More

    ಶಿಥಿಲಾವಸ್ಥೆಯತ್ತ 59 ಮನೆಗಳು

    ಪುರುಷೋತ್ತಮ ಪೆರ್ಲ ಕಾಸರಗೋಡು
    ಎಂಡೋಸಲ್ಫಾನ್ ಸಂತ್ರಸ್ತರ ಕಣ್ಣೀರೊರೆಸುವ ಪ್ರಯತ್ನದ ಭಾಗವಾಗಿ ದಾನಿಗಳು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಸೂರು ಕಟ್ಟಿ ಕೊಟ್ಟರೂ ಕೇರಳ ಸರ್ಕಾರದ ನಿರ್ಲಕ್ಷೃದಿಂದಾಗಿ ಫಲಾನುಭವಿಗಳಿಗೆ ಹಸ್ತಾಂತರಗೊಳ್ಳದೆ 59 ಮನೆಗಳು ಶಿಥಿಲಗೊಳ್ಳುವ ಭೀತಿಯಲ್ಲಿವೆ.
    ತಿರುವನಂತಪುರದ ಶ್ರೀ ಸತ್ಯಸಾಯಿ ಅಭಯಾಶ್ರಮ ಟ್ರಸ್ಟ್ ಕಾಸರಗೋಡು ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ 81 ಮನೆಗಳನ್ನು ನಿರ್ಮಿಸುವ ಯೋಜನೆ ಕೈಗೆತ್ತಿಕೊಂಡಿತ್ತು. ಪುಲ್ಲೂರ್ ಪೆರಿಯ ಪಂಚಾಯಿತಿಯ ಪೆರಿಯ ಕಾಟ್ಟುಮುಂಡ ಎಂಬಲ್ಲಿ 45 ಹಾಗೂ ಎಣ್ಮಕಜೆ ಪಂಚಾಯಿತಿಯ ಬಜಕೂಡ್ಲು ಕಾನ ಪ್ರದೇಶದಲ್ಲಿ 36 ಮನೆಗಳನ್ನು ನಿರ್ಮಿಸಲಾಗಿದೆ.

    ಈ ಪೈಕಿ ಪೆರಿಯದ 45 ಮನೆಗಳಲ್ಲಿ 22 ಮನೆಗಳನ್ನು ಮಾತ್ರ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ. ಉಳಿದ 23 ಮನೆಗಳ ಹಸ್ತಾಂತರ ಇನ್ನೂ ನಡೆದಿಲ್ಲ. ಕಾನದ 36 ಮನೆಗಳೂ ಹಾಗೆಯೇ ಇವೆ. ಈ ಮನೆಗಳಿಗೆ ಮೂಲಸೌಕರ್ಯ ಒದಗಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು, ಜಿಲ್ಲಾಡಳಿತವೂ ಸಹಕರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

    ಮೂಲಸೌಕರ್ಯ ಕೊರತೆ: ಎಣ್ಮಕಜೆ ಪಂಚಾಯಿತಿಯ ಕಾನ ಪ್ರದೇಶದಲ್ಲಿ 36 ಮನೆಗಳನ್ನು ನಿರ್ಮಿಸಿ ಎರಡೂವರೆ ವರ್ಷ ಕಳೆದರೂ ವಿದ್ಯುತ್ ಹಾಗೂ ರಸ್ತೆ ನಿರ್ಮಾಣ ಕಾರ್ಯ ನಡೆಯದಿರುವುದರಿಂದ ಈ ಮನೆಗಳು ಶಿಥಿಲಾವಸ್ಥೆಯತ್ತ ಸಾಗುತ್ತಿವೆ.
    2017ರ ಮಾರ್ಚ್ ತಿಂಗಳಲ್ಲಿ ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಒಂದೂವರೆ ವರ್ಷದೊಳಗೆ ಮನೆ ಕೆಲಸ ಪೂರ್ತಿಗೊಳಿಸಲಾಗಿದೆ. ವಸತಿ ಸಮುಚ್ಚಯಕ್ಕೆ ತೆರಳುವ ರಸ್ತೆ ಬೇರೊಬ್ಬರ ಜಾಗದಲ್ಲಿ ಹಾದುಹೋಗುವುದರಿಂದ ಪ್ರಸಕ್ತ ಬೇರೆ ರಸ್ತೆ ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ವಿದ್ಯುತ್ ಸಂಪರ್ಕವೂ ಲಭಿಸಿಲ್ಲ.
    50 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣ ಕಾರ್ಯ ಇನ್ನಷ್ಟೆ ನಡೆಯಬೇಕಿದೆ. ವಸತಿ ಸಮುಚ್ಚಯದ ಸನಿಹ ಮಕ್ಕಳ ಆಟದ ಪಾರ್ಕ್, ತೆರೆದ ಸಭಾಂಗಣದ ಜತೆ ಸಣ್ಣ ಟೌನ್‌ಶಿಪ್ ನಿರ್ಮಿಸುವ ಯೋಜನೆ ಟ್ರಸ್ಟ್‌ಗಿದೆ. ಕೆಲಸ ಕಾರ್ಯಗಳನ್ನು ಮುಂದುವರಿಸಲು ಆಗದಿರುವುದು ಟ್ರಸ್ಟ್ ಪದಾಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.

    ಮಾನವ ಹಕ್ಕು ಆಯೋಗ ನೋಟಿಸ್: ಪೆರಿಯ ಕಾಟ್ಟುಮುಂಡದ 45 ಮನೆಗಳ ಪೈಕಿ 23 ಮನೆಗಳನ್ನು ಫಲಾನುಭವಿಗಳಿಗೆ ವಿತರಿಸದಿರುವ ಬಗ್ಗೆ ಕೇರಳ ರಾಜ್ಯ ಮಾನವ ಹಕ್ಕು ಆಯೋಗ(ಎಸ್‌ಎಚ್‌ಆರ್‌ಸಿ) ಕಾಸರಗೋಡು ಜಿಲ್ಲಾಧಿಕಾರಿಗೆ ಕೆಲದಿನಗಳ ಹಿಂದೆ ನೋಟಿಸ್ ಜಾರಿಗೊಳಿಸಿತ್ತು. ತಾಂತ್ರಿಕ ಕಾರಣಗಳಿಂದ ಮನೆಗಳ ಕೀಲಿಕೈ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿದ್ದು, ಶೀಘ್ರ ಹಸ್ತಾಂತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ಬಾಬು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಜಿಲ್ಲೆಯ ಎಂಡೋ ಸಂತ್ರಸ್ತರಿಗೆ ಟ್ರಸ್ಟ್ ನಿರ್ಮಿಸಿಕೊಡುವ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವಲ್ಲಿ ತೋರುತ್ತಿರುವ ನಿರ್ಲಕ್ಷ್ಯ ಧೋರಣೆಗೆ ಜಿಲ್ಲಾಧಿಕಾರಿ ನೇರ ಹೊಣೆಗಾರರಾಗಿದ್ದಾರೆ. ಈ ಬಗ್ಗೆ ಟ್ರಸ್ಟ್ ಪದಾಧಿಕಾರಿಗಳು ರಾಜ್ಯ ಮಾನವ ಹಕ್ಕು ಆಯೋಗದ ಮೂಲಕ ನೋಟಿಸ್ ರವಾನಿಸಿದ್ದರೂ, ಈ ಬಗ್ಗೆ ತ್ವರಿತ ತೀರ್ಮಾನಕ್ಕೆ ಮುಂದಾಗದಿರುವುದು ವಿಷಾದನೀಯ. ಸಂತ್ರಸ್ತರನ್ನು ಗುರುತಿಸಿ ಮನೆಗಳ ಕೀಲಿಕೈ ಶೀಘ್ರ ಹಸ್ತಾಂತರಿಸದಿದ್ದಲ್ಲಿ ಒಕ್ಕೂಟ ವತಿಯಿಂದ ಪ್ರಬಲ ಹೋರಾಟ ನಡೆಸಲಾಗುವುದು.
    – ಅಂಬಲತ್ತರ ಕುಞಿಕೃಷ್ಣನ್, ಕಾರ್ಯದರ್ಶಿ, ಎಂಡೋಸಲ್ಫಾನ್ ಸಂತ್ರಸ್ತರ ಒಕ್ಕೂಟ

    ಶ್ರೀ ಸತ್ಯಸಾಯಿ ಅಭಯಾಶ್ರಮ ಟ್ರಸ್ಟ್ ನಡೆಸುತ್ತಿರುವ ಯೋಜನೆಗಳು ಜಿಲ್ಲಾಧಿಕಾರಿ ಮೇಲ್ವಿಚಾರಣೆಯಲ್ಲಿ ನಡೆಯುತ್ತಿವೆ. ಯೋಜನೆ ಸಾಕಾರಕ್ಕೆ ಹೊಸದಾಗಿ ಆಡಳಿತಕ್ಕೆ ಬಂದಿರುವ ಪಂಚಾಯಿತಿ ಸಮಿತಿ ಎಲ್ಲ ರೀತಿಯ ನೆರವು ನೀಡಲಿದೆ. ರಸ್ತೆ, ವಿದ್ಯುತ್ ಸಂಪರ್ಕಕ್ಕಾಗಿ ಜಿಲ್ಲಾಧಿಕಾರಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು.
    – ಸೋಮಶೇಖರ ಜೆ.ಎಸ್, ಅಧ್ಯಕ್ಷ, ಎಣ್ಮಕಜೆ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts