More

    ಮಳೆಯೂ ಇಲ್ಲ, ಕಾಲುವೆಗೂ ನೀರಿಲ್ಲ!

    ಕೊಕಟನೂರ: ಕಳೆದ ತಿಂಗಳು ಸುರಿದ ಅಲ್ಪಸ್ವಲ್ಪ ಮಳೆಯನ್ನು ನಂಬಿ ಅಥಣಿ ತಾಲೂಕಿನ ರೈತರು ಬಿತ್ತನೆ ಮಾಡಿದ್ದು, ಈಗ ಇತ್ತ ಮಳೆಯೂ ಇಲ್ಲ, ಅತ್ತ ಕೃಷ್ಣಾ ನದಿಯಿಂದ ಕಾಲುವೆಗೆ ನೀರು ಬಿಡದ ಕಾರಣ ರೈತರು ಕಂಗಾಲಾಗಿದ್ದಾರೆ.

    ಮೇ 20ರ ಬಳಿಕ ಭರಣಿ ಹಾಗೂ ಕೃತಿಕಾ ಮಳೆ 5 ದಿನ ನಿರಂತರ ಸುರಿದ ಪರಿಣಾಮ ರೈತರ ಮುಖದಲ್ಲಿ ಮಂದಹಾಸ ಮೂಡಿತ್ತು. ಆಗ ನಾ ಮುಂದೆ..ತಾ ಮುಂದೆ..ಎಂದು ಸೋಯಾಬೀನ್, ತೊಗರಿ, ಉದ್ದು, ಹೆಸರು, ಶೇಂಗಾ ಸೇರಿ ಇತರ ಮುಂಗಾರು ಹಂಗಾಮಿನ ಬೀಜ ಬಿತ್ತನೆ ಮಾಡಿದ್ದರು. ಆದರೆ, ರೋಹಿಣಿ ಕಳೆದು ಮೃಗಶಿರ ಮಳೆ ಬಂದರೂ ಒಂದು ಹನಿಯೂ ಮಳೆ ಸುರಿಯುತ್ತಿಲ್ಲ. ಇದರಿಂದ ಜಮೀನಿನಲ್ಲಿ ಬಿತ್ತಿದ ಬೀಜ ಮೊಳಕೆಯೊಡೆದು ಮೇಲೆ ಬರುತ್ತಿಲ್ಲ. ಮೇಲೆದ್ದ ಬೆಳೆ ನೀರಿಲ್ಲದೆ ಕಮರುತ್ತಿವೆ. ಇದರಿಂದ ರೈತರಲ್ಲಿ ಚಿಂತೆ ಹೆಚ್ಚಿಸಿದೆ.

    ಕಾಲುವೆಗೆ ನೀರು ಬಿಡುತ್ತಿಲ್ಲ: ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ಕೃಷ್ಣಾ ನದಿಯಲ್ಲಿ ನೀರಿನ ಒಳ ಹರಿವು ಹೆಚ್ಚಿದೆ. ಇದರಿಂದ ಹಿಪ್ಪರಗಿ ಡ್ಯಾಂನಲ್ಲಿ ಸಾಕಷ್ಟು ನೀರಿನ ಸಂಗ್ರಹವಾಗಿದೆ. ತಾಲೂಕಿನಲ್ಲಿ ಈಗ ಮಳೆ ಆಗದೇ ರೈತರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೂ ಹಿಪ್ಪರಗಿ ಡ್ಯಾಂನಿಂದ ಕಾಲುವೆಗಳಿಗೆ ನೀರು ಹರಿಸುತ್ತಿಲ್ಲ. ಇದು ರೈತರಲ್ಲಿ ಬೇಸರ ಮೂಡಿಸಿದೆ.

    ಹಿಪ್ಪರಗಿ ಡ್ಯಾಂನಿಂದ ಕರಿಮಸೂತಿ ಹಾಗೂ ಹಲ್ಯಾಳ ಏತ ನೀರಾವರಿ ಮೂಲಕ ಅಥಣಿ ತಾಲೂಕಿನ ಪೂರ್ವ, ಪಶ್ಚಿಮ ಹಾಗೂ ಉತ್ತರ ಭಾಗದ ಒಟ್ಟು 59 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಕಾಲುವೆಗಳಿಗೆ ಮಾತ್ರ ರೈತರಿಗೆ ಅನುಕೂಲವಾಗುವಂತೆ ಸಮರ್ಪಕವಾಗಿ ನೀರು ಹರಿಸುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಶಾಸಕ ಮಹೇಶ ಕುಮಠಳ್ಳಿಯವರಿಗೆ ರೈತರ ಬವಣೆ ಅರ್ಥವಾಗುತ್ತಿಲ್ಲವೇ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಬೆಳೆ ಒಣಗದಿರಲು ಶೀಘ್ರ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಕೊಕಟನೂರ, ಐಗಳಿ, ಸತ್ತಿ, ಬಡಚಿ, ಕಟಗೇರಿ ಸೇರಿ ಹಲವು ಗ್ರಾಮಗಳ ರೈತರು ಒತ್ತಾಯಿಸಿದ್ದಾರೆ.

    ಹಿಪ್ಪರಗಿ ಡ್ಯಾಂಗೆ ಬಂದ ಕೃಷ್ಣಾ ನದಿ ನೀರೆಲ್ಲ ಹೊರಕ್ಕೆ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಪ್ರತಿ ದಿನ ಕೃಷ್ಣಾ ನದಿಗೆ ಕಟ್ಟಿರುವ ಹಿಪ್ಪರಗಿ ಡ್ಯಾಂಗೆ ಐದು ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷದಂತೆ ಈ ಬಾರಿ ನದಿ ದಂಡೆಯ ಗ್ರಾಮಗಳು ಮುಳುಗಡೆಯಾಗಿ ಸಾವು-ನೋವು, ಆಸ್ತಿ-ಪಾಸ್ತಿ ಹಾಳಾಗದಿರಲಿ ಎಂದು ಬರುವ ನೀರನ್ನೆಲ್ಲ ಹಿಪ್ಪರಗಿ ಡ್ಯಾಂನಿಂದ ಹೊರ ಬಿಡಲಾಗುತ್ತಿದೆ. ಸದ್ಯ 1.3 ಟಿಎಂಸಿ ನೀರನ್ನು ಮಾತ್ರ ಹಿಪ್ಪರಗಿ ಡ್ಯಾಂನಲ್ಲಿ ಸಂಗ್ರಹಿಸಲಾಗಿದೆ.

    ಮಳೆರಾಯನ ನಂಬಿ ಭೂಮಿ ತಾಯಿಯ ಉಡಿತುಂಬಿ 20 ದಿನ ಕಳೆಯಿತು. ಬೀಜ ಬಿತ್ತನೆ ಬಳಿಕ ಒಂದು ಹನಿಯೂ ಮಳೆ ಸುರಿದಿಲ್ಲ. ಕಾಲುವೆಗಳಿಗೆ ನೀರು ಬಿಡುತ್ತಿಲ್ಲ. ಇದರಿಂದ ಬೆಳೆ ಕಮರಿ ಹೋಗುತ್ತಿವೆ. ಹೀಗಾದರೆ ಒಕ್ಕಲುತನ ಮಾಡುವುದು ರೈತರಿಗೆ ಬಹಳ ಕಷ್ಟವಾಗುತ್ತದೆ. ಹಿಪ್ಪರಗಿ ಡ್ಯಾಂನಿಂದ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಿ ಅನುಕೂಲ ಕಲ್ಪಿಸಬೇಕು.
    | ಅರುಣ ಕೋಹಳ್ಳಿ ಅಡಹಳ್ಳಿ ಗ್ರಾಮದ ರೈತ

    ಹಿಪ್ಪರಗಿ ಡ್ಯಾಂ ವ್ಯಾಪ್ತಿಯ ಕಾಲುವೆ ಸ್ವಚ್ಛಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಕಳೆದ ಎರಡು ದಿನಗಳಿಂದ ಕೃಷ್ಣಾ ನದಿ ನೀರಿನ ಒಳ ಹರಿವಿನ ಪ್ರಮಾಣ ಕಡಿಮೆಯಾಗಿದೆ. ನೀರಿನ ಪ್ರಮಾಣ ನೋಡಿಕೊಂಡು ಜೂನ್ 20ರೊಳಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು.
    | ಕೆ.ಕೆ. ಜಾಲಿಬೇರಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತ, ಎಚ್‌ಬಿಸಿ ಅಥಣಿ

    | ಮೋಹನ ಪಾಟಣಕರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts