗಳು ಬಂದಿರುತ್ತವೆ. ಅಲ್ಲದೇ ಕೆಲವರು ತಮ್ಮ ಅಂಗವೈಕಲ್ಯವನ್ನು ಮರೆತು ಕಷ್ಟಪಟ್ಟು ಸಾಧನೆ ಮಾಡುತ್ತಾರೆ. ಅಂಥವರ ಸಾಲಿಗೆ ಸೇರುವ ಸಾಧಕಿ ನೂರ್ ಜಲೀಲಾ.

    ಮೂಲತಃ ಕೇರಳದ ಕೋಝಿಕೋಡ್​ದವರಾದ ನೂರ್ ಜಲೀಲಾಗೆ ಹುಟ್ಟಿನಿಂದಲೇ ಕೈಗಳಿಲ್ಲ, ಕಾಲುಗಳೂ ಇಲ್ಲ, ಮೊಣಕೈಯವರೆಗೆ ಕೈಗಳು ಮತ್ತು ಮೊಣಕಾಲುಗಳವರೆಗೆ ಕಾಲುಗಳು ಇವೆ ಅಷ್ಟೇ. ಈಕೆ ಹುಟ್ಟಿದಾಗ ವೈದ್ಯರೂ ಹೆತ್ತವರಿಗೆ ವಾಸ್ತವ ತಿಳಿಸಲು ಹೆದರಿದರು. ತಂದೆ ಅಬ್ದುಲ್ ಕರೀಮ್ ಹಾಗೂ ತಾಯಿ ಅಸ್ಮಾಬಿ ಮಗುವನ್ನು ಕಂಡು ವಿಚಲಿತರಾದರೂ ತಾಯಿ ಮಗಳನ್ನು ಸಾಧಕಳನ್ನಾಗಿ ಮಾಡಲು ಪಣತೊಟ್ಟರು.

    ಅಸ್ಮಾಬಿಯವರು ಮಗಳಿಗೆ ಓದಲು, ಬರೆಯಲು ಕಲಿಸಿದರು. ಬಾಲ್ಯದಿಂದಲೇ ಈಕೆ ಓದುವುದರಲ್ಲ್ಲ್ಟೆ ಅಲ್ಲ, ಪಠ್ಯೇತರ ಚುಟುವಟಿಕೆಗಳಲ್ಲೂ ಬಹಳ ಬುದ್ಧಿವಂತೆ. ಮಗಳಿಗೆ ಚಿತ್ರಕಲೆಯಲ್ಲಿ ಆಸಕ್ತಿಯಿರುವುದನ್ನು ಕಂಡು ಕುಂಚ ಹಿಡಿದು ಚಿತ್ರ ಬಿಡಿಸುವುದನ್ನೂ ಕಲಿಸಿದರು. ಡ್ರಾಯಿಂಗ್ ಸ್ಕೂಲ್​ಗೆ ಸೇರಿಸಿದರು. ಪಾಲಕರು ಪ್ರತಿ ಹಂತದಲ್ಲೂ ಮಗಳಿಗೆ ಪೂರಕ ವ್ಯವಸ್ಥೆ ಕಲ್ಪಿಸಿದರು. ನಂತರ ಜಲೀಲಾ ಹಲವಾರು ವರ್ಣಚಿತ್ರಗಳನ್ನು ರಚಿಸತೊಡಗಿದರು.

    2017ರ ಡಿಸೆಂಬರ್​ನಲ್ಲಿ ಕೋಝೀಕೋಡ್​ದ ಲಲಿತ ಕಲಾ ಅಕಾಡೆಮಿ ಆರ್ಟ್ ಗ್ಯಾಲರಿಯಲ್ಲಿ ಜರುಗಿದ ಚಿತ್ರಕಲೆ ಪ್ರದರ್ಶನದಲ್ಲಿ ಎರಡು ವರ್ಣಚಿತ್ರಗಳನ್ನು ಪ್ರದರ್ಶಿಸಿದ ಜಲೀಲಾ ಅಲ್ಲಿ ಭಾರಿ ಮೆಚ್ಚುಗೆ ಗಳಿಸಿದರು.

    ಅಂಗವೈಕಲ್ಯ ಮೆಟ್ಟಿ ನಿಂತ ನೂರ್​ಜಲೀಲಾ

    ನಂತರ, ಜಲೀಲಾಗೆ ವಯೋಲಿನ್ ನುಡಿಸುವಲ್ಲಿ ಆಸಕ್ತಿ ಮೂಡಿತು. ಇದರಿಂದ ಪಾಲಕರು ವಯೋಲಿನ್ ನುಡಿಸುವ ಕ್ಲಾಸಿಗೆ ಸೇರಿಸಿದ್ದಾರೆ. ತುಂಬಾ ಕಷ್ಟವಾದರೂ ಬಿಡದೇ ವಯೋಲಿನ್ ವಾದ್ಯವನ್ನು ನುಡಿಸುತ್ತಿದ್ದಾರೆ ಜಲೀಲಾ. ತನ್ನ ವೈಕಲ್ಯಗಳನ್ನೇ ಸಾಧನೆಗೆ ಮೆಟ್ಟಿಲನ್ನಾಗಿ ಮಾಡಿಕೊಂಡು ಮುನ್ನಡೆಯುತ್ತಿದ್ದಾರೆ. ಉತ್ತಮ ವಾಕ್ಚಾತುರ್ಯವನ್ನೂ ಹೊಂದಿರುವ ಈಕೆ, ಮೈಕ್ ಹಿಡಿದು ಮಾತಿಗೆ ನಿಂತರೆ ಸಾಕು, ಸಭೆಯಲ್ಲಿದ್ದ ಎಲ್ಲರೂ ಮಂತ್ರಮುಗ್ಧರಾಗುತ್ತಾರೆ.

    ಹೀಗೆ ಹಾಡು, ಚಿತ್ರಕಲೆ, ಭಾಷಣ ಎಲ್ಲದರಲ್ಲೂ ಎತ್ತಿದ ಕೈ. ಅಷ್ಟೇ ಅಲ್ಲದೇ ಸಾಮಾಜಿಕ ಹೋರಾಟಗಾರ್ತಿಯಾಗಿ ಭಾಷಣಗಳನ್ನು ಮಾಡಿ ಸ್ಪೂರ್ತಿಯಾಗಿದ್ದಾರೆ.

    ಸದ್ಯ ಜಲೀಲಾ ಕೃತಕ ಕಾಲುಗಳನ್ನು ಜೋಡಿಸಿಕೊಂಡು ಸಾಧನೆಯತ್ತ ದಾಪುಗಾಲು ಹಾಕುತ್ತಿದ್ದಾರೆ. ಸ್ವಯಂ ಸೇವಾ ಸಂಸ್ಥೆಯೊಂದಿಗೆ ಕೈ ಜೋಡಿಸಿ, ತನ್ನಂತೆ ಅಂಗವಿಕಲತೆಯನ್ನು ಹೊಂದಿರುವ ಮಕ್ಕಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಕೇರಳದ ಪ್ರಸಿದ್ಧ ಹಿನ್ನೆಲೆ ಗಾಯಕಿಯಾದ ಕೆ.ಎಸ್.ಚಿತ್ರಾ ಮತ್ತು ಸಂಗೀತಗಾರ ಸ್ಟೀಫನ್ ದೇವಸ್ಸಿ ಅವರೊಂದಿಗೆ ಈಚೆಗೆ ಸಂಗೀತ ಪ್ರದರ್ಶನವನ್ನೂ ನೀಡಿ ಭೇಷ್ ಎನಿಸಿಕೊಂಡಿದ್ದಾರೆ.

    ‘ನನ್ನ ಅಂಗವೈಕಲ್ಯವನ್ನು ಆಶೀರ್ವಾದವೆಂದು ನಾನು ಪರಿಗಣಿಸುತ್ತೇನೆ. ಅಂಗವಿಕಲರ ಹಕ್ಕುಗಳಿಗಾಗಿ ಹೋರಾಡುವ ಐಕಾನ್ ಆಗಲು ಇಚ್ಛಿಸುತ್ತೇನೆ. ಕಾಲೇಜಿನಲ್ಲಿ ಆಂಗ್ಲ ವಿಷಯದ ಪ್ರಾಧ್ಯಾಪಕಿ ಅಥವಾ ನಾಗರಿಕ ಸೇವಾ ಅಧಿಕಾರಿಯಾಗುವುದು ನನ್ನ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತಳಾಗಿದ್ದೇನೆ’ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ ನೂರ್ ಜಲೀಲಾ. ಅಮೆರಿಕದ ನಾಸಾಕ್ಕೆ ಭೇಟಿ ನೀಡುವುದು ಮತ್ತು ಮೌಂಟ್ ಎವರೆಸ್ಟ್ ಶಿಖರವನ್ನು ಏರುವುದು ಕೂಡ ಅವರ ಕನಸುಗಳಾಗಿವೆ.

    ದೈಹಿಕ ದೌರ್ಬಲ್ಯವನ್ನು ಹೊಂದಿದ್ದರೂ ಅದಕ್ಕೆ ಅಂಜದೇ ಅಳುಕದೇ ಶ್ರಮ ಹಾಕಿ, ಸಾಧನೆ ಮಾಡುತ್ತಿರುವ ಹಾಗೂ ಬದುಕಿನ ಬಗ್ಗೆ ಛಲ ಮೂಡಲು ಸ್ಪೂರ್ತಿಯಾಗುವಂತಹ 18 ವರ್ಷದ ಜಲೀಲಾ ಇಂದಿನ ಯುವ ಸಮೂಹಕ್ಕೆ ಮಾದರಿ.

    ಯೆಸ್​ ಬ್ಯಾಂಕ್​ ಗ್ರಾಹಕರೇ ಹೆದರಬೇಡಿ, ನಿಮ್ಮೊಂದಿಗೆ ನಾವಿದ್ದೇವೆ: ಎಸ್​ಬಿಐ ಅಧ್ಯಕ್ಷರಿಂದ ಭರವಸೆ

    Fact Check: 2,000 ರೂಪಾಯಿ ನೋಟುಗಳ ಬದಲಿಗೆ 1,000 ರೂ.ನೋಟುಗಳ ಚಲಾವಣೆ ಆಗುತ್ತಿದೆಯಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts