More

    ಶಾಲೆ ಆರಂಭಿಸಲು ಆತುರವಿಲ್ಲ: ಸಚಿವ ಸುರೇಶ್​ಕುಮಾರ್

    ಶಿಕ್ಷಣ ಇಲಾಖೆ ಸಹಾಯವಾಣಿಗೆ ಚಾಲನೆ

    ಬೆಂಗಳೂರು: ಈ ಮಾಸಾಂತ್ಯದ ವೇಳೆಗೆ ಶಾಲೆಗಳು ಯಾವಾಗ ಆರಂಭವಾಗಲಿವೆ ಎಂಬುದಕ್ಕೆ ಒಂದು ಸ್ಪಷ್ಟ ರೂಪ ಸಿಗಬಹುದು. ಆ ತನಕವೂ ನಾವು ಶಾಲೆಗಳನ್ನು ಆರಂಭಿಸಲು ಆತುರಪಡುವುದಿಲ್ಲ ಎಂದು ಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್ ಹೇಳಿದ್ದಾರೆ.

    ಶುಕ್ರವಾರ ಶಿಕ್ಷಕರ ಸದನದಲ್ಲಿ ಇಲಾಖೆಯ ಸಹಾಯವಾಣಿ-ಶಿಕ್ಷಣವಾಣಿ ಮತ್ತು ಶಿಕ್ಷಣ ಸಚಿವರ ಡ್ಯಾಷ್​ಬೋರ್ಡ್-ಪರಿವರ್ತನಾ ಕೇಂದ್ರಗಳಿಗೆ ಚಾಲನೆ ನೀಡಿ ಮಾತನಾಡಿದರು. ಶಾಲೆಗಳ ಆರಂಭದ ಕುರಿತು ಇನ್ನೂ ಯಾವುದೇ ಸೂಚನೆಗಳಿಲ್ಲ. ಈ ಮಾಸಾಂತ್ಯದ ತನಕ ನಾವು ಶಾಲಾರಂಭಕ್ಕೆ ಆತುರಪಡುವುದಿಲ್ಲ ಎಂದರು.  ಶಿಕ್ಷಣ ಇಲಾಖೆ ಸಮಸ್ಯೆಗಳ ಪರಿಹಾರಕ್ಕೆ ಶಿಕ್ಷಣವಾಣಿ-ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ. ಕುಂದು-ಕೊರತೆಗಳಿಗೆ ಸಂಬಂಧಿಸಿದಂತೆ ಸಹಾಯವಾಣಿ, ವಾಟ್ಸ್​ಆಪ್ ಸೌಲಭ್ಯ ಇರಲಿದೆ. ಪ್ರತ್ಯೇಕ ಫ್ರೀ-ಟೋಲ್ ಸಂಖ್ಯೆಯೂ ಇದೆ. ಇದರ ವ್ಯವಸ್ಥಿತ ನಿರ್ವಹಣೆಯನ್ನು ನಾನೇ ಖುದ್ದಾಗಿ ನಿರಂತರವಾಗಿ ಪರಾಮಶಿಸಲಿದ್ದೇನೆ ಎಂದು ತಿಳಿಸಿದರು.

    ಇಲಾಖೆಯ ಆಡಳಿತ ಪ್ರಕ್ರಿಯೆಗೆ ತಾಂತ್ರಿಕ ಸ್ಪರ್ಶ ನೀಡಲು ಇಎಂ (ಶಿಕ್ಷಣ ಸಚಿವ) ಡ್ಯಾಷ್​ಬೋರ್ಡ್-ಪರಿವರ್ತನ- ಸ್ಥಾಪನೆಯಾಗಿದೆ. ಇದರಲ್ಲಿ ಇಲಾಖೆಗೆ ಸಂಬಂಧಿಸಿದ ಎಲ್ಲ ವಿಷಯಗಳ ಪರಿಶೀಲನೆ, ಪ್ರತಿ ವಿದ್ಯಾರ್ಥಿಯ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ-ಎಸ್​ಎಟಿಎಸ್ ಅಳವಡಿಕೆಯಾಗಿದೆ. ಕಳೆದ ಬಾರಿ ಕಡ್ಡಾಯ ವರ್ಗಾವಣೆ ಆಗಬೇಕಾದವರು ಮತ್ತು ಹೆಚ್ಚುವರಿ ಶಿಕ್ಷಕರೆಂದು ವರ್ಗಾವಣೆ ಆಗಬೇಕಾದವರಿಗೆ ಮೊದಲ ಆದ್ಯತೆ ದೊರೆಯಲಿದೆ. ಈ ಎಲ್ಲ ತಂತ್ರಜ್ಞಾನಾಧಾರಿತ ವ್ಯವಸ್ಥೆಯಿಂದ ಶಿಕ್ಷಕರು ಶಾಲೆ ಬಿಟ್ಟು ಬಿಇಒ/ಡಿಡಿಪಿಐ ಕಚೇರಿಗೆ ಅಲೆದಾಡುವುದು ನಿಲ್ಲಲಿದೆ. ಇದರಿಂದ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ ಎಂದು ವಿವರಿಸಿದರು.

    ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಸಮಸ್ಯೆ

    ಕರೋನಾ ಹಿನ್ನೆಲೆಯಲ್ಲಿ ಶಾಲೆಗಳು ಸಕಾಲಕ್ಕೆ ಆರಂಭವಾಗದೆ ಇರುವುದರಿಂದ ಖಾಸಗಿ ಅನುದಾನರಹಿತ ಶಾಲೆಗಳ ಶಿಕ್ಷಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಅವರಿಗಾಗಿ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಲು ಇಲಾಖೆ ಚಿಂತನೆ ನಡೆಸಲಾಗಿದೆ. ಈಗಾಗಲೇ ಅಂಥ ಶಿಕ್ಷಕರು ಮತ್ತು ಆ ಶಾಲೆಗಳ ಸಿಬ್ಬಂದಿಯ ಅಂಕಿ-ಸಂಖ್ಯೆ ಸಂಗ್ರಹಿಸಲಾಗುತ್ತಿದೆ. ಅವರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬೇಕೆಂಬ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದು ಕರೆ ಕೇಂದ್ರದಲ್ಲಿ ಶಿಕ್ಷಕರೊಬ್ಬರ ಕರೆ ಸ್ವೀಕರಿಸಿ ಸಚಿವರು ಪ್ರತಿಕ್ರಿಯಿಸಿದರು.

    ಪಾಲನೆ ಆಗಬೇಕಿದೆ ವಿವೇಕಾನಂದರ ಆದರ್ಶ

    ಸ್ವಾಮಿ ವಿವೇಕಾನಂದ ಅವರು ಶಿಕ್ಷಣದ ಕುರಿತು ವಿವರಿಸಿದ ನೀತಿ ನಾವು ಅಳವಡಿಸಿಕೊಳ್ಳಬೇಕಿದೆ. ವಿವೇಕಾನಂದರ ಚಿಂತನೆಯನ್ನು ವಿಶ್ವಸಂಸ್ಥೆ ಮತ್ತು ಯುನೆಸ್ಕೋಗಳು ಆಗಲೇ ಒಪ್ಪಿಕೊಂಡಿದ್ದವು. ದೇಶವನ್ನು ನೈತಿಕ ನೆಲೆಗಟ್ಟಿನಲ್ಲಿ ಕಟ್ಟಲು ವಿವೇಕಾನಂದರ ಆದರ್ಶಗಳ ಪಾಲನೆಯಾಗಬೇಕಿದೆ. ಶಿಕ್ಷಣ ವಿವೇಕಾನಂದರ ಚಿಂತನೆಯ ನೆಲೆಗಟ್ಟಿನಲ್ಲಿ ಪ್ರಸಾರವಾಗಬೇಕಿದೆ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀ ವೀರೇಶಾನಂದ ಸ್ವಾಮೀಜಿ ತಿಳಿಸಿದರು. ಇಂದು ಭಾರತದಲ್ಲಿ ಸಾರ್ವಜನಿಕ ಶಿಕ್ಷಣ ಮತ್ತು 905 ವಿವಿಗಳಲ್ಲಿ ಸಿಗುತ್ತಿರುವ ಶಿಕ್ಷಣ ಕೇವಲ ಅಕ್ಷರಸ್ಥರನ್ನು ರೂಪಿಸುತ್ತಿದೆಯಷ್ಟೇ, ಅದು ವಿದ್ಯಾವಂತರನ್ನು ರೂಪಿಸುತ್ತಿಲ್ಲ. ಕೇವಲ ಯೋಗ್ಯತಾ ಪ್ರಮಾಣಪತ್ರ್ರ ನೀಡುತ್ತಿವೆಯೇ ವಿನಾ ಯೋಗ್ಯತೆಯನ್ನು ರೂಪಿಸುತ್ತಿಲ್ಲ ಎಂದು ಶ್ರೀಗಳು ವಿಷಾದ ವ್ಯಕ್ತಪಡಿಸಿದರು.

    ಫ್ಯೂಯೆಲ್ ಇಕಾನಮಿಯ ಸ್ಟೈಲಿಶ್​ ಕಿಯಾ ಸೋನೆಟ್​ ಬುಕ್ಕಿಂಗ್ ಶುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts