More

    ಮೀನುಗಾರಿಕೆ ಋತು ಅವಧಿ ಮೊದಲೇ ಮುಕ್ತಾಯ?

    ಮಂಗಳೂರು: ಮತ್ತೆ ಕೋವಿಡ್ ನಿರ್ಬಂಧ, ದೊರೆಯದ ಸಬ್ಸಿಡಿ ಡೀಸೆಲ್, ಮತ್ಸ್ಯಕ್ಷಾಮ… ಒಂದರ ಹಿಂದೆ ಒಂದು ಬಂದಿರುವ ಸರಣಿ ಹೊಡೆತದಿಂದ ಈ ವರ್ಷದ ಮೀನುಗಾರಿಕೆ ಋತು ಅವಧಿ ಮೊದಲೇ ಮುಗಿಯುವ ಲಕ್ಷಣ ಗೋಚರಿಸಿದೆ.

    ಏ.27ರಿಂದ ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆ ಬೆನ್ನಲ್ಲೇ ಮಂಗಳೂರು ಭಾಗದಲ್ಲಿ ಆಳ ಸಮುದ್ರ ಮೀನುಗಾರಿಕೆಯ ಬೋಟ್‌ಗಳಲ್ಲಿ ದುಡಿಯುವ ಹೊರ ರಾಜ್ಯದ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸುವ ವ್ಯವಸ್ಥೆಗಳಾಗುತ್ತಿವೆ.

    ಪ್ರತಿಕೂಲ ಪರಿಸ್ಥಿತಿಯಲ್ಲಿ ಮೀನುಗಾರಿಕೆ ತೀವ್ರ ನಷ್ಟದಲ್ಲಿರುವ ಕಾರಣ ಹೊರ ರಾಜ್ಯದ ಕಾರ್ಮಿಕರನ್ನು ನಗರದಲ್ಲಿ ಉಳಿಸಿಕೊಳ್ಳುವುದು ಬೋಟ್ ಮಾಲೀಕರಿಗೆ ನಷ್ಟದ ಸಂಗತಿ. ಮುಂದಿನ 14 ದಿನಗಳು ಈಗಾಗಲೇ ಲಾಕ್‌ಡೌನ್ ನಿರ್ಬಂಧ ಘೋಷಣೆಯಾಗಿದೆ. ಲಾಕ್‌ಡೌನ್ ಮತ್ತೆ ವಿಸ್ತರಣೆಯಾಗುವ ಸಾಧ್ಯತೆ ಕುರಿತು ಸೋಮವಾರ ಮುಖ್ಯಮಂತ್ರಿಯವರು ಸುಳಿವು ನೀಡಿದ್ದಾರೆ. ಮೇ ಮಾಸಾಂತ್ಯಕ್ಕೆ ವರ್ಷದ ಮೀನುಗಾರಿಕೆ ಅವಧಿ ಪೂರ್ಣಗೊಳ್ಳಲಿದ್ದು, ಬಳಿಕ ವಾರ್ಷಿಕ ಮೀನುಗಾರಿಕೆ ರಜೆ ಆರಂಭಗೊಳ್ಳಲಿದೆ.

    ಮಂಗಳೂರು ಭಾಗದ ಆಳ ಸಮುದ್ರ ಬೋಟ್‌ಗಳಲ್ಲಿ ದುಡಿಯುವ ಮೀನುಗಾರರ ಪೈಕಿ ಬಹುಪಾಲು ಮಂದಿ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮುಂತಾದ ಹೊರರಾಜ್ಯಗಳ ಜನರು. ಅವರು ಇಲ್ಲಿ ಉಳಿಯುವಷ್ಟು ಕಾಲ ಅವರ ವೇತನ, ಇತರ ಖರ್ಚು ಬೋಟ್ ಮಾಲೀಕರ ಜವಾಬ್ದಾರಿ. ಆದ್ದರಿಂದ ಮಾಲೀಕರು ತಮ್ಮ ಹೊರ ರಾಜ್ಯಗಳ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲು ತೀರ್ಮಾನಿಸಿದ್ದಾರೆ.
    ಪ್ರಸಕ್ತ ಪರಿಸ್ಥಿತಿಯಲ್ಲಿ ಮೀನುಗಾರರು ಎದುರಿಸುವ ಸಮಸ್ಯೆ ಕುರಿತು ಚರ್ಚಿಸಲು ಏ.27ರಂದು ಮೀನುಗಾರ ಸಂಘಟನೆಗಳ ಸಭೆ ಕರೆಯಲಾಗಿದೆ.

    ಸಮುದ್ರದಲ್ಲಿರುವ ಬೋಟ್‌ಗಳು: ಪ್ರತಿಕೂಲ ಪರಿಸ್ಥಿತಿ ಹಿನ್ನೆಲೆಯಲ್ಲಿ ಇರುವ ಆಳಸಮುದ್ರದ ಬೋಟ್‌ಗಳ ಪೈಕಿ ಶೇ.50 ಬೋಟ್‌ಗಳು ಮಾತ್ರ ಸಮುದ್ರಕ್ಕೆ ತೆರಳಿವೆ. ಅದರಲ್ಲಿ ಶೇ.40ರಷ್ಟು ಬೋಟ್‌ಗಳು ಮಾತ್ರ ಲಾಕ್‌ಡೌನ್ ಘೋಷಣೆ ವೇಳೆಗೆ ದಡ ಸೇರಿವೆ. ಉಳಿದವು ಸಮುದ್ರದಲ್ಲಿಯೇ ಇವೆ. ಸಮುದ್ರದಲ್ಲಿ ಇರುವ ಎಲ್ಲ ಬೋಟ್‌ಗಳು ಲಾಕ್‌ಡೌನ್ ಮತ್ತೆ ಆರಂಭಗೊಳ್ಳುವ ಮೊದಲು ದಡ ಸೇರುವುದು ಅಸಾಧ್ಯ.

    ಲಕ್ಷಾಂತರ ರೂ. ನಷ್ಟ: ಸರ್ಕಾರದ ಮಾರ್ಗಸೂಚಿ ಪ್ರಕಾರ ಲಾಕ್‌ಡೌನ್ ಅವಧಿಯಲ್ಲಿ ಬೆಳಗ್ಗೆ 6ರಿಂದ 10 ಗಂಟೆ ಅವಧಿಯಲ್ಲಿ ಮೀನು ಮಾರಾಟ ವ್ಯವಹಾರ ಪೂರ್ಣಗೊಳ್ಳಬೇಕು. ಆದರೆ ಬೋಟ್‌ಗಳಲ್ಲಿ ಬರುವ ಮೀನುಗಳನ್ನು ವಿಲೇವಾರಿ ಮಾಡುವ ವೇಳೆಗೆ 10 ಗಂಟೆಯಾಗಿರುತ್ತದೆ. ಮತ್ತೆ ಅವುಗಳ ಮಾರಾಟ ಯಾವಾಗ? ಆಳ ಸಮುದ್ರದ ಮೀನುಗಾರಿಕೆ ನಡೆಸುವ ಬೋಟ್‌ಗಳಲ್ಲಿ ಬರುವ ಮೀನುಗಳನ್ನು ಸೂಕ್ತ ರೀತಿಯಲ್ಲಿ ಪೂರೈಕೆ ಮಾಡದಿದ್ದರೆ ಲಕ್ಷಾಂತರ ರೂ. ನಷ್ಟ ಖಚಿತ ಎಂದು ಮೀನುಗಾರ ಮುಖಂಡ ದಿವಾಕರ ಉಳ್ಳಾಲ್ ಆತಂಕ ವ್ಯಕ್ತಪಡಿಸಿದ್ದಾರೆ.

    ಮೀನು ದರ ಕುಸಿದಿಲ್ಲ: ಮಂಗಳೂರಿನಲ್ಲಿ ಮೀನಿನ ದರ ಕುಸಿದಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬಂಗುಡೆಗೆ ಭಾನುವಾರ ಕೆ.ಜಿಗೆ 175 ರೂ ಇತ್ತು. ಸೋಮವಾರ 200 ರೂ. ತಲುಪಿದೆ. ಹೋಟೆಲ್‌ಗಳ ವ್ಯವಹಾರಕ್ಕೆ ನಿರ್ಬಂಧವಿದ್ದರೂ ಸ್ಥಳೀಯವಾಗಿ ಉತ್ತಮ ಬೇಡಿಕೆ ಇದೆ ಎಂದು ದಿವಾಕರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts