More

    ಅಪ್ರಾಪ್ತ ಬಾಲಕನಿಗೆ ಬೆದರಿಸಿ ಸುಲಿಗೆ; ಸಹಪಾಠಿಗಳು ಸೇರಿ 6 ಮಂದಿ ಸೆರೆ

    ಬೆಂಗಳೂರು: ಪಬ್‌ಜೀ, ಡ್ರೀಮ್-11, ಬಿಜಿಎಂಐ ಗೇಮ್ ವ್ಯಸನಿಯಾಗಿದ್ದ ಅಪ್ರಾಪ್ತ ಬಾಲಕನ ಬಗ್ಗೆ ಆತನ ಪಾಲಕರಿಗೆ ಹೇಳುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ ನಗದು ಹಾಗೂ ಚಿನ್ನಾಭರಣ ಪಡೆಯುತ್ತಿದ್ದ ಸಹಪಾಠಿಗಳು ಸೇರಿ ಆರು ಮಂದಿಯನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.

    ಗಂಗಾವತಿ ಮೂಲದ ಕಾರ್ತಿಕ್, ಸುನೀಲ್ ಮತ್ತು ರಾಜರಾಜೇಶ್ವರಿನಗರದ ವೇಮನ್, ಕೆಂಗೇರಿ ನಿವಾಸಿ ವಿವೇಕ್ ಬಂಧಿತರು. ಮತ್ತೊಬ್ಬ ಸಂತ್ರಸ್ತ ಬಾಲಕನ ಸಹಪಾಠಿ. ಆರೋಪಿಗಳಿಂದ 302 ಗ್ರಾಂ ಚಿನ್ನಾಭರಣ ಮತ್ತು 23.50 ಲಕ್ಷ ರೂ. ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಆರ್.ಆರ್. ನಗರದ ಐಡಿಯಲ್ ಹೋಮ್‌ನಲ್ಲಿ ನೆಲೆಸಿರುವ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಪುತ್ರ ಹೈಸ್ಕೂಲ್‌ನಲ್ಲಿ ವಿದ್ಯಾರ್ಥಿಯಾಗಿದ್ದ. ಆತನ ಜೊತೆಯಲ್ಲಿಯೇ ಮತ್ತಿಬ್ಬರು ಸ್ನೇಹಿತರು ವ್ಯಾಸಂಗ ಮಾಡುತ್ತಿದ್ದರು. ಸಂತ್ರಸ್ತ ಬಾಲಕ ಪಬ್‌ಜೀ, ಡ್ರೀಮ್-11 ಮತ್ತು ಬಿಜಿಎಂಐ ಗೇಮ್ ವ್ಯಸನಿಯಾಗಿ ಸಾಕಷ್ಟು ಹಣ ಕಳೆದುಕೊಳ್ಳುತ್ತಿದ್ದ. ಈ ವಿಚಾರವನ್ನು ಆತನ ತಂದೆ-ತಾಯಿಗೆ ಹೇಳುವುದಾಗಿ ಸಹಪಾಠಿಗಳು ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆ ಒಡ್ಡಿದ್ದರು.

    ಪಾಲಕರಿಗೆ ಹೆದರಿ ಸಂತ್ರಸ್ತ ಬಾಲಕ, ತನ್ನ ಮನೆಯಿಂದ ಹಣ ಕದ್ದು ತಂದು ಕೊಡುತ್ತಿದ್ದ. ಹಣ ಸಿಗದೆ ಇದ್ದಾಗ ಚಿನ್ನಾಭರಣ ತಂದು ಕೊಡುವಂತೆ ಆರೋಪಿಗಳು ಹೆದರಿಸಿದ್ದರು. ಕಳೆದ 6 ತಿಂಗಳಲ್ಲಿ 700 ಗ್ರಾಂ ಚಿನ್ನಾಭರಣ ತಂದುಕೊಟ್ಟಿದ್ದ. ಈ ಚಿನ್ನವನ್ನು ಬಾಲಕರು ತಮಗೆ ಪರಿಚಯವಿದ್ದ ವೇಮನ್ ಮತ್ತು ವಿವೇಕ್ ಮೂಲಕ ಕಾರ್ತಿಕ್ ಮತ್ತು ಸುನೀಲ್‌ಗೆ ಮಾರಾಟ ಮಾಡಿಸಿದ್ದರು. ಅದರಲ್ಲಿ ಬಂದ ಹಣದಲ್ಲಿ ಆರೋಪಿಗಳು ಮೋಜುಮಸ್ತಿ ಮಾಡುತ್ತಿದ್ದರು. ಇತ್ತೀಚೆಗೆ ಮನೆಯಲ್ಲಿ ಚಿನ್ನಾಭರಣ ಕಾಣಿಯಾಗಿರುವ ಬಗ್ಗೆ ಅನುಮಾನ ಬಂದು ಪಾಲಕರು, ಪುತ್ರನನ್ನು ಪ್ರಶ್ನಿಸಿದಾಗ ವಿಷಯ ಹೊರಬಂದಿದೆ.

    ಈ ಕುರಿತು ಸಂತ್ರಸ್ತ ಬಾಲಕನ ಪಾಲಕರು, ರಾಜರಾಜೇಶ್ವರಿನಗರ ಠಾಣೆಗೆ ದೂರು ಸಲ್ಲಿಸಿದ್ದರು. ಪೊಲೀಸರು ಬಾಲಕರನ್ನು ವಿಚಾರಣೆ ಮಾಡಿದಾಗ ಸತ್ಯಾಂಶ ಒಪ್ಪಿಕೊಂಡಿದ್ದರು. ಇವರು ಕೊಟ್ಟ ಸುಳಿವಿನ ಮೇರೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕಾರ್ತಿಕ್ ಮತ್ತು ಸುನೀಲ್‌ನನ್ನು ಬಂಧಿಸಲಾಗಿದೆ. ಮತ್ತಿಬ್ಬರನ್ನು ಆರ್.ಆರ್.ನಗರ ಮತ್ತು ಕೆಂಗೇರಿಯಲ್ಲಿ ಬಂಧಿಸಲಾಗಿದೆ. ಇದರಲ್ಲಿ ಚಿನ್ನಾಭರಣ ಖರೀದಿಸಿದ್ದ ಆರೋಪಿಗಳು, ಕರಗಿಸಿ ಗಟ್ಟಿ ಮಾಡಿಸಿದ್ದರು. ಮತ್ತಿಬ್ಬರು ಮಾರಾಟ ಮಾಡಿ ಹಣ ಪಡೆದಿದ್ದರು. ಇವರಿಂದ 302 ಗ್ರಾಂ ಚಿನ್ನಾಭರಣ ಮತ್ತು 23.50 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts