More

    ಲೋಕಸಭಾ ಕ್ಷೇತ್ರದ ಚುನಾವಣಾ ಲೆಕ್ಕಾಚಾರಗಳು, ಲೀಡ್ ಪಡೆಯುವ ಸಾಧ್ಯತೆಗಳು

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾ ಹಣಾಹಣಿಯಲ್ಲಿ ನಾನಾ ಲೆಕ್ಕಾಚಾರಗಳ ಆಧಾರದ ಮೇಲೆ ಬಿಜೆಪಿ ಮತ್ತು ಕಾಂಗ್ರೆಸ್ ಸೋಲು ಗೆಲುವಿನ ವಿಮರ್ಶೆಗಳು ನಡೆಯುತ್ತಿವೆ.
    ಹೌದು! ಪಕ್ಷದ ವೋಟ್ ಬ್ಯಾಂಕ್, ಅಭ್ಯರ್ಥಿಗಳ ಕೆಲಸ, ಸಮುದಾಯ ಬಲ, ಮತ ವಿಭಜನೆಯನ್ನಾಧಾರಿಸಿಕೊಂಡು ಅನಧಿಕೃತವಾಗಿ ಫಲಿತಾಂಶವನ್ನು ಹೇಳಿಕೊಳ್ಳಲಾಗುತ್ತಿದೆ. ಪರಸ್ಪರ ಎದುರಾಳಿಗಳು ಒಬ್ಬ ವಾದವನ್ನು ಮತ್ತೊಬ್ಬರು ಒಪ್ಪಿಕೊಳ್ಳುತ್ತಿಲ್ಲ. ಇದರಿಂದ ಪೈಪೋಟಿಯ ಚರ್ಚೆ, ನಾನಾ ವಿಮರ್ಶೆ, ವಾದ ಪ್ರತಿವಾದಗಳಲ್ಲಿ ಸವಾಲುಗಳನ್ನು ಎಸೆದು, ಬೆಟ್ಟಿಂಗ್ ಸಹ ಕಟ್ಟಲಾಗುತ್ತಿದೆ.
    ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ 29 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಎನ್‌ಡಿಎ ಅಭ್ಯರ್ಥಿ ಡಾ ಕೆ.ಸುಧಾಕರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಂ.ರಕ್ಷಾ ರಾಮಯ್ಯ ನಡುವೆ ಮಾತ್ರ ಸೋಲು ಗೆಲುವಿನ ಮಾತಿದೆ. ಉಳಿದಂತೆ ಇತರರ ವಿಚಾರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಮಾತು ನಿಜವಾಗಿದೆ.

    *ಕ್ಷೇತ್ರದಲ್ಲಿ ಪೈಪೋಟಿ
    ಚುನಾವಣಾ ನೀತಿ ಸಂಹಿತೆ ಜಾರಿ ಮತ್ತು ಉಮೇದುವಾರಿಕೆಯ ಸಲ್ಲಿಕೆಯ ಅವಧಿಯಿಂದಲೂ ಎನ್‌ಡಿಎ ಮತ್ತು ಕಾಂಗ್ರೆಸ್ ಪರಸ್ಪರ ಮೀರಿಸುವ ರೀತಿಯಲ್ಲಿ ಕಸರತ್ತು ನಡೆಸಿವೆ. ಎರಡೂ ಕಡೆ ಸಹ ಮತದಾರರಿಗೆ ಹಣ ಹಂಚಿಕೆ, ಸ್ವಪಕ್ಷೀಯರ ಪೈಕಿ ಅಸಮಾಧಾನಿತರ ಮನವೊಲಿಕೆ, ಅಬ್ಬರದ ಪ್ರಚಾರ ಕಾರ್ಯಕ್ರಮಗಳು, ಶಕ್ತಿ ಪ್ರದರ್ಶನ, ಮತದಾರರ ಮೇಲೆ ಹೆಚ್ಚಿನ ಪ್ರಭಾವ ಬೀರುವಿಕೆ ಸೇರಿದಂತೆ ನಾನಾ ಪ್ರಕ್ರಿಯೆಯಲ್ಲಿನ ತಂತ್ರಗಾರಿಕೆಯು, ಚುನಾವಣಾ ಫಲಿತಾಂಶವನ್ನು ಊಹಿಸುವುದೇ ಕಷ್ಟಕರ ಎನಿಸಿದೆ. ಮತ್ತೊಂದೆಡೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಎಡವಿದರೆ, ಬಿಜೆಪಿ ಮುನ್ನಡೆ ಪಡೆಯುವ ಕೆಲಸದಲ್ಲಿ ಯಶಸ್ವಿಯಾಯಿತು ಎಂಬ ಮಾತುಗಳು ಕೇಳಿ ಬರುತ್ತಿವೆ.

    *ಬಿಜೆಪಿಯ ಕಸರತ್ತಿನ ಫಲ
    ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ನಗರ, ಪಟ್ಟಣ ಪ್ರದೇಶಗಳಲ್ಲಿ ಮೋದಿ ಅಲೆ ಮತ್ತು ಗ್ರಾಮೀಣ ಭಾಗದಲ್ಲಿ ಜೆಡಿಎಸ್ ಮೈತ್ರಿ ಬಲವು ಬಿಜೆಪಿಗೆ ಹೆಚ್ಚಿನ ಮತ ಗಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.
    ಕ್ಷೇತ್ರದ ಕಾಂಗ್ರೆಸ್ ಶಾಸಕರ ಬಗೆಗಿನ ವಿರೋಧಿ ಅಲೆ, ಎನ್‌ಡಿಎ ಅಭ್ಯರ್ಥಿ ಸ್ಥಳೀಯ ವ್ಯಕ್ತಿ ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಅನುಕಂಪದ ಲೆಕ್ಕಾಚಾರದಲ್ಲಿ ಚಿಕ್ಕಬಳ್ಳಾಪುರ, ಸಾಂಪ್ರಾದಾಯಿಕ ಮತಗಳ ಹೊಂದಿರುವುದರಿಂದ ಯಲಹಂಕ, ಸ್ವಪಕ್ಷೀಯ ಶಾಸಕರ ಕೆಲಸದಿಂದ ದೊಡ್ಡಬಳ್ಳಾಪುರದಲ್ಲಿ, ಕೈ ಭಿನ್ನಮತದ ಲಾಭ ಮತ್ತು ಜೆಡಿಎಸ್ ನಾಯಕರ ಶ್ರಮದಿಂದ ದೇವನಹಳ್ಳಿಯಲ್ಲಿ ಬಿಜೆಪಿ ಲೀಡ್ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    *ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೋರಾಟ
    ಸ್ವಪಕ್ಷೀಯ ಶಾಸಕರ ಪ್ರತಿಷ್ಠೆಯ ಕೆಲಸಕ್ಕೆ ಬಾಗೇಪಲ್ಲಿ, ಹೊಸಕೋಟೆ, ನೆಲಮಂಗಲ ಮತ್ತು ಗೌರಿಬಿದನೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಯಲಿರುತ್ತದೆ ಎನ್ನಲಾಗುತ್ತಿದೆ. ಯುವ ನಾಯಕತ್ವ, ಒಳ್ಳೆಯ ಕುಟುಂಬದ ಹಿನ್ನೆಲೆ, ಪಕ್ಷದ ಭದ್ರಕೋಟೆಯ ಅಂಶಗಳು ಕಾಂಗ್ರೆಸ್‌ಗೆ ಅನುಕೂಲವಾಗಿದ್ದು ಅಲ್ಪಸಂಖ್ಯಾತ, ಎಸ್ಸಿ ಎಸ್ಟಿ, ಕುರುಬರು, ಬಲಿಜ ಸಮುದಾಯಗಳು ಕೈ ಹಿಡಿದಿವೆ. ಆದರೆ, ಸ್ವಪಕ್ಷೀಯ ಮುಖಂಡರಲ್ಲಿನ ಅಸಮಾಧಾನವು ಅಲ್ಲಲ್ಲಿ ನಿರುತ್ಸಾಹದ ಕೆಲಸಕ್ಕೆ ಎಡೆ ಮಾಡಿಕೊಟ್ಟಿದೆ.

    *ಲೀಡ್ ಏರುಪೇರಿನ ಸಮಸ್ಯೆ
    ವಿಧಾನಸಭಾ ಕ್ಷೇತ್ರವಾರು ಲೀಡ್‌ನಲ್ಲಿ ನಿರೀಕ್ಷೆಗೂ ಮೀರಿ ಉಂಟಾದ ವ್ಯತ್ಯಾಸವೇ ಚುನಾವಣಾ ಫಲಿತಾಂಶವನ್ನು ಯಾವ ರೀತಿಯಲ್ಲಾದರೂ ಬದಲಾಯಿಸುವ ಸಾಧ್ಯತೆ ಇದೆ.
    ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ಒಳ್ಳೆಯ ಪೈಪೋಟಿಯೇನೋ ನೀಡಿದೆ. ಆದರೆ, ಆಯಾ ಭಾಗದಲ್ಲಿ ನಿರೀಕ್ಷೆಯ ಲೀಡ್‌ನಲ್ಲಿನ ಏರುಪೇರಿನ ತಲೆ ನೋವು ಕಾಡುತ್ತಿದೆ. ಹೆಚ್ಚಿನ ಬಲವನ್ನು ಹೊಂದಿರುವ ಕಡೆ ಸ್ವಪಕ್ಷೀಯರ ಒಳ ಏಟು ಸಮಸ್ಯೆಯಾಗಿ ಕಾಡಿದರೆ, ಸಮಸ್ಯಾತ್ಮಕ ಇತರ ಭಾಗಗಳಲ್ಲಿ ಕೊನೆ ಕ್ಷಣದ ಪರಿಹಾರ ಕೆಲಸಗಳು ಉತ್ತಮ ಫಲವನ್ನು ನೀಡಿವೆ.

    *ಬಿಜೆಪಿ ಪರ ಬೆಟ್ಟಿಂಗ್ ಜೋರು!
    ಕ್ಷೇತ್ರದಲ್ಲಿ ಕಳೆದ 2019 ರ ಮಾದರಿಯಲ್ಲಿ ಈ ಬಾರಿಯೂ ಬಿಜೆಪಿ ಗೆಲುವಿನ ಪರವೇ ಬೆಟ್ಟಿಂಗ್ ಜೋರಾಗಿದೆ. ಎನ್‌ಡಿಎ ಅಭ್ಯರ್ಥಿ ಡಾ ಕೆ.ಸುಧಾಕರ್ ತಂತ್ರಗಾರಿಕೆಯು, ಮೈತ್ರಿ ಪಕ್ಷಗಳ ಕೆಲಸದಿಂದ ಖಚಿತವಾಗಿ ಗೆಲುವು ನಮ್ಮ ಕಡೆ ವಾಲಿದೆ ಎಂದು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದಾರೆ.

    ವಿಧಾನಸಭಾವಾರು ಕ್ಷೇತ್ರ ಲೀಡ್ ಪಡೆಯುವ ಸಾಧ್ಯತೆಯ ಪಕ್ಷ
    ಯಲಹಂಕ: ಬಿಜೆಪಿ
    ಗೌರಿಬಿದನೂರು: ಕಾಂಗ್ರೆಸ್
    ಬಾಗೇಪಲ್ಲಿ: ಕಾಂಗ್ರೆಸ್
    ಚಿಕ್ಕಬಳ್ಳಾಪುರ: ಬಿಜೆಪಿ
    ದೇವನಹಳ್ಳಿ: ಬಿಜೆಪಿ
    ಹೊಸಕೋಟೆ: ಕಾಂಗ್ರೆಸ್
    ನೆಲಮಂಗಲ: ಕಾಂಗ್ರೆಸ್
    ದೊಡ್ಡಬಳ್ಳಾಪುರ: ಬಿಜೆಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts