More

  ರಾಷ್ಟ್ರಮಟ್ಟದಲ್ಲಿ ಕನ್ನಡ ಬಲಗೊಳ್ಳದಿದ್ದರೆ ಭಾಷೆ ನಾಸ್ತಿ

  ಮೂಡಿಗೆರೆ: ರಾಷ್ಟ್ರ ಮಟ್ಟದಲ್ಲಿ ಕನ್ನಡ ಭಾಷೆ ಬಲಿಷ್ಠವಾಗಿ ಬಲಗೊಳ್ಳದಿದ್ದರೆ ಕನ್ನಡದ ಅಸ್ತಿತ್ವವೇ ನಾಶವಾಗುವ ಸಾಧ್ಯವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಹಳೇಕೋಟೆ ರಮೇಶ್ ಆತಂಕ ವ್ಯಕ್ತಪಡಿಸಿದರು.

  ಶುಕ್ರವಾರ ಅಡ್ಯಂತಾಯ ರಂಗಮಂದಿರದ ಕವಿ ಲಕ್ಷ್ಮೀಶ ವೇದಿಕೆಯಲ್ಲಿ ಆಯೋಜಿಸಿರುವ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳು ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವುದಕ್ಕೆ ಸರ್ಕಾರ ಮುಕ್ತ ಅವಕಾಶ ಕೊಡಬೇಕು. ಎಲ್ಲವೂ ಹೋರಾಟದಿಂದ ಆಗಬೇಕಾದ ಪ್ರಕ್ರಿಯೆಯಲ್ಲ ಎಂಬುದನ್ನು ಆಡಳಿತ ವರ್ಗ ತಿಳಿದುಕೊಳ್ಳಬೇಕು ಎಂದರು.
  ಇತಿಹಾಸ, ಸಾಹಿತ್ಯ, ಸಂಸ್ಕೃತಿ ಮತ್ತು ಸಾಹಿತ್ಯದ ಪರಂಪರೆ ಸಾಮರ್ಥ್ಯವನ್ನು ಸರ್ಕಾರ ಗೌರವಿಸಬೇಕು. ಭಾಷೆಗಳಲ್ಲಿ ಮೇಲು-ಕೀಳಿಲ್ಲ. ಅದೊಂದು ಸಂವಹನ ಮಾಧ್ಯಮ ಎಂಬುದನ್ನು ತಿಳಿದು ಆಡಳಿತ ವ್ಯವಸ್ಥೆ ವ್ಯವಹಾರಿಸಬೇಕೆ ಹೊರತು ಪ್ರಬುದ್ಧ ಪ್ರಾದೇಶಿಕ ಭಾಷೆಯನ್ನು ಹಿಂದಕ್ಕೆ ಸರಿಸುವುದು ಸರಿಯಲ್ಲ. ರೈಲ್ವೆ, ಬ್ಯಾಂಕ್, ಅಂಚೆ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಕನ್ನಡಕ್ಕೆ ಅವಕಾಶವೇ ಇಲ್ಲವೆಂಬಂತಾಗಿದೆ. ರಾಜ್ಯದ ಕೆಲವು ಕಚೇರಿಗಳಲ್ಲಿ ಇಂಗ್ಲಿಷ್‌ನಲ್ಲಿ ವ್ಯವಹರಿಸುತ್ತಿರುವುದು ದುರಂತ. ಕನ್ನಡ ನಾಡಿನಲ್ಲಿ ಜನಸಾಮಾನ್ಯರು ವ್ಯವಹರಿಸುವ ಯಾವುದೇ ಕ್ಷೇತ್ರದಲ್ಲೂ ಕನ್ನಡಕ್ಕೆ ಆದ್ಯತೆ ಕೊಡಬೇಕು ಎಂದು ತಿಳಿಸಿದರು.
  ಕನ್ನಡ ಶ್ರೀಮಂತ ಭಾಷೆ. ಕನ್ನಡದ ಎಲ್ಲ ಪ್ರಕಾರಗಳಲ್ಲೂ ಸಾಹಿತ್ಯ ರಚನೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಕ್ಕೆ ಸಾಕಷ್ಟು ಪುರಸ್ಕಾರಗಳು ಲಭಿಸಿವೆ. ಅರ್ಹತೆ ಇರುವ ಇನ್ನೂ ಹಲವು ಮಂದಿ ಕನ್ನಡಿಗ ಪಂಡಿತರಿದ್ದಾರೆ. ಶ್ರೀಸಾಮಾನ್ಯನೂ ಭಾಷೆ ಮತ್ತು ಸಾಹಿತ್ಯದ ಸವಿ ಸವಿಯಂತಾಗಬೇಕು. ಯುವ ಪೀಳಿಗೆಯನ್ನೂ ಕನ್ನಡ ಆಕರ್ಷಿಸಿಕೊಳ್ಳುವಂತಾಗಬೇಕು. ಬದುಕಿಗೆ ಹತ್ತಿರವಾಗಿರುವ ಮತ್ತು ಭವಿಷ್ಯ ರೂಪಿಸಿಕೊಳ್ಳಲು ಪ್ರೇರಕವಾಗುವ ಸಾಹಿತ್ಯದ ಅಗತ್ಯವಿದೆ. ಸರ್ಕಾರಿ ಮತ್ತು ಖಾಸಗಿ ನೌಕರಿಯಲ್ಲಿ ಕನ್ನಡಿಗರಿಗೆ ಆದ್ಯತೆ ದೊರೆತರೆ ಕನ್ನಡಕ್ಕೂ ಸ್ಥಾನಮಾನ ಸಿಕ್ಕಿದಂತಾಗುತ್ತದೆ. ಕಂಪ್ಯೂಟರ್‌ನಲ್ಲಿ ಇಂಗ್ಲಿಷ್‌ನಷ್ಟು ಸಮರ್ಥವಾಗಿ ಕನ್ನಡ ಬಳಸಲು ಸಾಧ್ಯವಾಗದಿದ್ದರೆ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
  ಸರ್ಕಾರಿ ಶಾಲೆ, ಗ್ರಾಮೀಣ ಕಾಲೇಜುಗಳು ಮುಚ್ಚುವ ಹಂತಕ್ಕೆ ತಲುಪಿವೆ. ಇದು ಕೇವಲ ಇಂಗ್ಲಿಷ್ ಭಾಷಾ ವ್ಯಾಮೋಹದಿಂದ ಆಗಿರುವಂತದ್ದಲ್ಲ. ಕನ್ನಡ ಮಾಧ್ಯಮದ ಹಿಂಜರಿಕೆಗೆ ಕಾರಣ ಹುಡುಕಬೇಕಿದೆ. ಅದರೊಂದಿಗೆ ಶಿಕ್ಷಕರ ಕಾರ್ಯಕ್ಷಮತೆ ಮತ್ತು ಕೌಶಲ ಹೆಚ್ಚಾಗಬೇಕಾಗಿದೆ. ಎರಡು ದಶಕಗಳ ಹಿಂದೆ ಕನ್ನಡ ಮಾಧ್ಯಮದಲ್ಲಿ ಕಲಿತ ಬಹಳಷ್ಟು ಮಂದಿ ಸಾಧನೆ ಮಾಡಿ ಮಾನ್ಯರಾಗಿದ್ದಾರೆ. ಶ್ರೀಮಂತ ಮತ್ತು ಬಡ ವರ್ಗದ ಪಾಲಕರು ಮಕ್ಕಳನ್ನು ಒಂದೇ ಶಾಲೆಗೆ ಕಳುಹಿಸುತ್ತಿದ್ದರು. ಈಗ ಶಿಕ್ಷಣದ ವ್ಯಾಪ್ತಿ ಹೆಚ್ಚಾಗಿದ್ದರೂ ಉಳ್ಳವರು ಮತ್ತು ಸಾಮಾನ್ಯರ ನಡುವಿನ ಅಂತರ ಹೆಚ್ಚಾಗಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರೆಲ್ಲ ಜೀವನದಲ್ಲಿ ಉತ್ತುಂಗಕ್ಕೆರಿದ್ದಾರೆಂದು ಭಾವಿಸಬೇಕಿಲ್ಲ. ಕನ್ನಡ ಮಾಧ್ಯಮದಲ್ಲಿ ಉನ್ನತ ಶಿಕ್ಷಣ ಪಡೆದರೆ ಉದ್ಯೋಗಕ್ಕೆ ತೊಂದರೆಯಾಗದು. ಶಾಲಾ ನಿರ್ವಹಣೆ ಪಾಲಕರ ಆಸಕ್ತಿ, ಸಹಕಾರ, ಶಿಕ್ಷಕರ ನಿಷ್ಠೆ, ಸರ್ಕಾರದ ನೀತಿಗಳಲ್ಲಿ ಹೊಂದಾಣಿಕೆ ಉಂಟಾದರೆ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿಕೊಳ್ಳಬದು ಎಂದು ತಿಳಿಸಿದರು.
  ಕೃಷಿ ರೈತರಿಗೆ ದೊಡ್ಡ ಸವಾಲಾಗಿದೆ. ಕಾರ್ಮಿಕರ ಸಮಸ್ಯೆ, ಹೆಚ್ಚಿನ ವೆಚ್ಚದಿಂದ ಕಂಗಾಲಾಗಿದ್ದಾರೆ. ಯಾಂತ್ರಿಕ ಬದುಕಿನಲ್ಲಿ ಹಣದ ಹಪಾಹಪಿ ಹೆಚ್ಚಾಗುತ್ತಿದ್ದು ಸುಲಭವಾಗಿ ಹಣ ಸಂಪಾದಿಸುವ ಕಾತರ ಎಲ್ಲೆಡೆ ಕಾಣುತ್ತಿದೆ. ಇದರಿಂದ ನೈತಿಕ ಮೌಲ್ಯ ಕುಸಿಯುತ್ತಿದೆ ಎಂದರು.
  ಹಿರಿಯ ಸಾಹಿತಿಗಳಾದ ಚಟ್ನಹಳ್ಳಿ ಮಹೇಶ್, ಕಲಬುರಗಿ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ, ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ತಾಲೂಕು ಅಧ್ಯಕ್ಷ ಶಾಂತಕುಮಾರ್, ಬಿ.ಎಸ್.ಜಯರಾಮ್, ಜೆ.ಎಸ್.ರಘು, ನಿರ್ಮಲಾ ಮಂಚೇಗೌಡ, ಹಳೇಕೋಟೆ ವಿಶ್ವಮಿತ್ರ, ಮಗ್ಗಲಮಕ್ಕಿ ಗಣೇಶ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts