More

    ಪತ್ನಿ ಕಾಟಕ್ಕೆ ಮಾಲೀಕನ ಮನೆ ದೋಚಿ ಜೈಲು ಸೇರಿದ

    ಬೆಂಗಳೂರು: ಪತ್ನಿಯ ಕಾಟಕ್ಕೆ ಕೆಲಸ ಮಾಡುತ್ತಿದ್ದ ಮಾಲೀಕನ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ನೌಕರರನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
    ಬಿಹಾರ ಮೂಲದ ಸುರೇಂದರ್ ಕುಮಾರ್ (29) ಬಂಧಿತ. ದೊಡ್ಡನೆಕ್ಕುಂದಿ ಸಮೀಪದ ಖಾಸಗಿ ಅಪಾರ್ಟ್‌ಮೆಂಟ್‌ನ ಪ್ಲ್ಯಾಟ್ ಮಾಲೀಕರ ಮನೆಯಲ್ಲಿ ಚಿನ್ನಾಭರಣ ದೋಚಿದ್ದ. ಬಂಧಿತನಿಂದ 50 ಲಕ್ಷ ರೂ. ಮೌಲ್ಯದ 502 ಗ್ರಾಂ ಚಿನ್ನಾಭರಣ, 99.5 ಗ್ರಾಂ ಡೈಮಂಡ್ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

    ಒಂದೂವರೆ ವರ್ಷದ ಹಿಂದೆ ನೌಕರಿ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಸುರೇಂದರ್‌ಕುಮಾರ್, ದೊಡ್ಡನೆಕ್ಕುಂದಿ ಬಳಿ ಅಪಾರ್ಟ್‌ಮೆಂಟ್‌ನ ಪ್ಲ್ಯಾಟ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಮಾಲೀಕರು ಅಲ್ಲಿಯೇ ಉಳಿದುಕೊಳ್ಳಲು ರೂಮ್ ಸಹ ಕೊಟ್ಟಿದ್ದರು. ಪ್ರತಿ ತಿಂಗಳು 18 ಸಾವಿರ ರೂ. ವೇತನ ಸಿಗುತ್ತಿತ್ತು. ಇದರಲ್ಲಿ ಬಹುಪಾಲು ಹಣವನ್ನು ಬಿಹಾರದಲ್ಲಿ ನೆಲೆಸಿದ್ದ ತನ್ನ ಪತ್ನಿಗೆ ಕಳುಹಿಸುತ್ತಿದ್ದ. ಆದರೂ, ಬೆಂಗಳೂರಿಗೆ ಹೋದರೂ ನೀನು ಇಷ್ಟೇ ಹಣ ಸಂಪಾದನೆ ಮಾಡುವುದು. ಮತ್ತಷ್ಟು ಹೆಚ್ಚು ಹಣ ಸಂಪಾದನೆ ಮಾಡಬೇಕೆಂದು ಕಾಟ ಕೊಡಲಾರಂಭಿಸಿದ್ದಳು. ಇದರಿಂದ ಬೇಸತ್ತಿದ್ದ ಸುರೇಂದರ್ ಕುಮಾರ್, ಏನು ಮಾಡಬೇಕೆಂದು ಯೋಜನೆ ಮಾಡುತ್ತಿದ್ದ. ಇದರ ನಡುವೆ ಏ.12ರಂದು ಮಾಲೀಕರು ಕುಟುಂಬ ಸಮೇತ ಮುಂಬೈಗೆ ತೆರಳಿದ್ದರು. ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡ ಆರೋಪಿ, ಮನೆಯ ಬಾಗಿಲು ಮುರಿದು ಒಳ ನುಗ್ಗಿ 502 ಗ್ರಾಂ ಚಿನ್ನಾಭರಣ, 99.5 ಗ್ರಾಂ ಡೈಮಂಡ್ ಆಭರಣ, 199 ಗ್ರಾಂ ಬೆಳ್ಳಿ, ವಿದೇಶಿ ಕರೆನ್ಸಿ ಸೇರಿ 50 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿದ್ದ.

    ಏ.15ಕ್ಕೆ ಮುಂಬೈಯಿಂದ ಮನೆ ಮಾಲೀಕರು ವಾಪಸ್ ಬಂದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿತ್ತು. ಈ ಕಡೆ ಮನೆ ಕೆಲಸದಾಳು ಸುರೇಂದರ್ ಕುಮಾರ್ ಸಹ ನಾಪತ್ತೆಯಾಗಿದ್ದ. ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆ್ ಆಗಿತ್ತು. ಮನೆ ಮಾಲೀಕರು, ಮಹದೇವಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲು ಮಾಡಿಕೊಂಡ ಅಧಿಕಾರಿಗಳು, ಆರೋಪಿಯ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಿದ್ದರು. ಬಿಹಾರದ ಸ್ವಂತ ಊರಿಗೆ ಹೋಗಿ ಆರೋಪಿಯ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಆಂಧ್ರಪ್ರದೇಶದ ವಿಜಯವಾಡಕ್ಕೆ ಹೋಗಿರುವ ಸುಳಿವು ಲಭ್ಯವಾಗಿತ್ತು.

    ಏ.21ರಂದು ವಿಜಯವಾಡಕ್ಕೆ ಬಂದ ಪೊಲೀಸರ ತಂಡ, ರೈಲು ನಿಲ್ದಾಣದ ಬಳಿ ಹುಡುಕಾಟ ನಡೆಸುತ್ತಿದ್ದಾಗ ರೈಲಿಗಾಗಿ ಕಾಯುತ್ತಿದ್ದ ಆರೋಪಿ ಕಣ್ಣಿಗೆ ಬಿದ್ದಿದ್ದಾನೆ. ಖಾಕಿ ಪಡೆ ಹತ್ತಿರ ಹೋಗುತ್ತಿದಂತೆ ತಪ್ಪಿಸಿಕೊಂಡು ಸುರೇಂದರ್ ಕುಮಾರ್ ಓಡಿದಾಗ ಬೆನ್ನಟ್ಟಿ ಪೊಲೀಸರು ಹಿಡಿದು ಪರಿಶೀಲನೆ ನಡೆಸಿದಾಗ, ಕೈಯಲ್ಲಿದ್ದ ಬ್ಯಾಗ್‌ನಲ್ಲಿ ಚಿನ್ನಾಭರಣ ಪತ್ತೆಯಾಗಿದೆ. ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಟ್ರಾಸಿಟ್ ವಾರಂಟ್ ಮೇಲೆ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts