

ಲಖನೌ: ಮದುವೆ ಸಮಯದಲ್ಲಿ ಟೊಯೋಟಾ ಫಾರ್ಚುನರ್ ಮತ್ತು ₹ 21 ಲಕ್ಷ ನಗದು ಸೇರಿದಂತೆ ವರದಕ್ಷಿಣೆ ಬೇಡಿಕೆಗಳನ್ನು ಈಡೇರಿಸಲಿಲ್ಲ ಎಂಬ ಕಾರಣಕ್ಕೆ ಮಹಿಳೆಯನ್ನು ಆಕೆಯ ಪತಿ ಮತ್ತು ಆತನ ಕುಟುಂಬ ಸದಸ್ಯರು ಅಮಾನುಷವಾಗಿ ಹೊಡೆದು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಮೃತರನ್ನು ಕರಿಷ್ಮಾ ಎಂದು ಗುರುತಿಸಲಾಗಿದ್ದು, ಮೃತಳ ಸಹೋದರ ನೀಡಿದ ದೂರನ್ನು ಆಧರಿಸಿ ಪೊಲೀಸರು ಆರೋಪಿ ವಿಕಾಸ್ ಹಾಗೂ ಆತನ ತಂದೆ ಸೋಮ್ಪಾಲ್ನನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, 2022ರ ಡಿಸೆಂಬರ್ ತಿಂಗಳಲ್ಲಿ ಕರಿಷ್ಮಾ ಹಾಗೂ ವಿಕಾಸ್ ವಿವಾಹವಾಗಿದ್ದರು. ಮದುವೆ ಸಮಯದಲ್ಲಿ 11 ಲಕ್ಷ ಮೌಲ್ಯದ ಚಿನ್ನ ಮತ್ತು ಎಸ್‌ಯುವಿಯನ್ನು ಉಡಗೊರೆಯಾಗಿ ನೀಡಲಾಗಿತ್ತು. ಕರಿಷ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ವಿಕಾಸ್ ಕುಟುಂಬಸ್ಥರು ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸಿದ್ದು ರಾಜಿ ಸಂಧಾನ ನಡೆಸಿ 10 ಲಕ್ಷ ರೂಪಾಯಿ ಕೊಡಲಾಗಿತ್ತು.
ಇದಾದ ಕೆಲ ದಿನಗಳ ಬಳಿಕ ವಿಕಾಸ್ ಕುಟುಂಬಸ್ಥರು ಹೊಸ ಫಾರ್ಚುನರ್ ಕಾರು ಹಾಗೂ 21 ಲಕ್ಷ ರೂಪಾಯಿ ಹಣ ತರುವಂತೆ ಪೀಡಿಸಲು ಶುರು ಮಾಡಿದ್ದಾರೆ. ಇದಕ್ಕೆ ಕರಿಷ್ಮಾ ಒಪ್ಪದೇ ಇದ್ದಾಗ ಆಕೆಯ ಮೇಲೆ ವಿಕಾಸ್ ಹಾಗೂ ಕುಟುಂಬಸ್ಥರು ಮಾರಣಾಂತಿಕ ಹಲ್ಲೆ ನಡೆಸಿದ್ದು, ಆಕೆ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ಕರಿಷ್ಮಾಳ ಸಹೋದರ ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳಾದ ವಿಕಾಸ್ ಹಾಗೂ ಆತನ ತಂದೆ ಸೋಮ್ಪಾಲ್ನನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳಾದ ತಾಯಿ ರಾಕೇಶ್, ಸಹೋದರಿ ರಿಂಕಿ ಸಹೋದರರಾದ ಸುನಿಲ್ ಮತ್ತು ಅನಿಲ್ ತಲೆಮಾರಿಸಿಕೊಂಡಿದ್ದು ಅವರ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.