More

    ನೀರೂ ಇಲ್ಲ, ಬೆಳೆಯೂ ಬಂದಿಲ್ಲ- ಆತಂಕದಲ್ಲಿ ಬೆಳೆಗಾರರು

    ಮಾನ್ವಿ: ತುಂಗಭದ್ರಾ ಅಣೆಕಟ್ಟಿನಲ್ಲಿ ನೀರಿನ ಕೊರತೆಯಿಂದ ಕಾಲುವೆಗೆ ಸಮರ್ಪಕವಾಗಿ ಹರಿಯದೆ ಭತ್ತದ ಗದ್ದೆಗಳು, ಜೋಳ, ಹತ್ತಿ, ಮೆಣಸಿನಕಾಯಿ ಬಾಡಿ ಹೋಗುತ್ತಿವೆ. ಇದರೊಂದಿಗೆ ಜನರಿಗೆ, ದನ-ಕರುಗಳಿಗು ಕುಡಿವ ನೀರಿಗೆ ಸಂಚಕಾರ ಎದುರಾಗಿದೆ.

    ಇದನ್ನೂ ಓದಿ: ಬಂಪರ್ ಬೆಲೆ ನಿರೀಕ್ಷೆಯಲ್ಲಿ ಬೆಳೆಗಾರರು

    ಮಳೆ ಕೊರತೆಯಿಂದ ಸಂಪೂರ್ಣವಾಗಿ ಡ್ಯಾಂ ಭರ್ತಿಯಾಗದೆ ಇರುವುದು ಮತ್ತು ಮುಂಗಾರು ಕೊರತೆಯಿಂದ ನೀರಿಲ್ಲದೆ ಬೆಳೆಗಳು ಬಾಡಿ ಹೋಗಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರು ಕಾಣದೆ ಸ್ವಲ್ಪವೂ ಒದ್ದೆಯಾಗದ ಜಮೀನು ಈಗ ಒಣ ಭೂಮಿಯಂತೆ ಗೋಚರಿಸುತ್ತಿದೆ.

    ಜೋಳ, ಮೆಣಸಿನಕಾಯಿ, ಹತ್ತಿ ಉತ್ತಮವಾಗಿ ಬೆಳೆದು, ಈಗ ಬಾಡಿ ಹೋಗುತ್ತಿವೆ. ರೈತರು ಹೊಲ-ಗದ್ದೆಗಳಿಗೆ ಹೋದರೆ ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ. ಈ ವೇಳೆಗಾಗಲೇ ಭತ್ತ, ಹತ್ತಿ, ಮೆಣಸಿನಕಾಯಿ ಬರಬೇಕಿತ್ತು. ಆದರೆ, ಮಳೆಯ ಯಾವ ಲಕ್ಷಣಗಳೂ ಇಲ್ಲ. ಈ ಬಾರಿ ಫಸಲು ಬರುವ ನಿರೀಕ್ಷೆ ಹುಸಿಯಾಗಿದೆ.

    ತಾಲೂಕಿನ ಸಂಗಾಪೂರು, ಗವಿಗಟ್ಟು, ನೀರಮಾನ್ವಿ, ಹಿರೇಕೊಟ್ನೆಕಲ್, ಕಪಗಲ್ ಇತರೆ ಗ್ರಾಮಗಳಲ್ಲಿ ಜೋಳ ಮತ್ತು ಭತ್ತದ ಬೆಳೆ ಬಾಡಿ ಹೋಗಿದ್ದರಿಂದ ಹೊಲಗಳಲ್ಲಿ ಹಸಿರು ಮಾಯವಾಗಿದೆ.

    ಈವರೆಗೆ ಎಕರೆ ಭತ್ತಕ್ಕೆ 35 ಸಾವಿರ ರೂ., ಜೋಳ ಎಕರೆಗೆ 25 ಸಾವಿರ ರೂ., ಹತ್ತಿ ಎಕರೆಗೆ 30 ಸಾವಿರ ರೂ. ಮತ್ತು ಮೆಣಸಿನಕಾಯಿ ಎಕರೆಗೆ 40 ಸಾವಿರ ರೂ.ಗೂ ಅಧಿಕ ಹಣ ಖರ್ಚು ಮಾಡಲಾಗಿದೆ, ಗೊಬ್ಬರ, ಕಾರ್ಮಿಕರ ವೇತನ.. ಹೀಗೆ ಸಾವಿರಾರು ರೂ. ಖರ್ಚಾಗಿವೆ, ಆದರೆ, ನಯಾಪೈಸೆ ಮರಳಿ ಬರುವ ನಿರೀಕ್ಷೆ ಕಾಣುತ್ತಿಲ್ಲ. ಮತ್ತೊಮ್ಮೆ ಮೈತುಂಬ ಸಾಲದ ಹೊರೆ ಹೆಚ್ಚಾಗಲಿದೆ ಎಂದು ರೈತರು ಚಿಂತೆಗೀಡಾಗಿದ್ದಾರೆ.

    ಕೆಳಭಾಗದ ರೈತರು ಈ ಬಾರಿ ನೀರಿನ ಕೊರತೆಯಿಂದ ಭತ್ತ ನಾಟಿ ಮಾಡದೆ, ಮಿತ ಬೆಳೆ ಜೋಳ ಬಿತ್ತಿದ್ದರೂ ಅಲ್ಲಿಗೂ ನೀರು ಬಾರದೆ, ಬೆಳೆಗಳು ಬಾಡಿವೆ. ಈ ಹಿಂದೆ ವರ್ಷಕ್ಕೆ ಎರಡು ಬೆಳೆ ಪಡೆಯುತ್ತಿದ್ದ ರೈತರೀಗ ಕಾಲುವೆ ನೀರು ಮತ್ತು ಮಳೆಯ ಕೊರತೆಯಿಂದ ಈಗ ವರ್ಷದಲ್ಲಿ ಒಂದೂ ಬೆಳೆ ಬೆಳೆಯಲು ಆಗುತ್ತಿಲ್ಲ.

    ನೀರಿನ ಸಮಸ್ಯೆ ಪರಿಹಾರವಾಗದಿದ್ದರೆ ಕೃಷಿ ನಂಬಿ ಜೀವನ ಸಾಗಿಸೋದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ನದಿ ತೀರದ ರೈತರು ನಾಟಿ ಮಾಡಿದ್ದು, ಲಕ್ಷಾಂತರ ರೂಪಾಯಿ ವ್ಯಯಿಸಿದ್ದಾರೆ. ಆದರೆ, ನೀರಿಲ್ಲದೆ ಬೆಳೆಗಳು ಒಣಗುತ್ತಿರುವುದರಿಂದ ಆತಂಕ ಎದುರಿಸುತ್ತಿದ್ದಾರೆ.

    ನೀರಿನ ಸಮಸ್ಯೆ ಇಷ್ಟಕ್ಕೇ ನಿಂತಿಲ್ಲ. ಜನ, ಜಾನುವಾರುಗಳಿಗೂ ಇದರ ಬಿಸಿ ತಟ್ಟುತ್ತಿದೆ. ಎಲ್ಲೆಡೆ ಕುಡಿವ ನೀರಿನ ಸಮಸ್ಯೆ ಎದುರಾಗಲಿದೆ. ಬೇಸಿಗೆ ವೇಳೆಗೆ ಅದರ ಹಾಹಾಕಾರ ಮತ್ತಷ್ಟು ಗಂಭೀರ ಪಡೆಯುವ ಲಕ್ಷಣಗಳೂ ಕಾಣುತ್ತಿವೆ. ಒಂದು ಕಡೆ ಮಳೆಯಿಲ್ಲ, ಕಾಲುವೆಯಲ್ಲಿ ನೀರಿಲ್ಲ.

    ಕೊನೇ ಪಕ್ಷ ಕೊಳವೆ ಬಾವಿಗಳ ಮೂಲಕ ಬೆಳೆಗಳನ್ನು ಉಳಿಸಿಕೊಳ್ಳಬೇಕೆಂದರೂ ವಿದ್ಯುತ್ ಕೂಡ ಕೈಕೊಡುತ್ತಿದೆ. ದಿನಕ್ಕೆ ಏಳು ತಾಸು ವಿದ್ಯುತ್ ನೀಡಿದರೆ ಬಾಡುವ ಬೆಳೆಗಳಿಗೆ ನೀರು ಜೀವ ಕೊಡುತ್ತದೆ. ಆದರೆ, ತಾಸಿಗೆ ಮೂರ‌್ನಾಲ್ಕು ಬಾರಿ ವಿದ್ಯುತ್ ಹೋಗಿ-ಬರುವುದರಿಂದ ಬೆಳೆಗಳಿಗೆ ನೀರು ಬಿಡಲು ಆಗುತ್ತಿಲ್ಲ.

    ಈ ಬಾರಿ ಭತ್ತ 2845 ಹೆಕ್ಟರ್, ಹತ್ತಿ 19387 ಹೆಕ್ಟರ್, ಜೋಳ 8 ಸಾವಿರ ಹೆಕ್ಟರ್, ತೊಗರಿ 5508 ಹೆಕ್ಟರ್ ಬಿತ್ತನೆಯಾಗಿತ್ತು. ಮಳೆ ಕೊರತೆಯಿಂದ ಬೆಳೆಗಳು ನಷ್ಟವಾಗಿವೆ. ಮಾನ್ವಿ-ಸಿರವಾರ ತಾಲೂಕುಗಳನ್ನು ಬರಗಾಲ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ನಿರೀಕ್ಷೆ ಮಟ್ಟಕ್ಕಿಂತ ಮಳೆ ಕಡಿಮೆಯಾಗಿದೆ. ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
    | ಹುಸೇನ್ ಸಾಹೇಬ್, ಸಹಾಯಕ ಕೃಷಿ ನಿರ್ದೇಶಕ, ಮಾನ್ವಿ

    ರೈತರ ಕಷ್ಟ ಯಾರು ಕೇಳಬೇಕು ? ಈ ಬಾರಿ ಕೆಳ ಭಾಗದ ರೈತರಿಗೆ ಕಾಲುವೆ ನೀರು ಕೊಡಲು ಆಗದೇ ಬೆಳೆ ತೆಗೆಯಲು ಸಾಧ್ಯವಾಗಿಲ್ಲ. ಮಳೆಯೂ ಕೈಕೊಟ್ಟಿದೆ. ವರ್ಷದಿಂದ ವರ್ಷಕ್ಕೆ ನೀರಿನ ಅಭಾವ ಹೆಚ್ಚಾಗುತ್ತಿದೆ. ಇದಕ್ಕೆ ಯಾವ ಸರ್ಕಾರವೂ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿಲ್ಲ. ಹೀಗೆ ಮುಂದುವರಿದರೆ ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳು ಸಂಖ್ಯೆ ಹೆಚ್ಚಾಗುತ್ತದೆ.
    | ಶರಣಪ್ಪ ಮೇಟಿ, ಮಾಡಗಿರಿ ರೈತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts