More

    ಶಾರ್ದೂಲ್ ಸುಂದರ ಬ್ಯಾಟಿಂಗ್, ಬ್ರಿಸ್ಬೇನ್‌ನಲ್ಲಿ ಭಾರತ ದಿಟ್ಟ ಹೋರಾಟ

    ಬ್ರಿಸ್ಬೇನ್: ಚೊಚ್ಚಲ ಟೆಸ್ಟ್ ಆಡುತ್ತಿರುವ ವಾಷಿಂಗ್ಟನ್ ಸುಂದರ್ (62 ರನ್, 144 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ವೇಗಿ ಶಾರ್ದೂಲ್ ಠಾಕೂರ್ (67 ರನ್, 115 ಎಸೆತ, 9 ಬೌಂಡರಿ, 2 ಸಿಕ್ಸರ್) ದಿಟ್ಟ ಹೋರಾಟದ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಮೂರನೇ ದಿನದಾಟದಲ್ಲಿ ಆತಿಥೇಯ ಆಸ್ಟ್ರೇಲಿಯಾಕ್ಕೆ ಸೆಡ್ಡು ಹೊಡೆದಿದೆ. ಈ ಮೂಲಕ ಸರಣಿಯ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬಹುತೇಕ ಸಮಬಲದ ನಿರ್ವಹಣೆ ತೋರಿರುವ ಅಜಿಂಕ್ಯ ರಹಾನೆ ಬಳಗ, ಬಾರ್ಡರ್-ಗಾವಸ್ಕರ್ ಟ್ರೋಫಿ ಉಳಿಸಿಕೊಳ್ಳುವ ಆಸೆಗೆ ಬಲ ತುಂಬಿದೆ.

    ಗಾಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಿರ್ಣಾಯಕ ಪಂದ್ಯದಲ್ಲಿ 2 ವಿಕೆಟ್‌ಗೆ 62 ರನ್‌ಗಳಿಂದ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ, ದಿನದಾಟ ಮುಕ್ತಾಯಕ್ಕೆ ಸ್ವಲ್ಪ ಸಮಯವಿದ್ದಾಗ 336 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದ ಭಾರತ ಮೊದಲ ಇನಿಂಗ್ಸ್‌ನಲ್ಲಿ 33 ರನ್‌ಗಳ ಅಲ್ಪ ಹಿನ್ನಡೆ ಅನುಭವಿಸಿತು. ಆಸ್ಟ್ರೇಲಿಯಾ ತಂಡ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದ್ದು, ಒಟ್ಟು 54 ರನ್ ಮುನ್ನಡೆಯಲ್ಲಿದೆ. ಆರಂಭಿಕರಾದ ಡೇವಿಡ್ ವಾರ್ನರ್ (20*) ಮತ್ತು ಮಾರ್ಕಸ್ ಹ್ಯಾರಿಸ್ (1*) 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ಇದನ್ನೂ ಓದಿ: ಪಾಕಿಸ್ತಾನಕ್ಕೆ ರಾಹುಲ್ ದ್ರಾವಿಡ್ ಮಾದರಿಯಾಗಲಿ ಎಂದು ಅಫ್ರಿದಿ ಹೇಳಿದ್ದೇಕೆ ಗೊತ್ತೇ?

    ಪಂದ್ಯದಲ್ಲಿ ಇನ್ನು 2 ದಿನಗಳ ಆಟ ಬಾಕಿ ಉಳಿದಿದ್ದು, ಆಸೀಸ್ ತಂಡ ಭಾರತಕ್ಕೆ ಎಷ್ಟು ರನ್‌ಗಳ ಸವಾಲು ನೀಡಲಿದೆ ಎಂಬುದು ಕುತೂಹಲ ಸೃಷ್ಟಿಸಿದೆ. 3ನೇ ದಿನ ಮಳೆ ಯಾವುದೇ ತೊಂದರೆ ನೀಡದಿದ್ದರೂ, ಉಳಿದೆರಡು ದಿನಗಳಲ್ಲಿ ಮಳೆ ಕಾಡುವ ಭೀತಿ ಇದ್ದೇ ಇದೆ. ಹೀಗಾಗಿ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲುವ ಅಥವಾ ಡ್ರಾ ಸಾಧಿಸುವ ಅವಕಾಶಗಳೇ ಹೆಚ್ಚಾಗಿ ಕಾಣಿಸುತ್ತಿವೆ. ಈ ಮೂಲಕ 2018-19ರ ಪ್ರವಾಸದಲ್ಲಿ ಗೆದ್ದ ಟ್ರೋಫಿಯನ್ನು ಉಳಿಸಿಕೊಳ್ಳುವ ಐತಿಹಾಸಿಕ ಸಾಧನೆಯ ಸಾಧ್ಯತೆಗಳೂ ಹೆಚ್ಚಾಗಿವೆ.

    ಶಾರ್ದೂಲ್-ಸುಂದರ್ ದಿಟ್ಟ ಜತೆಯಾಟ: ಭಾರತ ತಂಡ ಅಗ್ರ ಬ್ಯಾಟ್ಸ್‌ಮನ್‌ಗಳ ವಿಕೆಟ್ ಕಳೆದುಕೊಂಡು ಭಾರಿ ಹಿನ್ನಡೆ ಕಾಣುವ ಭೀತಿ ಎದುರಿಸುತ್ತಿದ್ದಾಗ ಶಾರ್ದೂಲ್ ಠಾಕೂರ್-ವಾಷಿಂಗ್ಟನ್ ಸುಂದರ್ ಜೋಡಿ 7ನೇ ವಿಕೆಟ್‌ಗೆ 123 ರನ್ ಸೇರಿಸಿತು. ಈ ಮೂಲಕ ಪಂದ್ಯದಲ್ಲಿ ಬಿಗಿಹಿಡಿತ ಸಾಧಿಸುವ ಆಸೀಸ್ ಆಸೆಗೆ ಈ ಜೋಡಿ ತಣ್ಣೀರೆರಚಿತು.

    ಆಸ್ಟ್ರೇಲಿಯಾ: 369 ಮತ್ತು 6 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 21 (ವಾರ್ನರ್ 20*, ಹ್ಯಾರಿಸ್ 1*), ಭಾರತ: 111.4 ಓವರ್‌ಗಳಲ್ಲಿ 336 (ಪೂಜಾರ 25, ರಹಾನೆ 37, ಮಯಾಂಕ್ ಅಗವಾಲ್ 38, ರಿಷಭ್ ಪಂತ್ 23, ವಾಷಿಂಗ್ಟನ್ 62, ಶಾರ್ದೂಲ್ 67, ನವದೀಪ್ ಸೈನಿ 5, ಸಿರಾಜ್ 13, ಹ್ಯಾಸಲ್‌ವುಡ್ 57ಕ್ಕೆ 5, ಸ್ಟಾರ್ಕ್ 88, ಕಮ್ಮಿನ್ಸ್ 94, ಲ್ಯಾನ್ 65ಕ್ಕೆ 1).

    ದೇಶೀಯ ಟಿ20ಯಲ್ಲಿ ಮಿಂಚುತ್ತಿದ್ದಾರೆ ಕೇದಾರ್ ಜಾಧವ್, ಸಿಎಸ್‌ಕೆ ಫ್ಯಾನ್ಸ್ ಏನಂದರು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts