More

    ಮನೆಯಲ್ಲೇ ಹಕ್ಕು ಚಲಾಯಿಸಿದ ವಯಸ್ಕರು

    ಪ್ರಶಾಂತ ಭಾಗ್ವತ, ಉಡುಪಿ
    ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ಏ.26ರಂದು ಮತದಾನ ನಡೆಯಲಿದೆ. ಈ ಎರಡೂ ಜಿಲ್ಲೆಯ ವಿಶೇಷ ಚೇತನರು, 85 ವರ್ಷ ಮೇಲ್ಪಟ್ಟ 6,100 ಮತದಾರರಿದ್ದು, 5,919 ಜನ ಮನೆಯಿಂದಲೇ ಹಕ್ಕು ಚಲಾಯಿಸಿ, ಸಮಾಧಾನಗೊಂಡಿದ್ದಾರೆ.

    ವೃದ್ಧಾಪ್ಯದಿಂದಾಗಿ ನಡೆದಾಡಲು ಆಗದ ಅಥವಾ ಹಾಸಿಗೆ ಹಿಡಿದ ಹಿರಿಯರಿಗೆ ಮನೆಯಿಂದಲೇ ಮತದಾನ ಮಾಡಲು ಈ ಬಾರಿ ಅವಕಾಶ ಕಲ್ಪಿಸಲಾಗಿದ್ದು, ಮತಗಟ್ಟೆಗಳಿಗೆ ವೃದ್ಧರನ್ನು ಹೊತ್ತು ತರುವ ಕಾರ್ಯಕ್ಕೆ ಬ್ರೇಕ್​ ಬಿದ್ದಿದೆ.

    4,512 ಜನರಿಂದ ಮತದಾನ

    ಹಿರಿಯರಿಗೆ ಮನೆಯಿಂದಲೇ ಮತದಾನದ ಹಕ್ಕು ಚಲಾಯಿಸುವ ಪ್ರಕ್ರಿಯೆ ಏ.13ರಿಂದಲೇ ಆರಂಭಗೊಂಡಿದ್ದು, ಏ.17 ಕೊನೆಯ ದಿನವಾಗಿತ್ತು. ಉಡುಪಿ ಜಿಲ್ಲೆಯಲ್ಲಿ ವಿಶೇಷ ಚೇತನರು ಹಾಗೂ 85 ವರ್ಷ ಮೇಲ್ಪಟ್ಟ 4,664 ಮತದಾರರಿದ್ದು, 4,512 ಜನ ಮತದಾನ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 1,436 ಮತದಾರರಿದ್ದು, 1,407 ಜನ ಹಕ್ಕು ಚಲಾಯಿಸಿದ್ದಾರೆ. ಒಟ್ಟು 181 ಜನ ವಿವಿಧ ಕಾರಣಗಳಿಂದ ಮತದಾನ ಮಾಡಿಲ್ಲ.

    ವೀಡಿಯೋ ಚಿತ್ರೀಕರಣ

    ಮನೆ ಮನೆ ಮತದಾನಕ್ಕೆ ಅಧಿಕಾರಿಗಳ ತಂಡ ರಚಿಸಲಾಗಿತ್ತು. ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಬಿಎಲ್​ಒ, ಮೈಕ್ರೋ ವೀಕ್ಷಕರು ಹಾಗೂ ಅಗತ್ಯದಷ್ಟು ಸಿಬ್ಬಂದಿಯೂ ಇದ್ದರು. ಹಿರಿಯರು ಮತದಾನ ಮಾಡುವ ಪೂರ್ಣ ಪ್ರಕ್ರಿಯ ಚಿತ್ರೀಕರಣ ಮಾಡಿಕೊಳ್ಳಲಾಗಿದೆ. ಮತದಾರರ ಹಕ್ಕು ಚಲಾವಣೆಯ ವೀಡಿಯೋ ಮಾಡಿದ್ದರೂ ಸಹ ಮತದಾನ ಗೌಪ್ಯವಾಗಿಯೇ ಇರಲಿದೆ.

    ಮನೆಯೇ ಮತಗಟ್ಟೆ

    ಮತಗಟ್ಟೆ ಅಧಿಕಾರಿಗಳ ತಂಡ ಮತದಾನ ಮಾಡಲು ಅಗತ್ಯವಿರುವ ಸಾಮಾಗ್ರಿಗಳಾದ ಮತದಾರರ ಪಟ್ಟಿ, ಮತದಾನ ಗುರುತು ಮಾಡುವ ಪೆನ್​, ಇಂಕ್​ಪ್ಯಾಡ್​, ವಿವಿಧ ನಮೂನೆಯ ಲಕೋಟೆ, ರಿಜಿಸ್ಟರ್​ ಮತದಾನದ ಕಂಪಾರ್ಟ್​ಮೆಂಟ್​ ಸೇರಿದಂತೆ ಅಗತ್ಯ ವಸ್ತುಗಳೊಂದಿಗೆ ಆಗಮಿಸಿದ್ದರು.

    ಎರಡು ಬಾರಿ ಅವಕಾಶ

    ಅಧಿಕಾರಿಗಳು ಒಮ್ಮೆ ಮನೆಗೆ ಭೇಟಿ ನೀಡಿದಾಗ ಮನೆಯಲ್ಲೇ ಹಕ್ಕು ಚಲಾಯಿಸುವ ಸೌಲಭ್ಯ ಪಡೆದ ಮತದಾರರು ಆ ಸಂದರ್ಭದಲ್ಲಿ ಇಲ್ಲದೇ ಇದ್ದಲ್ಲಿ ಮತದಾನ ಮಾಡಲು ಇನ್ನೊಂದು ಅವಕಾಶ ಕಲ್ಪಿಸಲಾಗಿತ್ತು. ಬಿಎಲ್​ಒಗಳು ಆ ಅವಕಾಶದ ಸಮಯ ಮುಂಚಿತವಾಗಿಯೇ ತಿಳಿಸಿದ್ದರು. ಒಂದೊಮ್ಮೆ ನೀಡಿದ ಎರಡನೇ ಅವಕಾಶದಿಂದಲೂ ವಂಚಿತರಾದರೆ ಮತ ಹಕ್ಕು ಅಸಾಧ್ಯ. ಬಳಿಕ ಚುನಾವಣೆಯ ದಿನ ಮತಗಟ್ಟೆಗೆ ಹೋದರೂ ಮತದಾನ ಮಾಡಲು ಆಗದಂತಹ ವ್ಯವಸ್ಥೆ ಅಳವಡಿಸಲಾಗಿದೆ.

    ಕ್ಷೇತ್ರವಾರು ಮತದಾರರ ಮಾಹಿತಿ

    ಉಡುಪಿ: ಹಿರಿಯ ಮತದಾರರು- 1,057, ಅಂಗವಿಕಲರು- 216
    ಕುಂದಾಪುರ: ಹಿರಿಯ ಮತದಾರರು- 764, ಅಂಗವಿಕಲರು- 197
    ಕಾಪು: ಹಿರಿಯ ಮತದಾರರು- 851, ಅಂಗವಿಕಲರು- 250
    ಕಾರ್ಕಳ ಹಿರಿಯ ಮತದಾರರು- 854, ಅಂಗವಿಕಲರು- 285
    ಚಿಕ್ಕಮಗಳೂರು: ಹಿರಿಯ ಮತದಾರರು- 91, ಅಂಗವಿಕಲರು- 28
    ಮೂಡಿಗೆರೆ: ಹಿರಿಯ ಮತದಾರರು- 237, ಅಂಗವಿಕಲರು- 95
    ತರೀಕೆರೆ: ಹಿರಿಯ ಮತದಾರರು- 309, ಅಂಗವಿಕಲರು- 123
    ಶೃಂಗೇರಿ: ಹಿರಿಯ ಮತದಾರರು- 501, ಅಂಗವಿಕಲರು- 247

    ವಯಸ್ಸಾಗಿದ್ದರಿಂದ ಹಾಗೂ ಅನಾರೋಗ್ಯದಿಂದಾಗಿ ಮತಗಟ್ಟೆಗೆ ಹೋಗಿ ಮತದಾನ ಮಾಡಲು ಚೈತನ್ಯ ಇರಲಿಲ್ಲ. ಹೀಗಾಗಿ ಹಕ್ಕು ತಪ್ಪಿ ಹೋಗುವ ಬೇಸರವಿತ್ತು. ಆದರೆ, ಚುನಾವಣಾ ಆಯೋಗ ಹಿರಿಯರಿಗೆ ಮನೆಯಲ್ಲೇ ಮತದಾನ ಮಾಡಲು ಅವಕಾಶ ಕೊಟ್ಟಿದ್ದರಿಂದ ಮತದಾನ ಮಾಡುವಂತಾಗಿದೆ. ಅತ್ಯಂತ ಸಂತೋಷದಿಂದ ಹಕ್ಕು ಚಲಾಯಿಸಿದ್ದೇನೆ.

    ಸುಮತಿ ಪಿ. ಹೆಗ್ಡೆ
    ಮನೆಯಲ್ಲೇ ಮತ ಚಲಾಯಿಸಿದ ಉಡುಪಿ ಮಹಿಳೆ.

    ಉಡುಪಿ-ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರಕ್ರಿಯೆ ಮುಗಿದಿದ್ದು, ಶೇ.97 ಮತದಾನವಾಗಿದೆ. ಮನೆಯಲ್ಲಿ ಮತದಾನ ಅವಕಾಶ ಕೋರಿದ ಬಳಿಕ ಕೆಲವರು ನಿಧನರಾಗಿದ್ದಾರೆ. ಅನೇಕರು ಎರಡನೇ ಅವಕಾಶದಿಂದಲೂ ವಂಚಿತರಾಗಿದ್ದಾರೆ. ಒಟ್ಟಿನಲ್ಲಿ ಈ ಹೊಸ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

    ಡಾ. ಕೆ.ವಿದ್ಯಾಕುಮಾರಿ
    ಜಿಲ್ಲಾ ಚುನಾವಣಾಧಿಕಾರಿ, ಉಡುಪಿ

    ದ.ಕ. ಜಿಲ್ಲೆಯಲ್ಲಿಯೂ 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಶೇ.40ಕ್ಕಿಂತ ಹೆಚ್ಚಿನ ಅಂಗವಿಕಲರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿತ್ತು. 85ಕ್ಕೂ ಹೆಚ್ಚು ವಯಸ್ಸಾದ 6,053 ಹಿರಿಯ ಮತದಾರಲ್ಲಿ 5,878 ಮತದಾರರು ಹಕ್ಕು ಚಲಾಯಿಸಿದ್ದಾರೆ. 1,957 ವಿಕಲಚೇತನ ಮತದಾರರ ಪೈಕಿ 1,929 ಮಂದಿ ಮತ ಚಲಾಯಿಸಿದ್ದಾರೆ. ಮಂಗಳೂರು ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯ ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಮನೆ ಮತದಾನ ಪ್ರಕ್ರಿಯೆ ಆಯ್ಕೆ ಮಾಡಿದ್ದಾರೆ.

    ಮುಲ್ಲೆ ಮುಗಿಲನ್​ ಎಂ.ಪಿ.
    ಚುನಾವಣಾಧಿಕಾರಿ, ದ.ಕ

    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts